ಬೆಳಗಾವಿ:ವಿಧಾನಮಂಡಲ ಅಧಿವೇಶನದಲ್ಲಿ ಜಂಟಿಯಾಗಿ ಸರ್ಕಾರಕ್ಕೆ ಚಾಟಿ ಬೀಸಲು ಬಿಜೆಪಿ-ಜೆಡಿಎಸ್ ತೀರ್ವನಿಸಿದ್ದರೆ, ಆಂತರಿಕ ಬೇಗುದಿ ಬಿಜೆಪಿಗೆ ತಲೆಬಿಸಿಯಾಗಿದೆ. ತೂಕಬದ್ಧ, ಪರಿಣಾಮಕಾರಿ ಕಾರ್ಯತಂತ್ರವನ್ನು ಉಭಯ ಪಕ್ಷಗಳು ಹೆಣೆದುಕೊಂಡಿದ್ದು, ಅನುಷ್ಠಾನಕ್ಕೆ ಎದುರಾಗಬಹುದಾದ ಸಂಭಾವ್ಯ ಅಡಚಣೆ ನಿವಾರಣೆಗೆ ಬಿಜೆಪಿ ನಾಯಕರು ಕಸರತ್ತು ನಡೆಸಿದ್ದಾರೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸೇರಿ ಐದು ಹುದ್ದೆಗಳ ಭರ್ತಿ ವಿಚಾರದಲ್ಲಿ ಹಗ್ಗಜಗ್ಗಾಟ ಮುಂದುವರಿದಿದ್ದು, ಜಾತಿ-ವರ್ಗ, ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಬಯಸಿದ ನಾಯಕರಿಗೆ ಪೀಕಲಾಟವಾಗಿದೆ. ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ಹುದ್ದೆಯನ್ನು ಅರವಿಂದ ಬೆಲ್ಲದ ನಿರಾಕರಿಸುವ ಮೂಲಕ ಪ್ರತಿಪಕ್ಷದ ಉಪನಾಯಕ ಸ್ಥಾನಕ್ಕೆ ಪರೋಕ್ಷ ಬಯಕೆ ವ್ಯಕ್ತಪಡಿಸಿದರೆ, ಹಿರಿಯ ನಾಯಕರಿಬ್ಬರು ಈ ನಿಲುವಿಗೆ ಬೆಂಬಲಿಸಿದ್ದಾರೆ ಎನ್ನಲಾಗುತ್ತಿದೆ.
ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಹಿರಿತನ, ಅನುಭವ, ಸಮರ್ಥ ಕಾರ್ಯನಿರ್ವಹಣೆ ಕಾರಣವೊಡ್ಡಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ತರಲು ಒಂದು ಬಣ ಪ್ರಯತ್ನಿಸಿದ್ದರೆ, ಕಿತ್ತೂರು ಅಥವಾ ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡಲು ಮತ್ತೊಂದು ಬಣ ಒತ್ತಡ ಹೇರಿದೆ ಎನ್ನಲಾಗಿದೆ. ಈ ನಡುವೆ ದೆಹಲಿಗೆ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ವಿಜಯೇಂದ್ರ ಭೇಟಿ ಯಾಗಿ ಮಾತುಕತೆ ನಡೆಸಿದ್ದು, 5 ಹುದ್ದೆ ಭರ್ತಿಗೆ ಪಡೆದಿರುವ ಸಂದೇಶ ನಿಗೂಢವಾಗಿದೆ.
ವಿಧಾನಸಭೆ ಉಪನಾಯಕನ ಹುದ್ದೆಗೆ ವಿ.ಸುನಿಲ್ ಕುಮಾರ್ ನೇಮಕವಾದರೆ, ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನ ರಘುನಾಥರಾವ್ ಮಲ್ಕಾಪುರೆಗೆ ಸಿಗುವ ಸಾಧ್ಯತೆಗಳಿವೆ. ಒಂದು ವೇಳೆ ಬೆಲ್ಲದ ಕೆಳಮನೆಯಲ್ಲಿ ಉಪನಾಯಕರಾದರೆ, ಮೇಲ್ಮನೆ ವಿಪಕ್ಷ ನಾಯಕ ಸ್ಥಾನ ಶ್ರೀನಿವಾಸ ಪೂಜಾರಿಯವರಿಗೆ ಒಲಿಯಲಿದೆ ಎಂದು ಮೂಲಗಳು ವಿಶ್ಲೇಷಿಸಿವೆ.
ಯತ್ನಾಳ್ ಒಡಕು ಧ್ವನಿ:ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಒಡಕು ಧ್ವನಿ ಎತ್ತಿ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನ ಸುವರ್ಣಸೌಧದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಉತ್ತರಕರ್ನಾಟಕಕ್ಕೆ ನ್ಯಾಯ ಸಿಗುವ ತನಕ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವುದಿಲ್ಲ. ಶಿವಮೊಗ್ಗ, ದಕ್ಷಿಣ ಕರ್ನಾಟಕದವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಲಾಗಿದೆ. ಉತ್ತರ ಕರ್ನಾಟಕದ ಜನ ಗುಲಾಮರಲ್ಲ, ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು. ಪ್ರಾಮಾಣಿಕರು, ಹಿಂದು ವಿಚಾರಧಾರೆ ಹೊಂದಿರುವವರು ಆಡಳಿತ ನಡೆಸಬೇಕು. ಕುಟುಂಬ ರಾಜಕಾರಣ ನಿಮೂಲನೆ ಮಾಡುವುದೇ ನನ್ನ ಗುರಿಯಾಗಿದೆ. ಲೋಕಸಭೆ ಚುನಾವಣೆ ನಂತರ ಬದಲಾವಣೆಗಳಾಗಲಿವೆ ಎಂದು ಯತ್ನಾಳ್ ಭವಿಷ್ಯ ನುಡಿದರು.
ರಾಜಿ ಮಾತುಕತೆವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಅರವಿಂದ ಬೆಲ್ಲದ ಜತೆಗೆ ರಾಜಿಸಂಧಾನದ ಮಾತುಕತೆ ನಡೆಸಿ, ಮನವೊಲಿಸಿದರು. ಬರಗಾಲ, ವರ್ಗಾವಣೆ ದಂಧೆ, ಉತ್ತರ ಕರ್ನಾಟಕದ ಪ್ರಮುಖ ಯೋಜನೆಗಳತ್ತ ಸರ್ಕಾರದ ಗಮನಸೆಳೆದು ಪರಿಹಾರಕ್ಕೆ ಒತ್ತಡ ಹೇರಲು ತಯಾರಿ ಮಾಡಿಕೊಂಡಿದ್ದು, ಪಕ್ಷಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಸದನಕ್ಕೆ ತಳಕು ಹಾಕಿದರೆ ಪ್ರತಿಪಕ್ಷವಾಗಿ ಬಿಜೆಪಿ ದುರ್ಬಲ ಎಂಬ ಸಂದೇಶ ರವಾನೆಯಾಗಲಿದೆ. ಆಡಳಿತ ಪಕ್ಷ ಪರಿಸ್ಥಿತಿಯ ದುರ್ಲಾಭ ಪಡೆಯಲಿದೆ ಎಂಬ ವಿಷಯ ಪ್ರಸ್ತಾಪಿಸಿದ್ದು, ಜನತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಟ್ಟಾಗಿ ಹೋರಾಟ ಅಗತ್ಯವೆಂಬ ಮಾತಿಗೆ ಶಾಸಕರಿಬ್ಬರೂ ಸಹಮತ ವ್ಯಕ್ತಪಡಿಸಿದರು.
ಭೀಕರ ಬರಗಾಲದಿಂದ ತತ್ತರಿಸಿರುವ ರೈತರು, ಕಬ್ಬು ಬೆಳೆಗಾರರು ಹಾಗೂ ಉತ್ತರ ಕರ್ನಾಟಕದ ಸಂಕಷ್ಟಗಳಿಗೆ ಅಧಿವೇಶನದಲ್ಲಿ ಸರ್ಕಾರ ಪರಿಹಾರ ಒದಗಿಸುವ ನಿರೀಕ್ಷೆಯಿದೆ. ವಿರೋಧ ಪಕ್ಷವಾಗಿ ಬಿಜೆಪಿ ಸದನದಲ್ಲಿ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಲಿದೆ. ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ಒತ್ತಡ ಹೇರಲಾಗುವುದು.
| ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಭಗವದ್ಗೀತೆ ಉಲ್ಲೇಖಿಸಿದ ಅಶೋಕ್ಬೆಳಗಾವಿ: ಪ್ರತಿಪಕ್ಷದ ನಾಯಕರಾದ ನಂತರ ಮೊದಲ ಅಧಿವೇಶನಕ್ಕೆ ಆರ್. ಅಶೋಕ್ ಶ್ವೇತವಸ್ತ್ರಧಾರಿಯಾಗಿ ಹುಮ್ಮಸ್ಸಿನಿಂದಲೇ ಆಗಮಿಸಿದ್ದರು. ಅಶೋಕ್ ಮೊಗಸಾಲೆಗೆ ಬರುತ್ತಿದ್ದಂತೆ ಮಾಧ್ಯಮಗಳು ಅವರನ್ನು ಸುತ್ತುವರೆದವು. ಮೊದಲ ಅಧಿವೇಶನಕ್ಕೆ ಹೇಗೆ ಸಿದ್ಧರಾಗಿದ್ದೀರಿ ಎಂಬ ಪ್ರಶ್ನೆಗೆ, ಮೊದಲ ದಿನ ಬರಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಕೊಟ್ಟಿದ್ದೇನೆ ಎಂಬ ಉತ್ತರ ಬಂತು. ಆಡಳಿತ ಪಕ್ಷವನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಕೂಡಲೇ ಅಶೋಕ್ ಮರು ಪ್ರಶ್ನೆ ಹಾಕಿದ್ದು, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಏನು ಹೇಳಿದ್ದಾನೆ ಎಂಬುದನ್ನು ನೀವೆಲ್ಲ ಕೇಳಿದ್ದೀರಿ ಅಲ್ಲವೇ ಎಂದು. ಅದಕ್ಕೆ ಮಾಧ್ಯಮಗಳು ಏನೆಂದು ಕೇಳಿದಾಗ, ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಕೃಷ್ಣ ಹೇಳುತ್ತಾನೆ, ಎದುರಿಗೆ ಇರುವವರು ಸಂಬಂಧಿಗಳೆಂದು ನೋಡಬೇಡ, ಕೇವಲ ಶತ್ರುಗಳೆಂದು ನೋಡು ಅಂತ. ನಾನು ಅದೇ ರೀತಿ ಎದುರಿಗೆ ಇರುವವರು ಸ್ನೇಹಿತರೆಂದು ನೋಡುವುದಿಲ್ಲ, ಬದಲಾಗಿ ಶತ್ರುಗಳೆಂದು ಭಾವಿಸಿ ಯುದ್ಧ ಮಾಡಲು ಸಿದ್ಧನಾಗಿದ್ದೇನೆ ಎಂದಾಗ ಮೊಗಸಾಲೆ ತುಂಬ ನಗುವಿನ ಅಲೆಗಳು ಎದ್ದವು.
ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿರುವ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ. ಅಡ್ವಾಣಿ ನನಗೆ ಮಾದರಿ. ವಿಧಾನಸಭೆಯಲ್ಲಿ ಬಿಜೆಪಿಯ 66 ಹಾಗೂ ಜೆಡಿಎಸ್ ಪಕ್ಷದ 19 ಸದಸ್ಯರು ಸೇರಿ ವಿರೋಧ ಪಕ್ಷದಲ್ಲಿ 85 ಮಂದಿ ಶಾಸಕರಿದ್ದೇವೆ. ಆಡಳಿತ ಪಕ್ಷದಲ್ಲಿ 135 ಜನರಿದ್ದಾರೆ. ನಮ್ಮ ಸಂಖ್ಯೆ ಕಡಿಮೆ ಇದೆ ಎಂದು ನಿರ್ಲಕ್ಷ್ಯ ಮಾಡಬೇಡಿ.
| ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ
ಅಶೋಕ್​ಗೆ ಅಭಿನಂದನೆ ಸಲ್ಲಿಕೆವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರನ್ನು ಸ್ಪೀಕರ್ ಯು.ಟಿ.ಖಾದರ್, ಸಚಿವರು ಹಾಗೂ ಎಲ್ಲ ಪಕ್ಷಗಳ ಶಾಸಕರು ಅಭಿನಂದಿಸಿದರು. ಆರ್.ಅಶೋಕ್​ರನ್ನು ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿರುವ ವಿಷಯವನ್ನು ಸದನದ ಗಮನಕ್ಕೆ ತಂದ ಸ್ಪೀಕರ್, ದೀರ್ಘ ಕಾಲದ ರಾಜಕೀಯ ಜೀವನದ ಅನುಭವ ಇರುವ ಅಶೋಕ್, ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಈಗ ಅವರಿಗೆ ಮಹತ್ವದ ಸ್ಥಾನ ಸಿಕ್ಕಿದೆ. ಸದನವು ಸಮರ್ಥ, ಸೌಹಾರ್ದಯುತವಾಗಿ ನಡೆಯಲು ಸಹಕಾರ ಕೊಡುವಂತೆ ಕೋರಿದರು. ಸರ್ಕಾರದ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಪ್ರತಿಪಕ್ಷ ನಾಯಕನ ಸ್ಥಾನ ಅತ್ಯಂತ ಮಹತ್ವದ ಜವಾಬ್ದಾರಿ. ಈ ಸ್ಥಾನವನ್ನು ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪರ್ಯಾಯ ಹುದ್ದೆ ಎಂದು ಪರಿಗಣಿಸಲಾಗುತ್ತದೆ. ವಿರೋಧ ಮಾಡಲೆಂದೆ ವಿರೋಧಿಸುವುದು ಸರಿಯಲ್ಲ. ವಿಪಕ್ಷಗಳ ಟೀಕೆ, ಟಿಪ್ಪಣಿಗಳು ರಚನಾತ್ಮಕವಾಗಿರಲಿ ಎಂದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಎಸ್.ಟಿ.ಸೋಮಶೇಖರ್, ಸಿ.ಸಿ.ಪಾಟೀಲ್, ಬಿ.ವೈ.ವಿಜಯೇಂದ್ರ, ಜೆಡಿಎಸ್​ನ ಸಿ.ಎನ್.ಬಾಲಕೃಷ್ಣ, ಕಾಂಗ್ರೆಸ್​ನ ಬಸವರಾಜ ರಾಯರೆಡ್ಡಿ ಅಭಿನಂದನೆ ಸಲ್ಲಿಸಿದರು.
ನಿರಾಕರಿಸಿದ ಯತ್ನಾಳ್!:ಅಶೋಕ್ ಅವರನ್ನು ಅಭಿನಂದಿಸಿ ಮಾತನಾಡಲು ಬಿಜೆಪಿ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೇಟು ಹಾಕಿದ ಪ್ರಸಂಗ ನಡೆಯಿತು. ನೀವು ಮಾತನಾಡುತ್ತೀರಾ? ಎಂದು ಯತ್ನಾಳ್ ಅವರಿಗೆ ಸ್ಪೀಕರ್ ಕೇಳಿದರು. ಆಗ ಯತ್ನಾಳ್ ಮಾತನಾಡಲು ನಿರಾಕರಿಸಿದರು.
ಇನ್ನೂ ಅಧಿಕೃತವಾಗದ ತೆಲಂಗಾಣ ಸಿಎಂ ಹೆಸರು! ಮುಂಚೂಣಿಯಲ್ಲಿರುವ ರೇವಂತ್​ ರೆಡ್ಡಿಗೆ ಕಾದಿದೆಯಾ ಆಘಾತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
