|ಮೃತ್ಯುಂಜಯ ಕಪಗಲ್ಬೆಂಗಳೂರು
ರಾಜ್ಯದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ‘ಮಿಷನ್-150’ ಸಾಧಿಸಲು ಬಿಜೆಪಿ ಗಂಭೀರ ಪ್ರಯತ್ನ ಮುಂದುವರಿಸಿದ್ದು, ಮೂರನೇ ಸಮೀಕ್ಷೆಗೆ ಉತ್ಸುಕವಾಗಿದೆ. ಬಿ.ಎಸ್.ಯಡಿಯೂರಪ್ಪ ಆಡಳಿತಾವಧಿಯಲ್ಲಿ ಒಮ್ಮೆ, ಬಸವರಾಜ ಬೊಮ್ಮಾಯಿ ಸಾರಥ್ಯವಹಿಸಿಕೊಂಡ ನಂತರ ಮಗದೊಮ್ಮೆ ಸಮೀಕ್ಷೆ ಮಾಡಿಸಿದೆ. ಈಗ ತೃತೀಯ ಸಮೀಕ್ಷೆಯತ್ತ ವಾಲಿದ್ದು, ಆಸಕ್ತ ಸಂಸ್ಥೆ ಜತೆಗೆ ಮಾತುಕತೆ ಮುಗಿಸಿದೆ. ಜುಲೈನಲ್ಲಿ ನುರಿತ ತಂಡಗಳು ಸಮೀಕ್ಷಾ ಕಾರ್ಯಕ್ಕೆ ಮುಂದಾಗಲಿವೆ. ಸಮೀಕ್ಷೆ ಜವಾಬ್ದಾರಿ ಹೊತ್ತ ಸಂಸ್ಥೆಯು ತನ್ನದೇ ಆದ ಜಾಡು ಹಿಡಿಯಲಿದ್ದರೂ ಪಕ್ಷದ ವರಿಷ್ಠರು ನಿರ್ದಿಷ್ಟ ಮಾನದಂಡ, ಪ್ರಶ್ನೆಗಳನ್ನು ತಯಾರಿಸಿ ಕೊಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಮೊದಲ ಎರಡು ಸಮೀಕ್ಷೆಗಳಲ್ಲಿ ಸರ್ಕಾರದ ಕಾರ್ಯವೈಖರಿ, ವರ್ಚಸ್ಸು, ಪಕ್ಷದ ಪರಿಸ್ಥಿತಿ ಮತ್ತು ಜನರ ಭಾವನೆಗಳ ಸಹಿತ ಪ್ರಮುಖ ದತ್ತಾಂಶಗಳನ್ನು ಸಂಗ್ರಹಿಸಲಾಗಿತ್ತು. ಸಂಘಟನೆ ಬಲಿಷ್ಠವಾಗಿದ್ದರೂ ವರದಿ ಪ್ರಸ್ತಾಪಿಸಿದ ಅಂಶಗಳು ಕಹಿಯಾಗಿದ್ದವು. ವರ್ಚಸ್ಸು ಮತ್ತು ಜನಪ್ರಿಯತೆ ಎರಡನ್ನೂ ಪರಿಗಣಿಸಿದರೂ ಪಕ್ಷ ಗಳಿಸುವ ಸ್ಥಾನಗಳು 60-75ರೊಳಗೆ ಎಂದಿತ್ತು. ಬೊಮ್ಮಾಯಿ ಹೊಸ ಯೋಜನೆಗಳನ್ನು ತಂದಿದ್ದು, ಹಲವು ಜನಪರ ಕಾರ್ಯಕ್ರಮಗಳ ಮೂಲಕ ಜನಾಭಿಪ್ರಾಯ ಮೂಡಿಸಲು ಬೆವರಿಳಿಸುತ್ತಿದ್ದಾರೆ. ಆದರೂ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಸುಧಾರಿಸಿಲ್ಲ. ಮಂತ್ರಿ ಮಂಡಲದ ಒಟ್ಟುಪ್ರಯತ್ನ ತೃಪ್ತಿಕರವಿಲ್ಲ, ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಂಡಿಲ್ಲವೆಂಬ ಅಸಮಾಧಾನ ಜನರಲ್ಲಿ ಹೆಪು್ಪಗಟ್ಟಿದೆ.
ಪ್ರತಿಪಕ್ಷಗಳ ಆಕ್ರಮಣಕಾರಿ ಶೈಲಿ ಒಂದೆಡೆಯಾದರೆ, ಒಂದಿಲ್ಲೊಂದು ವಿವಾದಗಳು ಮತ್ತು ಸಚಿವ, ಶಾಸಕರ ಅನ್ಯಮನಸ್ಕತೆಯಿಂದ ನಿರೀಕ್ಷಿತ ಲಾಭ ಬಂದಿಲ್ಲ. ಎರಡೂ ಸಮೀಕ್ಷೆಗಳು ಸರ್ಕಾರ, ಸಚಿವ ಸಂಪುಟ ಮತ್ತು ಪಕ್ಷದ ಕುರಿತು ಕಟುಸತ್ಯಗಳನ್ನು ಹೊರಗೆ ಹಾಕಿವೆ ಎಂಬುದು ವರಿಷ್ಠರಿಗೆ ಮನವರಿಕೆಯಾಗಿದೆ. ವಿಧಾನಸಭೆ ಕ್ಷೇತ್ರವಾರು ಸಮೀಕ್ಷೆ ವರದಿ ತರಿಸಿಕೊಂಡು ‘ಹಾನಿ ಪರಿಹಾರ ಸೂತ್ರ’ ಹೆಣೆಯುವ ಚಿಂತನೆ ನಡೆಸಿದ್ದು, ದಕ್ಷಿಣ ಭಾರತದ ಹೆಬ್ಬಾಗಿಲು ಸದಾ ತೆರೆದಿಡುವುದು ಪಕ್ಷದ ಸಂಕಲ್ಪವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ರಾಜ್ಯಭಾರವನ್ನು ಶತಾಯಗತಾಯ ಉಳಿಸಿಕೊಳ್ಳಲೇಬೇಕು ಎಂಬ ಛಲವನ್ನು ಎಲ್ಲರಲ್ಲೂ ತುಂಬಬೇಕೆಂದು ದೆಹಲಿ ನಾಯಕರು ಪಣ ತೊಟ್ಟಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ನೆಲೆಯಲ್ಲಿಯೂ ಇದು ಮುಖ್ಯವಾಗಿದೆ. ಕರ್ನಾಟಕದಲ್ಲಿ ಹಿನ್ನಡೆಯಾದರೆ ಉಳಿದ ರಾಜ್ಯಗಳಿಗೆ ಬೇರೆ ಸಂದೇಶ ರವಾನೆಯಾಗಲಿದೆ ಎನ್ನುವುದು ವರಿಷ್ಠರ ಅಳುಕು.
ಶಾಸಕರಿಗೆ ನಡುಕ:ಈ ಬಾರಿ ಸಮೀಕ್ಷೆಗೆ ವಿಧಾನಸಭೆ ಕ್ಷೇತ್ರಗಳೇ ನೇರ ಗುರಿಯಾಗಿವೆ. ವರಿಷ್ಠರ ನಿರ್ಧಾರಗಳು ಬಹುತೇಕ ಶಾಸಕರಲ್ಲಿ ನಡುಕ ಹುಟ್ಟಿಸುವುದು ನಿಶ್ಚಿತ ಎನ್ನಲಾಗುತ್ತಿದೆ. ಉತ್ತರಾಖಂಡದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಿಸಿದ ನಂತರವೂ ಗೆದ್ದೆವು ಎಂಬುದಷ್ಟೇ ಹೈಲೈಟ್ ಆಗುತ್ತಿದೆ. ಆದರೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿಷ್ಠುರ ನಿಲುವು ತಳೆದದ್ದು ಮತ್ತೊಂದು ಮಹತ್ವದ ಅಂಶವಾಗಿದೆ. ಉತ್ತರಪ್ರದೇಶಕ್ಕೂ ಇದೇ ಮಾನದಂಡ ಅನುಸರಿಸಿದರು. ವಿಧಾನಸಭೆ ಕ್ಷೇತ್ರಾವಾರು ಸಮೀಕ್ಷೆ ಬಳಿಕ ಕೈಗೊಂಡ ನಿರ್ಧಾರ ಇದಾಗಿದ್ದು, ಅಭ್ಯರ್ಥಿಗಳ ಬದಲಾವಣೆ, ಅಭಿವೃದ್ಧಿ ಅಜೆಂಡಾ ನಿರ್ಣಾಯಕ ಪಾತ್ರವಹಿಸಿದವು. ಅಭಿವೃದ್ಧಿ ಸೇರಿ ಕರ್ನಾಟಕಕ್ಕೆ ಒಪು್ಪವ ಮಾದರಿಗಳನ್ನು ಚುನಾವಣೆಯಲ್ಲಿ ಅನುಸರಿಸಲಿದೆ. ಆದರೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಉತ್ತರಾಖಂಡ, ಉತ್ತರಪ್ರದೇಶ ಮತ್ತು ಗುಜರಾತ್ ಮಾದರಿ ಅನುಸರಣೆ ಸಾಧ್ಯತೆಗಳಿವೆ. ಹಾಲಿ ಎಲ್ಲ ಶಾಸಕರು ಮತ್ತೆ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಎಂಬ ಗ್ಯಾರಂಟಿಯಿಲ್ಲ. ಪಕ್ಷ ಇಲ್ಲವೇ ಕೆಲವರು ವೈಯಕ್ತಿಕ ಕಾರಣಗಳಿಗಾಗಿ ಬದಲಾಗುವ ಅಂದಾಜಿದೆ.
ವರ್ಚಸ್ಸು ಕಳೆದುಕೊಂಡವರು ಅಥವಾ ಹೊರಗೆ ಕಾಲಿಟ್ಟವರ ಕ್ಷೇತ್ರಗಳಲ್ಲಿ ಪರ್ಯಾಯ ಸಮರ್ಥ ಅಭ್ಯರ್ಥಿಗಳ ಶೋಧವೂ ಸಮೀಕ್ಷೆಯ ಭಾಗವಾಗಿದೆ. ಇದರಿಂದಾಗಿ ಚುನಾವಣೆ ಪಕ್ಕಾ ಮಾಸ್ ಆಧಾರಿತವಾದರೆ, ತಂತ್ರಗಾರಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಅಪ್ಪಟ ವೃತ್ತಿಪರತೆ ಮೆರೆಯಲು ಬಿಜೆಪಿ ಹವಣಿಸಿದೆ. ಈ ಸಮೀಕ್ಷೆಯ ಮೂಲಕ ಸಚಿವರ ಕಾರ್ಯವೈಖರಿ ಮೌಲ್ಯಮಾಪನ ನಡೆಯಲಿದೆ. ರಾಜ್ಯದ ಮೇಲೆ ವರಿಷ್ಠರು ಸಂಪೂರ್ಣ ಹಿಡಿತ ಸಾಧಿಸಿ, ಮುಂದಿನ ಎಲ್ಲ ನಡೆಗಳನ್ನು ನಿರ್ದೇಶಿಸುವುದು ಸ್ಪಷ್ಟವಾಗಿದೆ ಎಂದು ಮೂಲಗಳು ಹೇಳಿವೆ.
ಚುನಾವಣೆಗೆ ಕಾರ್ಪೊರೇಟ್ ಸ್ಪರ್ಶ:ಕರ್ನಾಟಕ ವಿಧಾನಸಭಾ ಚುನಾವಣೆ ಕಣಕ್ಕೆ ಈಗ ಕಾರ್ಪೆರೇಟ್ ಕಂಪನಿ ಪ್ರತಿನಿಧಿಗಳೂ ಧುಮುಕಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 27 ಕಂಪನಿಗಳು ರಾಜಕೀಯ ಪಕ್ಷ, ನಾಯಕರು, ಪಕ್ಷಗಳ ವಿವಿಧ ಘಟಕಗಳಲ್ಲಿ ಕೆಲಸ ಆರಂಭಿಸಿವೆ. ಈ ಕಂಪನಿಗಳು ಚುನಾವಣಾಪೂರ್ವ ಸಮೀಕ್ಷೆ ಮಾಡುವ ಹೊರತಾಗಿ, ನಿರಂತರವಾಗಿ ಕ್ಷೇತ್ರಗಳ ಪರಿಸ್ಥಿತಿ ಬಗ್ಗೆ ಮಾಹಿತಿಗಳನ್ನು ಅಪ್​ಡೇಟ್ ಮಾಡುವ, ತಂತ್ರಗಾರಿಕೆಯಲ್ಲಿ ಸಲಹೆ ನೀಡುವ ಜತೆಗೆ ಇಮೇಜ್ ವರ್ಧನೆ ಕಾರ್ಯದಲ್ಲಿ ಸಹ ತೊಡಗಿಕೊಂಡಿವೆ.
ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
