ಬೆಂಗಳೂರು:ಲೋಕಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮೂರೂ ರಾಜಕೀಯ ಪಕ್ಷಗಳು ಪೂರ್ವತಯಾರಿ ಶುರು ಮಾಡಿವೆ. ಸೋಮವಾರ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಭೆಗಳನ್ನು ಆಯೋಜಿಸಿ ಮಂಥನ ನಡೆಸಿದರೆ, ಕಾಂಗ್ರೆಸ್ ಪಾಳಯದಲ್ಲಿ ಓರೆಕೋರೆ ತಿದ್ದಿ ತೀಡುವ ಪ್ರತ್ಯೇಕ ಸಭೆ ಆರಂಭವಾಗಿದೆ. ಜ.10ರಂದು ಮಹತ್ವದ ಸಭೆ ಕರೆಯಲಾಗಿದೆ.
ಏಪ್ರಿಲ್, ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಅಂದಾಜಿದ್ದು ಪೂರ್ವ ತಯಾರಿ ಬೇಕಾಗಿದೆ. ಸೇನಾಧಿಪತಿ ಹಾಗೂ ಸೈನ್ಯವನ್ನು ಸಜ್ಜುಗೊಳಿಸುವುದು, ಬತ್ತಳಿಕೆಗೆ ಬೇಕಾದ ಅಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳುವುದು, ಸಂಪನ್ಮೂಲ ಕ್ರೋಡೀ ಕರಣ ಹೀಗೆ ವಿವಿಧ ಆಯಾಮಗಳಲ್ಲಿ ಸಿದ್ಧತೆ ನಡೆದಿದೆ. ಮೂರೂ ಪಕ್ಷಗಳು ಏಕಕಾಲಕ್ಕೆ ಚುನಾವಣೆ ತಯಾರಿ ಆರಂಭಿಸಿರುವುದು ವಿಶೇಷ. ಒಂದೆಡೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವರಿಷ್ಠರ ಸಂದೇಶದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದು, ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಪಕ್ಷದಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಿ, ಜವಾಬ್ದಾರಿಗಳನ್ನು ನಿಗದಿಪಡಿಸಲು ಮೂರು ದಿನ ಸಭೆಗಳನ್ನು ನಡೆಸುವರು. ಜೆಡಿಎಸ್ ವರಿಷ್ಠರು ಕೂಡ ಸಭೆ ನಡೆಸಿ, ಬಿಜೆಪಿ ಜತೆಗೆ ಹೊಸ ಸಂಬಂಧ ಬೆಸೆದುಕೊಳ್ಳುವ ಹಂತದಲ್ಲಿ ಕೂಡಿ ಹೋರಾಡುವ ತಂತ್ರಗಾರಿಕೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ತಿದ್ದಿ ತೀಡುವ ಕಾಂಗ್ರೆಸ್ ವರಸೆಚುನಾವಣೆಗೂ ಮುನ್ನ ಸರ್ಕಾರದ ಆಗುಹೋಗುಗಳಲ್ಲಿನ ವ್ಯತ್ಯಾಸ ಹಾಗೂ ಅಸಮಾಧಾನದ ಓರೆಕೋರೆಗಳನ್ನು ತಿದ್ದಲು ಮುಂದಾಗಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ. ದೆಹಲಿಯಲ್ಲಿಇದ್ದರೂ ಕರ್ನಾಟಕದ ಮೇಲೆ ನಿಗಾಇಟ್ಟು ಪ್ರತಿ ಬೆಳವಣಿಗೆಯ ಕುರಿತು ವರದಿ ತರಿಸಿಕೊಳ್ಳುತ್ತಿದ್ದ ಸುರ್ಜೆವಾಲ ಸೋಮವಾರ ಸಂಜೆ ಬೆಂಗಳೂರಿನಲ್ಲಿ ಅನೌಪಚಾರಿಕ ಸಭೆ ನಡೆಸಿದ್ದಾರೆ. ಪ್ರಮುಖ ನಾಯಕರನ್ನು ಕರೆಸಿಕೊಂಡು ವಿಚಾರ ವಿನಿಮಯ ಮಾಡಿದ್ದಾರೆ. ಕ್ಷೇತ್ರಗಳಿಗೆ ಅನುದಾನ ವಿಚಾರ, ಸಚಿವರ ನಡವಳಿಕೆಗಳು, ನೇಮಕಗಳು ಹೀಗೆ ವಿವಿಧ ವಿಚಾರಗಳಲ್ಲಿ ಶಾಸಕರು, ಮುಖಂಡರು ತಮ್ಮ ಬೇಸರವನ್ನು ಹೊರಹಾಕುತ್ತಲೇ ಬಂದಿದ್ದರು. ತಿದ್ದಿ ತೀಡುವ ಕಾಂಗ್ರೆಸ್ ವರಸೆ ಕೆಲವರದ್ದೂ ಇನ್ನೂ ಮುಗಿದಿಲ್ಲ. ಹೀಗಾಗಿ ಅಂಥವರನ್ನು ಕರೆದು ಮಾತನಾಡಿ ಅವರ ಅಭಿಪ್ರಾಯ ಸಂಗ್ರಹಿಸಿ ವ್ಯತ್ಯಾಸಗಳನ್ನು ಸರಿಪಡಿಸುವ ಕೆಲಸಕ್ಕೆ ಸುರ್ಜೆವಾಲ ಕೈಹಾಕಿದ್ದಾರೆ. ಅಷ್ಟೇ ಅಲ್ಲದೇ, ಇಲ್ಲಿಯವರೆಗಿನದು ಒಂದು ಲೆಕ್ಕವಾದರೆ, ಮುಂದೆ ಸಾಗಬೇಕಾದ ದಾರಿ ಸವಾಲಿನದು. ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಉಮೇದಿನಲ್ಲಿರುವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಸುರ್ಜೆವಾಲ ಜೋಡಿ ಲೋಕಸಭೆ ಚುನಾವಣೆಯಲ್ಲೂ ಉತ್ತಮ ಸಾಧನೆ ದಾಖಲಿಸುವ ಹುಮ್ಮಸ್ಸಿನಲ್ಲಿದ್ದು, ಸೂಕ್ತ ತಯಾರಿ ಆರಂಭಿಸಬೇಕಾಗಿದೆ. ವಿಧಾನಸಭೆ ಚುನಾವಣೆ ವೇಳೆ ಇದ್ದ ವಾತಾವರಣಕ್ಕೂ ಈಗಿನ ವಾತಾವರಣಕ್ಕೂ ವ್ಯತ್ಯಾಸವಿದೆ. ಅಲ್ಲದೆ ಚುನಾವಣೆ ನಡೆಯುವ ತಳಹದಿಯೇ ಬೇರೆ ಸ್ವರೂಪದ್ದು. ಹೀಗಾಗಿ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಈ ಮೂವರು ತಂತ್ರಗಾರಿಕೆ ಹೆಣೆಯಬೇಕಿದೆ. ಹೀಗಾಗಿಯೇ ಪ್ರತ್ಯೇಕ ಸಭೆಯನ್ನೂ ನಡೆಸುವವರಿದ್ದಾರೆ. ಸೋತು ಮಂಕಾಗಿದ್ದ ಬಿಜೆಪಿ ಇದೀಗ ಹೊಸ ತಂಡ ಕಟ್ಟಿಕೊಂಡು ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಜೆಡಿಎಸ್ ಕೂಡ ತನ್ನ ಶಾಸಕರನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡಲಿದೆ. ಜತೆಗೆ, ಇವರಿಬ್ಬರೂ ಒಟ್ಟಾಗಿ ಅಖಾಡಕ್ಕೆ ಧುಮುಕುವುದರಿಂದ ಸಮೀಕರಣಗಳು ಬದಲಾಗಲಿವೆ. ಇದನ್ನು ಅರ್ಥ ಮಾಡಿಕೊಂಡು ಹೊಸ ಲೆಕ್ಕಾಚಾರ ಹೂಡುವ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಚುನಾವಣಾ ತಂತ್ರಗಾರರ ನೆರವು ಪಡೆದುಕೊಳ್ಳುತ್ತಿದೆ. ಅದರ ಸಭೆಯೂ ಇಷ್ಟರಲ್ಲೇ ನಡೆಯಲಿದೆ.
ಬಿಜೆಪಿಯ ಸಂಘಟಿತ ತಂತ್ರಅಪನಂಬಿಕೆ, ಸಂವಹನ ಕೊರತೆ ಹೋಗಲಾಡಿಸಲು ಸಂಘಟಿತ ತಂತ್ರಗಾರಿಕೆ ಅನುಸರಣೆ. ಇದು, ಪ್ರತಿಪಕ್ಷ ಬಿಜೆಪಿಯ ಮೊದಲ ಮಂತ್ರ, ಲೋಕಸಭೆ ಚುನಾವಣೆಗೆ ಕಾರ್ಯತಂತ್ರ. ಯಲಹಂಕದ ಹೋಟೆಲ್​ನಲ್ಲಿ ಲೋಕಸಭೆ ಚುನಾವಣೆಗೆ ಯೋಜನೆ ರೂಪಿಸಲೆಂದು ಪ್ರಮುಖರು ಸಭೆ ಸೋಮವಾರ ನಡೆಸಿ, ಸ್ಥೂಲವಾಗಿ ರ್ಚಚಿಸಿದ್ದಾರೆ. ಜೆಡಿಎಸ್​ಗೆ ಸೀಟುಗಳ ಹಂಚಿಕೆಯನ್ನು ಎನ್​ಡಿಎ ಸಮಿತಿ ವಿವೇಚನೆಗೆ ಬಿಟ್ಟು ಕೊಡಲು ಸಭೆ ತೀರ್ವನಿಸಿದೆ. ಪಕ್ಷದ ಪರ ಹವಾ ಸೃಷ್ಟಿಸಲು ನೂರು ದಿನಗಳ ಪಥನಕ್ಷೆ ಫೈನಲ್ ಮಾಡಲಾಗಿದೆ. ಈ ಅವಧಿಯಲ್ಲಿ ನಿರಂತರ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲಿದೆ. ಬೂತ್, ಶಕ್ತಿ, ಮಂಡಲ ಹಾಗೂ ಜಿಲ್ಲಾ ಹಂತದ ಕಾರ್ಯಕರ್ತರು ಮತ್ತು ಮುಖಂಡರನ್ನು ಬೆಸೆದು ಸಂಘಟನೆಯಲ್ಲಿ ಹುರುಪು ತುಂಬುವುದು ಮುಖ್ಯ ಉದ್ದೇಶ. ತಲಾ ನಾಲ್ಕು ಲೋಕಸಭೆ ಕ್ಷೇತ್ರಗಳಿಗೆ ಒಂದರಂತೆ ಒಟ್ಟು ಏಳು ಕ್ಲಸ್ಟರ್​ಗಳನ್ನು ರಚಿಸಿ ವ್ಯೂಹ ರಚಿಸಿರುವುದು ವಿಶೇಷವಾಗಿದೆ. ಮುಂದಿನ ಹಂತದ ಸಭೆಗಳಲ್ಲಿ ಲೋಕಸಭೆ ಕ್ಷೇತ್ರಾವಾರು ಅವಲೋಕನಕ್ಕೆ ಸಹಮತ ವ್ಯಕ್ತವಾಗಿದ್ದು, ಅದಕ್ಕೂ ಮುಂಚೆ ವರದಿ ತರಿಸಿಕೊಳ್ಳಲು ಸಭೆ ಸೂಚಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣ ಬಲಿಷ್ಠವಾಗಿರುವುದು ಸಹಜ. ಆದರೆ ಸಿದ್ಧತೆಯಲ್ಲೂ ವೇಗ ಕಾಯ್ದುಕೊಂಡಿದ್ದು, ಅದಕ್ಕೂ ಮೀರಿದ ವೇಗದಲ್ಲಿ ಸಂಘಟನೆ ಬಲವರ್ಧನೆ ಹಾಗೂ ಕಾರ್ಯತಂತ್ರ ಅನುಷ್ಠಾನಕ್ಕೆ ತರಬೇಕು ಎನ್ನುವುದು ಸಭೆಯ ಒಕ್ಕೊರಲು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವವಹಿಸಿದ್ದ ಈ ಸಭೆಯಲ್ಲಿ ಮಾಜಿ ಸಿಎಂಗಳು, ಕೇಂದ್ರ ಸಚಿವರು, ಮಾಜಿ ಸಚಿವರು, ಶಾಸಕರು ಸೇರಿ 54 ಅಪೇಕ್ಷಿತರು ಹಾಜರಿದ್ದರು.
ಜೆಡಿಎಸ್​ನಲ್ಲಿ ಗೆಲ್ಲಿಸುವ ಗುರಿಸ್ಥಳೀಯ ಮಟ್ಟದಲ್ಲಿ ಬಿಜೆಪಿ ಜತೆ ನಾಯಕರು, ಕಾರ್ಯಕರ್ತರ ಜತೆ ಹೊಂದಾಣಿಕೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಹತ್ವದ ಸಭೆ ನಡೆಸಿದರು. ಜೆ.ಪಿ. ಭವನದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು,ಮಾಜಿ ಸಚಿವರು ಭಾಗಿಯಾಗಿದ್ದರು. ಚುನಾವಣೆ ಸಿದ್ಧತೆಗಳನ್ನು ವೇಗಗೊಳಿಸಿರುವ ಕುಮಾರಸ್ವಾಮಿ, ಕ್ಷೇತ್ರ ಹಂಚಿಕೆಯ ಬಗ್ಗೆ ಕೆಲ ದಿನಗಳಲ್ಲಿ ನಿರ್ಧಾರ ಆಗಲಿದೆ. ಆದರೆ ಎಲ್ಲ 28 ಲೋಕಸಭೆ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರು ಪರಸ್ಪರ ಹೊಂದಾಣಿಕೆ, ಸಮನ್ವಯತೆಯಿಂದ ಕೆಲಸ ಮಾಡಬೇಕು.ಅದಕ್ಕೆ ಪೂರಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಮೈತ್ರಿಕೂಟದ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ ಆಗಬೇಕು. ಈ ದೇಶದ ಪ್ರಧಾನಿ ಹಾಗೂ ಮಾಜಿ ಪ್ರಧಾನಿಗಳ ನಡುವೆ ಆಗಿರುವ ಮೈತ್ರಿ ಚರ್ಚೆ ಫಲಪ್ರದವಾಗಿರುವ ಕಾರಣ ಕಾಂಗ್ರೆಸ್ ಆತಂಕಗೊಂಡಿದೆ ಎಂದು ಹೇಳಿದರು.
ಮುಂದೇನು?
* ಜ.10ಕ್ಕೆ ಕಾಂಗ್ರೆಸ್ ಸಭೆ. ಬ್ಲಾಕ್, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರಿಗೆ ಆಹ್ವಾನ.
* ಜ.10, 13ರಂದು ಸಭೆ ಸೇರುವ ಬಿಜೆಪಿ ನಾಯಕರು ಲೋಕಸಭೆ ಕ್ಷೇತ್ರಾವಾರು ಅಭ್ಯರ್ಥಿಗಳ ವರದಿ ಚರ್ಚೆ ಮಾಡುವರು.
* ಸೀಟು ಹಂಚಿಕೆ ಅಂತಿಮವಾದ ಬಳಿಕ ಜೆಡಿಎಸ್ ರಾಜ್ಯಮಟ್ಟದ ಸಭೆ ನಡೆಸಲಿದೆ.
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಸಿಂಧು ಮೆನನ್​ ಈಗ ಹೇಗಿದ್ದಾರೆ? ಇಲ್ಲಿವೆ ಫೋಟೋಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
