ಬೆಂಗಳೂರು:ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಕಿತ್ತಾಟವನ್ನೇ ಲಾಭ ಮಾಡಿಕೊಂಡ ಆಡಳಿತಾರೂಢ ಬಿಜೆಪಿ ಕೊನೆಗೂ ‘ಭೂ’ ವಿಜಯ ಸಾಧಿಸಿ ನಿಟ್ಟುಸಿರು ಬಿಟ್ಟಿದೆ. ಮಹತ್ವದ ಭೂಸುಧಾರಣೆ ತಿದ್ದುಪಡಿ ವಿಧೇಯಕ ಜೆಡಿಎಸ್ ಬೆಂಬಲದ ಬಹುಮತದೊಂದಿಗೆ ಮಂಗಳವಾರ ವಿಧಾನ ಪರಿಷತ್​ನಲ್ಲಿ ಅಂಗೀಕಾರ ವಾಯಿತು. ಇನ್ನು ರಾಜ್ಯಪಾಲರ ಅನುಮೋದನೆ ಬಳಿಕ ಮಸೂದೆ ಜಾರಿಗೆ ಬರಲಿದೆ.
ಸುದೀರ್ಘ ಚರ್ಚೆಗೆ ಕಂದಾಯ ಸಚಿವ ಆರ್.ಅಶೋಕ್ ಉತ್ತರಿಸಿದ ಬಳಿಕ ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸುವುದಕ್ಕೆ ಸದನದ ಒಪ್ಪಿಗೆ ಪಡೆಯಲು ಮುಂದಾದಾಗ ಪ್ರತಿಪಕ್ಷ ಕಾಂಗ್ರೆಸ್ ಪ್ರಬಲವಾಗಿ ವಿರೋಧಿಸಿ ಮತಕ್ಕೆ ಹಾಕಲು ಪಟ್ಟುಹಿಡಿಯಿತು. ಪ್ರತಿಪಕ್ಷದ ಮನವಿಗೆ ಓಗೊಟ್ಟ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಮತ ವಿಭಜನೆಗೆ ಅವಕಾಶ ಮಾಡಿಕೊಟ್ಟರು. ಮತಗಳ ವಿಭಜನೆಯ ನಂತರ ಮಸೂದೆಯ ಪರವಾಗಿ 37 ಹಾಗೂ ವಿರುದ್ಧವಾಗಿ 21 ಮತಗಳು ಚಲಾವಣೆಯಾಗಿದ್ದು, ವಿಧೇಯಕ ಅಂಗೀಕಾರವಾಗಿದೆ ಎಂದು ಸಭಾಪತಿ ಪ್ರಕಟಿಸಿದ ಬಳಿಕ ಆಡಳಿತ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಮತಗಳ ವಿಭಜನೆ ಕಾಲಕ್ಕೆ ವಿಧೇಯಕದ ಪರವಾಗಿ ಆಡಳಿತ ಪಕ್ಷದ ಸಾಲಿನಿಂದ ಸದಸ್ಯರ ಮತಗಳ ಎಣಿಕೆ ಮುಗಿದು, ಪ್ರತಿಪಕ್ಷಗಳ ಸಾಲಿನತ್ತ ಸಾಗಿತು. ಈ ವೇಳೆ ಸದನದಲ್ಲಿ ಹಾಜರಿದ್ದ ಜೆಡಿಎಸ್​ನ 9 ಸದಸ್ಯರ ಪೈಕಿ ಮರಿತಿಬ್ಬೇಗೌಡ ಹೊರತುಪಡಿಸಿ ಉಳಿದವರು ಎದ್ದು ನಿಂತು ಬೆಂಬಲಿಸುತ್ತಿದ್ದಂತೆಯೇ ಸಚಿವರು, ಆಡಳಿತಾರೂಢ ಪಕ್ಷದ ಸದಸ್ಯರು ಮೇಜುಕುಟ್ಟಿ ಹರ್ಷ ವ್ಯಕ್ತಪಡಿಸಿ, ಬೆಂಬಲಿಸಿದವರಿಗೆ ಕುಳಿತಲ್ಲಿಯೇ ಕೃತಜ್ಞತೆ ಸಲ್ಲಿಸಿದರು.
ದೇವರಾಜ ಅರಸು ಕಾಲದಲ್ಲಿ ಜಾರಿಗೊಳಿಸಿದ ಉಳುವವನೆ ಭೂ ಒಡೆಯ ಕಾಯ್ದೆಯ ಯಾವುದೇ ಅಂಶವನ್ನು ಬದಲಿಸಿಲ್ಲ. ಆದರೆ ರೈತರಿಗೆ ಅನಗತ್ಯ ಕಿರುಕುಳ, ಅಧಿಕಾರ ದುರ್ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದ ಸೆಕ್ಷನ್ 79ಎ ಮತ್ತು ಬಿ ರದ್ದುಪಡಿಸಲು ತಿದ್ದುಪಡಿ ತರಲಾಗಿದೆ. ಕಳೆದ 45 ವರ್ಷಗಳಲ್ಲಿ ಈ ಕಲಂಗಳಡಿ 1.76 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಶೇ.1ರಷ್ಟು ಭೂಮಿಯನ್ನೂ ಸರ್ಕಾರಕ್ಕೆ ಮರುವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು. ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ, ಯುವ ಸಮೂಹವನ್ನು ಕೃಷಿಯತ್ತ ಆಕರ್ಷಿಸುವುದು, ಆಧುನಿಕ ತಂತ್ರಜ್ಞಾನ ಬಳಕೆ, ಮೌಲ್ಯವರ್ಧನೆ, ರೈತರ ಆದಾಯ ಹೆಚ್ಚಳ ಹಾಗೂ ಕೃಷಿ ಆಧಾರಿತ ಉದ್ಯಮಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿ ಉದ್ಯೋಗಾವಕಾಶಗಳ ಸೃಷ್ಟಿ ಇತ್ಯಾದಿ ಅನುಕೂಲತೆಗಳು ತಿದ್ದುಪಡಿ ಮಸೂದೆಯ ಮುಖ್ಯ ಉದ್ದೇಶವಾಗಿದೆ ಎಂದು ಸಮರ್ಥಿಸಿಕೊಂಡರು.
ಕಾಲಕಾಲಕ್ಕೆ ಕಾಯ್ದೆಯನ್ನು ಪರಿಷ್ಕರಿಸಲಾಗಿದೆ. ಕೃಷಿ ಖರೀದಿಗೆ ಇದ್ದ ಆದಾಯದ ಮಿತಿ 12,000 ರೂ.ಗಳಿಂದ 25 ಲಕ್ಷ ರೂ.ಗೇರಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಹ ಮಾರ್ಪಾಡುಗಳಾಗಿವೆ. ಇದೀಗ ಮಂಡಿಸಿದ ವಿಧೇಯಕದಲ್ಲಿ ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಗೆ ಸಮ್ಮತಿಸಿದ್ದರೂ ಎಸ್ಸಿ-ಎಸ್ಟಿ, ಅಣೆಕಟ್ಟೆ ಅಚ್ಚುಕಟ್ಟು ಪ್ರದೇಶ ಹಾಗೂ ನದಿಪಾತ್ರದ ನೀರಾವರಿ ಜಮೀನು ಖರೀದಿಸುವಂತಿಲ್ಲ. ಹಾಗೆಯೇ 5 ಸದಸ್ಯರುಳ್ಳ ಒಂದು ಕುಟುಂಬಕ್ಕೆ ಅತ್ಯುತ್ತಮ ಜಮೀನು ಖರೀದಿ ಮಿತಿ 58 ಎಕರೆ, ಒಣಭೂಮಿ 216 ಎಕರೆ ಮಿತಿಯನ್ನು ಉಳಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ 190.50 ಲಕ್ಷ ಹೆಕ್ಟೇರ್ ಭೂಮಿಯಿದೆ. ಈ ಪೈಕಿ 30.73 ಲಕ್ಷ ಹೆಕ್ಟೇರ್ ಅರಣ್ಯ, 20.07 ಲಕ್ಷ ಹೆಕ್ಟೇರ್ ಭೂಮಿ ಬೀಳುಬಿದ್ದಿದೆ. 11.79 ಲಕ್ಷ ಕೃಷಿ ಯೋಗ್ಯ ಜಮೀನು ಕಳೆದ 10 ವರ್ಷಗಳಿಂದ ಬೀಳುಬಿದ್ದಿದ್ದು, ಅದನ್ನೂ ಬಳಕೆ ಮಾಡುವುದಕ್ಕೆ ತಿದ್ದುಪಡಿ ಮಸೂದೆ ನೆರವಾಗುತ್ತದೆ ಎಂದು ಆರ್.ಅಶೋಕ್ ತಿಳಿಸಿದರು.
ಸಚಿವ ಜಗದೀಶ ಶೆಟ್ಟರ್ ಮಾತನಾಡಿ ಭೂ ಖರೀದಿಗೆ ಅರಸು ವಿಧಿಸಿದ್ದ ಮಿತಿಯ ಮೂಲ ಉದ್ದೇಶ ಈಡೇರಿದ್ದು, 6 ಲಕ್ಷ ರೈತರಿಗೆ ಲಾಭವಾಗಿದೆ. ಅಲ್ಲದೆ, ಉದ್ಯಮಕ್ಕೆ ಈವರೆಗೆ ರಾಜ್ಯದಲ್ಲಿ 1.60 ಲಕ್ಷ ಎಕರೆ (ಒಟ್ಟು ಕೃಷಿ ಭೂಮಿಯ ಶೇ.0.87) ಮಾತ್ರ ಬಳಕೆಯಾಗಿದೆ ಎಂದು ಸಮಜಾಯಿಷಿ ನೀಡಿದರು. ವಿಧೇಯಕದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕಾಂಗ್ರೆಸ್​ನ ಬಿ.ಕೆ.ಹರಿಪ್ರಸಾದ್, ಆರ್.ಬಿ.ತಿಮ್ಮಾಪುರೆ, ಬಸವರಾಜ ಪಾಟೀಲ್ ಇಟಗಿ, ಪಿ.ಆರ್.ರಮೇಶ್, ಜೆಡಿಎಸ್​ನ ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ, ಬಿಜೆಪಿಯ ಎಂ.ಟಿ.ಬಿ.ನಾಗರಾಜ್ ಪಾಲ್ಗೊಂಡಿದ್ದರು.
ಬಿಜೆಪಿಗೆ ಬೆಂಬಲಿಸಿದೆವೆಂಬ ಆಪಾದನೆಯಿಂದ ಪಾರಾಗಲು ಜೆಡಿಎಸ್​ನ ಬಸವರಾಜ ಹೊರಟ್ಟಿ, ಶ್ರೀಕಂಠೇಗೌಡ, ಕಾಂತರಾಜ್ ಅವರು ಮತ ವಿಭಜನೆ ವೇಳೆ ಸದನದಿಂದ ಹೊರಗುಳಿದ ಪ್ರಸಂಗವೂ ನಡೆಯಿತು. ಇದರಿಂದಾಗಿ ವಿಧೇಯಕಕ್ಕೆ ಬೆಂಬಲಿಸುವ ವಿಚಾರದಲ್ಲಿ ಜೆಡಿಎಸ್ ಒಡಕು ಬಯಲಾಯಿತು. ಜೆಡಿಎಸ್​ನ ಮತ್ತೊಬ್ಬ ಸದಸ್ಯ ಮನೋಹರ್ ಗೈರಾಗಿದ್ದರೆ, ಮತ ವಿಭಜನೆ ವೇಳೆ ಹಾಜರಿದ್ದ ಮರಿತಿಬ್ಬೇಗೌಡ ಮಸೂದೆಯನ್ನು ವಿರೋಧಿಸಿದರು. ವಿಧೇಯಕದ ಪರವಾಗಿ ಎಸ್.ಎಲ್.ಭೋಜೇಗೌಡ, ಎಚ್.ಎಂ.ರಮೇಶ್​ಗೌಡ, ಕೆ.ಎ.ತಿಪ್ಪೇಸ್ವಾಮಿ ಸೇರಿದಂತೆ 8 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
ಬಿಜೆಪಿಯ 31 ಸದಸ್ಯರ ಪೈಕಿ 29 ಸದಸ್ಯರು ಹಾಜರಿದ್ದರೆ, ಸಿ.ಪಿ.ಯೋಗೇಶ್ವರ್ ಹಾಗೂ ಸುನೀಲ್ ವಲ್ಯಾಪುರೆ ಗೈರಾಗಿದ್ದರು. ಕಾಂಗ್ರೆಸ್​ನ 28 ಸದಸ್ಯರ ಪೈಕಿ 22 ಸದಸ್ಯರು ಹಾಜರಿದ್ದರು. ಕೆ.ಸಿ.ಕೊಂಡಯ್ಯ, ಸಿ.ಎಂ.ಇಬ್ರಾಹಿಂ, ಎಸ್.ರವಿ, ರಘು ಆಚಾರ್, ವಿಜಯಸಿಂಗ್, ಸುನೀಲ್ ಪಾಟೀಲ್ ಮತ್ತು ಪಕ್ಷೇತರ ಸದಸ್ಯ ವಿವೇಕರಾವ್ ಪಾಟೀಲ್ ಗೈರುಹಾಜರಾಗಿದ್ದರು.
ಭೂ ಸುಧಾರಣೆ ತಿದ್ದುಪಡಿ ಮಸೂದೆ ಪರಿಷತ್​ನಲ್ಲಿ ‘ಮತ’ ಪರೀಕ್ಷೆಗೆ ಒಳಗಾದ ವೇಳೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್​ನ ತಂತ್ರ- ಪ್ರತಿತಂತ್ರಗಳ ಹೈಡ್ರಾಮಾಕ್ಕೆ ಕಲಾಪ ಸಾಕ್ಷಿಯಾಯಿತು.ಜೆಡಿಎಸ್ ಮತ್ತು ಕಾಂಗ್ರೆಸ್ ಮುಂಚೂಣಿ ನಾಯಕರ ಮಾತಿನ ಸಂಘರ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಿಜೆಪಿ ಪರವಾದ ಮೃದು ಧೋರಣೆಯನ್ನು ವರವಾಗಿಸಿಕೊಂಡ ಬಿಜೆಪಿ ಗೆದ್ದುಬೀಗಿತು. ರೈತ ವಿರೋಧಿ ಮಸೂದೆ ವಿರೋಧಿ ಸಲೆಂದು ಮತ ವಿಭಜನೆಗೆ ಕೇಳಿದಾಗ ಜೆಡಿಎಸ್ ಸರ್ಕಾರ ಬೆಂಬಲಿಸಿತೆಂದು ಕಾಂಗ್ರೆಸ್ ಕಿಡಿಕಾರಿತು. ಅದೇ ಕಾಲಕ್ಕೆ ಜೆಡಿಎಸ್​ನ ನಿಜಬಣ್ಣವೂ ಬಯಲು ಮಾಡಲಾಯಿತು’ ಎಂದು ಕಾಂಗ್ರೆಸ್ ಸದಸ್ಯರು ತಮ್ಮ ನಿಲುವು ಸಮರ್ಥಿಸಿಕೊಂಡರು.
ರೈತರ ಪರ ನಿಲುವನ್ನು ಜೆಡಿಎಸ್ ಎಂದಿಗೂ ಬಿಟ್ಟುಕೊಟ್ಟಿಲ್ಲ. ತಿದ್ದುಪಡಿ ವಿಧೇಯಕದಲ್ಲಿ ರೈತರಿಗೆ ಅನೇಕ ಅನುಕೂಲಕರ ಅಂಶಗಳಿರುವ ಕಾರಣಕ್ಕೆ ಬೆಂಬಲಿಸಿದ್ದು, ಕಾಂಗ್ರೆಸ್ ಜತೆಗಿನ ವೈಮನಸ್ಸಿನಿಂದಲ್ಲವೆಂದು ಜೆಡಿಎಸ್ ಸದಸ್ಯರು ಸ್ಪಷ್ಟಪಡಿಸಿದರು. ಭೂಸುಧಾರಣೆ ತಿದ್ದುಪಡಿಯನ್ನು ಜೆಡಿಎಸ್ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಹಿಂದೆ ವಿರೋಧಿಸಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದೇ ಜೆಡಿಎಸ್ ಸದಸ್ಯರು ಹೇಳುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + twenty =
Remember me
