|ಮೃತ್ಯುಂಜಯ ಕಪಗಲ್ಬೆಂಗಳೂರು
‘ಚುನಾವಣೆ ಪರೀಕ್ಷೆ’ ಕಾಲ ಹತ್ತಿರವಾಗುತ್ತಿರುವ ಕಾರಣ ಸರ್ಕಾರದ ಜತೆಗೆ ಸಂಘಟನಾ ಬಲ ಜೋಡಿಸಲು ಬಿಜೆಪಿ ತುದಿಗಾಲ ಮೇಲೆ ನಿಂತಿದ್ದು, ಪೂರ್ವ ತಯಾರಿ ಚುರುಕುಗೊಳಿಸಿದೆ. ಜನಪರ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ಸಕಾಲಕ್ಕೆ ತಲುಪಿಸುವುದು ಹಾಗೂ ಜನರಿಗೆ ಇನ್ನಷ್ಟು ಹತ್ತಿರವಾಗಿ ವಿಶ್ವಾಸ ಹೆಚ್ಚಿಸಿಕೊಳ್ಳುವುದು ಪಕ್ಷದ ಪ್ರಧಾನ ಕಾರ್ಯಸೂಚಿಯಾಗಿದೆ.
ಕರೊನಾ ಕಷ್ಟ ಕಾಲದಲ್ಲಿ ಹೆಣೆದ ಜಂಟಿ ಕಾರ್ಯತಂತ್ರ ನಿರೀಕ್ಷಿತ ಫಲ ದಕ್ಕಿಸಿತು. ಜನರಿಗೆ ನೆರವು ಜತೆಗೆ ಸಂಘಟನಾತ್ಮಕ ಬಲ ಹೆಚ್ಚಿಸುವುದಕ್ಕೆ ಅನುಕೂಲವಾಯಿತು. ಮೊದಲ ಅಲೆಯಲ್ಲಿ ನೊಂದವರಿಗೆ ಸಹಾಯ ಹಸ್ತ ಚಾಚಿದರೆ, ಎರಡನೇ ಅಲೆಯ ವೇಳೆ ಆಕ್ಸಿಜನ್ ಇನ್ನಿತರ ಆರೋಗ್ಯ ಸವಲತ್ತು ಅವಶ್ಯಕ ತಲುಪಿಸುವಲ್ಲಿ ಪಕ್ಷ ಆಸರೆಯಾಯಿತು.
ಹಾಗೆಯೇ ಜನರಿಂದ ಹಿಮ್ಮಾಹಿತಿ ಪಡೆದುಕೊಂಡು ಸರ್ಕಾರಕ್ಕೆ ರವಾನಿಸಿ, ಕ್ಷೇತ್ರ ಕಾರ್ಯದಲ್ಲಿನ ಲೋಪ-ದೋಷಗಳನ್ನು ಸರಿಪಡಿಸುವುದಕ್ಕೂ ನೆರವಾಯಿತು. ಈ ಅನುಭವ ಆಧಾರದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯುವಂತಹ ಗುರುತರ ಜವಾಬ್ದಾರಿ ನಿಭಾಯಿಸಲು ಪಕ್ಷ ಸಿದ್ಧವಾಗುತ್ತಿದೆ. ಕರ್ನಾಟಕಕ್ಕೆ ಸೂಕ್ತವೆನಿಸುವ ಭಾವನಾತ್ಮಕ ವಿಚಾರ ಹಾಗೂ ಅಭಿವೃದ್ಧಿ ಕಾರ್ಯಸೂಚಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದು ವರಿಷ್ಠರ ಚಿಂತನೆಯಾಗಿದೆ. ರಾಜ್ಯ ರಾಜಕೀಯ ನಕ್ಷೆ, ಸಾಮಾಜಿಕ ಸಮೀಕರಣ ಹಾಗೂ ವಸ್ತುಸ್ಥಿತಿ ಮಾಹಿತಿಯನ್ನು ಕಲೆಹಾಕಿ ಸಮರ ಪೂರ್ವಾಭ್ಯಾಸಕ್ಕೆ ಬೇಕಾದ ಸಲಹೆ-ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾವಾರು ಸಚಿವರ ನೇತೃತ್ವದಲ್ಲಿ ಸಂಸದ-ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು, ಹಿರಿಯ ಮುಖಂಡರನ್ನು ಒಳಗೊಂಡ ಸಮನ್ವಯ ಸಮಿತಿ ರಚನೆಯಾಗಲಿವೆ. ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿಸುವ, ಪ್ರಚಾರ ಚಟುವಟಿಕೆಗಳ ಮೇಲುಸ್ತುವಾರಿ ಹಾಗೂ ಸಹಕಾರ ನೀಡುವುದು ಈ ಸಮಿತಿಗಳ ಜವಾಬ್ದಾರಿಯಾಗಿರಲಿದೆ. ಸರ್ಕಾರಿ, ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೆಂದು ಕೇಂದ್ರ ಗೃಹ, ಸಹಕಾರ ಸಚಿವ ಅಮಿತ್ ಶಾ ಮಾ.31ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಕಾರ್ಯಯೋಜನೆ ಅಂತಿಮಗೊಳಿಸಿ ವರದಿಯನ್ನು ಶಾ ಮುಂದಿಡಲು ಪಕ್ಷದ ರಾಜ್ಯ ನಾಯಕರು ಯೋಚಿಸಿದ್ದಾರೆ.
ಕಾರ್ಯಕಾರಿಣಿ ಸಭೆ:ಅಧಿವೇಶನಕ್ಕೆ ಮುಂದೂಡಲ್ಪಟ್ಟ ಪಕ್ಷದ ರಾಜ್ಯ ಕಾರ್ಯಕಾರಿ ಸಭೆ ಏ.16 ಹಾಗೂ 17ರಂದು ಹೊಸಪೇಟೆಯಲ್ಲಿ ನಡೆಯಲಿದ್ದು, ಕಾರ್ಯಯೋಜನೆಗೆ ಅಂತಿಮ ಸ್ಪರ್ಶ ಸಿಗಲಿದೆ. ಪಕ್ಷದ ವರಿಷ್ಠರ ಮಾರ್ಗದರ್ಶನ, ರಾಜ್ಯ ಸಲಹೆಗಳೊಂದಿಗೆ ಮುಂದಿನ ಹಂತದ ಸಂಘಟನಾತ್ಮಕ ಚಟುವಟಿಕೆಗಳು, ಬಲ ಸಮರ್ಪಕ ಬಳಕೆಗೆ ರೂಪು-ರೇಷೆ ಸಿದ್ಧಗೊಳ್ಳಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರವಾಸ, ಸಮನ್ವಯ ಸಮಿತಿ:ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ/ ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ, ಜನರಲ್ಲಿ ಜಾಗೃತಿ ಮೂಡಿಸುವುದು ಈ ಚಟುವಟಿಕೆಗಳ ಭಾಗವಾಗಿರಲಿದೆ. ಜಿಲ್ಲಾಮಟ್ಟದಲ್ಲಿ ಅಭ್ಯಾಸ ವರ್ಗ ನಡೆಸಿ ಪಕ್ಷದ ತತ್ವ-ಸಿದ್ಧಾಂತ, ವಿಚಾರಧಾರೆ, ಕಾರ್ಯಕ್ರಮಗಳನ್ನು ಜನರ ತಲುಪಿಸುವ ರೀತಿ ಬಗ್ಗೆ ಮಾಹಿತಿ ನೀಡಿ, ಸನ್ನದ್ಧಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕರನ್ನು ಒಳಗೊಂಡ ತಂಡಗಳು ವಿಭಾಗವಾರು ಸಂಘಟನಾ ಪ್ರವಾಸ ಕೈಗೊಳ್ಳಲಿವೆ. ಜನರಲ್ಲಿರುವ ಅಸಮಾಧಾನ, ಅಪಸ್ವರ ನಿವಾರಣೆ. ಪ್ರತಿಪಕ್ಷಗಳ ಸವಾಲಿಗೆ ತಕ್ಕ ಜವಾಬು ನೀಡಲು ಮಂಡಲ ಹಂತದಿಂದ ಮುಖಂಡರ ಪಡೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ರಾಜ್ಯ ನಾಯಕರು ಪ್ರವಾಸದ ವೇಳೆ ಕಾರ್ಯಕರ್ತರಲ್ಲಿ ಹುರುಪು ತುಂಬುವ ಜತೆಗೆ ಆಯಾ ಜಿಲ್ಲೆ ವಾಸ್ತವ ಸ್ಥಿತಿ ಮಾಹಿತಿ ಸಂಗ್ರಹಿಸಲು ಯೋಚಿಸಿದ್ದಾರೆ.
ಬಿಎಸ್​ವೈ-ರಾಜ್ಯ ನಾಯಕರ ಭೇಟಿ:ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಉತ್ತೇಜಿಸುವ ಭಾಗವಾಗಿ ಬಿಜೆಪಿ ರಾಜ್ಯ ನಾಯಕರ ತಂಡಗಳ ಮತ್ತೊಂದು ಸುತ್ತಿನ ರಾಜ್ಯ ಪ್ರವಾಸಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ‘ಕಾವೇರಿ’ ನಿವಾಸದಲ್ಲಿ ಪಕ್ಷದ ರಾಜ್ಯ ನಾಯಕರು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಸಂಸದರು ಹಾಗೂ ಪಕ್ಷದ ರಾಜ್ಯ ಸಮಿತಿ ಪದಾಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿ, ವಿಭಾಗವಾರು ಪ್ರವಾಸ ಸಂಘಟಿಸುವ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಪಕ್ಷದ ರಾಜ್ಯಾಧ್ಯಕ್ಷ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸಿದ್ಧರಾಜು ಉಪಸ್ಥಿತರಿದ್ದರು.
ಪ್ರಧಾನಿ ಮೋದಿಯ ಫೋಟೋ ಇಟ್ಟರೆ ನಿನ್ನನ್ನೇ ಮನೆಯಿಂದ ಹೊರಹಾಕುವೆ ಎಂದ ಮಾಲೀಕ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
