ಬೆಂಗಳೂರು:ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಚುನಾವಣೆ ಬಳಿಕ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕಾಂಗ್ರೆಸ್ ಬೆಂಬಲಿಗರ ಹಿಡಿತ ತಪ್ಪಿಸಬೇಕೆಂಬ ಬಿಜೆಪಿ ಆಶಯ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಒಟ್ಟು 5,728 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 2,22,814 ಅಭ್ಯರ್ಥಿಗಳ ಪೈಕಿ ಬಿಜೆಪಿ ದೊಡ್ಡ್ಡ ಮಟ್ಟದಲ್ಲಿ ಪಕ್ಷದ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬೀಗಿದೆ.
ರಾಜಕೀಯ ಪಕ್ಷಗಳ ಬೇರು ಗಟ್ಟಿಮಾಡಬಹುದಾದ ಗ್ರಾಮ ಪಂಚಾಯಿತಿ ಚುನಾವಣೆಯ ಬುಧವಾರ ತಡರಾತ್ರಿವರೆಗಿನ ಫಲಿತಾಂಶದ ಪ್ರಕಾರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗಣನೀಯ ಸ್ಥಾನದಲ್ಲಿ ಗೆದ್ದಿದ್ದಾರೆ. ಪಕ್ಷರಹಿತವಾದ ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ನೇರ ಪಾಲ್ಗೊಳ್ಳುವಿಕೆ ಇಲ್ಲವಾದರೂ ಮೂರೂ ಪಕ್ಷಗಳು ತೆರೆಯ ಹಿಂದೆ ನಿಂತು ಕಸರತ್ತು ನಡೆಸಿದ್ದವು. ಪೂರ್ಣ ಚಿತ್ರಣ ಸಿಗುವ ಮೊದಲೇ ತಮ್ಮ ಅಭ್ಯರ್ಥಿಗಳೇ ಹೆಚ್ಚು ಸ್ಥಾನದಲ್ಲಿ ಗೆದ್ದಿದ್ದಾರೆ ಎಂದು ಹೇಳಿಕೊಳ್ಳುತ್ತಿವೆ. ತಳಹಂತದ ವರದಿ ಪ್ರಕಾರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶೇ.47ಕ್ಕಿಂತ ಹೆಚ್ಚು ಕಡೆ ವಿಜಯಿಯಾಗಿದ್ದಾರೆ.
ಎರಡು ಹಂತದಲ್ಲಿ ನಡೆದಿದ್ದ ಚುನಾವಣೆಯ ಮತ ಎಣಿಕೆ ಬುಧವಾರ ನಡೆಯಿತು. ರಾತ್ರಿ 10ರ ವೇಳೆಗೆ ಸರಿಸುಮಾರು ಶೇ.60 ಕ್ಷೇತ್ರದ ಮತ ಎಣಿಕೆ ಮುಗಿದಿತ್ತು. ಈ ಹಂತದಲ್ಲಿ ತಾನು ಸ್ಪಷ್ಟ ಮುನ್ನಡೆ ಸಾಧಿಸಿರುವುದಾಗಿ ಬಿಜೆಪಿ ಹೇಳಿಕೊಂಡಿದೆ. ಕಾಂಗ್ರೆಸ್ ಕೂಡ ತನ್ನ ಗೆಲುವಿನ ಪರಂಪರೆ ಮುಂದುವರಿದಿರುವುದಾಗಿ ಬೀಗಿದೆ. ಇಷ್ಟಾದರೂ ‘ಕಾಂಗ್ರೆಸ್​ಗಿದು ಸತ್ವಪರೀಕ್ಷೆ ಕಾಲ’ ಎಂದು ಆ ಪಕ್ಷದ ಹಿರಿಯ ನಾಯಕರಿಂದ ಪರೋಕ್ಷ ಎಚ್ಚರಿಕೆ ಹೇಳಿಕೆಗಳು ಹೊರಬಿದ್ದಿವೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹಿಡಿತ ತಪ್ಪಿಲ್ಲ ಎಂಬುದೂ ಗೋಚರಿಸಿದೆ. ಗ್ರಾ.ಪಂ. ಚುನಾವಣೆ ಫಲಿತಾಂಶದ ಒಟ್ಟಾರೆ ಸ್ಪಷ್ಟ ಚಿತ್ರಣ ಗುರುವಾರ ಬೆಳಗ್ಗೆ ಲಭಿಸಲಿದೆ. ಚುನಾವಣೆ ವ್ಯವಸ್ಥೆ ಜಾರಿಯಾದಾಗಿನಿಂದಲೂ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸದಾ ಮುಂದಿರುತ್ತಿದ್ದುದು ಇತಿಹಾಸ.
ಆದರೆ, ಈ ಬಾರಿ ಬಿಜೆಪಿ ಕಸರತ್ತು ನಡೆಸಿ, ಶಾಸಕರು, ಮಂತ್ರಿಗಳಿಗೆ ಹೊಣೆ ನೀಡಿತ್ತು. ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರಬೇಕೆಂದು ಗುರಿ ನಿಗದಿ ಮಾಡಿತ್ತು. ಬುಧವಾರ ಸಂಜೆ ವೇಳೆ ಬಹುತೇಕ ಸಚಿವರು, ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಸಾಧನೆಯನ್ನು ಹಂಚಿಕೊಂಡು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.
ಶ್ರಮಹಾಕಿದ್ದ ಕಮಲ:2019ರ ಲೋಕಸಭೆ ಚುನಾವಣೆ ವೇಳೆ ಬೂತ್ ಮೇಲೆ ಹೆಚ್ಚಿನ ಗಮನ ಹರಿಸಿದ್ದ ಬಿಜೆಪಿ ಅದೇ ಮಾರ್ಗದಲ್ಲಿ ಮುನ್ನಡೆಯುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಗಂಭೀರವಾಗಿ ತೆಗೆದುಕೊಂಡಿತ್ತು. ಹಲವೆಡೆ ಸಮಾವೇಶಗಳನ್ನು ಮಾಡಿತ್ತು. ಗ್ರಾಪಂ ಚುನಾವಣೆಯಲ್ಲಿ ತಮ್ಮ ಪರವಾದ ಹೆಚ್ಚಿನ ಅಭ್ಯರ್ಥಿಗಳು ಆರಿಸಿ ಬಂದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅವರೆಲ್ಲ ಆಸ್ತಿಯಾಗುತ್ತಾರೆ ಎಂದು ಭಾವಿಸಿ ಹೆಚ್ಚಿನ ಶ್ರಮಹಾಕಿತ್ತು.
ರಾಜಕೀಯ ಲೆಕ್ಕಾಚಾರ:ಮತ ಎಣಿಕೆಯಾದ ಶೇ.70ರಷ್ಟು ಸ್ಥಾನಗಳಲ್ಲಿನ ಹಿನ್ನಡೆ ಮುನ್ನಡೆ ಗಮನಿದಾಗ ಬಿಜೆಪಿ ನಾಯಕರ ಉತ್ಸಾಹ ಹೆಚ್ಚಿಸಿದ್ದು, ತಾವು ಹಾಕಿದ ಶ್ರಮಕ್ಕೆ ತಕ್ಕ ಫಸಲು ತೆಗೆದ ಖುಷಿಯಲ್ಲಿದ್ದಾರೆ. ಇತ್ತ ಎದುರಾಳಿ ಕಾಂಗ್ರೆಸ್ ಮಂಕಾಗಿದೆ. ವಿಧಾನಸಭೆ, ಲೋಕಸಭೆ, ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಸೋಲಿನ ಬಳಿಕ ಗ್ರಾಮ ಪಂಚಾಯಿತಿ ಹಂತದಲ್ಲೂ ಹಿನ್ನಡೆ ಆಗಿದ್ದು, ಇದು ನಾಯಕರ ನೆಮ್ಮದಿಗೆಡಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಜವಾಬ್ದಾರಿ ತೆಗೆದುಕೊಂಡ ಬಳಿಕ ಪಕ್ಷದಲ್ಲಿ ಸಂಚಲನ ಮೂಡಿದ್ದರೂ, ಚುನಾವಣೆ ಫಲಿತಾಂಶದಲ್ಲಿ ಪರಿಣಾಮ ಕಾಣಿಸುತ್ತಿಲ್ಲ. ಹಾಗೆಯೇ ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಂಡ ಜೆಡಿಎಸ್​ಗೆ ಪರಿಣಾಮ ಕಾಣಿಸುತ್ತಿದೆ. ತನ್ನ ಕೋರ್ ಏರಿಯಾದಲ್ಲಿ ಅದು ನೆಲೆ ಭದ್ರಮಾಡಿಕೊಂಡಿದ್ದು, ತಾನು ಅಷ್ಟು ಸುಲಭ ತುತ್ತಲ್ಲ ಎಂದು ಎದುರಾಳಿಗಳಿಗೆ ತೋರಿಸಿಕೊಟ್ಟಿದೆ.
ಮತದಾರನ ನಿರ್ಣಯ
1.ಆಡಳಿತ ಪಕ್ಷದ ಪರವಾದ ಅಭ್ಯರ್ಥಿಗೆ ಮತ ಹಾಕಿದರೆ ತಮ್ಮ ಗ್ರಾಮಕ್ಕೆ ಅನುಕೂಲವಾಗಬಹುದು
2. ಕರೊನಾ ನಿರ್ವಹಣೆ, ನೆರೆ ಪರಿಹಾರ ವಿತರಣೆ ಸರಿಯಾಗಿಲ್ಲ ಎಂಬ ಪ್ರತಿಪಕ್ಷದ ಆರೋಪ ಪೂರ್ಣ ಸತ್ಯವಲ್ಲ
3. ಗೋಹತ್ಯೆ ನಿಷೇಧ ಕಾನೂನು ಜಾರಿ ಭಾವನಾತ್ಮಕವಾಗಿ ಗ್ರಾಮೀಣ ಜನರ ಮೇಲೆ ಪರಿಣಾಮ ಬೀರಿದೆ
ಒಂದು ಮತದ ಜಯ
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನ ಗ್ರಾಪಂನಲ್ಲಿ ಎಲ್.ಮರಿಲಿಂಗಪ್ಪ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಣಾಪುರದ ಅಂಜನಹಳ್ಳಿಯ ರಾಣಿ ನಾಗೇಂದ್ರ, ಕನಕಗಿರಿ ತಾಲೂಕಿನ ಹುಲಿಹೈದರ್​ನಲ್ಲಿ ಹುಲಿಗೆಮ್ಮ ಶುಂಡಿ, ಮಾಳೆಕೊಪ್ಪ-2ರ ಛಲವಾದಿ ರಾಚಪ್ಪ ಹುಡಚಪ್ಪ, ಬೆಣಕಲ್ ಗ್ರಾಮದ ಲಕ್ಷ್ಮವ್ವ ಜಂಬಣ್ಣ ನಡುಲಮನಿ, ತೊಂಡಿಹಾಳ ವಾರ್ಡ್ 2ರ ರೇಣುಕಾ ಯಮನಪ್ಪ, ಗಂಗಾವತಿ ತಾಲೂಕಿನ ಅಂಜನಳ್ಳಿ ರಾಣಿ ನಾಗೇಂದ್ರ, ಕುಕನೂರಿನ ದ್ಯಾಂಪುರದ ಮಂಜುಳಾ ಮಾಲಗಿತ್ತಿ, ಕೊಪ್ಪಳದ ಹಟ್ಟಿ ಗ್ರಾಮದ ಹಾಲಮ್ಮ ನಗರ ಮತ್ತು ಓಜನಳ್ಳಿ ಗ್ರಾಮದ ತೋಟವ್ವ ಮೇಟಿ ಕೇವಲ 1 ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರೋಣ ತಾಲೂಕಿನ ಹಿರೇಹಾಳ ಗ್ರಾಮದ ನಿಂಗವ್ವ ಬೇವಿನಗಿಡದ, ನರಗುಂದ ತಾಲೂಕಿನ ಬನಹಟ್ಟಿ ಗ್ರಾಪಂನಲ್ಲಿ ರುದ್ರಪ್ಪ ಮಲ್ಲಪ್ಪ ಬಂಡಿ ಒಬಂದು ಮತದ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ದಡದಹಳ್ಳಿ ಕ್ಷೇತ್ರದಲ್ಲಿ ಸಾಕಮ್ಮ, ದೊಡಕೊಪ್ಪಲುನಲ್ಲಿ ಕೆ.ಎ.ಲಕ್ಷ್ಮೀ 43 ಒಂದು ಮತದ ಅಂತರದಿಂದ ಜಯ ಗಳಿಸಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ಎಪಿಎಂಸಿ ನಿರ್ದೇಶಕ ಸೋಮಣ್ಣ, ತಾಲೂಕು ಕುರುಬ ಸಮಾಜದ ಯುವ ಘಟಕದ ಅಧ್ಯಕ್ಷ ನಿಂಗರಾಜು ಅವರನ್ನು 1 ಮತದ ಅಂತರದಿಂದ ಪರಾಭವಗೊಳಿಸಿದ್ದಾರೆ.
ಎರಡು ಮತ ಅಂತರದ ಗೆಲುವು
ಚಿತ್ರದುರ್ಗದ ಯಳಗೋಡು ಗ್ರಾಪಂ ಬಸ್ತಿಹಳ್ಳಿ ಕ್ಷೇತ್ರದ ಶಾಂತಮ್ಮ 2 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇವರು 279, ಪ್ರತಿಸ್ಪರ್ಧಿ ಗೌರಮ್ಮ 277 ಮತ ಪಡೆದಿದ್ದಾರೆ. ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿಯಲ್ಲಿ ಕೆ.ಲಕ್ಷ್ಮಿ, ಹಿರೆಕುಂಬಳಗುಂಟೆ ಗ್ರಾಮದಲ್ಲಿ ಜಿ.ಚಂದ್ರಮ್ಮ, ಕನಕಗಿರಿ ತಾಲೂಕಿನ ವರನಖೇಢ ಗ್ರಾಮದ ದೇವಮ್ಮ ಚಂದ್ರಶೇಖರ್, ಕುಕನೂರು ತಾಲೂಕಿನ ತಳಕಲ್ ಗ್ರಾಪಂನಲ್ಲಿ ವಿಜಯಲಕ್ಷ್ಮೀ ಹಿರೇಮನಿ, ಯಲಬುರ್ಗಾದ ಬಂಡಿ ಹಾಳ ಗ್ರಾಮದ ಬಸಮ್ಮ ಕೆರಿಬಸಪ್ಪ ಕಳಸಪ್ಪನವರ್ 2 ಅಂತರಗಳಿಂದ ಜಯ ಸಾಧಿಸಿದ್ದಾರೆ.
ಮೂವರಿಗೂ ತಲಾ 76 ಮತ
ಸಾಗರ ತಾಲೂಕಿನ ಸುಳಗೋಡು ಕ್ಷೇತ್ರದಲ್ಲಿ ಕೆ.ಎನ್.ನಾಗರಾಜ್, ಕೆ.ಎಸ್.ನಾಗರಾಜ್, ಆಟೋ ಕೃಷ್ಣ ಮೂವರೂ ಸಮನಾಗಿ 76 ಮತ ಪಡೆದಿದ್ದು, ಲಾಟರಿಯಲ್ಲಿ ಕೆ.ಎನ್. ನಾಗರಾಜ್ ಗೆಲುವಿನ ನಗೆಬೀರಿದರು.
ಮತಕಣದ ಸ್ವಾರಸ್ಯಗಳು
ಯಾರು ಏನ್ ಹೇಳ್ತಾರೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
