ಬೆಂಗಳೂರು:ಒತ್ತಡದ ಪೊಲೀಸ್​ ಕೆಲಸದ ನಡುವೆ ಫೇಲಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅಡ್ಡದಾರಿ ಹಿಡಿಯುವುದನ್ನು ತಪ್ಪಿಸಲು ವಿಶೇಷ ತರಗತಿಗಳನ್ನು ಮಾಡಿ, ಅವರ ಭವಿಷ್ಯಕ್ಕೆ ಬೆಳಕಾಗುತ್ತಿರುವ ಬೆಂಗಳೂರು ಪೊಲೀಸ್​ ಇನ್ಸ್​ಪೆಕ್ಟರ್​ ಒಬ್ಬರನ್ನು ರಾಜಾಜಿನಗರದ ಬಿಜೆಪಿ ಶಾಸಕ ಎಸ್​. ಸುರೇಶ್​ ಕುಮಾರ್​ ಅವರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಸುರೇಶ್​ ಕುಮಾರ್​ ಅವರು ತಮ್ಮ ಫೇಸ್​ಬುಕ್​ನಲ್ಲಿ ಪೇಜ್​ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ಅದರ ಸಾರಾಂಶ ಈ ಕೆಳಕಂಡಂತಿದೆ.
ಆನಂದದ ಸಂಗತಿಯೊಂದನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಿನ್ನೆ ಸಂಜೆ ಬೆಂಗಳೂರಿನ ಪೊಲೀಸ್ ಠಾಣೆಯೊಂದಕ್ಕೆ ಹೋದಾಗ ಭರವಸೆಗೆ ಕಾರಣವೊಂದು ಸಿಕ್ಕಿತು. ಹೊಸೂರು ರಸ್ತೆಯ ಬಳಿ ಇರುವ ಬಂಡೆಪಾಳ್ಯ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಎಲ್​.ವೈ. ರಾಜೇಶ್ ಅವರು ತನ್ನ ವ್ಯಾಪ್ತಿಯಲ್ಲಿ ಮಾಡುತ್ತಿರುವ ಒಂದು ಸಮಾಜಮುಖಿ ಕಾರ್ಯ ನನ್ನ ಗಮನಕ್ಕೆ ಬಂದ ನಂತರ ಆ ಠಾಣೆಗೆ ಭೇಟಿ ಕೊಡಬೇಕೆಂದೆನಿಸಿತು. ತನ್ನ ಠಾಣಾ ವ್ಯಾಪ್ತಿಯಲ್ಲಿ ಅನೇಕ ಹುಡುಗರು ಎಸ್ಸೆಸ್ಸಲ್ಸಿ ಫೇಲಾದ ನಂತರ ಅಡ್ಡ ದಾರಿ ಹಿಡಿಯುತ್ತಿದ್ದದ್ದನ್ನು ಗಮನಿಸಿದ ರಾಜೇಶ್ ಅವರಿಗೆಲ್ಲ ಸರಿಯಾದ ಮಾರ್ಗದರ್ಶನ ಮಾಡಬೇಕೆಂದು ತೀರ್ಮಾನಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲಾದ ಸುಮಾರು 70 ಮಕ್ಕಳನ್ನು ಸೇರಿಸಿ ಅವರು ಪೂರಕ ಪರೀಕ್ಷೆಗೆ ಕೂರಲು ತರಬೇತಿ ತರಗತಿಗಳನ್ನು ನಡೆಸಲು ವ್ಯವಸ್ಥೆ ಮಾಡಿದರು. ಆ ವ್ಯಾಪ್ತಿಯಲ್ಲಿಯೇ ಲಭ್ಯವಿದ್ದ ಉತ್ತಮ ಶಿಕ್ಷಕರ ನೆರವಿನಿಂದ ಆ ಮಕ್ಕಳಿಗೆಲ್ಲ ವಿಶೇಷ ಪಾಠ ದೊರಕುವಂತೆ ಮಾಡಿದರು. ಸುಮಾರು 20 ರಿಂದ 25 ದಿನ ಬೆಳಗಿನ ಸಂಜೆವರೆಗೂ ಆ ಮಕ್ಕಳಿಗೆ ಮಾರ್ಗದರ್ಶನ ಪಾಠಗಳನ್ನು ಮಾಡಿಸಿ ಅವರಿಗೆ ಅಲ್ಲೇ ಊಟದ ವ್ಯವಸ್ಥೆಯನ್ನು ಮಾಡಿಸಿ ಅವರೆಲ್ಲರೂ ಪೂರಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವಂತೆ ಮಾಡಿದರು. ಅಷ್ಟೇ ಅಲ್ಲದೆ ಅವರು ಹೇಗಿರಬೇಕೆಂದು ಪ್ರೇರಣಾದಾಯಿ ಘಟನೆಗಳ ಮೂಲಕವೂ ತಿಳುವಳಿಕೆ ಕೊಡುವ ಪ್ರಯತ್ನವನ್ನೂ ಸಹ ಮಾಡಿದರು.
ಇದನ್ನೂ ಓದಿ:ಇನ್ಮುಂದೆ ಒಂದು ಒವರ್​ನಲ್ಲಿ ಎರಡು ಬೌನ್ಸರ್, ಹೊಸ ನಿಯಮ ಪ್ರಕಟಿಸಿದ ಬಿಸಿಸಿಐ
ಆರು ವಿಷಯಗಳಲ್ಲಿಯೂ ಫೇಲ್ ಆಗಿದ್ದ ಕೆಲ ಮಕ್ಕಳು ಪೂರಕ ಪರೀಕ್ಷೆಯಲ್ಲಿ ಪಾಸ್ ಆಗಿರುವುದು ಆನಂದದ ವಿಚಾರ. ಅನೇಕ ವಿದ್ಯಾರ್ಥಿಗಳು ಈಗ ಪದವಿ ಪೂರ್ವ ತರಗತಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ನಿನ್ನೆ ಆ ಮಕ್ಕಳಿಗೆಲ್ಲ ಪಾಠ ಹೇಳಿದ ಶಿಕ್ಷಕರು, ಈ ಕಾರ್ಯದ ರೂವಾರಿ ರಾಜೇಶ್, ಕೆಲ ವಿದ್ಯಾರ್ಥಿಗಳು, ಎಲ್ಲರೊಡನೆ ಸಂವಾದ ನಡೆಸಿ ವಿವರಗಳನ್ನು ಪಡೆದೆ. ಆ ಶಿಕ್ಷಕರು ಈ ಕಾರ್ಯದ ಮೂಲಕ ತಮಗೆ ಉಂಟಾಗಿರುವ ಸಂತೃಪ್ತಿಯನ್ನು ವಿವರಿಸುವಾಗ ಅವರೆಲ್ಲರ ಮುಖಗಳಲ್ಲಿ ಆನಂದ ನೋಡಬೇಕಿತ್ತು.
ಈ ಹಿಂದೆ ಚಂದ್ರಾಲೇಔಟ್​ನಲ್ಲಿರುವ ಓರ್ವ ಪೊಲೀಸ್ ಇನ್ಸ್​ಪೆಕ್ಟರ್​ ತನ್ನ ಬಿಡುವಿನ ಸಮಯದಲ್ಲಿ ಅಲ್ಲಿನ ಸ್ಲಂ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದನ್ನು ನೋಡಿ ನಾನು ವಿವರಗಳನ್ನು ಹಂಚಿಕೊಂಡಿದ್ದೆ.
ಒಟ್ಟಾರೆ ರಾಜೇಶ್ ಮತ್ತು ಅವರ ಸಂಗಡಿಗರು ಮಾಡುತ್ತಿರುವ ಈ ಒಂದು ದೊಡ್ಡ ಕಾರ್ಯ ನಮ್ಮ ಸಮಾಜಕ್ಕೆ ಅತ್ಯಂತ ಆರೋಗ್ಯಕರ. ಸಂತಸದಿಂದ ರಾಜೇಶ್ ಅವರಿಗೆ ಗೌರವಿಸಿ ಬೆನ್ನು ತಟ್ಟಿ ಬಂದೆ. ಮತ್ತೊಂದು ವಿಚಾರ, ಇಷ್ಟೇ ಅಲ್ಲದೆ, ತನ್ನ ಠಾಣೆಗೆ ಬರುವ ಪ್ರತಿಯೊಬ್ಬರ ಅನುಭವಗಳ feedback ಪಡೆಯುವ “ದರ್ಪಣ” ಎಂಬ ಕಾರ್ಯಕ್ರಮವನ್ನು ಸಹ ರಾಜೇಶ್ ಪ್ರಾರಂಭಿಸಿದ್ದಾರೆ. ತನ್ನ ಠಾಣೆಗೆ ಬಂದಾಗ ನಾಗರಿಕರಿಗೆ ಸಿಕ್ಕ ಪೊಲೀಸರ ವರ್ತನೆ ಹೇಗಿತ್ತು? ಒಟ್ಟು ಪೊಲೀಸ್ ಠಾಣೆಯ ವಾತಾವರಣದಿಂದ ಆ ನಾಗರಿಕರಿಗೆ ಏನು ಅನಿಸಿದೆ ಎಂಬ ವಿಚಾರದಲ್ಲಿ ಸುಮಾರು ಐದಾರು ಪ್ರಶ್ನೆಗಳನ್ನು ಹೊಂದಿರುವ ಪ್ರಶ್ನಾವಳಿಯ ಮೂಲಕ ಅನುಭವವನ್ನು ತಿಳಿಯುವ ಪ್ರಯತ್ನವಿದು.
ಇದರ ಆಧಾರದ ಮೇಲೆ ಪ್ರತಿ 15 ದಿನಗಳಿಗೆ ಒಮ್ಮೆ ಉತ್ತಮ ಸಿಬ್ಬಂದಿಯನ್ನು “Star of the Fortnight” ಎಂದು ಗುರುತಿಸಿ ಆ ಸಿಬ್ಬಂದಿಯ ಫೋಟೋವನ್ನು ಸ್ಟೇಷನ್​ನಲ್ಲಿ ಹಾಕಿ ಅವರ ಬೆನ್ನು ತಟ್ಟುವ ವಿಶಿಷ್ಟ ಪ್ರಯತ್ನವನ್ನು ರಾಜೇಶ್ ಮಾಡಿದ್ದಾರೆ. ಒಟ್ಟಾರೆ ವಿಭಿನ್ನವಾಗಿರುವ ಪೊಲೀಸ್​ ಠಾಣೆ ಮತ್ತು ವಿಭಿನ್ನವಾಗಿರುವ ಪೊಲೀಸ್​ ಅಧಿಕಾರಿಯನ್ನು ಭೇಟಿ ಮಾಡಿದ ಅನುಭವ ನನ್ನದಾಗಿತ್ತು. ಹಾಗೆಯೇ ರಾಜೇಶ್ ತಾಯಿಯವರನ್ನೂ ಫೋನ್ ಮೂಲಕ ಮಾತನಾಡಿಸಿ, ನನ್ನ ಸಂತಸ ವ್ಯಕ್ತಪಡಿಸಿದೆ. ಅಂದಹಾಗೆ ರಾಜೇಶ್ ತಾಯಿಯೂ ನಿವೃತ್ತ ಶಾಲಾ ಶಿಕ್ಷಕಿ ಎಂದು ಹೇಳಿ ಸುರೇಶ್​ ಕುಮಾರ್​ ಅವರು ತಮ್ಮ ಬರವಣಿಗೆಯನ್ನು ಮುಗಿಸಿದ್ದಾರೆ.
ಅಂದಹಾಗೆ ಬಂಡೆಪಾಳ್ಯ ಸಿಪಿಐ ಎಲ್.ವೈ.ರಾಜೇಶ್ ಅವರು ತಮ್ಮ ತಂಡ, ರಾಜಲಾಂಚನ ಸಂಸ್ಥೆ ಹಾಗೂ ದರ್ಪಣ ಸಂಸ್ಥೆ ಸಹಭಾಗಿತ್ವದಲ್ಲಿ ಈ ಉತ್ತಮ ಕಾರ್ಯವನ್ನು ನಡೆಸುತ್ತಿದ್ದಾರೆ.

SSLC ಪರೀಕ್ಷೆಯಲ್ಲಿ ಫೇಲ್​ ಆದ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಉಚಿತ ಟ್ಯೂಷನ್; ಎಲ್ಲಾ ಸಬ್ಜೆಕ್ಟ್​ನಲ್ಲೂ ಅನುತ್ತೀರ್ಣನಾದ ವಿದ್ಯಾರ್ಥಿ ಪಾಸ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + eleven =
Remember me
