ಪಕ್ಷರಹಿತವಾಗಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗಣನೀಯ ಸಾಧನೆ ಮೂಲಕ ಆಡಳಿತಾರೂಢ ಬಿಜೆಪಿ ಹಳ್ಳಿಮಟ್ಟದಲ್ಲೂ ನೆಲೆ ಭದ್ರಪಡಿಸಿಕೊಂಡರೆ, 2ನೇ ಸ್ಥಾನಕ್ಕೆ ಕುಸಿದಿರುವ ಕಾಂಗ್ರೆಸ್​ಗೆ ಬುಡವೇ ಅಲುಗಾಡಿದ ಅನುಭವವಾಗಿದೆ. ವ್ಯಾಪ್ತಿ ವಿಸ್ತರಿಸಿಕೊಳ್ಳದ, ಹೆಚ್ಚಿನ ಸ್ಥಾನವನ್ನೂ ಕಳೆದುಕೊಳ್ಳದ ಜೆಡಿಎಸ್​ನದ್ದು ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿ. ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆಂದು ಹೇಳಿಕೊಳ್ಳುತ್ತಿವೆ. ಲಭ್ಯ ಮಾಹಿತಿ ಪ್ರಕಾರ ಬಿಜೆಪಿ ಬೆಂಬಲಿತರು ಶೇ.60 ಸ್ಥಾನ ಗೆದ್ದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯ ಕ್ವಾರ್ಟರ್​ಫೈನಲ್ ಸಮರವಾಗಿ ಬಿಂಬಿತವಾಗಿದ್ದ ಈ ಹಳ್ಳಿ ದಂಗಲ್​ನ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಅನೇಕ ಸಂದೇಶಗಳನ್ನು ರವಾನಿಸಿದೆ.
ಬಿಜೆಪಿಗೆ ಗ್ರಾಮೀಣ ಕೃಪೆ
ಬಿಜೆಪಿ ನಗರಕೇಂದ್ರಿತ ಪಕ್ಷ ಎಂಬ ಹಣೆಪಟ್ಟಿ ಯನ್ನು ಈ ಗ್ರಾಮ ಪಂಚಾಯಿತಿ ಚುನಾವಣೆ ತೆಗೆದುಹಾಕಿದೆ. ಪಕ್ಷರಹಿತವಾಗಿ ನಡೆದ ಈ ಮತಸಮರದಲ್ಲಿ ತನ್ನ ಬೆಂಬಲಿಗರನ್ನು ಹೆಚ್ಚಿನ ಪ್ರಮಾಣದಲ್ಲಿ ಗೆಲ್ಲಿಸಿದ ಖುಷಿಯಿಂದ ಆಡಳಿತಾರೂಢ ಕಮಲಪಡೆ ಬೀಗುತ್ತಿದೆ. ‘ಮನೆ ಗೆದ್ದರೆ ಮಾರು ಗೆಲ್ಲಬಹುದು’ ಎಂಬ ವರಿಷ್ಠರ ಫರ್ವನಿನಂತೆ 4-5 ತಿಂಗಳ ಮುಂಚೆಯೇ ಪೂರ್ವತಯಾರಿಗೆ ಇಳಿದು, ನಿರೀಕ್ಷಿತ ಫಲ ಪಡೆದಿರುವುದು ರಾಜ್ಯ ಬಿಜೆಪಿ ಸಾಧನೆ ಹಿಂದಿರುವ ತಂತ್ರಗಾರಿಕೆ. ಪಕ್ಷದ ರಾಜ್ಯ ನಾಯಕರ ಪ್ರಕಾರ ಶೇ.60ಕ್ಕೂ ಹೆಚ್ಚು ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾಗಿದೆ. ಮುಂಬರುವ ಪಕ್ಷಾಧಾರಿತ ತಾಲೂಕು, ಜಿಲ್ಲಾ ತಾಲೂಕು ಪಂಚಾಯಿತಿ ಬಳಿಕ 2023ರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಗ್ರಾ.ಪಂ. ಚುನಾವಣೆಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಹೊಸ ಕೃಷಿ ಕಾಯ್ದೆಗಳ ವಿರುದ್ಧ ಚಳವಳಿ ನಡೆದಿರುವ ಸಂದಿಗ್ಧ ಸನ್ನಿವೇಶದ ಮಧ್ಯೆಯೂ ಬಿಜೆಪಿ ನಿರೀಕ್ಷಿತ ಗುರಿ ತಲುಪಿದೆ. ಹಳ್ಳಿ ಅಖಾಡದಲ್ಲಿ ರೈತರು, ಕೃಷಿ ಕೂಲಿಕಾರರು ನಿರ್ಣಾಯಕರು ಎಂಬುದು ಗಮನಾರ್ಹ.
ವ್ಯವಸ್ಥಿತ ಕಾರ್ಯತಂತ್ರ
ಬಿಜೆಪಿ ನಾಯಕರು ಮತಗಟ್ಟೆಮಟ್ಟದಲ್ಲಿ ಪಂಚರತ್ನ ಸಮಿತಿ, ಗ್ರಾ.ಪಂ. ಹಂತದಲ್ಲಿ ಕುಟುಂಬ ಸಮ್ಮಿಲನ, ಜಿಲ್ಲೆಗೆರಡು ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ಸಂಘಟಿಸಿ ಪಕ್ಷದ ಪರ ಜನಾಭಿಪ್ರಾಯ ರೂಪಿಸಿದರು. ರಾಜ್ಯಮಟ್ಟದಲ್ಲಿ 6 ತಂಡಗಳು, ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ ಹಾಗೂ ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ 1.22 ಲಕ್ಷ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಿ ತೊಡಗಿಸಿದರು. ಬೂತ್​ವುಟ್ಟದ ಕಾರ್ಯಕರ್ತನಿಗೆ ಮಾನ್ಯತೆ, ಯುವ ಸಮೂಹದ ಸೆಳೆತ ಹಾಗೂ ಪರಿಣಾಮಕಾರಿ ಸಂವಹನ ಮತ್ತು ಸಂಪರ್ಕದಂತಹ ವ್ಯವಸ್ಥಿತ ಕಾರ್ಯತಂತ್ರವು ಹಳ್ಳಿಗಳಲ್ಲಿ ಕಮಲವನ್ನು ಅರಳಿಸಿದೆ.
ವಿಕಾಸದ ಮಂತ್ರ
ಸಂಘಟನಾ ಬಲ ವಿಸ್ತರಣೆ ವೇಳೆ ಪ್ರತಿಯೊಂದು ಊರಿನ ಬೇಡಿಕೆಗಳನ್ನು ಅರಿತು, ಅಭಿವೃದ್ಧಿಯ ಮಂತ್ರ ಜಪಿಸಿತು. ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮಾಹಿತಿ ಮನ-ಮನೆಗೆ ತಲುಪಿಸುವಲ್ಲಿಯೂ ಯಶಸ್ವಿಯಾಯಿತು. ಇಷ್ಟಲ್ಲದೆ, ಕೇಂದ್ರ-ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವುದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪ ವರ್ಚಸ್ಸು ನೆರವಾಗಿದೆ. ಬಿಜೆಪಿ ಬಲವನ್ನು ಪ್ರತಿಪಕ್ಷಗಳು ಕಡಿಮೆ ಅಂದಾಜಿಸಿದ್ದೂ ಪ್ಲಸ್ ಪಾಯಿಂಟ್ ಆಗಿದೆ.
ಫಲಿತಾಂಶದ ಸಂದೇಶ
*ಬಿಜೆಪಿ-ಸಿಎಂ ಯಡಿಯೂರಪ್ಪ ಸ್ಥಾನ ಅಬಾಧಿತ
*ಕಾಂಗ್ರೆಸ್-ನಾಯಕತ್ವದ ಬಗ್ಗೆ ಮರುಚಿಂತನೆ
*ಜೆಡಿಎಸ್-ಸಂಘಟನೆ ಕಡೆ ಗಮನ ಹರಿಸುವ ಅನಿವಾರ್ಯತೆ
ಮೀನಮೇಷ ಕಾಂಗ್ರೆಸ್ ಹತಾಶ
ಗ್ರಾ.ಪಂ ಚುನಾವಣೆಯಲ್ಲಿ ಪಕ್ಷ ರಾಜಕಾರಣ ಇಲ್ಲದಿದ್ದರೂ, ಕಾಂಗ್ರೆಸ್ ಸದಾ ಮುಂದಿರುತ್ತಿತ್ತೆಂಬ ವಾಡಿಕೆ ಮುಂಚೆಯಿಂದಲೂ ಇದೆ. ಪ್ರಮುಖ ನಾಯಕರು ಕೈ ಆಡಿಸದೇ ಇದ್ದರೂ ತಳಮಟ್ಟದಲ್ಲಿ ಕಾಂಗ್ರೆಸ್ ಬಲವಾಗಿತ್ತು. ಈ ಬಾರಿ ಹಾಗಾಗಿಲ್ಲ ಎಂದು ಪಕ್ಷದ ನಾಯಕರು ಚರ್ಚೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ನಾವೇ ಹೆಚ್ಚು ಸ್ಥಾನ ಗೆದ್ದಿದ್ದು ಎಂದು ಹೇಳಿಕೊಂಡರೂ ಒಳಗೊಳಗೆ ಬುಡ ಅಲ್ಲಾಡಿದ ಸತ್ಯ ಕಾಂಗ್ರೆಸ್​ನ ಪ್ರಮುಖ ನಾಯಕರಿಗೆ ಗೊತ್ತಿದೆ. ಚುನಾವಣೆಗೆ 2 ತಿಂಗಳ ಮೊದಲೇ ಅಣಿಯಾಗಿದ್ದ ಬಿಜೆಪಿ ಲಕ್ಷಕ್ಕೂ ಅಧಿಕ ಪ್ರಭಾರಿಗಳನ್ನು ನೇಮಿಸಿದರೂ ಪಕ್ಷದಲ್ಲಿ ಎಚ್ಚೆತ್ತುಕೊಂಡು ತಯಾರಿ ಮಾಡಿಕೊಳ್ಳಲಿಲ್ಲ ಎಂಬ ಅಪಸ್ವರ ಕಾಂಗ್ರೆಸ್​ನಲ್ಲಿ ಕೇಳಿಬಂದಿದೆ.
ಹಾಗೆಯೇ ಮುಂದೆ ಬಿಜೆಪಿ ಯಾವ ಹೆಜ್ಜೆ ಇಡುತ್ತದೆ ಎಂದು ಕೈ ನಾಯಕರಿಗೆ ಅರಿವಿದೆ. ಈ ಕಾರಣಕ್ಕೆ ಪ್ರಮುಖ ನಾಯಕರಲ್ಲಿ ಕೊಂಚ ಆತಂಕ ಕಾಣಿಸಿದೆ. ಬಿಜೆಪಿ ಪ್ರಕಾರ ಶೇ.60ಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿಗಳು ಆ ಪಕ್ಷದ ತೆಕ್ಕೆಗೆ ಹೋಗಿದೆ ಎಂದರೆ, ಭವಿಷ್ಯದಲ್ಲಿ ಬೂತ್ ಮಟ್ಟದಲ್ಲಿ ಆ ಪಕ್ಷ ಬಲಗೊಳಿಸುತ್ತಿರುವ ಸಂಕೇತ ಎಂಬುದು ಸ್ಪಷ್ಟ.
ಗ್ರಾಪಂ ಸದಸ್ಯರು ಗೆದ್ದೆತ್ತಿನ ಬಾಲ ಹಿಡಿಯುವವರು ಎಂಬ ಪ್ರತೀತಿ ಇದೆ. ಇಷ್ಟರ ನಡುವೆಯೂ ಎದುರಾಳಿಯ ಗಣನೀಯ ಸಾಧನೆಯನ್ನು ಪೂರ್ಣ ಪ್ರಮಾಣದಲ್ಲಿ ತಳ್ಳಿಹಾಕಲು ಕಾಂಗ್ರೆಸ್ ನಾಯಕರು ಸಿದ್ಧರಿಲ್ಲ. 2018ರ ವಿಧಾನಸಭೆ ಸೋಲು, 2019ರ ಲೋಕಸಭೆ ಚುನಾವಣೆ ಸೋಲು, ಉಪ ಚುನಾವಣೆಗಳಲ್ಲೂ ಹಿನ್ನಡೆ, ಇತಿಹಾಸದಲ್ಲಿ ಒಮ್ಮೆಯೂ ಗೆಲ್ಲದ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು ಕಾಂಗ್ರೆಸ್ ಪಾಲಿಗೆ ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಈಗ ಗ್ರಾಪಂ ಫಲಿತಾಂಶ ಇನ್ನಷ್ಟು ಆಘಾತ ತಂದಿದೆ.
ಸರ್ಕಾರದ ವಿರುದ್ಧ ತಾವು ಮಾಡುತ್ತಿರುವ ಟೀಕೆಗಳು, ಆರೋಪಗಳು ಯಾವುದೂ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ, ನಾಯಕತ್ವ ಬದಲಾವಣೆ ಕೂಡ ಕೈ ಹಿಡಿಯುತ್ತಿಲ್ಲ ಎಂಬುದು ಅರಿವಿಗೆ ಬಂದಿದೆಯಲ್ಲದೇ, ಇದು ಕಡೆಯ ಎಚ್ಚರಿಕೆ ಗಂಟೆಯೂ ಆಗಿದೆ. ದಕ್ಷಿಣ ಕನ್ನಡದಲ್ಲಿ ಎಸ್​ಡಿಪಿಐ ಕಾಂಗ್ರೆಸ್​ನ ಪ್ರಬಲ ಎದುರಾಳಿಯಾಗಿ ರೂಪುಗೊಳ್ಳುವುದರ ಲಕ್ಷಣ ಕಾಣಿಸಿದೆ. ಜತೆಗೆ ಶಿವಮೊಗ್ಗದಲ್ಲಿ ಕಳೆದಬಾರಿಗಿಂತ ಈ ಬಾರಿ ಅರ್ಧಕ್ಕರ್ಧ ಕುಸಿದಿದ್ದರೆ, ಹಾಸನದಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ಬೆಳಗಾವಿ, ಧಾರವಾಡದಲ್ಲೂ ಹಿನ್ನಡೆಯಾಗಿದ್ದು, ರಾಯಚೂರು, ಚಾಮರಾಜನಗರದಲ್ಲಿ ಸಮಾಧಾನಕರ ಎಂಬ ಫಲಿತಾಂಶ ಲಭಿಸಿದೆ. ಈ ನಡುವೆ ‘ಕಾಂಗ್ರೆಸ್​ಗಿದು ಸತ್ವಪರೀಕ್ಷೆಕಾಲ’ ಎಂಬ ಸಿದ್ದರಾಮಯ್ಯ ಮಾತು ಪಕ್ಷದೊಳಗೆ ಸದ್ದು ಮಾಡುತ್ತಿದೆ. ಅವರ ಮಾತಿನ ಗಂಭೀರತೆ ಪರಿಸ್ಥಿತಿಯನ್ನು ಎತ್ತಿ ತೋರಿಸಿದೆ.
ಬದಲಾಗದ ಜೆಡಿಎಸ್ ಸ್ಥಿತಿಗತಿ
ಲೋಕಸಭೆ, ವಿಧಾನಸಭೆ ಉಪ ಚುನಾವಣೆ, ಮೇಲ್ಮನೆ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿನ ಸಾಲು ಸಾಲು ಸೋಲಿನ ಕಹಿ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದಲ್ಲೂ ಬದಲಾಗಿಲ್ಲ. ಬೇರುಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಈ ಚುನಾವಣೆ ಮಹತ್ವದ್ದೆಂದು ತಿಳಿದಿದ್ದರೂ ಜೆಡಿಎಸ್ ಗಂಭೀರವಾಗಿ ಪರಿಗಣಿಸಲಿಲ್ಲ.
ಇಷ್ಟಾದರೂ ದಳ ಪಡೆ ಈ ಚುನಾವಣೆಯಲ್ಲಿ ‘ಆರಕ್ಕೇರಲಿಲ್ಲ, ಮೂರಕ್ಕೆ ಇಳಿಯಲಿಲ್ಲ’ ಎಂಬುದು ಕೊಂಚ ಸಮಾಧಾನಕರ ಸಂಗತಿ. ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ತನ್ನ ನೆಲೆ ಭದ್ರಪಡಿಸಿಕೊಳ್ಳುವ ತಂತ್ರಗಾರಿಕೆ ನಡೆಸಿ ತಕ್ಕಮಟ್ಟಿಗೆ ಯಶಸ್ವಿಯಾಯಿತು. ಜೆಡಿಎಸ್ ಭದ್ರಕೋಟೆಯಲ್ಲೆಲ್ಲ ಬಿಜೆಪಿ ಬೇರುಬಿಡುವ ಪ್ರಯತ್ನ ಮಾಡಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರದ ವಿಚಾರದಲ್ಲಿ ಜೆಡಿಎಸ್ ಪ್ರಯತ್ನ ಯಾವ ದಿಕ್ಕಿನಲ್ಲೂ ಕಾಣಲೇ ಇಲ್ಲ. ರಾಮನಗರ, ಮೈಸೂರು, ಕೋಲಾರ ಮತ್ತಿತರ ಭಾಗಗಳಲ್ಲಿ ಬಿಜೆಪಿ ಬೆಳೆ ತೆಗೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಂತೂ ಬಿಜೆಪಿ ಸ್ವೀಪ್ ಮಾಡಿದೆ. ಮಂಡ್ಯದಲ್ಲಿ ಬಿಜೆಪಿ ಕಮಾಲ್ ಮಾಡಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಜೆಡಿಎಸ್ ಕಳಪೆ ಪ್ರದರ್ಶನ ಕಂಡಿದೆ. ಉತ್ತರ ಕರ್ನಾಟಕದಲ್ಲಿ ತಕ್ಕಮಟ್ಟಿಗೆ ಉಸಿರಾಡಿದೆ. ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ವಿಚಾರ, ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಬೆಂಬಲಿಸುವಲ್ಲಿ ಉಂಟಾದ ಗೊಂದಲ, ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯುತ್ತಿರುವ ಶಾಸಕರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹುದ್ದೆಯಲ್ಲಿ ಮುಂದುವರಿಯಲು ನಿರಾಸಕ್ತಿ ತೋರುತ್ತಿರುವುದು…ಹೀಗೆ ಜೆಡಿಎಸ್ ಗೊಂದಲದ ಗೂಡಾಗಿರುವುದಂತೂ ಸತ್ಯ.
ಕೂತೂಹಲ ಮೂಡಿಸಿರುವ ಸಭೆ:ಸಾಲು ಸಾಲು ಸೋಲಿನ ಆತ್ಮಾವಲೋಕನದ ಹಿನ್ನೆಲೆಯಲ್ಲಿ ಜ.4 ರಂದು ಯುವ ಜನತಾದಳ, ವಿದ್ಯಾರ್ಥಿ ಜನತಾದಳ ಸಭೆ ಆಯೋಜಿಸಲಾಗಿದೆ. ಜ.7 ರಂದು ಶಿಸ್ತಿನ ಸಭೆ ಕೂಡ ಕರೆಯಲಾಗಿದೆ. ಈ ಸಭೆಯಲ್ಲಿ ಜೆಡಿಎಸ್ ಪರಮೋಚ್ಚ ನಾಯಕ ದೇವೇಗೌಡರು ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
