| ಮೃತ್ಯುಂಜಯ ಕಪಗಲ್ ಬೆಂಗಳೂರುಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಲೋಕಸಭಾ ಚುನಾವಣೆಗೆ ಮುನ್ನ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಸೆಮಿಫೈನಲ್ ಎದುರಿಸುತ್ತಿದೆ. ಉಪಾಂತ್ಯ ಪಂದ್ಯದ ರಣವ್ಯೂಹದ ಭಾಗವಾಗಿ ಜಾತಿ ಸಮೀಕರಣಕ್ಕೆ ಹೆಚ್ಚು ತಲೆಕೆಡಿಸಿಕೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕಪಾತ್ರವಹಿಸಲಿದೆ ಎಂದು ಪರಿಗಣಿಸಿದೆ.
ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಳ್ಳುವ ಜತೆಗೆ ದಕ್ಷಿಣಭಾರತ ಮುಕ್ತ ಎಂಬ ಟೀಕೆ ಬಿಜೆಪಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯದ ವಿಧಾನಸಭೆ ಚುನಾವಣೆ ಸೋಲಿಗೆ ಕಾರಣಗಳ ಮಾಹಿತಿ ಪಡೆದಿದೆ. ಅಭ್ಯರ್ಥಿಗಳ ಆಯ್ಕೆ ಗೊಂದಲ, ಆಂತರಿಕ ಸಮಸ್ಯೆ, ಗುಂಪುಗಾರಿಕೆ, ಆಡಳಿತ ವಿರೋಧಿ ಅಲೆ ಜತೆಗೆ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯ ದೂರ ಸರಿದದ್ದು ಬಿಜೆಪಿ ವರಿಷ್ಠರನ್ನು ಹೆಚ್ಚು ಚಿಂತೆಗೀಡುಮಾಡಿದೆ.
ಕೈಬಿಟ್ಟು ಹೋಗುವವರಲ್ಲಿ ಮುಂದಿನ ಸರದಿ ಇತರ ಹಿಂದುಳಿದ ವರ್ಗಗಳು ಎಂಬ ಅಳುಕು ಕಾಡ ತೊಡಗಿದ್ದು, ಕರ್ನಾಟಕದ ಬೆಳವಣಿಗೆ ಬೇರೆ ರಾಜ್ಯಗಳ ಮೇಲೆ ಪರಿಣಾಮಬೀರಲಿದೆ ಎಂಬ ಅಂಶವೇ ದೆಹಲಿ ನಾಯಕರ ಚಿಂತೆಗೆ ಕಾರಣ.
ಓಲೈಕೆಗೆ ಕಾರ್ಯತಂತ್ರ:ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಒಬಿಸಿ ಸಮುದಾಯಗಳ ಓಲೈಸಲು ಒತ್ತು ನೀಡಿ, ಕಾರ್ಯತಂತ್ರ ಹೆಣೆದಿದು ಅನುಷ್ಠಾನಗೊಳಿಸಿದೆ.
‘ಕಳೆದುಕೊಂಡಲ್ಲೇ ಹುಡುಕು’ ಎಂಬಂತೆ ಈ ದಾಳ ಉರುಳಿಸಲು ಕರ್ನಾಟಕವನ್ನೇ ಆಯ್ದುಕೊಂಡು, ಜೆಡಿಎಸ್ ಪಕ್ಷವನ್ನು ಎನ್​ಡಿಎ ತೆಕ್ಕೆಗೆ ಸೆಳೆದು, ಒಬಿಸಿಗೆ ದೊಡ್ಡ ಸಂದೇಶ ಕಳುಹಿಸಲು ಪ್ರಯತ್ನಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಡುವಿನ ಸಂಬಂಧವು ಈ ದಾಳ ಉರುಳಿಸುವುದಕ್ಕೆ ನೆರವಾಗಿದ್ದು, ಮೈತ್ರಿ ಬಗ್ಗೆ ಆಂತರಿಕವಾಗಿ ಲಭ್ಯ ಸಮ್ಮಿಶ್ರ ಅಭಿಪ್ರಾಯದ ಬಗ್ಗೆ ಮೋದಿ, ನಡ್ಡಾ, ಷಾ ತಂಡವು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ.
ಎಸ್​ಸಿ, ಎಸ್​ಟಿ ಸಮುದಾಯಗಳನ್ನು ಮತ್ತೆ ವಿಶ್ವಾಸಕ್ಕೆ ಪಡೆದು, ಇತರ ಹಿಂದುಳಿದ ವರ್ಗಗಳನ್ನು ಹಿಡಿದಿಟ್ಟುಕೊಳ್ಳಲು ಹೆಚ್ಚು ಆದ್ಯತೆ ನೀಡಬೇಕೆಂಬ ಸೂಚನೆಯನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ.
ಈ ನಡುವೆ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ಮಸೂದೆ ಅಂಗೀಕರಿಸಿದೆ. ಮಹಿಳಾ ಮೀಸಲು ಕಾಯ್ದೆಯನ್ನೇ ಲೋಕಸಭೆ ಚುನಾವಣೆಗೆ ಅಸ್ತ್ರ ಮಾಡಿಕೊಳ್ಳಬೇಕೆಂದಿದೆ. ಆದರೆ ಈ ಕುರಿತು ಸ್ವಪಕ್ಷೀಯರೇ ಎತ್ತಿರುವ ಅಪಸ್ವರ ಮುಜುಗರಕ್ಕೀಡು ಮಾಡಿದೆ. ರಾಜ್ಯದ ಗೆಲುವನ್ನೇ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಗೆ ಮೇಲ್ಪಂಕ್ತಿ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಬಿಜೆಪಿ ವರಿಷ್ಠರು, ಕರ್ನಾಟಕದೆಡೆ ಹೆಚ್ಚು ಗಮನಹರಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ಕೇಂದ್ರ ಸಚಿವ ಸಂಪುಟದ ಪ್ರಾತಿನಿಧ್ಯ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚನೆ, ಇನ್ನಿತರ ಸವಲತ್ತುಗಳನ್ನು ನೀಡಿದ್ದರ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಲು ಸೂಚಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನ್ಯಾ. ಭಕ್ತವತ್ಸಲ ಸಮಿತಿ ವರದಿಯತ್ತ ಕೈ ಗಮನ:ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲು ಕಲ್ಪಿಸುವ ಸಂಬಂಧ ರಚಿತ ನ್ಯಾ. ಭಕ್ತವತ್ಸಲ ಸಮಿತಿಯಿಂದ ಎರಡನೇ ವರದಿಯನ್ನು ಕಾಂಗ್ರೆಸ್ ಸರ್ಕಾರ ಅಂಗೀಕರಿಸಿದೆ. ನ್ಯಾ.ಭಕ್ತವತ್ಸಲ ವರದಿ ಆಧರಿಸಿ ಸಲ್ಲಿಸಲಿರುವ ಅಫಿಡವಿಟ್ ಅನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿ, ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಿಗೆ ಅವಕಾಶ ಕಲ್ಪಿಸುವಂತಾಗಬೇಕು ಎಂದು ಕಾಂಗ್ರೆಸ್ ಹೆಚ್ಚಿನ ಮುತುವರ್ಜಿವಹಿಸಿದೆ. ಒಬಿಸಿ ಮೀಸಲಿಗೆ ರಹದಾರಿ ದೊರೆತರೆ ಕಾಂಗ್ರೆಸ್​ಗೆ ಲೋಕಸಭೆ ಚುನಾವಣೆ ಅಸ್ತ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಡೆ, ಪರಿಣಾಮಗಳ ಬಗ್ಗೆ ಕಮಲಪಡೆ ನಿಗಾವಹಿಸಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷಕ್ಕೆ ಬಲ ತುಂಬಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಡೆಸಲು ಉದ್ದೇಶಿಸಿದ್ದ ರಾಜ್ಯ ಪ್ರವಾಸದ ಉತ್ಸಾಹಕ್ಕೆ ಗುಂಪುಗಾರಿಕೆ ಅಡ್ಡಗಾಲು ಹಾಕಿದೆ.
ವಿಧಾನಸಭೆ ಚುನಾವಣೆ ಸೋಲಿನ ನಂತರವೂ ಬಣಗಾರಿಕೆ, ರಾಜ್ಯ ನಾಯಕರ ನಡುವಿನ ಮನಸ್ತಾಪ ಗಮನಿಸಿದ ವರಿಷ್ಠರು ಬೇಸತ್ತು, ಸಂಘಟನಾತ್ಮಕ ಪ್ರವಾಸದ ಬಗ್ಗೆ ತಟಸ್ಥ ನಿಲುವು ತಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುರುಡುಮಲೆ ಮಹಾಗಣಪತಿ ದೇವಸ್ಥಾನದಲ್ಲಿ ಸೆ.18ರಂದು ಬಿಎಸ್​ವೈ ವಿಶೇಷ ಪೂಜೆ ಸಲ್ಲಿಸಿ, ನಂತರ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಗಣೇಶ ಚತುರ್ಥಿ ಹಬ್ಬದ ಬಳಿಕ ರಾಜ್ಯವ್ಯಾಪಿ ಪ್ರವಾಸ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದ್ದರು.
ಬಿಎಸ್​ವೈ ನೇತೃತ್ವದಲ್ಲಿ ರಾಜ್ಯ ನಾಯಕರು ಸೇರಿಕೊಂಡು ಸಂಚರಿಸುತ್ತೇವೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಜತೆಗೆ ಕಾರ್ಯಕರ್ತರನ್ನು ಲೋಕಸಭೆ ಚುನಾವಣೆಗೆ ಸಜ್ಜು ಮಾಡುತ್ತೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸೇರಿ ಹಲವು ನಾಯಕರು ಹೇಳಿದ್ದರು. ಕಾವೇರಿ ಜಲ ಸಂಕಷ್ಟ ಮುಂದಿಟ್ಟುಕೊಂಡು ಬೆಂಗಳೂರಿನ ಪ್ರತಿ ವಾರ್ಡ್​ನಲ್ಲಿ ಜನ ಜಾಗೃತಿ, ನಿರಂತರ ಹೋರಾಟದ ಹೇಳಿಕೆಗಳು ಮೂಕಬತ್ತಿಯಾಗಿವೆ. ಬಿಎಸ್​ವೈ ಸಾರಥ್ಯದ ರಾಜ್ಯ ಪ್ರವಾಸವೂ ಡೋಲಾಯಮಾನವಾಗಿದೆ. ಗಣೇಶ ಹಬ್ಬ ಮುಗಿದು, ನವರಾತ್ರಿ ಸಮೀಪಿಸುತ್ತಿದೆ. ವರಿಷ್ಠರಿಂದ ಇನ್ನೂ ತನಕ ಒಪ್ಪಿಗೆ ಸಿಕ್ಕಿಲ್ಲವೆಂದು ಹೇಳಲಾಗುತ್ತಿದೆ. ಪಕ್ಷ ಸಂಘಟನೆ ದುರ್ಬಲ ವಾಗುತ್ತದೆ. ಹೇಳಿಕೆಗಳ ಬದಲು ಕ್ಷೇತ್ರ ಕಾರ್ಯಕ್ಕೆ ಇಳಿಯಬೇಕು ಎಂದು ಬಿಎಸ್​ವೈ ಪುನರುಚ್ಚರಿಸಿ, ಬಹಿರಂಗವಾಗಿ ಪ್ರವಾಸ ಕೈಗೊಳ್ಳುವುದಾಗಿ ಸಾರಿದ್ದರು.
ಉದ್ದೇಶಿತ ಪ್ರವಾಸದ ಬಗ್ಗೆ ಒಂದು ಗುಂಪು ಅಪಸ್ವರ ಎತ್ತಿ, ದೆಹಲಿಗೆ ಚಾಡಿ ಹೇಳಿದೆ. ರಾಜ್ಯದ ಬಹುತೇಕ ನಾಯಕರು ಇನ್ನೂ ಪಾಠ ಕಲಿತಿಲ್ಲ ಎನ್ನುವುದನ್ನು ವರಿಷ್ಠರು ಗಮನಿಸಿ, ಪ್ರವಾಸದ ಬಗ್ಗೆ ಕಾದು ನೋಡುವ ನಿಲುವಿಗೆ ಜೋತು ಬಿದ್ದಿದ್ದಾರೆ. ಆಂತರಿಕ ಗೊಂದಲ, ಅಪನಂಬಿಕೆ, ಸಮನ್ವಯದ ಕೊರತೆ ನಿವಾರಣೆಯಾಗುವ ತನಕ ರಾಜ್ಯಕ್ಕೆ ಯಾವುದೇ ಸೂಚನೆ ನೀಡದಿರಲು ತೀರ್ವನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಪುನಶ್ಚೇತನಕ್ಕೆ ಬಿಎಸ್​ವೈ ಅಗತ್ಯ, ಅನಿವಾರ್ಯವೆಂದು ಬಿಂಬಿಸುವುದು. ಮತ್ತೊಂದೆಡೆ ಸಂಘಟನೆ ಮೇಲೆ ಬಿಎಸ್​ವೈ ಹಿಡಿತ ಸಾಧಿಸುವ ಪ್ರಯತ್ನಿವಿದು ಎಂದು ಒಳಗಿಂದೊಳಗೆ ಸಂದೇಶ ರವಾನಿಸುವುದು ನಡೆದಿದೆ. ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ಯಾವಾಗ ಸರಿಹೋಗುತ್ತದೆ ಗೊತ್ತಿಲ್ಲ ಎಂದು ಹಿರಿಯ ನಾಯಕರೊಬ್ಬರು ಅಸಹನೆ ವ್ಯಕ್ತಪಡಿಸಿದರು.
ಬಿಎಸ್​ವೈಗೆ ಹೊಣೆ:ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಮಾಜಿ ಸಚಿವ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ನಾಯಕರಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಿದ್ದಾರೆ. ಸಾಲದೆಂಬಂತೆ ಜೆಡಿಎಸ್ ಜತೆ ಮೈತ್ರಿ ಬಗ್ಗೆ ಬಹಿರಂಗವಾಗಿ ಆಕ್ಷೇಪಿಸಿರುವುದು ರಾಜ್ಯ ನಾಯಕರ ಕಣ್ಣು ಕೆಂಪಾಗಿಸಿದೆ. ಮೈತ್ರಿ ಬಗ್ಗೆ ಅಪಸ್ವರ ಎತ್ತಿದ ಸೋಮಶೇಖರ್​ಗೆ ಬುದ್ಧಿವಾದ ಹೇಳುವ ಜವಾಬ್ದಾರಿಯನ್ನು ಬಿಎಸ್​ವೈಗೆ ಪಕ್ಷದ ರಾಜ್ಯ ಶಿಸ್ತು ಸಮಿತಿ ಒಪ್ಪಿಸಿದೆ ಎಂದು ಮೂಲಗಳು ತಿಳಿಸಿವೆ.
ನಮಸ್ಕಾರ ದೇವ್ರು.. ಇಲ್ಲಿ ದೇವ್ರದ್ದೇ ಬ್ಯಾಟಿಂಗ್​-ಫೀಲ್ಡಿಂಗ್​!; ಡಾ.ಬ್ರೋ ಭೇಟಿ ನೀಡಿರುವ ಈ ಕ್ರಿಕೆಟ್ ದೇವಸ್ಥಾನ ಎಲ್ಲಿದೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 3 =
Remember me
