ಬೆಂಗಳೂರು/ಬಳ್ಳಾರಿ:ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಮೋರ್ಚಾಗಳ ಸಮಾವೇಶಗಳ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನವನ್ನು ಆಡಳಿತಾರೂಢ ಬಿಜೆಪಿ ಮುಂದುವರಿಸಿದೆ. ಗಣಿನಾಡು ಬಳ್ಳಾರಿಯಲ್ಲಿ ಭಾನುವಾರ ಆಯೋಜಿಸಿರುವ ಎಸ್​ಟಿ ನವ ಶಕ್ತಿ ಸಮಾವೇಶಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಘಟಾಘಟಿ ನಾಯಕರು ಧಾವಿಸುತ್ತಿದ್ದಾರೆ. ಸಮಾವೇಶದ ಮೂಲಕ ಚುನಾವಣಾ ಕಹಳೆ ಮೊಳಗಿಸುವ ಸಾಧ್ಯತೆಯಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ತಿಂಗಳು ಜನಸಂಕಲ್ಪ ಯಾತ್ರೆ ನಡೆಸಿದ ಬೆನ್ನಲ್ಲೇ ಮೋರ್ಚಾಗಳ ಸಮಾವೇಶಕ್ಕೆ ಬಿಜೆಪಿ ಕೈಹಾಕಿದೆ. ಅಕ್ಟೋಬರ್ 29 ರಂದು ಕಲಬುರಗಿಯಲ್ಲಿ ಒಬಿಸಿ ವಿರಾಟ್ ಸಮಾವೇಶ ಯಶಸ್ವಿಯಾಗಿ ಪೂರೈಸಿದ ಬಿಜೆಪಿ ಈಗ ಗಣಿನಾಡಿನಲ್ಲಿ ಎಸ್​ಟಿ ನವಶಕ್ತಿ ಸಮಾವೇಶ ಆಯೋಜಿಸಿದ್ದು, ವಿಶೇಷವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸುತ್ತಿರುವುದು ರಾಜ್ಯದ ಗಮನ ಸೆಳೆದಿದೆ.
ರಾಜ್ಯ ವಿಧಾನಸಭೆಯಲ್ಲಿ 15 ಎಸ್​ಟಿ ಮೀಸಲು ಕ್ಷೇತ್ರಗಳಿವೆ. ಈ ಪೈಕಿ ರಾಯಚೂರು-4, ಬಳ್ಳಾರಿ/ವಿಜಯನಗರ-5, ಯಾದಗಿರಿ ಒಂದು ಸೇರಿ 13 ಕ್ಷೇತ್ರಗಳು ಕಲ್ಯಾಣ ಕರ್ನಾಟಕದಲ್ಲಿವೆ. ಚಿತ್ರದುರ್ಗ 3, ಮೈಸೂರು ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಒಂದೊಂದು ಎಸ್​ಟಿ ಮೀಸಲು ಕ್ಷೇತ್ರಗಳಿವೆ. ಸದ್ಯ ಆರು ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಒಂದು ಹಾಗೂ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ರಾಜ್ಯ ಸರ್ಕಾರ ಎಸ್​ಟಿ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸಿದೆ. ಅದರ ಆಧಾರದ ಮೇಲೆ ಮೀಸಲು ಕ್ಷೇತ್ರಗಳ ಗೆಲುವಿಗೆ ಸಮಾವೇಶದ ಮೂಲಕ ರಣತಂತ್ರ ಹೆಣೆಯುತ್ತಿದೆ.
ಈ ಭಾಗದಲ್ಲೇ ಏಕೆ?:ಕಲ್ಯಾಣ ಕರ್ನಾಟಕ ಭಾಗದಲ್ಲೇ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯಗಳ ಸಂಖ್ಯೆ ಗರಿಷ್ಠವಾಗಿದೆ. ಸಮಾವೇಶಕ್ಕೆ ವೇದಿಕೆಯಾಗಿರುವ ಬಳ್ಳಾರಿಯ ಒಟ್ಟು ಜನಸಂಖ್ಯೆಯಲ್ಲಿ ಶೇ.18.41, ರಾಯಚೂರು ಶೇ.19.03, ಯಾದಗಿರಿ ಶೇ.12.51, ಚಿತ್ರದುರ್ಗ ಶೇ.18.23, ಬೀದರ್ ಶೇ.13.85, ಕೊಪ್ಪಳ ಶೇ.11.82 ಎಸ್​ಟಿ ಸಮುದಾಯವಿದೆ. 2011ರ ಈ ಹಿನ್ನೆಲೆಯಲ್ಲಿ ಎಸ್​ಟಿ ಸಮುದಾಯದ ಗರಿಷ್ಠ ಮತದಾರರನ್ನು ತಲುಪುವ ದೃಷ್ಟಿಯಿಂದ ಬಳ್ಳಾರಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ.
10 ಲಕ್ಷ ಜನ ಸೇರುವ ನಿರೀಕ್ಷೆ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವಲ್ಲಿ ಇತ್ತೀಚೆಗೆ ನಡೆದ ಭಾರತ್ ಜೋಡೋ ಯಾತ್ರೆ ಭಾಗವಾಗಿ ಬಳ್ಳಾರಿಯಲ್ಲೇ ನಡೆದ ಸಮಾವೇಶದಲ್ಲಿ ನಾಲ್ಕೈದು ಲಕ್ಷ ಜನ ಭಾಗವಹಿಸಿದ್ದರು. ಅದಕ್ಕೆ ಪ್ರತಿಯಾಗಿ ಸೇರಿಗೆ ಸವ್ವಾಸೇರು’ ಎಂಬಂತೆ 10 ಲಕ್ಷ ಜನರನ್ನು ಸೇರಿಸಿ ಎಸ್​ಟಿ ಮೋರ್ಚಾ ಸಮಾವೇಶಕ್ಕೆ ಬಿಜೆಪಿ ವೇದಿಕೆ ಅಣಿಗೊಳಿಸಿದೆ ಎಂಬುದು ರಾಜಕೀಯ ಲೆಕ್ಕಾಚಾರ.
ಬೃಹತ್ ವೇದಿಕೆ ಸಜ್ಜು:ಬಳ್ಳಾರಿಯ ಟಿ.ಬಿ.ಆಸ್ಪತ್ರೆ ಸಮೀಪದ 130 ಎಕರೆ ಪ್ರದೇಶದಲ್ಲಿ ಬಿಜೆಪಿ ಎಸ್​ಟಿ ನವಶಕ್ತಿ ಸಮಾವೇಶಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. 180/40 ಅಳತೆಯ ಬೃಹತ್ ವೇದಿಕೆಯ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬುಡಕಟ್ಟು ಜನಾಂಗದ ಕೇಂದ್ರ ಸಚಿವ ಅರ್ಜುನ ಮುಂಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ .ಯಡಿಯೂರಪ್ಪ, ಕೇಂದ್ರ ನಾಯಕರಾದ ಭಗವಂತ ಕೂಬ, ಶೋಭಾ ಕರಂದ್ಲಾಜೆ ಮತ್ತು ಎಸ್​ಟಿ ಸಮುದಾಯದ ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ನಿಗದಿತ ಠೇವಣಿ ಜತನದ ತಾಲೀಮು:ರಾಜ್ಯ ರಾಜಕೀಯದಲ್ಲಿ ಎರಡು ದಶಕಗಳಿಂದ ಬಳ್ಳಾರಿ ತನ್ನದೇ ವಿಶಿಷ್ಟ ಛಾಪು ಮೂಡಿಸಿದ್ದು, ಇದೀಗ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆಗೆ ಭಾನುವಾರ ಸಾಕ್ಷಿಯಾಗಲಿದೆ. ಪರಿಶಿಷ್ಟ ಪಂಗಡ ಸಮುದಾಯಗಳಿಂದ ‘ಸರ್ಕಾರಕ್ಕೆ ಋಣ ಸಂದಾಯ’ದ ಭಾಗವಾಗಿ ಪಕ್ಷದ ಎಸ್​ಟಿ ಮೋರ್ಚಾ ಸಮಾವೇಶ ಸಂಘಟಿಸಿ, ಸಮುದಾಯದ ಬಲ ಪ್ರದರ್ಶಿಸಲು ಮುಂದಾಗಿದೆ.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಮೀಸಲು ಪ್ರಮಾಣ ಏರಿಕೆಯಾದ ಬೆನ್ನಲ್ಲೇ ಎಸ್​ಟಿ ಸಮುದಾಯ ಸಮಾವೇಶ ಆಯೋಜಿಸಿದ್ದು, ಸಾಧನೆ ಬಿಂಬಿಸಿ ‘ನವಶಕ್ತಿ’ ತುಂಬಿಕೊಳ್ಳಲು ಆಡಳಿತ ಬಿಜೆಪಿ ಹವಣಿಸಿದೆ. ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆ, ಮೀಸಲು ನಿಗದಿ ನಂತರ ರಾಜ್ಯ ರಾಜಕೀಯ ನಕಾಶೆ ಬದಲಾಗಿದ್ದು, ಜಾತಿ ಸಮೀಕರಣವು ಮರು ವಿನ್ಯಾಸಗೊಂಡಿದೆ. ಬದಲಾದ ಕೆಮಿಸ್ಟ್ರಿ ಪ್ರಕಾರ 2008ರ ಚುನಾವಣೆಯಿಂದ ಎಸ್​ಟಿ ಸಮುದಾಯವು ಬಹುತೇಕ ಬಿಜೆಪಿ ಪಾಲಿನ ‘ನಿಗದಿತ ಠೇವಣಿ’ಯಾಗಿ ರೂಪುಗೊಂಡಿದ್ದು, ಈ ಠೇವಣಿಯನ್ನು ಇನ್ನಷ್ಟು ಜತನ ಮಾಡಿಕೊಳ್ಳುವ ಕಾರ್ಯತಂತ್ರ ಹೆಣೆದಿದೆ.
ಹೊಳಪು-ಹುರುಪು:ಪಕ್ಷದ ಹಿರಿಯ ‘ನಾಯಕ’ರಲ್ಲೊಬ್ಬರು, ಸಾರಿಗೆ ಸಚಿವರ ತವರು ಜಿಲ್ಲೆಯಲ್ಲಿ ಸಮಾವೇಶ ಏರ್ಪಡಿಸಿದ್ದು, ‘ನಾಯಕ’ತ್ವಕ್ಕೆ ಹೊಸ ಹೊಳಪು ನೀಡುವ ಪ್ರಯತ್ನವೆಂದು ವಿಶ್ಲೇಷಿಸಲಾಗುತ್ತಿದೆ. ಸಚಿವ ಪದವಿ ಸಿಗದ ಕಾರಣ ಮುನಿಸಿಕೊಂಡ ರಮೇಶ್ ಜಾರಕಿಹೊಳಿ ಮತ್ತಿಬ್ಬರ ಸಹೋದರರ ಸಂಭಾವ್ಯ ಬಂಡಾಯ ಶಮನದ ವ್ಯೂಹಾತ್ಮಕ ನಡೆಯಿದು ಎನ್ನಲಾಗುತ್ತಿದೆ.
22ರಂದು ಯುವ ಮೋರ್ಚಾ ವಿಶೇಷ ಕಾರ್ಯಕಾರಿಣಿ:ಬಿಜೆಪಿ ಯುವ ಮೋರ್ಚಾ ರಾಜ್ಯ ವಿಶೇಷ ಕಾರ್ಯಕಾರಿಣಿ ನ.22ರ ಬೆಳಗ್ಗೆ 10ಕ್ಕೆ ಮಣಿಪಾಲದ ಖಾಸಗಿ ಹೋಟೆಲ್​ನಲ್ಲಿ ನಡೆಯಲಿದೆ ಎಂದು ಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ತಿಳಿಸಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + eighteen =
Remember me
