| ವಿಲಾಸ ಮೇಲಗಿರಿ ಬೆಂಗಳೂರು
ಲೋಕಸಭೆ ಚುನಾವಣೆ ಕಾವು ದಿನೇದಿನೆ ಏರುತ್ತಿದೆ. ಆರೋಪ-ಪ್ರತ್ಯಾರೋಪಗಳ ಮೂಲಕವೇ ಚುನಾವಣಾ ಆಖಾಡ ರಂಗೇರುತ್ತಿದೆ. ಟಿಕೆಟ್ ಆಕಾಂಕ್ಷಿಗಳ ಹೇಳಿಕೆಗಳು ಬೆಂಕಿಗೆ ತುಪ್ಪು ಸುರಿಯುತ್ತಿವೆ. ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕವಂತೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಬಿಂದುವಾಗಿಸಿಕೊಂಡು ಹಲವು ಹೊಸ ಬೆಳವಣಿಗೆಗಳಿಗೆ ರಾಜ್ಯದ ರಾಜಕೀಯ ಸಾಕ್ಷಿಯಾಗುತ್ತಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ದೆಹಲಿ ವರಿಷ್ಠರ ತೀರ್ಮಾನ ವಾಗಿದ್ದರೂ ರಾಜ್ಯ ನಾಯಕರು ತುಟಿ ಪಿಟುಕ್ ಎನ್ನುವಂತಿಲ್ಲ. ಈಗೀಗ ಎರಡೂ ಪಕ್ಷಗಳ ನಾಯಕರು ಮಾತುಕತೆ ನಡೆಸಿದ್ದಾರೆ. ಆದರೆ, ತಳಮಟ್ಟದಲ್ಲಿ ಮೈತ್ರಿ ಗೊಂದಲದ ಗೂಡಾಗಿದ್ದು, ಕಾರ್ಯಕರ್ತರ ನಡುವೆ ಮೈತ್ರಿಧರ್ಮ ಪಾಲನೆ ಮುಗುಮ್ಮಾಗಿದೆ.
ಉರಿ,ನಂಜು ಕಾರಿದವರ ನಡುವೆ ಮೈತ್ರಿ: ಇತ್ತೀಚೆಗಷ್ಟೆ ‘ಉರಿಗೌಡ’ರಂತೆ ಉರಿದು, ‘ನಂಜೇಗೌಡ’ರಂತೆ ನಂಜುಕಾರಿಕೊಂಡಿದ್ದ ಬಿಜೆಪಿ-ಜೆಡಿಎಸ್ ಹಠಾತ್ ಮೈತ್ರಿ ಮಾಡಿಕೊಂಡಿವೆ. ಇದು ಹಳೇ ಮೈಸೂರು ಭಾಗದಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಸಿದೆ. ಇದನ್ನು ಸರಿಪಡಿಸುವುದು ಉಭಯ ಪಕ್ಷಗಳ ನಾಯಕರಿಗೆ ಸವಾಲಾಗಿದೆ. ಮೈತ್ರಿ ವಿಚಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಈಗಾಗಲೇ ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಬಯಲಾಗಿದೆ. ಈ ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರ ನಡುವೆ ಟಿಕೆಟ್ ಪೈಪೋಟಿ, ಪರಸ್ಪರ ಆರೋಪ-ಪ್ರತ್ಯಾರೋಪ, ಟೀಕೆ-ಟಿಪ್ಪಣಿ, ವಾಗ್ಯುದ್ಧ ನಡೆದಿದ್ದು ಹೈಕಮಾಂಡ್​ಗೆ ತಲೆನೋವು ತಂದಿದೆ.
ಅಳಿವು-ಉಳಿವಿನ ಹೋರಾಟ: ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಈ ಬಾರಿ ಲೋಕಸಭೆಗೆ ಟಿಕೆಟ್ ನಿರೀಕ್ಷಿಸಿ ಲಾಬಿಗೆ ಇಳಿದಿರುವುದು ಮೈತ್ರಿ ಪಕ್ಷಗಳಲ್ಲಿ ರಾದ್ಧಾಂತ ಸೃಷ್ಟಿಸಿದೆ. ಅಸ್ಥಿತ್ವದ ಉಳಿವಿಗಾಗಿ ಉಭಯ ಪಕ್ಷಗಳ ನಾಯಕರು ತೊಡೆ ತಟ್ಟುತ್ತಿದ್ದಾರೆ. ಹಾಸನದಲ್ಲಿ ಮಾಜಿ ಶಾಸಕ ಪ್ರೀತಂಗೌಡ, ಮಂಡ್ಯದಲ್ಲಿ ಸಂಸದೆ ಸುಮಲತಾ, ಮಾಜಿ ಸಚಿವ ನಾರಾಯಣಗೌಡ, ತುಮಕೂರಿನಲ್ಲಿ ಮಾಧುಸ್ವಾಮಿ ಮೈತ್ರಿ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ತುಮಕೂರು ಕ್ಷೇತ್ರಕ್ಕಾಗಿ ಮಾಜಿ ಸಚಿವ ವಿ.ಸೋಮಣ್ಣ ಜತೆ ಜಟಾಪಟಿಗೆ ಇಳಿದಿದ್ದಾರೆ.
ಹೊರಗಿನಿಂದ ಬಂದು ಗೆದ್ದಿರುವ ಇತಿಹಾಸವಿಲ್ಲ ಎಂದು ಸೋಮಣ್ಣಗೆ ಟಕ್ಕರ್ ಕೊಡುವ ಮೂಲಕ ತಾವೂ ಆಕಾಂಕ್ಷಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ನಾಯಕರು ಒಂದಾದ ತಕ್ಷಣ ಕಾರ್ಯಕರ್ತರು ಒಟ್ಟಾಗುವುದಿಲ್ಲ. ಈ ಬಗ್ಗೆ ಎಚ್ಚರವಹಿಸಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಮನ್ವಯಕ್ಕೆ ತಂತ್ರಗಾರಿಕೆ:ಮಂಡ್ಯದಲ್ಲಿ ಜೆಡಿಎಸ್ ಅಸ್ಥಿತ್ವ ಉಳಿಸಿಕೊಳ್ಳಲು ಹೊಂದಾಣಿಕೆ ಅನಿವಾರ್ಯ ಎಂಬುದನ್ನು ಮನಗಂಡಿರುವ ಕುಮಾರಸ್ವಾಮಿ, ಸುಮಲತಾ ಜತೆ ಮಾತನಾಡಲೂ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.
ಕುಟುಂಬ ರಾಜಕಾರಣ ಅಸ್ತ್ರಹಾಸನ, ಮಂಡ್ಯ ಬಿಜೆಪಿಗೆ ಸಿಗುವ ಸಾಧ್ಯತೆಗಳಿವೆ ಎಂದು ಹೇಳಿರುವ ಪ್ರೀತಂಗೌಡ, ನಮ್ಮ ಸಂಕಲ್ಪ ಕುಟುಂಬ ರಾಜಕಾರಣದ ವಿರುದ್ಧ ಇರಬೇಕು. ಅವರಾಯ್ತು, ಮಕ್ಕಳಾಯ್ತು, ಮೊಮ್ಮಕ್ಕಳೂ ಆಯ್ತು, ಈಗ ಮರಿ ಮಕ್ಕಳ ಸರದಿ ಎಂದು ನಾಯಕರನ್ನು ಕುಟುಕಿರುವುದು ಗೊಂದಲದ ಗೂಡಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ. ಮಂಡ್ಯ ಜಿಲ್ಲೆಯ ಕೆರಗೋಡು ಹನುಮಧ್ವಜದ ಗಲಾಟೆ ನಂತರ ಈ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳಬೇಕು ಎಂಬ ಆಗ್ರಹವೂ ಕಾರ್ಯಕರ್ತರಲ್ಲಿ ಹೆಚ್ಚಿದೆ.
ಹೊಸಮುಖಗಳ ಕುತೂಹಲಕೋಲಾರ ಕ್ಷೇತ್ರ ಜೆಡಿಎಸ್​ಗೆ ಬಿಟ್ಟುಕೊಟ್ಟರೆ ಸಂಸದರ ಕತೆ ಏನು? ಎಂಬ ಪ್ರಶ್ನೆ ತಲೆ ಎತ್ತಿದೆ. ಮೈಸೂರು ಕ್ಷೇತ್ರವನ್ನು ಜೆಡಿಎಸ್ ಕೇಳುವ ಸಾಧ್ಯತೆಗಳಿವೆ. ಹಾಗಾದರೆ ಸಂಸದ ಪ್ರತಾಪ್​ಸಿಂಹ ಅವರನ್ನು ಹೇಗೆ ಸಮಾಧಾನ ಮಾಡಬೇಕು ಎಂಬ ಪ್ರಶ್ನೆಗಳೂ ಹೈಕಮಾಂಡ್ ತಲೆ ತಿನ್ನುತ್ತಿವೆ. ಹಾಲಿ ಹನ್ನೆರಡು ಸಂಸದರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಹೊಸಮುಖಗಳನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಕುತೂಹಲ ಮನೆಮಾಡಿದೆ.
ಸೋತವ ಸತ್ತ ಎಂಬ ಪರಿಸ್ಥಿತಿಬಿಜೆಪಿಗೆ ನೆಲೆಯೇ ಇಲ್ಲದಿರುವ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇಂಡವಾಳು ಸಚ್ಚಿದಾನಂದ 42 ಸಾವಿರ ಮತ ಪಡೆದಿದ್ದರು. ಏಕಾಏಕಿ ಮಂಡ್ಯ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟರೆ ತಮ್ಮ ಅಸ್ಥಿತ್ವ ಏನು ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಜೆಡಿಎಸ್ ಪ್ರಬಲವಾಗಿರುವ ಕಡೆಗಳಲ್ಲೆಲ್ಲ ಬಿಜೆಪಿ ಮೈತ್ರಿ ಧರ್ಮ ಪಾಲನೆ ತಳಮಟ್ಟದಲ್ಲಿ ಗೊಂದಲದ ಗೂಡಾಗಿದ್ದು, ಹೇಗೆ ನಿಭಾಯಿಸಬೇಕೆಂಬುದು ಉಭಯ ಪಕ್ಷಗಳ ನಾಯಕರನ್ನು ಕಾಡುತ್ತಿದೆ.
ನಕಲಿ ದಾಖಲೆ ಸೃಷ್ಟಿಸಿ 16 ಎಕರೆ ಭೂಮಿ ಕಬಳಿಕೆ ಆರೋಪ: ಮಾಜಿ ರೌಡಿ ಜೇಡರಹಳ್ಳಿ ಕೃಷ್ಣಪ್ಪ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 6 =
Remember me
