ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಾವು ದಿನದಿನಕ್ಕೂ ಏರುತ್ತಿರುವಂತೆ, ಬಿಜೆಪಿಯು ಚುನಾವಣೆ ಪ್ರಚಾರ ಮತ್ತು ನಿರ್ವಹಣೆಗಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸುವ ಮೂಲಕ ಪ್ರಚಾರಕ್ಕೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಚುನಾವಣಾ ಪ್ರಚಾರ ಸಮಿತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ಇರಲಿದ್ದು, ಈ ಮೂಲಕ ಆಡಳಿತಕ್ಕೊಂದು ಮುಖ ಹಾಗೂ ಪ್ರಚಾರಕ್ಕೆ ಇನ್ನೊಂದು ಮುಖವಿಲ್ಲವೆಂಬ ಸಂದೇಶ ಸಾರಿದೆ.ಇದೀಗ ಅನುಭವಿಗಳ ಹೆಗಲಿಗೆ ಸಮಿತಿಗಳ ಸಾರಥ್ಯ ಒಪ್ಪಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅನುಮೋದನೆ ಪಡೆದು ರಚಿಸಲಾದ ಸಮಿತಿಗಳ ಪಟ್ಟಿಯನ್ನು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ಸಮತೋಲನಕ್ಕೆ ಮಹತ್ವ:ಪ್ರದೇಶ, ಜಾತಿವಾರು ಪ್ರಾತಿನಿಧ್ಯದ ಜತೆಗೆ ಹಳಬ-ಹೊಸಬ ಎಂಬ ಭೇದಭಾವಕ್ಕೆ ಅವಕಾಶ ನೀಡದಂತೆ ಎರಡೂ ಸಮಿತಿಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಮಹತ್ವ ನೀಡಿದ್ದು, ಚುನಾವಣೆ ಸಂಬಂಧಿತ ಪ್ರತಿ ನಿರ್ಧಾರಕ್ಕೂ ಮುನ್ನ ಪಕ್ಷದ ವರಿಷ್ಠರದ್ದು ಸೂಕ್ಷ್ಮ ಅವಲೋಕನ ಎಂಬುದಕ್ಕೆ ನಿದರ್ಶನವೆಂದು ವಿಶ್ಲೇಷಿಸಲಾಗುತ್ತಿದೆ. ಇಬ್ಬರು ಮಾಜಿ ಸಿಎಂಗಳು, ಮಾಜಿ ಡಿಸಿಎಂಗಳು, ಪರಿಶಿಷ್ಟ ಜಾತಿಯಲ್ಲಿ ಎಡ-ಬಲ, ಸ್ಪಶ್ಯ ಸಮುದಾಯಗಳು, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಲಿಂಗಾಯತ-ಒಕ್ಕಲಿಗ, ವಲಸಿಗರು ಹೀಗೆ ಎಲ್ಲ ವರ್ಗದ ನಾಯಕರಿಗೆ ಪ್ರಚಾರ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಪಕ್ಷದ ನಿಯಮಾವಳಿ ಪ್ರಕಾರ ಆಯಾ ರಾಜ್ಯದಲ್ಲಿ ಆಡಳಿತದಲ್ಲಿದ್ದರೆ ಮುಖ್ಯಮಂತ್ರಿ, ಪ್ರತಿಪಕ್ಷ ಸ್ಥಾನದಲ್ಲಿದ್ದರೆ, ಶಾಸಕಾಂಗ ಪಕ್ಷದ ನಾಯಕ ಪ್ರಚಾರ ಸಮಿತಿ ಅಧ್ಯಕ್ಷರಾಗುತ್ತಾರೆ. ಅದೇ ರೀತಿ ಸಿಎಂ ಬೊಮ್ಮಾಯಿ ನೇತೃತ್ವ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ವಯಾಗ್ರ ತೆಗೆದುಕೊಂಡ ಆತ ಅವಳ ಮಾತು ಕೇಳದೆ ಕೊನೆಗೆ ಸಾವಿಗೀಡಾದ!
ಬಿಎಸ್​ವೈ, ಬಿವೈವಿಗೂ ಸ್ಥಾನ: ಪ್ರಚಾರ ಸಮಿತಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಪುತ್ರ, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸದಸ್ಯರಾಗಿದ್ದಾರೆ. ವರಿಷ್ಠರು ಇಬ್ಬರಿಗೂ ಮಣೆ ಹಾಕಿದ್ದಾರೆ. ರಾಜ್ಯದಮಟ್ಟಿಗೆ ಪಕ್ಷಕ್ಕೆ ಬಿಎಸ್​ವೈ ಐಕಾನ್ ಆಗಿದ್ದು, ಜನಸಮೂಹ ಸೆಳೆಯಬಲ್ಲ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬಲ್ಲರು ಎಂಬ ಕಾರಣಕ್ಕೆ ಆದ್ಯತೆ ನೀಡಿರುವುದು ಸ್ಪಷ್ಟ. ವಿಜಯೇಂದ್ರ ಕಳೆದ ಚುನಾವಣೆಗಳಲ್ಲಿ ತೋರಿಸಿದ ಚಾಕಚಕ್ಯತೆ, ಯುವಜನರಿಗೆ ಆಕರ್ಷಣೆ ಮತ್ತು ಕ್ಷೇತ್ರದ ವಸ್ತುಸ್ಥಿತಿ ಗ್ರಹಿಸಬಲ್ಲರು ಇತ್ಯಾದಿ ಅಂಶಗಳು ಪಕ್ಷದಲ್ಲಿ ಚರ್ಚೆಯಾಗುತ್ತಿದ್ದವು. ಮೋರ್ಚಾ ಸಮಾವೇಶಗಳಿಗೆ ರಾಜ್ಯ ಸಂಚಾಲಕರಾಗಿದ್ದು, ಬಿಎಸ್​ವೈ ಪುತ್ರ ಎನ್ನುವುದಕ್ಕಿಂತ ಇವರಿಂದ ಪಕ್ಷ ಬೆಳೆಸಲು ಅವಕಾಶವಿದೆ ಎಂಬುದು ವರಿಷ್ಠರ ನಿಲುವಾಗಿದೆ ಎಂದು ಪಕ್ಷದ ಮೂಲಗಳು ವ್ಯಾಖ್ಯಾನಿಸಿವೆ.
ಶೋಭಾಗೆ ಮನ್ನಣೆ: ಚುನಾವಣೆ ಅಖಾಡದ ತೆರೆಮರೆಯಲ್ಲಿ ಪ್ರಮುಖ ಚಟುವಟಿಕೆ ನಿರ್ವಹಿಸಿರುವ ಶೋಭಾ ಕರಂದ್ಲಾಜೆಗೆ ನಿರ್ವಹಣಾ ಸಮಿತಿ ಸಾರಥ್ಯ ವಹಿಸಲಾಗಿದೆ. 2008ರಲ್ಲಿ ಶೋಭಾ ಇದೇ ಸಮಿತಿಯಲ್ಲಿದ್ದರು. ಈ ಹಿಂದೆ ಬಿಎಸ್​ವೈ ‘ನವ ಕರ್ನಾಟಕ ನಿರ್ವಣಕ್ಕಾಗಿ ಸಂಕಲ್ಪ ಯಾತ್ರೆ’ ಕೈಗೊಂಡಾಗ ಕರಂದ್ಲಾಜೆ ಸಂಚಾಲಕರಾಗಿದ್ದರು.
ನಿರ್ವಹಣಾ ಸಮಿತಿ: ಶೋಭಾ ಕರಂದ್ಲಾಜೆ (ಸಂಚಾಲಕಿ), ಭಗವಂತ ಖೂಬಾ, ಕೋಟ ಶ್ರೀನಿವಾಸ ಪೂಜಾರಿ, ರಘುನಾಥರಾವ್ ಮಲ್ಕಾಪುರೆ, ನಿರ್ಮಲ್​ಕುಮಾರ್ ಸುರಾನ, ತೇಜಸ್ವಿನಿ ಅನಂತಕುಮಾರ್, ಎನ್. ರವಿಕುಮಾರ್, ಸಿದ್ದರಾಜು, ಅಶ್ವಥ್ ನಾರಾಯಣ, ಮಹೇಶ್ ಟೆಂಗಿನಕಾಯಿ, ಎಸ್. ಕೇಶವಪ್ರಸಾದ್, ಛಲವಾದಿ ನಾರಾಯಣಸ್ವಾಮಿ ಮತ್ತು ಗೀತಾ ವಿವೇಕಾನಂದ (ಸದಸ್ಯರು).
ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷತೆ ಪದವಿಯಲ್ಲ, ಜವಾಬ್ದಾರಿ. ರಾಜ್ಯದ ಮುಂದಿನ ಚುನಾವಣೆ ಯಶಸ್ವಿಯಾಗಿ ನಡೆಸಬೇಕು, ಎಲ್ಲ ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂಬ ಕಾರಣಕ್ಕೆ ಹಿರಿಯರು ಈ ಜವಾಬ್ದಾರಿ ನೀಡಿದ್ದಾರೆ.
| ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ
ಪ್ರಚಾರ ಸಮಿತಿ: ಬಸವರಾಜ ಬೊಮ್ಮಾಯಿ (ಅಧ್ಯಕ್ಷ), ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ಆರ್. ಅಶೋಕ್, ಶಶಿಕಲಾ ಜೊಲ್ಲೆ, ಸಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಡಾ.ಕೆ. ಸುಧಾಕರ್, ಪ್ರಭು ಚವ್ಹಾಣ್, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಿ.ಟಿ. ರವಿ, ವಿ. ಶ್ರೀನಿವಾಸ ಪ್ರಸಾದ್, ಪಿ.ಸಿ. ಮೋಹನ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಬಿ.ವೈ. ವಿಜಯೇಂದ್ರ ಮತ್ತು ಛಲವಾದಿ ನಾರಾಯಣಸ್ವಾಮಿ (ಸದಸ್ಯರು).
ಇದನ್ನೂ ಓದಿ:ಎಚ್​3ಎನ್​2 ವೈರಸ್​ಗೆ ದೇಶದಲ್ಲಿ ಮತ್ತೊಂದು ಬಲಿ!; ಆತಂಕ ಹೆಚ್ಚಿಸುತ್ತಿರುವ ಸೋಂಕು
ವಿ. ಸೋಮಣ್ಣಗಿಲ್ಲ ಸ್ಥಾನ: ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಮತ್ತು ನಿರ್ವಹಣಾ ಸಮಿತಿಯಲ್ಲಿ ವಸತಿ, ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಹೆಸರಿಲ್ಲ. ಪಕ್ಷದಲ್ಲಿ ಆಂತರಿಕ ಅಸಮಾಧಾನದಿಂದ ಪ್ರಸ್ತುತ ಸುದ್ದಿಯಲ್ಲಿರುವ ಸೋಮಣ್ಣ ಹೆಸರು ಸಮಿತಿಯಲ್ಲಿ ಇಲ್ಲದಿರುವುದು ಪ್ರಧಾನವಾಗಿ ಗೋಚರಿಸುತ್ತಿದೆ. ಮಾ.1ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದ್ದರು. ಈ ಯಾತ್ರೆಯ ಉಸ್ತುವಾರಿಯನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ನೀಡಿ ಸೋಮಣ್ಣ ಅವರನ್ನು ಕಡೆಗಣಿಸಲಾಗಿತ್ತು. ಈ ಕಾರಣಕ್ಕಾಗಿಯೇ ಯಾತ್ರೆಗೆ ಬರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದಾದ ಬಳಿಕ ಸೋಮಣ್ಣ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದಕ್ಕೆ ಸ್ವತಃ ಸಚಿವರೇ ಉತ್ತರಿಸಿ, ಆರೋಗ್ಯ ಮತ್ತು ಮನಸ್ಸು ಸರಿ ಇರಲಿಲ್ಲವೆಂದು ಚರ್ಚೆಗೆ ತೆರೆ ಎಳೆಯಲು ಪ್ರಯತ್ನಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − thirteen =
Remember me
