ಬೆಂಗಳೂರು:ವಿಧಾನಮಂಡಲ ಮುಂಗಾರು ಅಧಿವೇಶನದಲ್ಲಿ ಜನರ ಬದುಕು-ಬವಣೆ, ಬರ ಇನ್ನಿತರ ಸಮಸ್ಯೆಗಳನ್ನು ಎತ್ತಿ ಹಿಡಿಯಲಾಗದ ಪ್ರತಿಪಕ್ಷ ಬಿಜೆಪಿ ನೆಲಕಚ್ಚಿದೆ ಎಂದು ಸ್ವಪಕ್ಷೀಯರ ವಿರುದ್ಧ ಮಾಜಿ ಮಂತ್ರಿ ಅರವಿಂದ ಲಿಂಬಾವಳಿ ಅಸಹನೆ ಹೊರ ಹಾಕಿದ್ದಾರೆ.
ಪಕ್ಷದ ಚಟುವಟಿಕೆಗಳಿಂದ ಬಹುತೇಕ ದೂರ ಅಂತರ ಕಾಯ್ದುಕೊಂಡಿರುವ ಲಿಂಬಾವಳಿ, ಎಲ್ಲ ಬೆಳವಣಿಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದರಂತೆ ಕಾಣಿಸುತ್ತದೆ. ಬಹಳ ದಿನಗಳ ನಂತರ ಮೌನ ಮುರಿದು, ಪಕ್ಷದ ರಾಜ್ಯ ನಾಯಕರ ಕಾರ್ಯಶೈಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆ ದೀರ್ಘ ಸಂದೇಶವನ್ನು ಶುಕ್ರವಾರ ಹಂಚಿಕೊಂಡಿರುವ ಅವರು, ಬೆಂಗಳೂರು ಸೇರಿ ಅನೇಕ ಜಿಲ್ಲೆಗಳಲ್ಲಿ ಡೆಂಘೀ ತಾಂಡವವಾಡುತ್ತಿದೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ನೆರೆ ಹಾವಳಿಯಿಂದ ಲಕ್ಷಾಂತರ ಜನ ಮನೆ-ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.
ಈ ಬಗ್ಗೆ ಬೆಳಕು ಚೆಲ್ಲಬೇಕು, ಜನರ ಸಂಕಷ್ಟಕ್ಕೆ ಕನ್ನಡಿಯಾಗಬೇಕು ಎಂದು ನಮ್ಮ ಪಕ್ಷದ ನಾಯಕರಿಗೆ ಅನಿಸದೇ ಹೋದುದು ದುರ್ದೈವ! ಪ್ರವಾಹಕ್ಕೂ ಮೊದಲು ಈ ಹಿಂದಿನ ವರ್ಷದ ಬರ ಪರಿಹಾರವೂ ಅನೇಕ ರೈತರಿಗೆ ತಲುಪಿಲ್ಲ. ಆ ಬಗ್ಗೆ ಪ್ರತಿಪಕ್ಷದ ನಾಯಕರು ಮಾತಾಡಲೇ ಇಲ್ಲ ಎಂದು ಕುಟುಕಿದ್ದಾರೆ.
ಶಾಸಕರೂ ಆಗಿರುವ ನಮ್ಮ ಪಕ್ಷದ ಅಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರ ಮಧ್ಯೆ ಸಾಮರಸ್ಯ, ಹೊಂದಾಣಿಕೆ ಮತ್ತು ತಾಳ-ಮೇಳ ಇಲ್ಲದೇ ಹೋದದ್ದು ವಿಷಾದನೀಯ. ಇದರ ಸಂಪೂರ್ಣ ಲಾಭವನ್ನು ಆಡಳಿತ ಪಕ್ಷ ಪಡೆಯಲು ಸಹಾಯಕವಾಯಿತು ಎಂದು ಅರವಿಂದ ಲಿಂಬಾವಳಿ ವಿಶ್ಲೇಷಿಸಿದ್ದಾರೆ.
ಸಿಕ್ಕ ಅವಕಾಶ ಮತ್ತು ಸಮಯವನ್ನು ಸದನದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳದೇ, ಇಡೀ ಅಧಿವೇಶನದಲ್ಲಿ ವೃಥಾ ಕಾಲಹರಣ ಮಾಡಿ, ಇನ್ನೂ ಒಂದು ದಿನ ಬಾಕಿ ಇರುವಾಗಲೇ ಸದನದ ಕಲಾಪಗಳನ್ನು ಮೊಟಕುಗೊಳಿಸುವಲ್ಲಿ ಆಡಳಿತ ಪಕ್ಷದವರೊಂದಿಗೆ ಕೈಜೋಡಿಸಿದ ನಮ್ಮ ಪಕ್ಷದ ನಾಯಕರ ನಡೆ ಪ್ರಶ್ನಾರ್ಹ.
ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಗ್ಯಾರಂಟಿ ಯೋಜನೆ ಹಣಕ್ಕೆ ಎಸ್‌ಸಿ-ಎಸ್‌ಟಿಗೆ ಮೀಸಲಿಟ್ಟಿರುವ ಅನುದಾನ ದುರ್ಬಳಕೆ, ಹೀಗೆ ಯಾವ ವಿಷಯವನ್ನೂ ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಮ್ಮ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಈ ವಿಷಯಗಳ ಬಗ್ಗೆ ಪ್ರತಿಪಕ್ಷದ ನಾಯಕರೂ ಪರಿಣಾಮಕಾರಿಯಾಗಿ ಮಂಡಿಸಲಿಲ್ಲ.
ಒಟ್ಟಾರೆ ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಧಿವೇಶನದಲ್ಲಿ ನಾಯಕರ ನಡೆ ಗಮನಿಸಿದರೆ, ಮುಂದಿನ ದಿನಗಳಲ್ಲಿ ಜನಪರ ಹೋರಾಟಗಳಲ್ಲಿ ಪಕ್ಷ ಹೇಗೆ ತನ್ನನ್ನು ತೊಡಗಿಸಿಕೊಳ್ಳಬಹುದು ಎಂಬುದು ನಿಷ್ಠಾವಂತ, ದೇವದುರ್ಲಭ ಕಾರ್ಯಕರ್ತರಿಗೆ ಆತಂಕದ ವಿಷಯವಾಗಿದೆ.
ಬೆರಳೆಣಿಕೆಯಷ್ಟು ಶಾಸಕರನ್ನು ಹೊಂದಿದ್ದ ದಿನಗಳಲ್ಲೂ ಕಲಾಪಗಳಲ್ಲಿ ಆರ್ಭಟಿಸುತ್ತಿದ್ದ, ಜನರ ಆಶೋತ್ತರಗಳಿಗೆ ದನಿಯಾಗುತ್ತಿದ್ದ ಬಿಜೆಪಿಯನ್ನು ನೋಡಿದ್ದ ನನಗೆ, ನಮ್ಮ ಪಕ್ಷದ ಇಂದಿನ ಪರಿಸ್ಥಿತಿ ನೋಡಿ ತೀವ್ರ ಬೇಸರ ಮತ್ತು ಆತಂಕವಾಗುತ್ತಿದೆ ಎಂದು ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:ten + 12 =
Remember me
