ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಆಘಾತದಿಂದ ಬಿಜೆಪಿ ನೂತನ ಶಾಸಕರು, ನಾಯಕರು ಇನ್ನೂ ಹೊರಬರಲಾಗಿಲ್ಲ. ಗೆದ್ದವರು, ಸೋತ ಶಾಸಕರು, ಅಭ್ಯರ್ಥಿಗಳು ಹಾಗೂ ನಾಯಕರು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಬಳಿಗೆ ದೌಡಾಯಿಸಿ ಬೇಸರ, ಹತಾಶೆ ನಿವೇದಿಸಿಕೊಳ್ಳುತ್ತಿದ್ದಾರೆ.
ಪಕ್ಷದ ಅಧಿಕಾರ ಕಳೆದುಕೊಂಡಿದ್ದಕ್ಕಾಗಿ ಗೆಲುವು ಸಾಧಿಸಿದವರಿಗೆ ಖುಷಿಯಿಲ್ಲ. ಕ್ಷೇತ್ರದಲ್ಲಿ ಏನೆಲ್ಲ ಆಯಿತು ಎಂದು ಸೋತವರು ವರದಿ ಒಪ್ಪಿಸಿ, ನಿರಾಸೆ ತೋಡಿಕೊಳ್ಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ನಿವಾಸದ ಮುಂದೆ ಅಹವಾಲು ಸಲ್ಲಿಸುವ ಜನರ ಸಾಲಿರುತ್ತಿತ್ತು. ಈಗ ಪಕ್ಷದ ನಾಯಕರು ಮನೆಗೆ ಬಂದು, ಪಕ್ಷದ ಸೋಲಿಗೆ ಏನೆಲ್ಲ ಕಾರಣಗಳಿವೆ ಎಂದು ರ್ಚಚಿಸುತ್ತಿದ್ದಾರೆ.
ಆತ್ಮಸ್ಥೈರ್ಯ:ಮನೆಗೆ ಬಂದವರೆಲ್ಲರ ಗೆಲುವು, ಸೋಲಿನ ಅನುಭವ ಆಲಿಸುತ್ತಿರುವ ಬೊಮ್ಮಾಯಿ, ಚುನಾವಣಾ ರಾಜಕಾರಣದಲ್ಲಿ ಇವೆಲ್ಲ ಸಾಮಾನ್ಯ. ಸೋಲಿನಿಂದ ಕಂಗೆಡದೆ ಪಕ್ಷವನ್ನು ಮತ್ತಷ್ಟು ಸದೃಢ ಗೊಳಿಸಿ, ಹೆಚ್ಚಿನ ಹುಮ್ಮಸ್ಸಿನಿಂದ ಕೆಲಸ ಮಾಡುವುದು ಮುಖ್ಯವಾಗಿದೆ ಎಂಬ ಹಿತ ನುಡಿದಿದ್ದಾರೆ.
ಚುನಾವಣೆ ಫಲಿತಾಂಶದ ಕುರಿತು ಪಕ್ಷದ ಸಭೆಯಲ್ಲಿ ಕುಳಿತು ಸಮಾಲೋಚಿಸಿ, ಲೋಪದೋಷಗಳು ಸರಿಪಡಿಸಿಕೊಂಡು ಮುಂದಕ್ಕೆ ಹೋಗುವ ಅಗತ್ಯವಿದೆ. ಕೆಲವೇ ದಿನಗಳಲ್ಲಿ ಸಂಘಟನೆಗೆ ಚುರುಕು ನೀಡಲಾಗುತ್ತದೆ. ಜನರ ಧ್ವನಿಯಾಗಿ ಕೆಲಸ ಮಾಡಲು ಸನ್ನದ್ಧರಾಗೋಣವೆಂಬ ಆತ್ಮಸ್ಥೈರ್ಯ ತುಂಬಿ ಕಳುಹಿಸಿದ್ದಾರೆ.
ಕಾದು ನೋಡುತ್ತೇವೆ:ಕಾಂಗ್ರೆಸ್​ನವರು ಮೊದಲು ಸರ್ಕಾರ ರಚಿಸಿ, ಗ್ಯಾರಂಟಿಗಳನ್ನೆಲ್ಲ ಜಾರಿಗೊಳಿಸಲಿ. ಎಲ್ಲವನ್ನೂ ಕಾದು ನೋಡುತ್ತೇವೆ. ನಮಗಿಂತ ಅಧಿಕಾರ ಕೊಟ್ಟಿರುವ ಜನರು ಗ್ಯಾರಂಟಿಗಳ ಜಾರಿ ಗಮನಿಸಿ ತೀರ್ಮಾನ ಮಾಡುತ್ತಾರೆ ಎಂದು ಬೊಮ್ಮಾಯಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆದಿರುವ ಪೈಪೋಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇವೆಲ್ಲ ಸಹಜ ಪ್ರಕ್ರಿಯೆಯಾಗಿದ್ದು, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ನಮ್ಮ ಪಕ್ಷದ ಸಂಘಟನೆಯನ್ನು ಬಲಪಡಿಸಲು ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಲು ಗಮನ ನೀಡುತ್ತೇವೆ. ಪಕ್ಷದಲ್ಲಿ ಬುದ್ಧಿವಂತ, ಕ್ರಿಯಾಶೀಲ ಯುವಜನರು, ಹಗಲಿರುಳು ಶ್ರಮಿಸುವ ಕಾರ್ಯಕರ್ತರ ಪಡೆಯಿದೆ ಎಂದು ಬೊಮ್ಮಾಯಿ ಹೇಳಿದರು.
ಕೇಶವ ಕೃಪಾಕ್ಕೆ ಭೇಟಿ:ಚಾಮರಾಜಪೇಟೆಯಲ್ಲಿರುವ ‘ಕೇಶವ ಕೃಪಾ’ಕ್ಕೆ ಬೊಮ್ಮಾಯಿ ಭೇಟಿಯಿತ್ತು, ಆರ್​ಎಸ್​ಎಸ್ ಪ್ರಮುಖರೊಂದಿಗೆ ಚುನಾವಣಾ ಫಲಿತಾಂಶದ ವಿಚಾರ ವಿನಿಮಯ ಮಾಡಿಕೊಂಡರು. ಚುನಾವಣೆ ಸೋಲು-ಗೆಲುವಿನ ಬಗ್ಗೆ ರಾಜ್ಯಮಟ್ಟ, ಕ್ಷೇತ್ರಾವಾರು ಸಭೆ ನಡೆಸುವ ಬಗ್ಗೆ ನಿರ್ಧರಿಸಿದ್ದು, ಆದಷ್ಟು ಬೇಗ ಗೊತ್ತುಪಡಿಸಲಾಗುವುದು. ಸಂಘಟನಾ ಕಾರ್ಯಯೋಜನೆ ಬಗ್ಗೆ ಸಭೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲೂ ಶಾಸಕರೊಂದಿಗೆ ರ್ಚಚಿಸುವ ಜತೆಗೆ ಪ್ರತಿಪಕ್ಷ ನಾಯಕನ ಆಯ್ಕೆ ಬಗ್ಗೆ ನಿರ್ಧರಿಸಲಾಗುವುದು ಎಂಬ ಮಾಹಿತಿ ನೀಡಿದ್ದು, ಸಂಘದ ಪ್ರಮುಖರು ಅನೇಕ ಸಲಹೆ- ಸೂಚನೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರ್​ಎಸ್​ಎಸ್ ಮುಖಂಡರೊಂದಿಗೆ ಚುನಾವಣೆ ಫಲಿತಾಂಶದ ಬಗ್ಗೆ ರ್ಚಚಿಸಿದ್ದು, ಬರುವ ದಿನಗಳಲ್ಲಿ ಪಕ್ಷ ಹೇಗೆ ಸಂಘಟಿಸಬೇಕು ಎಂಬ ಕುರಿತು ಮಾತುಕತೆಯಾಗಿದೆ. ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷರ ಜತೆಗೆ ಸಂಘಟನೆ ಕೊಂಡೊಯ್ಯುವ ತೀರ್ಮಾನ ಕೈಗೊಳ್ಳುತ್ತೇವೆ.
| ಬಸವರಾಜ ಬೊಮ್ಮಾಯಿ, ಹಂಗಾಮಿ ಸಿಎಂ.
ಶಿಕಾರಿಪುರ:ಚುನಾವಣೆ ಚಟುವಟಿಕೆ ಪ್ರಾರಂಭವಾದ ದಿನದಿಂದ ಇಲ್ಲಿವರೆಗೆ ತಮ್ಮ ಕುಟುಂಬದ ವಿರುದ್ಧ ನಿರಂತರ ಸುಳ್ಳು ಸುದ್ದಿ ಹರಡಿ ಅಪಪ್ರಚಾರ ಮಾಡುವುದಷ್ಟೇ ಅಲ್ಲ, ವಾಮಾಚಾರದ ಮಸಲತ್ತು ಕೂಡ ಮಾಡಿದರು. ಆದರೆ ಜನರ ಹಾರೈಕೆ ಮತ್ತು ಭಗವಂತನ ಅನುಗ್ರಹ ಶ್ರೀರಕ್ಷೆಯಾಗಿ ನಮ್ಮ ಕುಟುಂಬವನ್ನು ಕಾಪಾಡಿ ಜನಸೇವೆ ಮಾಡಲು ಗಟ್ಟಿಯಾಗಿ ನಿಲ್ಲಿಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನಮ್ಮ ರಾಜಕೀಯ ಶಕ್ತಿ ಮತ್ತು ಆತ್ಮಸ್ಥೈರ್ಯ ಕುಗ್ಗಿಸುವುದು, ನಮ್ಮ ಕುಟುಂಬದವರ ಆರೋಗ್ಯದ ಮೇಲೆ ದುಷ್ಪರಿಣಾಮ ಮತ್ತು ಜನಪ್ರಿಯತೆ ಕಡಿಮೆ ಮಾಡುವುದೇ ಈ ಚಟುವಟಿಕೆಗಳ ಹಿಂದಿನ ಉದ್ದೇಶ. ದೇವರ ದಯೆಯಿಂದ ಕುತಂತ್ರಗಳಿಗೆ ಫಲ ಕೊಡಲಿಲ್ಲ. ನಮಗೆ ಕೇಡು ಬಯಸಿದವರಿಗೆ ನಾವು ಯಾವತ್ತೂ ಕೇಡು ಬಯಸಲ್ಲ. ಮುಂದಾದರೂ ಅಂಥವರು ವಿರೋಧಿ ಮನಸ್ಥಿತಿಯಿಂದ ಹೊರಬರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೇ 11ರ ರಾತ್ರಿ ಹೊನ್ನಾಳಿ ರಸ್ತೆಯ ನಮ್ಮ ತೋಟದ ಮನೆಯ ಕಾಂಪೌಂಡ್​ಗೆ
ಹೊಂದಿಕೊಂಡಂತೆ ಪುನುಗು ಬೆಕ್ಕನ್ನು ಬಳಸಿಕೊಂಡು ವಾಮಾಚಾರ ಮಾಡಿ ಹುಗಿಯಲಾಗಿತ್ತು. ಅರಣ್ಯ ಇಲಾಖೆ ತಂಡ ಆ ಬೆಕ್ಕನ್ನು ತೆಗೆದು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಈ ಸಂಬಂಧ ದೂರು ಸಹ ದಾಖಲಾಗಿದೆ ಎಂದು ವಿವರಿಸಿದರು.
ಬಿಜೆಪಿ ತತ್ವ, ಸಿದ್ಧಾಂತ ಮತ್ತು ಅನುಶಾಸನಗಳಲ್ಲಿ ಬೆಳೆದು ಬಂದ ಪಕ್ಷ. ಸೋಲು-ಗೆಲುವು ಚುನಾವಣೆಗಳಲ್ಲಿ ಸಹಜ. ತಾಲೂಕಿನಲ್ಲಿ ವಿಜಯೇಂದ್ರ ಅವರ ಮತ ಗಳಿಕೆ ಪ್ರಮಾಣ ಕಡಿಮೆಯಾಗಿದೆ. ಸೋಲೇ ಗೆಲುವಿನ ಸೋಪಾನ. ನಾವು ಮೇಲ್ಮಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಕೆಳಮಟ್ಟದಲ್ಲಿ ಸಣ್ಣ-ಪುಟ್ಟ ವ್ಯತ್ಯಾಸಗಳು ಕೊರತೆಗಳಾಗಿರಬಹುದು. ನಮ್ಮ ಕಾರ್ಯಕರ್ತರು ಯಾವ ಕಾರಣಕ್ಕೂ ಧೈರ್ಯಗೆಡಬಾರದು. ನಮಗರಿವಿಲ್ಲದಂತೆ ತಪ್ಪುಗಳಾಗಿದ್ದರೆ ಅವುಗಳನ್ನು ಪ್ರಾಮಾಣಿಕವಾಗಿ ಸರಿಪಡಿಕೊಳ್ಳೋಣ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಬೆಂಗಳೂರು: ಹೊಸಕೋಟೆ ಸೇರಿ ರಾಜ್ಯದ ಹಲವೆಡೆ ಕಾಂಗ್ರೆಸ್​ನವರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ‘ಹಿಂಸಾ ಗ್ಯಾರಂಟಿ ಸ್ಕೀಮ್ ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಎಚ್ಚರಿಸಿದ್ದಾರೆ. ಕಾಂಗ್ರೆಸ್ ನಾಯಕರು ಇಂತಹ ಹಿಂಸಾಚಾರದ ಪ್ರವೃತ್ತಿಗೆ ಅವಕಾಶ ಕೊಡಬಾರದು. ಪಾಕಿಸ್ತಾನ ಧ್ವಜ ಹಾರಿಸುವುದು ದೇಶದ್ರೋಹದ ಚಟುವಟಿಕೆಯಾಗಿದ್ದು, ಇದನ್ನು ನಿಯಂತ್ರಿಸಬೇಕು ಎಂದಿದ್ದಾರೆ. ಕಾಂಗ್ರೆಸ್ ಮುಖಂಡರು ತಮ್ಮೊಳಗಿನ ಭಿನ್ನಮತ ಬದಿಗಿಟ್ಟು, ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕು. ಹಿಂಸೆಗೆ ಪ್ರಚೋದನೆ, ದೇಶದ್ರೋಹಿ ಚಟುವಟಿಕೆಗೆ ಬೆಂಬಲ ನೀಡುವವರನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣೆ ಬಂದಾಗ ಲಿಂಗಾಯತ ಪ್ರೀತಿ ತೋರಿಸುವ ಕಾಂಗ್ರೆಸ್ ಈಗ ಆ ಸಮುದಾಯವರನ್ನು ಸಿಎಂ ಮಾಡಲಿ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಲು ಅರ್ಹತೆ ಹೊಂದಿದ್ದಾರೆ. ಅವರಿಗೆ ಆಡಳಿತ ನಡೆಸಿ ರುವ ಅನುಭವ ಇದೆ. ಆರೇಳು ಸಲ ಗೆದ್ದಿರುವ ಎಂ.ಬಿ. ಪಾಟೀಲ ಇದ್ದಾರೆ. ವಯಸ್ಸಿನಲ್ಲಿ ಹಿರಿಯರಾದ ಶಾಮನೂರು ಶಿವಶಂಕರಪ್ಪ ಇದ್ದಾರೆ. ಇವರಲ್ಲಿ ಯಾರಾದರೊಬ್ಬರನ್ನು ಸಿಎಂ ಮಾಡಲಿ.
| ಮುರುಗೇಶ ನಿರಾಣಿ ಮಾಜಿ ಸಚಿವ
ಬೆಂಗಳೂರು:ಬಿಜೆಪಿ ಸೋಲಿಗೆ ಕಾರಣಗಳನ್ನು ಹುಡುಕುತ್ತಾ ಹೊರಟಿರುವ ನಾಯಕರಿಗೆ ಹತ್ತು ಹಲವು ವಿಷಯಗಳು ತಳಮಟ್ಟದಲ್ಲಿ ವ್ಯಕ್ತವಾಗುತ್ತಿವೆ. ಬಿಜೆಪಿ ತಾನು ಮಾಡಿಕೊಂಡ ಎಡವಟ್ಟುಗಳಿಂದಲೇ ಲಿಂಗಾಯತ ಸಮುದಾಯಕ್ಕೆ ವಿಶ್ವಾಸ ಕಡಿಮೆಯಾಗಿದೆ. ಅದರ ಪರಿಣಾಮವಾಗಿಯೇ ಆ ಸಮುದಾಯದ ಮತಗಳು ಕಾಂಗ್ರೆಸ್ ಕಡೆ ಜಾರಿವೆ. ಈ ಬೆಳವಣಿಗೆ ಪಕ್ಷಕ್ಕೆ ದೊಡ್ಡ ಹಿನ್ನೆಡೆ ಎಂದು ಅರ್ಥೈಯಿಸಲಾಗಿದೆ. ಮತ್ತೆ ಸಮುದಾಯದ ವಿಶ್ವಾಸ ಗಳಿಸಲು ಕೂಡಲೇ ಕಾರ್ಯೋನ್ಮುಖವಾಗುವ ನಿಟ್ಟಿನಲ್ಲಿ ಹಲವು ಕ್ರಮ ತೆಗೆದುಕೊಳ್ಳಬೇಕು. ಈಗಿನಿಂದಲೇ ಪ್ರಯತ್ನ ಶುರುವಾಗಬೇಕು ಎನ್ನುವ ಸಲಹೆಗಳು ಪಕ್ಷದೊಳಗೆ ವ್ಯಕ್ತವಾಗಿದ್ದು, ಇದೆಲ್ಲವನ್ನೂ ಹೈಕಮಾಂಡ್​ಗೆ ತಲುಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಹುಬ್ಬಳ್ಳಿ:ಅಧಿಕಾರ ಬಂದಾಗ ಪಕ್ಷ ಕಟ್ಟಿದ ನಾಯಕರನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ಬಿಜೆಪಿಗೆ ಕೆಟ್ಟ ಪರಿಸ್ಥಿತಿ ಬಂದಿದೆ ಎಂದು ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಪಕ್ಷ ಕಟ್ಟದ ವ್ಯಕ್ತಿಗಳ ಮಾತು ಕೇಳಬೇಕು ಎಂದರೆ ಹೇಗೆ ಸಾಧ್ಯ ಎಂದು ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಹರಿಹಾಯ್ದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಣ್ಣೀರು ಹಾಕಿಸಿದರು. ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ಈಶ್ವರಪ್ಪ ಅವರನ್ನು ಕಡೆಗಣಿಸಿದರು. ಕೇಸರಿ ಪಡೆ ಎಂದು ಹೇಳಿಕೊಳ್ಳುವವರೇ ಖಾವಿಧಾರಿಗಳ ಪಾಠ ಕೇಳಲಿಲ್ಲ. ಅದೆಲ್ಲದರ ಪರಿಣಾಮ ಬಿಜೆಪಿ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವಂತಾಯಿತು ಎಂದರು.
ಧಾರವಾಡ ಹಾಗೂ ಸುತ್ತಲಿನ ಜಿಲ್ಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಬಿಜೆಪಿಯವರು ಅತಿ ಮಹತ್ವ ಕೊಟ್ಟರು. ಇನ್ನುಳಿದ ಕ್ಷೇತ್ರ ನಿರ್ಲಕ್ಷಿಸಿದರು. ಇದರಿಂದಾಗಿ ಈ ಹಿಂದಿನ ಕೆಲವು ಸ್ಥಾನಗಳನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವಿಶ್ಲೇಷಿಸಿದರು.
ಬಿಜೆಪಿ ಕೇಂದ್ರದ ನಾಯಕರು ರಾಜ್ಯದ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಕರ್ನಾಟಕದ ನಾಯಕರ ಬಗ್ಗೆ ಗೌರವ ತೋರಲಿಲ್ಲ. ರಾಜ್ಯದ ಮತದಾರರು ಬಿಜೆಪಿ ಕೇಂದ್ರ ನಾಯಕರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಮರ್ಥ ನಾಯಕರನ್ನು ಮುಖ್ಯಮಂತ್ರಿಯನ್ನಾಗಿಸಬೇಕು. ಇಡೀ ಕರ್ನಾಟಕವನ್ನು ಒಂದೇ ದೃಷ್ಟಿಕೋನದಲ್ಲಿ ನೋಡುವವರು ಆಳುವಂಥವರಾಗಬೇಕು ಎಂದು ಸಲಹೆ ನೀಡಿದರು. ಉತ್ತರ ಕರ್ನಾಟಕದ ಲಿಂಗಾಯತರ ನಾಯಕರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದರು.
ಜೆಡಿಎಸ್ ಬಿಜೆಪಿ ಜೊತೆ ವಿಲೀನ ಆದ್ರೆ ಒಳಿತು, ಆಗ ರಾಜ್ಯದಲ್ಲಿ ಎರಡೇ ಪಕ್ಷ: ಸೋಲಿನ ಪರಾಮರ್ಶೆಯಲ್ಲಿ ಡಾ.ಸುಧಾಕರ್

ಬಗೆಹರಿಯದ ಸಿಎಂ ಆಯ್ಕೆ: ಡಿ.ಕೆ.ಶಿವಕುಮಾರ್ ಮುಂದಿನ ನಡೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
