ಬೆಂಗಳೂರು:ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಮಾಸಾಂತ್ಯದಲ್ಲಿಯೇ ಅಂತಿಮಗೊಳಿಸಲು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಲೋಕಸಭೆ ಚುನಾವಣೆ ಸಿದ್ಧತೆ ನಿಟ್ಟಿನಲ್ಲಿ ಸತತ 2 ದಿನ ನಡೆದ ಸಭೆಯಲ್ಲಿ ‘ಕ್ಲಸ್ಟರ್​ವಾರು ವ್ಯೂಹ’ ರಚಿಸಿ ಅದರ ಪ್ರಕಾರ ಕಾರ್ಯತಂತ್ರ ಹೆಣೆಯಲಾಗಿದೆ. ಪ್ರತಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ವಿಚಾರ ವಿನಿಮಯ ಪ್ರಕ್ರಿಯೆ ನಡೆದಿದೆ. ಜತೆಗೆ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವುದು, ಮುಖಂಡರಿಗೆ ಜವಾಬ್ದಾರಿ ಹಂಚಿಕೆ, ಸಮಾವೇಶ ಆಯೋಜನೆ ಸೇರಿದಂತೆ ವಿವಿಧ ಚಟುವಟಿಕೆಯನ್ನು ನಡೆಸಲು ನಿರ್ಧರಿಸಲಾಗಿದೆ. ಸಭೆಯು ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಸೇರಿ ಎಲ್ಲ ಹಂತದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮತ್ತು ಚುನಾವಣಾ ಹೋರಾಟಕ್ಕೆ ಪಕ್ಷದ ವೇದಿಕೆ ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗಿದೆ. ಫೆಬ್ರವರಿ ಮೊದಲ ವಾರದಲ್ಲಿಯೇ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕು ಎನ್ನುವ ಅಭಿಪ್ರಾಯಕ್ಕೆ ಸಹಮತ ವ್ಯಕ್ತವಾಗಿದೆ. ಜಿಲ್ಲಾ ಘಟಕಗಳು ಸೂಚಿಸುವ ಸರ್ವಸಮ್ಮತ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್​ಗೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ. ಯಾರಿಗೆ ಟಿಕೆಟ್ ನೀಡಿದರೂ, ತಾವೊಬ್ಬ ಕಾರ್ಯಕರ್ತ ಎಂದು ಪರಿಭಾವಿಸಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಬೇಕು ಎಂಬ ಮಾಹಿತಿಯನ್ನು ಸಭೆಯಲ್ಲಿ ಪರಿಣಾಮಕಾರಿಯಾಗಿ ರವಾನಿಸಲಾಗಿದೆ.
ಹೊಸಮುಖಗಳ ನಿರೀಕ್ಷೆ:ಕಾರ್ಯಕರ್ತರಿಗೆ ಮನ್ನಣೆ ನೀಡುವ ಪಕ್ಷ ಬಿಜೆಪಿ ಎನ್ನುವ ಮಾಹಿತಿಯನ್ನು ಲೋಕಸಭೆ ಚುನಾವಣೆ ಈ ಬಾರಿ ಸಾಬೀತುಪಡಿಸಲಿದೆ ಎಂದು ಕೇಂದ್ರ ನಾಯಕರು ಹೇಳಿದ್ದಾರೆ. ಆದ್ದರಿಂದ ಹಾಲಿ ಇದ್ದವರಿಗೆ ಟಿಕೆಟ್ ಗ್ಯಾರಂಟಿ ಎನ್ನುವ ವಿಶ್ವಾಸವಿಲ್ಲ. ಹೊಸಮುಖಗಳಿಗೆ ಆದ್ಯತೆ ಸಿಗಲಿದೆ ಎನ್ನುವ ನಿರೀಕ್ಷೆಯೇ ಹೆಚ್ಚಾಗಿದ್ದು, ಪಕ್ಷದಲ್ಲಿ ಹೊಸ ಹುರುಪು ಮೂಡುತ್ತಿದೆ ಎನ್ನುವುದು ಸಭೆಯಲ್ಲಿ ಭಾಗವಹಿಸಿದ್ದವರ ಅಭಿಮತ.
ಶೋಭಾ, ಹೆಬ್ಬಾರ್ ಗೈರು:ಚಿಕ್ಕಮಗಳೂರು ಉಡುಪಿ ಕ್ಷೇತ್ರದ ಚರ್ಚೆ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉತ್ತರ ಕನ್ನಡ ಜಿಲ್ಲೆಯ ಚರ್ಚೆ ಸಂದರ್ಭ ಶಾಸಕ ಶಿವರಾಂ ಹೆಬ್ಬಾರ್ ಗೈರು ಹಾಜರಾಗಿದ್ದರು.
ಸಭೆಯಲ್ಲಿ ವಿರೋಧ ಬೇಡ:ಸಭೆಯಲ್ಲಿ ಯಾರಿಗೂ ವಿರೋಧ ಮತ್ತು ಪರ ಎನ್ನುವುದು ಬೇಡ. ಇದು ಕೇವಲ ಅಭಿಪ್ರಾಯ ಸಂಗ್ರಹಣೆಗಾಗಿ ಸಭೆ ಅಷ್ಟೆ. ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕೇಂದ್ರದ ನಾಯಕರಿಗೆ ಸಂಕ್ಷಿಪ್ತವಾಗಿ ವರದಿ ಕಳುಹಿಸಿಕೊಡಲಾಗುವುದು. ಆದ್ದರಿಂದ ವಾದ ವಿವಾದ ಏನೂ ಬೇಡ ಎಂದು ಅಧ್ಯಕ್ಷ ವಿಜಯೇಂದ್ರ ಮೊದಲೇ ಕಡಕ್ಕಾಗಿ ಸೂಚನೆ ನೀಡಿದ್ದರಿಂದ ಹೆಚ್ಚಿನ ಗೊಂದಲಕ್ಕೆ ಆಸ್ಪದವಾಗಿಲ್ಲ. ಶಿವಮೊಗ್ಗ ಸೇರಿದಂತೆ ಇನ್ನುಳಿದ ಕ್ಷೇತ್ರಗಳ ಬಗ್ಗೆ ಯಾವುದೇ ಅಪಸ್ವರ ಸಭೆಯಲ್ಲಿ ಕೇಳಿಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಮೈತ್ರಿ ಪರಿಣಾಮ ಬಗ್ಗೆ ಚರ್ಚೆ:ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆಯಲ್ಲಿ ಸ್ಪರ್ಧೆ ಮಾಡಿದರೂ ಅವರ ಮೈತ್ರಿ ಯಶಸ್ವಿ ಗೆಲುವು ಸಾಧಿಸಲು ಆಗಲಿಲ್ಲ. ಜೆಡಿಎಸ್ ಜತೆಗೆ ನಮ್ಮ ಮೈತ್ರಿ ಯಶಸ್ವಿ ಹೆಜ್ಜೆಯಾಗಬೇಕು. ಆ ವಿಷಯದಲ್ಲಿ ಹಿಂದೆ ಎಲ್ಲೆಲ್ಲಿ ವ್ಯತ್ಯಾಸಗಳಾಗಿವೆ ಮತ್ತು ತಳಮಟ್ಟದಲ್ಲಿ ಸಮಸ್ಯೆ ಏನು ಎನ್ನುವುದನ್ನು ಪರಾಮರ್ಶೆ ಮಾಡಿ ನಾವು ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಸುಮಲತಾ ಜೊತೆ ಚರ್ಚೆ:ಮಂಡ್ಯ ಟಿಕೆಟ್ ಬಗ್ಗೆ ಗೊಂದಲವೇನಿಲ್ಲ. ಸುಮಲತಾ ಅಂಬರೀಶ್ ಭೇಟಿ ಮಾಡಿ ರ್ಚಚಿಸಿ, ತೀರ್ಮಾನ ಮಾಡ್ತೀವಿ ಎಂದರು.
ಎಲ್ಲರ ಅಭಿಪ್ರಾಯ ಆಲಿಸಲಾಗಿದೆ:ರಾಜ್ಯದ 8 ಕ್ಲಸ್ಟರ್​ಗಳಲ್ಲಿನ 28 ಲೋಕಸಭಾ ಕ್ಷೇತ್ರಗಳ ಸಂಸದರು, ಶಾಸಕರು, ಮಾಜಿ ಶಾಸಕರುಗಳು ಹಾಗೂ ಜಿಲ್ಲಾ ಮುಖಂಡರ ಅಭಿಪ್ರಾಯಗಳನ್ನು ಆಲಿಸುವ ಸಭೆ ಯಶಸ್ವಿಯಾಗಿ ಮುಗಿದಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ. ಆದರೆ, ಈಗ ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣ ಬದಲಾಗಿದೆ. ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮುಂದುವರಿದ ವಿರೋಧ:ಲೋಕಸಭಾ ಕ್ಷೇತ್ರವಾರು ಸಭೆಗಳು ನಡೆಯುವ ಸಂದರ್ಭದಲ್ಲಿ ಕೆಲ ಕ್ಷೇತ್ರಗಳ ಸಂಸದರ ಬಗ್ಗೆ ಅಸಮಾಧಾನಗಳು ಸಭೆಯಲ್ಲಿ ವ್ಯಕ್ತವಾಗಿವೆ. ಗೆದ್ದ ಮೇಲೆ ಸಂಸದರು ಕ್ಷೇತ್ರವನ್ನು ಮರೆತಿದ್ದಾರೆ. ಚುನಾವಣೆ ಹೊತ್ತಿನಲ್ಲಿ ಇತ್ತ ಬಂದಿದ್ದಾರೆ. ಕಾರ್ಯಕರ್ತರನ್ನು ಕಡೆಗಣಿಸಿ ನಡೆದುಕೊಂಡಿರುವ ಸಂಸದರಿಗೆ ಟಿಕೆಟ್ ನೀಡುವುದು ಬೇಡ ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿವೆ. ಚಿಕ್ಕಮಗಳೂರು- ಉಡುಪಿ, ಉತ್ತರ ಕನ್ನಡ, ಹಾವೇರಿ ಸೇರಿದಂತೆ ಕೆಲ ಕ್ಷೇತ್ರಗಳ ಸಂಸದರ ಬಗ್ಗೆ ಅಸಮಾಧಾನವೂ ಕೇಳಿಬಂದಿದೆ.
ಗ್ಯಾರಂಟಿ ಸಮಿತಿ ರಚನೆ ಸರಿಯಲ್ಲ:ಗ್ಯಾರಂಟಿಗಳಿಗಾಗಿ ಸಮಿತಿ ರಚಿಸಿ ಕಾರ್ಯಕರ್ತರನ್ನು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ನೇಮಿಸಲು ಹೊರಟಿರುವುದು ಸರಿಯಲ್ಲ. ಸರ್ಕಾರಿ ನೌಕರರಿಗೆ ವೇತನ ಕೊಡಲು ಹಣ ಇಲ್ಲ. ಅಂಗನವಾಡಿ ಕಾರ್ಯಕರ್ತರಯರಿಗೆ ಗೌರವ ವೇತನ ಹೆಚ್ಚಿಸಿಲ್ಲ. ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಟ್ಟಿಲ್ಲ. ಇಂಥ ಸಂದರ್ಭದಲ್ಲಿ ಜನರ ತೆರಿಗೆ ಹಣ ಪೋಲು ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 10 =
Remember me
