ಬೆಂಗಳೂರು:ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಂತರ ಬಿಜೆಪಿ ಸ್ಥಿತಿ ಅಗ್ನಿಕುಂಡದಂತಾಗಿದೆ. ಸಚಿವ, ಸಂಸದ-ಶಾಸಕರ ವಿರುದ್ಧವೇ ಕಾರ್ಯಕರ್ತರು ತಿರುಗಿ ಬಿದ್ದಿದ್ದು, ಮುಖ್ಯಮಂತ್ರಿ ಆದಿಯಾಗಿ ಹಿರಿಯ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ವಸ್ತುಸ್ಥಿತಿ ವಿವರಿಸಿ ಪದಾಧಿಕಾರಿಗಳ ರಾಜೀನಾಮೆ ಹಿಂತೆಗೆಸುವ ಪ್ರಯತ್ನ ನಿರೀಕ್ಷಿತ ಫಲ ನೀಡಿಲ್ಲ. ಆದರೂ ವಿವಿಧ ಹಂತದ ಹಿರಿಯ ಮುಖಂಡರು ತೆರೆಮರೆಯಲ್ಲಿ ಮನವೊಲಿಕೆ ಕಸರತ್ತು ಮುಂದುವರಿಸಿದ್ದಾರೆ.
ಒಂದೆರಡು ದಿನಗಳಲ್ಲಿ ಜನರ ಆಕ್ರೋಶ ತಣ್ಣಗಾಗಿ, ಪರಿಸ್ಥಿತಿ ತಿಳಿಯಾಗಲಿದೆ ಎಂದುಕೊಂಡಿದ್ದ ಬಿಜೆಪಿ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದೆ. ಸಾಮೂಹಿಕ ರಾಜೀನಾಮೆ ಮೂಲಕ ಆಕ್ರೋಶ ಪ್ರಕಟಿಸಿದ ಪಕ್ಷದ ಪದಾಧಿಕಾರಿಗಳು ಇದೀಗ ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಈಗಾಗಲೇ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಣಗುತ್ತಿರುವ ಸರ್ಕಾರದ ತಲೆಬಿಸಿ ಇದರಿಂದಾಗಿ ಇನ್ನಷ್ಟು ಹೆಚ್ಚಿದೆ. ಸ್ವಪಕ್ಷ, ಸಹ ಸಂಘಟನೆಗಳು ಬೀದಿಗೆ ಇಳಿದಿರುವುದು ಇರಿಮುರಿಸು ತಂದಿದೆ. ಪರಿಸ್ಥಿತಿ ತಹಬಂದಿಗೆ ತರಲು ಕಠಿಣ ಕ್ರಮವಹಿಸಿದರೆ ಸರ್ಕಾರದ ಬಗ್ಗೆ ಮತ್ತಷ್ಟು ಕೆಟ್ಟ ಸಂದೇಶ ರವಾನೆಯಾಗಲಿದೆ ಎಂಬ ಬೇಗುದಿಯಲ್ಲಿ ಸರ್ಕಾರ ತೊಳಲಾಡುತ್ತಿದೆ. ಏತನ್ಮಧ್ಯೆ ಕೆಲವು ಹಿರಿಯ ನಾಯಕರು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವುದು ಕಾರ್ಯಕರ್ತರ ಆಕ್ರೋಶ ಮತ್ತು ಸರ್ಕಾರದ ಸಂಕಟವನ್ನು ಹೆಚ್ಚಿಸುತ್ತಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಕೆಂಡಾಮಂಡಲ:ಘಟನೆ ನಡೆದು ಮೂರು ದಿನಗಳು ಕಳೆದರೂ ಆರೋಪಿಗಳ ಪತ್ತೆಯಾಗಿಲ್ಲ. ಇದು, ಬಿಜೆಪಿ ಜತೆಗೆ ಪರಿವಾರದ ಸಂಘಟನೆಗಳ ಕೋಪ ಹೆಚ್ಚಿಸಿದೆ. ಕಾರ್ಯಕರ್ತರು ಮುಟ್ಟಿಸಿದ ಬಿಸಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿ ಸಿಟ್ಟು ಹೊರ ಹಾಕಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಅವರು ಹತ್ಯೆ ಆರೋಪಿಗಳ ಪತ್ತೆಗೆ ಖಡಕ್ ಸೂಚನೆ ನೀಡಿದ್ದಾರೆ. ‘ಭರವಸೆ ಮಾತುಗಳ ಮೇಲೆ ನನಗೆ ನಂಬಿಕೆಯಿಲ್ಲ. ರಾಜ್ಯದೆಲ್ಲೆಡೆ ಪಕ್ಷ, ಸಂಘಟನೆ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಗುಪ್ತಚರ ವಿಫಲವಾಗಿದೆ ಎಂದು ಆರೋಪಿಸುತ್ತಿದ್ದು, ಮೇಲ್ನೋಟಕ್ಕೆ ಇದು ದೃಢಪಡುತ್ತಿದೆ’ ಎಂದು ಗುಡುಗಿದ್ದಾರೆ.
ಆರೋಪಿಗಳನ್ನು ವಶಕ್ಕೆ ಪಡೆಯದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಕ್ಕೆ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಗುಪ್ತಚರ ವಿಭಾಗದ ದಯಾನಂದ ಸಮಜಾಯಿಷಿ ನೀಡಲು ಮುಂದಾದಾಗ ನಿಮ್ಮ ವಿವರಣೆ ಬೇಕಾಗಿಲ್ಲ ಎಂದು ಸಿಎಂ ಬೊಮ್ಮಾಯಿ ಸಿಡಿಮಿಡಿಗೊಂಡಿದ್ದಾರೆ. ದಕ್ಷಿಣಕನ್ನಡ, ಉಡುಪಿ ಸೇರಿ ಕರಾವಳಿ ಪ್ರದೇಶದ ಪರಿಸ್ಥಿತಿ ಬಿಗಡಾಯಿಸಿದೆ. ಮಸೂದ್ ಕೊಲೆ ಪ್ರಕರಣದ ಬಳಿಕ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿಲ್ಲ. 10 ದಿನಗಳಲ್ಲಿ ಮೂರು ಕೊಲೆಗಳಾಗಿದ್ದು, ಸರ್ಕಾರ ಏನು ಮಾಡುತ್ತಿದೆ? ಎಂಬ ಜನರ ಪ್ರಶ್ನೆಗೆ ನಿರುತ್ತರರಾಗಿದ್ದೇವೆ. ಇಲಾಖೆ ಕಾರ್ಯವೈಖರಿ ಸಮಾಧಾನಕರವಾಗಿಲ್ಲ. ನಿರ್ಲಕ್ಷ್ಯವೆಂದೇ ಪರಿಗಣಿಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬಾರದೇಕೆ? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಆರಗ, ಡಿವಿಎಸ್​ಗೆ ಮುಜುಗರ:ಪಕ್ಷದ ಕಾರ್ಯಕರ್ತರು ಹಾಗೂ ಹಿಂದುಗಳಿಗೆ ರಕ್ಷಣೆ ನೀಡುವಲ್ಲಿನ ವೈಫಲ್ಯ ಖಂಡಿಸಿ, ಉತ್ತರಪ್ರದೇಶ ಮಾದರಿ ಕ್ರಮಕ್ಕೆ ಆಗ್ರಹಿಸಿ ಸ್ವಪಕ್ಷದವರೇ ಶನಿವಾರ ಬೀದಿಗೆ ಇಳಿದು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಂಸದ ಡಿ.ವಿ. ಸದಾನಂದ ಗೌಡರಿಗೆ ಮುಜುಗರ ಉಂಟು ಮಾಡಿದ್ದಾರೆ. ಆರಗ ಜ್ಞಾನೇಂದ್ರ ಅವರ ಜಯಮಹಲ್​ನ ಸರ್ಕಾರಿ ನಿವಾಸದ ಬಳಿ ಧರಣಿ ನಿರತ ಎಬಿವಿಪಿ ಕಾರ್ಯಕರ್ತರು, ಮನೆಯೊಳಗೆ ನುಗ್ಗಲು ಶನಿವಾರ ಪ್ರಯತ್ನಿಸಿದರು.
ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ತಳ್ಳಾಟ ನಡೆದಿದೆ. ಹಂತಕರ ವಿರುದ್ಧ ಉತ್ತರಪ್ರದೇಶ ಸರ್ಕಾರದ ಮಾದರಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುತ್ತಲೇ ಕಾರ್ಯಕರ್ತರು ನುಗ್ಗುವ ಪ್ರಯತ್ನ ಮುಂದುವರಿಸಿದರು. ಪೊಲೀಸರು ಲಘುಲಾಠಿ ಬೀಸಿ ಕಾರ್ಯಕರ್ತರನ್ನು ಚದುರಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಎಬಿವಿಪಿ ಕಾರ್ಯಕರ್ತರು ದೂರಿದರು. ಸಂಜಯನಗರದ ಡಾಲರ್ಸ್ ಕಾಲನಿಯಲ್ಲಿರುವ ಸಂಸದ ಡಿ.ವಿ. ಸದಾನಂದಗೌಡರ ಮನೆ ಮುಂದೆ ಬಿಜೆಪಿ ಕಾರ್ಯಕರ್ತರು ಧರಣಿ ಹೂಡಲು ಮುಂದಾದರು. ಮನೆಯಿಂದ ಹೊರಬಂದ ಸದಾನಂದಗೌಡರು, ನಿಮ್ಮ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಈ ಧರಣಿಯನ್ನೇ ಶ್ರದ್ಧಾಂಜಲಿಯನ್ನಾಗಿ ಪರಿವರ್ತಿಸೋಣವೆಂದು ಒಪ್ಪಿಸಿ, ಮನವಿ ಸ್ವೀಕರಿಸಿದರು. ಪ್ರವೀಣ್ ಹತ್ಯೆ ಆರೋಪಿಗಳ ಬಂಧನ, ಈಗಾಗಲೇ ಬಂಧಿಸಿದವರ ವಿರುದ್ಧ ಉತ್ತರಪ್ರದೇಶ ಮಾದರಿ ಕ್ರಮಕೈಗೊಳ್ಳಬೇಕು ಎಂದು ಪಕ್ಷದ ಹೆಬ್ಬಾಳ ಮಂಡಲ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ಇನ್ನಿತರರು ಮನವಿಪತ್ರ ಸಲ್ಲಿಸಿದರು. ಹೆಬ್ಬಾಳ ಮಂಡಲ ಅಧ್ಯಕ್ಷರನ್ನು ಅವಧಿಗೆ ಮುನ್ನವೇ ಕಟ್ಟಾ ಸುಬ್ರಮಣ್ಯನಾಯ್ಡು ಬದಲಿಸಿದ್ದಾರೆ ಎಂದು ದೂರಿ ಧರಣಿ ನಡೆಸಿದರು. ಈ ಸಮಸ್ಯೆ ಬಗ್ಗೆ ರ್ಚಚಿಸಿ ಬಗೆಹರಿಸುವೆ ಎಂದು ಡಿವಿಎಸ್ ಭರವಸೆ ನೀಡಿದರು.
ಶಾಸಕರಿಗೆ ಭಯ:ಕರಾವಳಿ ಭಾಗ ಕಮಲ ಪಡೆಯ ಭದ್ರಕೋಟೆ ಎಂದು ಬೀಗುತ್ತಿದ್ದ ಶಾಸಕರಿಗೆ ಅವ್ಯಕ್ತ ಭಯ ಆವರಿಸಿದ್ದು, ಕ್ಷೇತ್ರಕ್ಕೆ ಕಾಲಿಡಲು ಹಿಂಜರಿಯುವ ಪರಿಸ್ಥಿತಿ ಎದುರಾಗಿದೆ. ಹರ್ಷ ಹತ್ಯೆ ಯಾದಾಗಲೇ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. ಈ ನೋವು ಮರೆಯಾಗುವ ಮುನ್ನ ಪ್ರವೀಣ್ ಹತ್ಯೆಯಾಗಿ ರುವುದು ಪಕ್ಷದ, ಸಂಘಟನೆಗಳ ಕಾರ್ಯಕರ್ತರನ್ನು ಕೆರಳಿಸಿದೆ. ಮೃತನ ಮನೆಗೆ ಭೇಟಿಯಿತ್ತಿದ್ದ ಪಕ್ಷದ ರಾಜ್ಯಾಧ್ಯಕ್ಷ, ಸಚಿವರ ವಿರುದ್ಧ ಕಾರ್ಯಕರ್ತರು ರೊಚ್ಚಿಗೆದ್ದ ರೀತಿ, ವ್ಯಕ್ತಪಡಿಸಿದ ಆಕ್ರೋಶ ಬಿಜೆಪಿ ಬಾಹುಳ್ಯದ ಕ್ಷೇತ್ರಗಳಲ್ಲಿ ಮಡುಗಟ್ಟಿದೆ.
ನಂಜನಗೂಡು ಶಾಸಕ ಟೀಕೆ:ಪ್ರವೀಣ್ ಹತ್ಯೆ ದಿನ ನಮ್ಮದೇ ಸರ್ಕಾರವಿದೆ ಎಂದು ಹೇಳಲು ನಾಚಿಕೆಯಾಗುತ್ತದೆ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಖಾರವಾದ ಟೀಕೆ ಮಾಡಿ, ಸಿಎಂ ಬೊಮ್ಮಾಯಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ನಂಜನಗೂಡು ಶಾಸಕ ಬಿ. ಹರ್ಷವರ್ಧನ್ ಅವರು ಈ ಸರ್ಕಾರ ಇದ್ದರೆಷ್ಟು ? ಬಿಟ್ಟರೆಷ್ಟು ಎಂದು ಬಹಿರಂಗವಾಗಿ ಟೀಕಾ ಪ್ರಹಾರ ಮಾಡಿದ್ದಾರೆ. ಮೈಸೂರಿನಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು, ಕಾರ್ಯಕರ್ತರ ಶ್ರಮ ಹಾಗೂ ಬೆವರಿನಿಂದ ಪಕ್ಷ ಅಧಿಕಾರಕ್ಕೆ ಬಂದಿದ್ದು, ರಕ್ತ ಹರಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬ ನೋವು ಹೊರಹಾಕಿದ್ದಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜೀನಾಮೆ ಕೊಟ್ಟ ತಕ್ಷಣ ಪಕ್ಷವೇನೂ ಮುಳುಗಿ ಹೋಗು ವುದಿಲ್ಲ. ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಪ್ರಚಾರದ ಆಸೆಗೆ ಹಾಗೆ ಮಾಡಿದ್ದಾರೆ. ಇದು 11 ಕೋಟಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದೆ.
|ಜಿ.ಎಂ. ಸಿದ್ದೇಶ್ವರದಾವಣಗೆರೆ ಸಂಸದ
ಇಬ್ಬರ ಅಮಾನತು:ಎಬಿವಿಪಿ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್, ಕರ್ತವ್ಯ ಲೋಪ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜೆ.ಸಿ.ನಗರ ಠಾಣೆ ಪಿಎಸ್​ಐ ರಾಜಸಾಭ್ ಮತ್ತು ಹೆಡ್ ಕಾನ್​ಸ್ಟೆಬಲ್ ಶ್ರೀನಿವಾಸಮೂರ್ತಿ ಅಮಾನತುಗೊಂಡವರು. ಇವರು ಪ್ರತಿಭಟನೆ ಮಾಹಿತಿ ಕಲೆ ಹಾಕುವಲ್ಲಿ ವಿಫಲರಾದರು ಎಂಬುದು ಪ್ರಮುಖ ಆರೋಪವಾಗಿದೆ.
ಸಚಿವರು, ಶಾಸಕರ ಮನೆಗೆ ಭದ್ರತೆ:ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಮಾಹಿತಿ ಪಡೆದ ಸಿಎಂ, ಎಲ್ಲ ಸಚಿವರು, ಸಂಸದ-ಶಾಸಕರ ಮನೆಗೆ ಭದ್ರತೆ ಬಿಗಿಗೊಳಿಸಲು ಸೂಚನೆ ನೀಡಿದ್ದಾರೆ. ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಶಿವಮೊಗ್ಗ ಸೇರಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ನಿಗಾವಹಿಸಬೇಕು. ಸಮಾಜ ಘಾತುಕ ಶಕ್ತಿಗಳು ಪರಿಸ್ಥಿತಿ ದುರ್ಬಳಕೆ ಮಾಡಿಕೊಳ್ಳದಂತೆ ನೋಡಿಕೊಳ್ಳಲು ಬೊಮ್ಮಾಯಿ ತಾಕೀತು ಮಾಡಿದ್ದಾರೆ.
ಬುಲೆಟ್​​ನ ಹಿಂದೊಂದು ನಂಬರ್, ಮುಂದೊಂದು ನಂಬರ್; 29 ಸಾವಿರ ರೂ. ದಂಡ, ಬೈಕ್ ಸವಾರ ಅಂದರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − four =
Remember me
