ಸ.ದಾ. ಜೋಶಿ ಕಲಬುರಗಿ
ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ತವರು, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಬಿಗ್ ಫೈಟ್ ಬಿದ್ದಿದೆ. ಜಿಲ್ಲೆಯ 9 ಕ್ಷೇತ್ರಗಳ ಪೈಕಿ 8 ಕಡೆ ಕೈ-ಕಮಲ ಸಂಘರ್ಷವಿದ್ದು, ಒಂದು ಕಡೆ ಜೆಡಿಎಸ್ ಪ್ರಬಲ ಪೈಪೋಟಿ ನೀಡುತ್ತ ಅಸ್ತಿತ್ವದ ಹೋರಾಟ ನಡೆಸುತ್ತಿದೆ. ಪ್ರಸ್ತುತ 5 ಬಿಜೆಪಿ, 4 ಕಾಂಗ್ರೆಸ್ ಶಾಸಕರಿದ್ದಾರೆ. ಇಬ್ಬರೂ ಸ್ಥಾನ ವೃದ್ಧಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ತವರು ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ತೋರಿಸುವುದು ಖರ್ಗೆ ಮತ್ತವರ ತಂಡಕ್ಕೆ ಪ್ರತಿಷ್ಠೆ ಎನಿಸಿದೆ. ಇನ್ನೊಂದೆಡೆ ಕಳೆದ ಸಲಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸಿ ಎಐಸಿಸಿ ಅಧ್ಯಕ್ಷರ ತವರಿನಿಂದಲೇ ಕಾಂಗ್ರೆಸ್​ಗೆ ಬಿಗ್ ಶಾಕ್ ಕೊಟ್ಟ ಸಂದೇಶ ರವಾನಿಸಲು ಬಿಜೆಪಿ ನಾನಾ ಕಸರತ್ತು ನಡೆಸಿದೆ. ಖರ್ಗೆ ಪುತ್ರ ಪ್ರಿಯಾಂಕ್ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದು, ಇಲ್ಲಿನ ಫಲಿತಾಂಶ ರಾಜ್ಯ, ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ರವಾನಿಸಲಿದೆ.
ಸೇಡಂನಲ್ಲಿ ಬಿಜೆಪಿಯ ರಾಜಕುಮಾರ ಪಾಟೀಲ್ ತೆಲ್ಕೂರ ಹಾಗೂ ಕಾಂಗ್ರೆಸ್​ನ ಡಾ.ಶರಣಪ್ರಕಾಶ ಪಾಟೀಲ್ ಮಧ್ಯೆ ಬಿಗ್ ಫೈಟ್ ನಡೆದಿದೆ. ಇಬ್ಬರ ಮಧ್ಯೆ ಹಿಂದೆ ನಾಲ್ಕು ಬಾರಿ ಕುಸ್ತಿ ಬಿದ್ದಿತ್ತು. ಅದರಲ್ಲಿ ಶರಣಪ್ರಕಾಶ ಮೂರು ಸಲ ಗೆದ್ದರೆ, ತೆಲ್ಕೂರ ಕಳೆದ ಬಾರಿ ಗೆದ್ದು ಕಮಲ ಅರಳಿಸಿದ್ದಾರೆ. ಇಬ್ಬರ ಮಧ್ಯೆ ಈಗ ಐದನೇ ಬಾರಿ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್​ನಿಂದ ಬಾಲರಾಜ್ ಗುತ್ತೇದಾರ್ ಪೈಪೋಟಿ ನೀಡುತ್ತಿದ್ದಾರೆ.
ಎಸ್ಸಿ ಮೀಸಲು ಕ್ಷೇತ್ರ ಚಿಂಚೋಳಿಯಲ್ಲಿ ಬಿಜೆಪಿಯ ಡಾ. ಅವಿನಾಶ ಜಾಧವ್, ಕಾಂಗ್ರೆಸ್​ನ ಸುಭಾಷ ರಾಠೋಡ್ ಮಧ್ಯೆ ಪೈಪೋಟಿ ನಡೆದಿದೆ. ತಂದೆ, ಸಂಸದ ಉಮೇಶ ಜಾಧವ್ ಶಕ್ತಿ ಮತ್ತು ಒಮ್ಮೆ ಗೆದ್ದು ಕ್ಷೇತ್ರದಲ್ಲಿ ಮಾಡಿಕೊಂಡ ನೆಟ್​ವರ್ಕ್ ಬಲದ ಮೇಲೆ ಮತ್ತೆ ಗೆಲ್ಲುವ ಉಮೇದಿನಲ್ಲಿ ಅವಿನಾಶ ಇದ್ದಾರೆ. ರಾಠೋಡ್ ಇದು ನನ್ನ ಕೊನೇ ಚುನಾವಣೆ ಎನ್ನುತ್ತ ಭಾವನಾತ್ಮಕವಾಗಿ ಮತ ಸೆಳೆಯುವಲ್ಲಿ ತೊಡಗಿದ್ದಾರೆ. ಜೆಡಿಎಸ್​ನಿಂದ ಸಂಜೀವನ್ ಯಾಕಾಪುರ ಕಣದಲ್ಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಎಸ್ಸಿ ಮೀಸಲು ಕ್ಷೇತ್ರ ಹೈಟೆನ್ಶನ್ ಸೃಷ್ಟಿಸಿದೆ. ಇಲ್ಲಿ ಬಿಜೆಪಿ ಹೊಸ ಮುಖ ಮಣಿಕಂಠ ರಾಠೋಡ್​ರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರ ಗೆಲ್ಲುವುದು ಕಾಂಗ್ರೆಸ್​ಗೆ ಅನಿವಾರ್ಯವಾಗಿದ್ದು, ಕೈ ನಾಯಕರು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಹಿಂದಿನ ಎರಡು ಸಲ ಗೆದ್ದ ಪ್ರಿಯಾಂಕ್ ಹ್ಯಾಟ್ರಿಕ್ ಓಟದ ಲೆಕ್ಕಾಚಾರದಲ್ಲಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಕೇಸರಿ ಪಡೆ ಸ್ಕೆಚ್ ಹಾಕಿದೆ. ಮಣಿಕಂಠ ರಾಠೋಡ್ ವಿರುದ್ಧ 40 ಕೇಸ್ ಇರುವುದು ಕಾಂಗ್ರೆಸ್​ಗೆ ಪ್ರಚಾರದ ಅಸ್ತ್ರವಾಗಿದೆ. ಈ ಕೇಸ್ ಕಾರಣಕ್ಕೇ ಇಲ್ಲಿ ನಡೆಯಬೇಕಿದ್ದ ಪ್ರಧಾನಿ ಮೋದಿ ಸಮಾವೇಶ ರದ್ದಾಗಿದೆ. ಜಿಲ್ಲಾ ನ್ಯಾಯಾಧೀಶ ಸ್ಥಾನಕ್ಕೆ ರಾಜೀನಾಮೆ ನೀಡಿದ ಡಾ.ಸುಭಾಷಚಂದ್ರ ರಾಠೋಡ್ ಜೆಡಿಎಸ್​ನಿಂದ ಕಣಕ್ಕಿಳಿದಿದ್ದಾರೆ.

ಕಲಬುರಗಿ ಉತ್ತರದಲ್ಲಿ ಕಾಂಗ್ರೆಸ್​ನ ಕನೀಜ್ ಫಾತಿಮಾ ಹಾಗೂ ಬಿಜೆಪಿಯ ಚಂದು ಪಾಟೀಲ್ ಮಧ್ಯೆ ಕುಸ್ತಿ ಬಿದ್ದಿದೆ. ಜೆಡಿಎಸ್​ನ ಉಸ್ತಾದ್ ನಾಸೀರ್ ಹುಸೇನ್ ಪ್ರಬಲ ಪೈಪೋಟಿ ಯೊಡ್ಡಿದ್ದಾರೆ. ಅಲ್ಪಸಂಖ್ಯಾತರ ಬಾಹುಳ್ಯದ ಇಲ್ಲಿ ಬಿಜೆಪಿಯಿಂದ ಕಳೆದ ಬಾರಿ ಚಂದು ಪಾಟೀಲ್ ಅಲ್ಪ ಮತಗಳಿಂದ ಸೋತಿದ್ದರು. ಈ ಸಲ ಗೆದ್ದು ಸೇಡು ತೀರಿಸಿಕೊಳ್ಳುವ ಜತೆಗೆ ಕ್ಷೇತ್ರದಲ್ಲಿ ಕಮಲ ಅರಳಿಸಿ ದಾಖಲೆ ಬರೆವ ಜೋಶ್​ನಲ್ಲಿದ್ದಾರೆ. ಸೋತ ಬಳಿಕವೂ ಚಂದು ಪಾಟೀಲ್ ಕಳೆದೈದು ವರ್ಷ ಕ್ಷೇತ್ರಾದ್ಯಂತ ನಿರಂತರ ಸುತ್ತಾಡಿ ಅನೇಕ ಕೆಲಸಗಳನ್ನು ಮಾಡಿ ತಳಪಾಯ ಬಲಪಡಿಸಿದ್ದಾರೆ. ಯುವ ಪಡೆ ಬೆನ್ನಿಗೆ ನಿಂತಿದೆ. ಇದೇ ಕ್ಷೇತ್ರದಿಂದ ಮೋದಿ ನಡೆಸಿದ ಭರ್ಜರಿ ರೋಡ್ ಶೋ ಕೇಸರಿ ಪಡೆಗೆ ಬೂಸ್ಟ್ ನೀಡಿದ್ದು, ಚಂದ್ರೋದಯ ಆಸೆ ಚಿಗುರಿಸಿದೆ. ಮತ್ತೆ ಗೆಲ್ಲಲು ಕನೀಜ್ ಟೀಮ್ ಕಸರತ್ತು ನಡೆಸಿದೆ. ಆಪ್​ನ ಸಜ್ಜಾದ್ ಅಲಿ ಇನಾಮದಾರ್ ಇತರರು ಅಖಾಡದಲ್ಲಿದ್ದಾರೆ.
ಕಲಬುರಗಿ ಗ್ರಾಮೀಣ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಮತ್ತಿಮಡು, ಕಾಂಗ್ರೆಸ್​ನ ರೇವೂನಾಯಕ ಬೆಳಮಗಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಮತ್ತಿಮಡು ಮತ್ತೆ ಕಮಲ ಅರಳಿಸಲು ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ. ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಜನರೆದುರು ಇಟ್ಟು ಮತಬೇಟೆ ನಡೆಸಿದ್ದಾರೆ. ಜೆಡಿಎಸ್​ನಿಂದ ಕಾಂಗ್ರೆಸ್ ಜಂಪ್ ಮಾಡಿದ ಬೆಳಮಗಿ ಪಕ್ಷದಲ್ಲಿನ ಒಳಬೇಗುದಿ ನಡುವೆಯೂ ಪ್ರಬಲ ಮತ್ತಿಮಡು ಜತೆಗೆ ಕುಸ್ತಿ ಹಿಡಿದಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಲ್ಲಿಸಿಲ್ಲ.
ಆಳಂದನಲ್ಲಿ ಹಳೇ ಹುಲಿಗಳಾದ ಬಿಜೆಪಿಯ ಸುಭಾಷ ಗುತ್ತೇದಾರ್, ಕಾಂಗ್ರೆಸ್​ನ ಬಿ.ಆರ್.ಪಾಟೀಲ್ ನಡುವೆ ನೇರ ಹಣಾಹಣಿ ಇದೆ. ಏಳನೇ ಬಾರಿ ಇವರಿಬ್ಬರ ಮಧ್ಯೆ ಕುಸ್ತಿ ಬಿದ್ದಿದೆ. ಗುತ್ತೇದಾರ್ ಮತ್ತೆ ಕ್ಷೇತ್ರ ಕೈವಶಕ್ಕೆ ಯತ್ನಿಸುತ್ತಿದ್ದರೆ, ಹಿಡಿತ ಮರುಸ್ಥಾಪಿಸಲು ಪಾಟೀಲ್ ಹವಣಿಸುತ್ತಿದ್ದಾರೆ. ಇಲ್ಲಿನ ಲಾಡ್ಲೆ ಮಶಾಕ್ ದರ್ಗಾ ಮತ್ತು ಶ್ರೀ ರಾಘವಚೈತನ್ಯ ಶಿವಲಿಂಗ ವಿವಾದದ ವಿಷಯ ಅಖಾಡಕ್ಕೆ ಕಾವೇರಿಸಿದೆ.
ಮಾಜಿ ಸಿಎಂ ದಿ.ಧರ್ಮಸಿಂಗ್ ಪುತ್ರ ಡಾ.ಅಜಯಸಿಂಗ್ ಹ್ಯಾಟ್ರಿಕ್ ಬಾರಿಸಿ ಜೇವರ್ಗಿ ಕಿಂಗ್ ಆಗುವ ಜೋಶ್​ನಲ್ಲಿದ್ದಾರೆ. ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್​ನಿಂದ ಕಣಕ್ಕಿಳಿದಿರುವ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಪ್ರಬಲ ಪೈಪೋಟಿಯೊಡ್ಡಿದ್ದಾರೆ. ಬಿಜೆಪಿಯಿಂದ ಹೊಸ ಮುಖ ಶಿವರಾಜ ಪಾಟೀಲ್ ರದ್ದೇವಾಡಗಿ ಸ್ಪರ್ಧಿಸಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ಬಿದ್ದಿದ್ದು, ದೊಡ್ಡಪ್ಪಗೌಡ ತೀವ್ರ ಸ್ಪರ್ಧೆಯೊಡ್ಡಿರುವುದು ಬಿಜೆಪಿಗೆ ಬಂಡಾಯದ ಬಿಸಿ ಜೋರಾಗಿ ತಟ್ಟಿಸಿದೆ. ಬಿಜೆಪಿ-ಜೆಡಿಎಸ್ ನಡುವಿನ ಮತ ವಿಭಜನೆ ಲಾಭ ಸಿಗುವ ನಿರೀಕ್ಷೆ ಕೈ ಅಭ್ಯರ್ಥಿ ಅಜಯಸಿಂಗ್ ಮತ್ತವರ ತಂಡಕ್ಕಿದೆ.

ಅಫಜಲಪುರದಲ್ಲಿ ಕಾಂಗ್ರೆಸ್​ನ ಎಂ.ವೈ. ಪಾಟೀಲ್, ಬಿಜೆಪಿಯ ಮಾಲೀಕಯ್ಯ ಗುತ್ತೇದಾರ್ ನಡುವೆ ಬಿಗ್ ಫೈಟ್ ಬಿದ್ದಿದೆ. ಕೊನೇ ಘಳಿಗೆಯಲ್ಲಿ ಮಾಲೀಕಯ್ಯ ಸಹೋದರ ನಿತಿನ್ ಗುತ್ತೇದಾರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರ ಸ್ಪರ್ಧೆ ಕಾಂಗ್ರೆಸ್​ನಲ್ಲೂ ತಳಮಳ ಸೃಷ್ಟಿಸಿದೆ. ನಿತಿನ್ ಸ್ಪರ್ಧೆ ಲಾಭ-ನಷ್ಟ ಯಾರಿಗೆ ಎಂಬ ಲೆಕ್ಕಾಚಾರಗಳೇ ಸಿಗದಿರುವುದು ಕುತೂಹಲ ಕೆರಳಿಸಿದೆ. ಪರಿವಾರ ಮಾಲೀಕಯ್ಯ ಗುತ್ತೇದಾರ್ ಬೆನ್ನಿಗೆ ನಿಂತಿದೆ. ಜೆಡಿಎಸ್​ನ ಶಿವಕುಮಾರ ನಾಟೀಕಾರ, ಆಪ್​ನ ಶಿವರಾಜ ಪಾಟೀಲ್, ಸಮಾಜವಾದಿ ಪಕ್ಷದಿಂದ ಪಿಎಸ್​ಐ ಪರೀಕ್ಷೆ ಅಕ್ರಮ ಆರೋಪದಲ್ಲಿ ಜೈಲುಪಾಲಾಗಿದ್ದ ಆರ್.ಡಿ. ಪಾಟೀಲ್ ಸ್ಪರ್ಧೆಯಲ್ಲಿದ್ದಾರೆ.
2008ರಲ್ಲಿ ಉದಯವಾದ ಕಲಬುರಗಿ ದಕ್ಷಿಣ ಕ್ಷೇತ್ರ ರೇವೂರ ಮನೆತನಕ್ಕೆ ಸೀಮಿತವಾಗಿದ್ದು, ಬಿಜೆಪಿಯ ದತ್ತಾತ್ರೇಯ ಪಾಟೀಲ್ ಅದೃಷ್ಟ ಖುಲಾಯಿಸಿದೆ. ಹಿಂದಿನ ಎರಡೂ ಚುನಾವಣೆಗಳಲ್ಲಿ ಗೆದ್ದಿರುವ ರೇವೂರ ಹ್ಯಾಟ್ರಿಕ್ ಬಾರಿಸಿ ಕ್ಷೇತ್ರವನ್ನು ಕಮಲ ಪಡೆಯ ಭದ್ರಕೋಟೆ ಮಾಡುವ ತವಕದಲ್ಲಿದ್ದಾರೆ. ಕಳೆದ ಸಲ ಸೋತ ಕಾಂಗ್ರೆಸ್​ನ ಅಲ್ಲಮಪ್ರಭು ಪಾಟೀಲ್ ಸೇಡು ತೀರಿಸಿಕೊಳ್ಳುವ ಜತೆಗೆ ಮೊದಲ ಬಾರಿ ಇಲ್ಲಿ ಪಕ್ಷದ ಜಯ ದಾಖಲಿಸುವ ಉಮೇದಿನಲ್ಲಿದ್ದಾರೆ. ಜೆಡಿಎಸ್​ನ ಕೃಷ್ಣ ರಡ್ಡಿ, ಆಪ್​ನ ಸಿದ್ದು ಪಾಟೀಲ್ ತೆಗನೂರ, ಪಕ್ಷೇತರ ಶರಣು ಪಪ್ಪಾ ಇತರರು ಸ್ಪರ್ಧೆಯಲ್ಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
