ಬೆಂಗಳೂರು:ಒಕ್ಕಲಿಗ ಹಾಗೂ ಹಿಂದುಳಿದ ಮತಗಳ ಧ್ರುವೀಕರಣ ತಡೆಯಲು ಬಿಜೆಪಿ ಕಾರ್ಯತಂತ್ರ ರೂಪಿಸುವ ಬಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆ ಮಂತ್ರಾಲೋಚನೆ ನಡೆಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯು, ಮುಂಬರುವ ಚುನಾವಣೆ ಎದುರಿಸುವ ಬಗ್ಗೆ ರೋಡ್ ಮ್ಯಾಪ್ ಸಿದ್ಧಪಡಿಸಿಕೊಳ್ಳುವಾಗ ಈ ಧ್ರ್ರುವೀಕರಣದ ಸಂಗತಿಯನ್ನು ಪ್ರಧಾನವಾಗಿ ಪರಿಗಣಿಸಲು ನಿರ್ಧರಿಸಿದೆ.
ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಷಾ ಸಂಜೆ ಪಕ್ಷದ ಕಚೇರಿಯಲ್ಲಿ ಕೋರ್​ಕಮಿಟಿ ಸಭೆಯನ್ನು ಮುನ್ನೆಡೆಸಿ, ಸಲಹೆ ಸೂಚನೆ ನೀಡಿದರು. ಜತೆಗೆ ಪ್ರತಿಯೊಬ್ಬ ರಾಜ್ಯ ನಾಯಕರ ಅಭಿಪ್ರಾಯ ಕೇಳಿದ ಅಮಿತ್ ಷಾ, ಪ್ರತಿಯೊಬ್ಬರಿಗೂ ಅಭಿಪ್ರಾಯ ಮಂಡಿಸಲು ಮುಕ್ತ ಅವಕಾಶ ನೀಡಿದ್ದರು.
ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳ ಗಡಿ ದಾಟಬೇಕು, ಈ ನಿಟ್ಟಿನಲ್ಲಿ ಸ್ಪಷ್ಟ ನೀಲಿನಕ್ಷೆ ಸಿದ್ಧಪಡಿಸಲು ಅಮಿತ್ ಷಾ ರಾಜ್ಯ ಘಟಕಕ್ಕೆ ಸೂಚನೆ ನೀಡಿದ್ದಾರೆ. ಹಾಗೆಯೇ ಕಾಂಗ್ರೆಸ್, ಜೆಡಿಎಸ್​ನ ಧರ್ಮ, ಜಾತಿ ಲೆಕ್ಕಾಚಾರದ ಧ್ರ್ರುವೀಕರಣಕ್ಕೆ ಪರ್ಯಾಯವಾಗಿ ನಾವೂ ಸೂಕ್ತ ತೀರ್ಮಾನ ಮಾಡಬೇಕಾಗುತ್ತದೆ ಎಂಬ ನಿರ್ಣಯಕ್ಕೆ ಬರಲಾಗಿದೆ. ರಾಜ್ಯದಲ್ಲಿ ಗುರಿ ಮುಟ್ಟಲು ಎಲ್ಲ ಅವಕಾಶ ಇದೆ. ಗೊಂದಲ ಮಾಡಿಕೊಳ್ಳದೇ 150 ಸ್ಥಾನದ ಗಡಿ ದಾಟಲು ಯಾವೆಲ್ಲ ತೀರ್ಮಾನ ಮಾಡಬೇಕೆಂಬ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕೆಂದು ಸರ್ಕಾ ರದ ಪ್ರತಿನಿಧಿ ಹಾಗೂ ಸಂಘಟನೆಗೆ ಸೂಚನೆ ನೀಡಿದ್ದಾರೆ.
ಧ್ರುವೀಕರಣದ ವಿಚಾರಕ್ಕೆ ಬಂದರೆ ಸಿದ್ದರಾಮಯ್ಯ ಕಾರಣಕ್ಕೆ ಹಿಂದುಳಿದ ವರ್ಗದ ಮತಗಳು, ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಕಾರಣಕ್ಕೆ ಒಕ್ಕಲಿಗ ಮತಗಳು ಕ್ರೋಡೀಕರಣಗೊಳ್ಳುವ ಅವಕಾಶ ಇರುತ್ತದೆ. ಜತೆಗೆ ಅಲ್ಪಸಂಖ್ಯಾತ ಮುಸ್ಲಿಂ ಮತಗಳನ್ನು ಚದುರದಂತೆ ಕಾಂಗ್ರೆಸ್ ನಿರಂತರ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಒಕ್ಕಲಿಗ ಹಾಗೂ ಹಿಂದುಳಿದ ಮತಗಳ ಮೇಲೆ ಹೆಚ್ಚು ಗಮನ ಹರಿಸಬೇಕೆಂಬ ವಿಚಾರ ವಿನಿಮಯ ನಡೆದಿದೆ.
ಪಕ್ಷ ಸೇರ್ಪಡೆ ವಿಚಾರ ಸಭೆಯ ಇನ್ನೊಂದು ಪ್ರಮುಖ ಅಂಶವಾಗಿದೆ. ಅನ್ಯ ಪಕ್ಷದ ಮುಖಂಡರು ಪಕ್ಷ ಸೇರಲು ನನ್ನನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದ್ದಾರೆ, ನಿಮ್ಮನ್ನೂ ಭೇಟಿ ಮಾಡಿರಬಹುದು. ಅಂತವರು ಟಿಕೆಟ್ ಬಯಸಿ ಬರಲು ಅಪೇಕ್ಷೆ ಪಟ್ಟಿಲ್ಲ, ಇನ್ನು ಕೆಲವರು ಪರ್ಯಾಯ ಸ್ಥಾನಮಾನದ ಬಗ್ಗೆ ಕೇಳುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮಸ್ಯೆ ಆಗದಂತೆ, ನೀವು ಕುಳಿತು ರ್ಚಚಿಸಿ ನಿಮ್ಮ ನಿರ್ಧಾರ ನಮಗೆ ತಿಳಿಸಿ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳವಣಿಗೆಗೆ ಗಮನಕೊಡಲಿ ಎಂದು ಎಂದು ಅಮಿತ್ ಷಾ ಪಕ್ಷದ ರಾಜ್ಯ ಘಟಕಕ್ಕೆ ಸಲಹೆ ನೀಡಿದ್ದಾರೆ. ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ, ಮುಂದಿನ ಚುನಾವಣೆ ತಯಾರಿ ಸಂಘಟನಾತ್ಮಕ ವಿಚಾರಗಳ ಬಗ್ಗೆ ನಮ್ಮ ನಾಯಕರು ಸೂಚನೆಗಳನ್ನು ನೀಡಿದ್ದಾರೆ ಎಂದರು.
ಕಳೆದ ಬಾರಿ 104 ಗೆದ್ದೆವು, ಈಗ 120 ಬಲ ಇದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಕ್ರಾಸ್ ಮಾಡಬೇಕೆಂದು ಗುರಿ ನೀಡಿದ್ದಾರೆ. ಈ ಸಂಬಂಧ ರೋಡ್ ಮ್ಯಾಪ್ ತಯಾರು ಮಾಡುತ್ತೇವೆ.
|ಸಿ.ಟಿ.ರವಿಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಚುನಾವಣೆ ಮೀಸಲು ಚರ್ಚೆ:ಜಿಲ್ಲಾ ಪಂಚಾಯಿತಿ, ತಾ.ಪಂ.ಚುಣಾವಣೆಗೆ ಹಿಂದುಳಿದ ವರ್ಗಕ್ಕೆ ಮೀಸಲು ನೀಡಿಯೇ ಚುನಾವಣೆಗೆ ಹೋಗಬೇಕಾಗಾಗುತ್ತದೆ, ಅವರಿಗೆ ಸಿಗಬೇಕಾದ ನ್ಯಾಯ ಸಿಗಲೇ ಬೇಕು ಎಂದು ಅಮಿತ್ ಷಾ ಕೋರ್​ಕಮಿಟಿ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ನಾಲ್ಕು ದಿನದ ಹಿಂದೆ ನಡೆದ ಸರ್ವಪಕ್ಷ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಮಿತ್ ಷಾ ಗಮನಕ್ಕೆ ತಂದರು. ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಆಗಬಾರದು, ಮೀಸಲಾತಿ ನೀಡಿದ ಬಳಿಕವೇ ಚುನಾವಣೆ ನಡೆಸುವ ತೀರ್ವನಕ್ಕೆ ಬರಲಾಯಿತು.
ಸಂಪುಟ ಸರ್ಜರಿಗೆ ತಾತ್ವಿಕ ಒಪ್ಪಿಗೆ?:ಚುನಾವಣೆ ಉದ್ದೇಶದಲ್ಲಿ ಸಂಪುಟಕ್ಕೆ ಸರ್ಜರಿ ಮಾಡಬಹುದೆಂಬ ಬಗ್ಗೆ ಅಮಿತ್ ಷಾ ಸಮ್ಮುಖದಲ್ಲಿ ಅನೌಪಚಾರಿಕ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಂಪುಟ ಪುನಾರಚನೆಗೆ ಅವರು ತಾತ್ವಿಕ ಒಪ್ಪಿಗೆ ಸೂಚಿಸಿದ್ದು, ಯಾರನ್ನು ಯಾವ ಕಾರಣಕ್ಕೆ ಸೇರಿಸಿಕೊಳ್ಳಬೇಕೆಂಬ ಬಗ್ಗೆ ಸೂಕ್ತ ನಿರ್ಣಯ ಮಾಡೋಣ ಎಂದು ರಾಜ್ಯ ನಾಯಕರಿಗೆ ಭರವಸೆ ನೀಡಿದ್ದಾರೆನ್ನಲಾಗಿದೆ. ಅವಧಿ ಪೂರ್ವ ಚುನಾವಣೆ ಕುರಿತಂತೆ ಇರುವ ಊಹಾಪೋಹಗಳ ಕುರಿತಂತೆಯೂ ಈ ವೇಳೆ ಚುಟುಕಾದ ಚರ್ಚೆ ನಡೆದಿದೆ.
ಬೊಮ್ಮಾಯಿಗೆ ಷಾ ಶಹಬ್ಬಾಸ್:ಹಾಲು ಉತ್ಪಾದಕರಿಗಾಗಿ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸ್ಥಾಪಿಸಿರುವ ಏಕೈಕ ರಾಜ್ಯ ಕರ್ನಾಟಕ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪ್ರಗತಿಪರ ಯೋಜನೆಗಳನ್ನು ಹಮ್ಮಿಕೊಂಡು ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಷಾ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಅರಮನೆ ಮೈದಾನದಲ್ಲಿ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕಿನ ಲಾಂಛನ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸ್ಥಾಪನೆ ಮೂಲಕ ಗ್ರಾಮೀಣಾಭಿವೃದ್ಧಿಯನ್ನು ಬಲಪಡಿಸುವ ಕೆಲಸವಾಗಿದೆ. ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ನೀಡುವ ಮೂಲಕ ರೈತರನ್ನು ಆತ್ಮನಿರ್ಭರರನ್ನಾಗಿ ಮಾಡಲಾಗುತ್ತಿದೆ. ಕರ್ನಾಟಕದ ಪ್ರತಿ ಗ್ರಾಮದಲ್ಲಿಯೂ ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಅಮಿತ್ ಷಾ ಕೊಂಡಾಡಿದ ಸಿಎಂ:ಕಾಶ್ಮೀರವನ್ನು ದೇಶದ ಅಂಗವಾಗಿ ಉಳಿಸಿದ ಕೀರ್ತಿ ಅಮಿತ್ ಷಾ ಅವರದ್ದು. ಸಹಕಾರ ಕ್ಷೇತ್ರದ ಮೊದಲ ಕೇಂದ್ರ ಮಂತ್ರಿಯೂ ಅವರಾಗಿದ್ದಾರೆ. ಮೋದಿ ಮತ್ತು ಷಾ ನೇತೃತ್ವದಲ್ಲಿ ದೇಶದಲ್ಲಿಯೇ ಬದಲಾವಣೆ ಸಾಧ್ಯವಾಗಿದೆ ಎಂದು ಅವರ ಕಾರ್ಯ ವೈಖರಿಯನ್ನು ಬೊಮ್ಮಾಯಿ ಕೊಂಡಾಡಿದರು.
ತಾಲೂಕು ಮಟ್ಟಕ್ಕೂ ಕ್ಷೀರ ಸಮೃದ್ಧಿ:ಬೆಂಗಳೂರು: ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್​ಗಳನ್ನು ಮುಂದಿನ ಹಂತದಲ್ಲಿ ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಸಹಕಾರ ಸಮ್ಮೇಳದಲ್ಲಿ ಮಾತನಾಡಿದ ಸಿಎಂ, ಸುಮಾರು 20 ಸಾವಿರ ಕೋಟಿ ರೂ. ವಹಿವಾಟು ನಡೆಸುವ ಕೆಎಂಎಫ್ ತನ್ನದೇ ಆದ ಬ್ಯಾಂಕ್ ಹೊಂದಲಿ ಎನ್ನುವ ಕಾರಣಕ್ಕಾಗಿಯೇ ಬಜೆಟ್​ನಲ್ಲಿ ಘೋಷಣೆ ಮಾಡಿ, 100 ಕೋಟಿ ರೂ. ಷೇರು ಬಂಡವಾಳ ನೀಡಲಾಗಿದೆ. 260 ಕೋಟಿ ರೂ. ಷೇರು ಬಂಡವಾಳ ಬೇರೆ ರೂಪದಲ್ಲಿ ಹರಿದು ಬರಲಿದೆ ಎಂದರು. 33 ಲಕ್ಷ ಜನರಿಗೆ 20 ಸಾವಿರ ಕೋಟಿ ರೂ.ಗಳನ್ನು ಶೂನ್ಯಬಡ್ಡಿಯಲ್ಲಿ ಸಾಲ ಕೊಡುವ ಮಟ್ಟಿಗೆ ರಾಜ್ಯದಲ್ಲಿ ಸಹಕಾರ ಕ್ಷೇತ್ರ ಬೃಹದಾಕಾರವಾಗಿ ಬೆಳೆದಿದೆ. ಯಶಸ್ವಿನಿ ಯೋಜನೆಯ ಮರು ಅನುಷ್ಠಾನಕ್ಕೆ ಹೋದಲ್ಲೆಲ್ಲ ಒತ್ತಾಯಗಳು ಬರುತ್ತಿದ್ದವು. ಹಾಗಾಗಿ ಅದನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದರು.
ಭಾಸ್ಕರ್ ರಾವ್ ಸ್ವಯಂ ನಿವೃತ್ತಿ; ಅರ್ಜಿ ಅಂಗೀಕರಿಸಿದ ಕೇಂದ್ರ ಸರ್ಕಾರ

ಮಣ್ಣು ರಕ್ಷಿಸಿ ಅಭಿಯಾನ; ಮಳೆಯಲ್ಲೂ ತಡೆ ಇಲ್ಲದೆ ಸಾಗಿದೆ ಸದ್ಗುರು ಬೈಕ್ ಯಾನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − one =
Remember me
