ಶಿವಾನಂದ ತಗಡೂರು,ಬೆಂಗಳೂರು:ವಿಧಾನಸಭೆ ಚುನಾವಣೆ ನಡೆದ ಮೂರು ತಿಂಗಳು ತುಂಬುತ್ತಿದ್ದರೂ, ಬಿಜೆಪಿ ಮನೆಯೊಳಗಿನ ಆಂತರಿಕ ಸಂಘರ್ಷದ ವಾತಾವರಣ ಸುಧಾರಿಸಿಲ್ಲ. ಪಕ್ಷದೊಳಗಿನ ಬಣಗಳ ಒಣ ರಾಜಕಾರಣದಲ್ಲಿ ಕಾರ್ಯಕರ್ತರುಗಳು ಹೈರಾಣಾಗಿ ಹೋಗಿದ್ದಾರೆ.ಜೋಷ್‌ನಲ್ಲಿ ಓಡಾಡುತ್ತಿದ್ದ ಬಿಜೆಪಿ ಶಾಸಕರು, ಮಾಜಿ ಸಚಿವರು ಮತ್ತು ನಾಯಕರ ಮೊಗದಲ್ಲಿಯೂ ಮಂಕು ಕವಿದಿದೆ. ಸೋಶಿಯಲ್ ಮೀಡಿಯಾದ ಟ್ರೋಲ್‌ಗಳಿಗೆ ಉತ್ತರ ನೀಡಲಾಗದೆ ರಾಜ್ಯ ಬಿಜೆಪಿ ನಾಯಕರು ತಡಬಡಾಯಿಸಿ ಹೋಗಿದ್ದಾರೆ. ದಿನ ನಿತ್ಯ ಒಂದಿಲ್ಲೊಂದು ರೀತಿ ಇರುಸು ಮುರುಸು ಅನುಭವಿಸುತ್ತಿದ್ದಾರೆ.
ಗಾಳಿ ಸುದ್ದಿಯ ಗಿರಕಿವಿಧಾನಸಭೆ ಚುನಾವಣೆಗೂ ಮೊದಲೇ ಅಧ್ಯಕ್ಷರು ಬದಲಾಗಲಿದ್ದಾರೆ ಎಂದು ಬಿಜೆಪಿ ವಲಯದಲ್ಲಿ ದಟ್ಟ ಸುದ್ದಿ ಇದ್ದರೂ ಅದು ನಿಜವಾಗಲಿಲ್ಲ. ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬೆನ್ನಲ್ಲಿಯೇ ನೈತಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ ಎಂದು ಪ್ರಕಟಿಸಿದವರೇ ಉಲ್ಟಾ ಹೊಡೆದು ಅದೇ ಸ್ಥಾನದಲ್ಲಿ ಮುಂದುವರಿದರು. ಇನ್ನೇನು ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ದೆಹಲಿಯಿಂದ ಸುದ್ದಿಯನ್ನು ಹರಿಯಬಿಡಲಾಗುತ್ತಿದೆ. ಆದರೆ, ಬೆಂಗಳೂರಿಗೆ ಬರುವಷ್ಟರಲ್ಲಿ ಆ ಸುದ್ದಿಗಳೆಲ್ಲ ಗಾಳಿಯಲ್ಲಿಯೇ ತೇಲಿ ಹೋಗುತ್ತಿವೆ. ನೀವೆ ಅಧ್ಯಕ್ಷರು ಎಂದು ಒಬ್ಬೊಬ್ಬರನ್ನೆ ದೆಹಲಿಗೆ ಕರೆಸಿಕೊಂಡು ಮಾತನಾಡಿ ಮೂಗಿಗೆ ತುಪ್ಪ ಹಚ್ಚಲಾಗುತ್ತಿದೆ. ಅದೂ ಕೂಡ ಇನ್ನೂ ದಿಟವಾದ ಸುದ್ದಿ ಆಗಲೇ ಇಲ್ಲ. ಅಧ್ಯಕ್ಷ ಸ್ಥಾನದ ಮೇಲೆ ಆಸೆ ಇಟ್ಟುಕೊಂಡಿದ್ದ ಆಕಾಂಕ್ಷಿಗಳ ಎದೆಬಡಿತ ದಿನವೂ ಹೆಚ್ಚುತ್ತಿದೆಯೇ ಹೊರತು ಬೇರೇನೂ ಆಗಲಿಲ್ಲ.ಹಾಗೆಂದ ಮಾತ್ರಕ್ಕೆ ಬಿಜೆಪಿಯಲ್ಲಿ ಅಧ್ಯಕ್ಷ ಹುದ್ದೆ ನಿಭಾಯಿಸುವವರು ಇಲ್ಲವೇನಿಂದಿಲ್ಲ. ಆದರೆ, ಆ ಆಕಾಂಕ್ಷಿತ ನಾಯಕರಲ್ಲಿರುವ ಉತ್ಸಾಹವನ್ನು ದೆಹಲಿ ನಾಯಕರೇ ಕುಂದಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎನ್ನುವ ಟೀಕೆ ಟಿಪ್ಪಣಿಗಳು ಆ ಪಕ್ಷದೊಳಗೆ ಮಡುಗಟ್ಟಿವೆ.
ದೆಹಲಿಗೆ ಕರೆಯದ ಹೈಕಮಾಂಡ್ಮುಖ್ಯಮಂತ್ರಿ ಗದ್ದುಗೆಯಲ್ಲಿ ಕುಳಿತು ರಾಜ್ಯವನ್ನು ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಮುನ್ನೆಡೆಸಿದ ಬಸವರಾಜ ಬೊಮ್ಮಾಯಿ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಯಲಿಲ್ಲ. ರಾಜ್ಯದ ಆಡಳಿತ ಚುಕ್ಕಾಣಿಯನ್ನೆ ನಿಮ್ಮ ಕೈಗೆ ಕೊಟ್ಟು ಮುನ್ನೆಡೆಸುವ ಜವಬ್ದಾರಿ ನೀಡಿದರೂ ಪಕ್ಷವನ್ನು ಗೆಲುವಿನ ರೇಖೆ ದಾಟಿಸುವುದು ಇರಲಿ, ನೂರನ್ನು ದಾಟಿಸಲಿಲ್ಲ ಎನ್ನುವ ಹೈಕಮಾಂಡ್‌ನ ಸಿಟ್ಟಿಗೆ ಬೊಮ್ಮಾಯಿ ಅವರು ಗಪ್ ಚುಪ್ ಆಗಿದ್ದಾರೆ. ದೆಹಲಿಯಲ್ಲಿ ಪ್ರಧಾನಿಯಿಂದ ಹಿಡಿದು ಪಕ್ಷದ ಅಧ್ಯಕ್ಷರ ತನಕ ಎಲ್ಲ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದ ಬೊಮ್ಮಾಯಿ ಅವರು ಮೂರ‌್ನಾಲ್ಕು ಬಾರಿ ಪ್ರಯತ್ನ ನಡೆಸಿದರೂ ಅದಕ್ಕೂ ದೆಹಲಿ ನಾಯಕರು ಗ್ರೀನ್ ಸಿಗ್ನಲ್ ನೀಡಲಿಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ದೆಹಲಿ ಯಾತ್ರೆ ಒಂದು ದಿನಕ್ಕೆ ಸೀಮಿತವಾದರೂ ಆ ಭೇಟಿಯಿಂದಲೂ ಏನೂ ಪ್ರಯೋಜನವಾಗಲಿಲ್ಲ. ಇನ್ನು ಸಂತೋಷ ವಲಯದ ಆಪ್ತರಲ್ಲಿಯೂ ಅಸಂತೋಷವೇ ಮನೆ ಮಾಡಿದ್ದು ಏನು ಮಾಡುವುದು ಎನ್ನುವುದು ಅವರಿಗೂ ತಿಳಿಯುತ್ತಿಲ್ಲ.
ವಿರೋಧ ಪಕ್ಷದ ನಾಯಕನಿಗೆ ಪಕ್ಷದಲ್ಲೇ ವಿರೋಧಸರ್ಕಾರ ರಚನೆಯಾದ ಮೇಲೆ ಇನ್ನೇನು ವಿರೋಧ ಪಕ್ಷದ ನಾಯಕನ ಆಯ್ಕೆ ಆಗಲಿದೆ ಎನ್ನುವ ಸುದ್ದಿಗೆ ಮೂರು ತಿಂಗಳು ತುಂಬುತ್ತಿದೆ. ಆದರೆ ವಿರೋಧ ಪಕ್ಷದ ನಾಯಕ ಆಯ್ಕೆ ಆಗಲೇ ಇಲ್ಲ. ಹೈಕಮಾಂಡ್ ತೇಲಿಬಿಡುವ ಹೆಸರಿಗೆ ರಾಜ್ಯದ ನಾಯಕರ ಪಾಳೇಯದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ಇದಕ್ಕೆ ಮೂಲ ಕಾರಣ ಎನ್ನುವುದು ಬಿಜೆಪಿ ಮುಖಂಡರದ್ದೆ ವಿವರಣೆ ನೀಡುತ್ತಿರುವುದು ಹೊಸ ಬೆಳವಣಿಗೆ. ಯಾವ ಬಣದ ನಾಯಕನ್ನು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಿಸುವುದು ಎನ್ನುವುದು ಇನ್ನೂ ದೆಹಲಿ ನಾಯಕರಿಗೆ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಜಾತಿ ಸಮೀಕರಣದಲ್ಲಿ ಆಯ್ಕೆ ಮಾಡಿ ಸಮಾಧಾನಗೊಳಿಸುವ ಹೈಕಮಾಂಡ್ ಪ್ರಯತ್ನಕ್ಕೂ ಒಮ್ಮತಾಭಿಪ್ರಾಯ ವ್ಯಕ್ತವಾಗಲೇ ಇಲ್ಲ. ಬದಲಿಗೆ ವಿರೋಧಕ್ಕಾಗಿಯೇ ವಿರೋಧ ಎನ್ನುವ ಬೆಳವಣಿಗೆ ಪಕ್ಷದೊಳಗೆ ಹೆಚ್ಚಿರುವುದು ಹೈಕಮಾಂಡ್‌ಗೂ ನುಂಗಲಾರದ ತುತ್ತಾಗಿದೆ.
ತಾರ್ಕಿಕ ಅಂತ್ಯಕ್ಕೆ ವಿವಾದವಿಧಾನಸಭೆಯಲ್ಲಿ ವಿರೋಧ ಪಕ್ಷದ ಸ್ಥಾನ, ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ಸ್ಥಾನ ಮತ್ತು ಬಿಜೆಪಿ ಅಧ್ಯಕ್ಷ ಹುದ್ದೆಯ ನೇಮಕಾತಿಯಲ್ಲಿ ಒಮ್ಮತಾಭಿಪ್ರಾಯ ಮೂಡದೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ಬಣಗಳನ್ನು ಸಮಾಧಾನಪಡಿಸಲು ಹೈಕಮಾಂಡ್ ಸೂತ್ರವೊಂದನ್ನು ಸಿದ್ಧಪಡಿಸಿದೆ. ಮಾಜಿ ಸಿಎಂ ಯಡಿಯೂರಪ್ಪ ಬಣದವರಿಗೆ ಒಂದು ಹುದ್ದೆ, ಸಂತೋಷ ಬಣದವರಿಗೆ ಒಂದು ಹುದ್ದೆಯನ್ನು ನೀಡಿ, ಇನ್ನೊಂದು ಹುದ್ದೆ ನೇಮಕವನ್ನು ಹೈಕಮಾಂಡೇ ಮಾಡಲಿದೆ ಎನ್ನುವ ಸರಳ ಸೂತ್ರಕ್ಕೆ ಎಲ್ಲರ ಸಹಮತ ಲಭ್ಯವಾಗಿದೆ. ಈ ಸೂತ್ರದೊಳಗೆ ಜಾತಿ ಸಮೀಕರಣವೂ ಆಗಬೇಕಾಗಿದೆ. ಹಾಗಾಗಿ ಯಾರ‌್ಯಾರಿಗೆ ಈ ಮೂರು ಹುದ್ದೆಗಳ ಅದೃಷ್ಟ ಒಲಿಯಲಿದೆ ಎನ್ನುವುದನ್ನು ಕಾದು ನೋಡಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
