ಬೆಂಗಳೂರು:ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಅಖಾಡದಲ್ಲಿ ಜಿದ್ದಾಜಿದ್ದಿ ಏರ್ಪಟ್ಟು, ರಾಜಕೀಯ ತಂತ್ರ-ಪ್ರತಿತಂತ್ರಗಳು ಕಾವು ಪಡೆದಿರುವ ಬೆನ್ನಲ್ಲೇ ಆಡಳಿತ ಪಕ್ಷ ಬಿಜೆಪಿ ಶಾಸಕರ ಒಗ್ಗಟ್ಟಿಗೆ ಕಸರತ್ತು ನಡೆಸಿದೆ.
ಕಾಂಗ್ರೆಸ್-ಜೆಡಿಎಸ್ ಪರಸ್ಪರ ಗೆರೆ ಕೊರೆದು ಪೈಪೋಟಿಗೆ ಇಳಿದಿದ್ದು, ಮತದಾನ ಮುಗಿಯವ ತನಕ ಇದೇ ಪರಿಸ್ಥಿತಿ ಮುಂದುವರಿದರೆ ಪಕ್ಷದ ಮೂರನೇ ಅಭ್ಯರ್ಥಿ ಗೆಲುವು ನಿಶ್ಚಿತವೆಂದು ಕಮಲಪಡೆ ಲೆಕ್ಕಹಾಕಿದೆ. ಎದುರಾಳಿಗಳತ್ತ ಗಮನವಿಡುವ ಭರದಲ್ಲಿ ಸ್ವಪಕ್ಷದ ಪ್ರತಿಯೊಂದು ಮತದ ಪ್ರಾಮುಖ್ಯತೆ ನಿರ್ಲಕ್ಷ್ಯ, ಅಜಾಗರೂಕತೆಯಿಂದ ಉಂಟಾಗುವ ಪರಿಣಾಮಗಳನ್ನು ನಾಯಕರು ಅರಿತು ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದಾರೆ. ಮತ ಚಲಾವಣೆ ಮಾಹಿತಿ ನೀಡುವ ನೆಪದಲ್ಲಿ ಮತದಾನಕ್ಕೆ ಎರಡು ದಿನ ಮುಂಚಿತವಾಗಿ ಪಕ್ಷದ ಶಾಸಕಾಂಗ ಪಕ್ಷದ ಸಭೆ ಬುಧವಾರ ಸಂಜೆ ಏರ್ಪಡಿಸಿದ್ದು, ಎಲ್ಲ ಶಾಸಕರು ಹಿಡಿದಿಡುವ ಜತೆ ಒಗ್ಗಟ್ಟಿನ ಸಂದೇಶ ಸಾರುವ ಪ್ರಯತ್ನವಿದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಸರಿಪಡಿಸುವ:ಸಚಿವರು-ಶಾಸಕರ ಮಧ್ಯೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಷ್ಟೇ ಶ್ರಮಿಸಿದರೂ ಬಿರುಕುಗಳು ಪೂರ್ಣ ಮುಚ್ಚಲಾಗಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಪ್ರತಿ ಹೆಜ್ಜೆಯನ್ನು ವರಿಷ್ಠರು ನಿರ್ದೇಶಿಸುತ್ತಿದ್ದು, ಈ ಹಂತದಲ್ಲಿ ಶಾಸಕರ ಅಸಮಾಧಾನ, ಮನಸ್ತಾಪ ಮುಳುವಾಗದಂತೆ ನೋಡಿಕೊಳ್ಳಬೇಕಿದೆ. ಶಾಸಕಾಂಗ ಪಕ್ಷದ ಸಭೆಯಲ್ಲೇ ಪರಸ್ಪರ ಸಂಪರ್ಕ-ಸಂವಹನ ಸಾಧಿಸಿ, ಸಚಿವರು ಮತ್ತು ಶಾಸಕರ ಸಂಬಂಧ ಗಟ್ಟಿಗೊಳಿಸುವುದು ಮುಖ್ಯಮಂತ್ರಿ, ಪಕ್ಷದ ರಾಜ್ಯ ನಾಯಕರ ಇರಾದೆಯಾಗಿದೆ. ಹಲವು ಸಚಿವರ ಕಾರ್ಯವೈಖರಿ ಬಗ್ಗೆ ಕೆಲವು ಶಾಸಕರು ಅಸಮಾಧಾನ ಬಹಿರಂಗವಾಗಿ ಹೊರಗೆ ಹಾಕಿರುವ ನಿದರ್ಶನಗಳಿವೆ. ಈ ಕಾರಣಕ್ಕೆ ಎಲ್ಲರನ್ನೂ ಒಂದಾಗಿಸುವ ಗುರುತರ ಜವಾಬ್ದಾರಿ ಸಿಎಂ ಬೊಮ್ಮಾಯಿ ಹೆಗಲೇರಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ, ಸಚಿವರ ಮತ ನಿರ್ಮಲಾಗೆ:ಚುನಾವಣೆಯಲ್ಲಿ ನಿರ್ಮಲಾ ಸೀತಾರಾಂ ಅವರಿಗೆ ಹೆಚ್ಚು ಆದ್ಯತೆ ನೀಡಿ ಚುನಾವಣೆ ನಡೆಸಲು ಬಿಜೆಪಿ ಹೈಕಮಾಂಡ್​ನಿಂದ ರಾಜ್ಯ ನಾಯಕರಿಗೆ ಸೂಚನೆ ರವಾನೆಯಾಗಿದೆ. ಕೇಂದ್ರ ಸರ್ಕಾರದಲ್ಲಿ ಹಾಲಿ ಹಣಕಾಸು ಸಚಿವೆಯೂ ಆಗಿರುವ ಹಿನ್ನೆಲೆಯಲ್ಲಿ ಅವರ ಗೆಲುವಿಗೆ ಒಂದಿಷ್ಟು ಲೋಪವಾಗದಂತೆ ಕಟ್ಟೆಚ್ಚರ ವಹಿಸಲು ಖುದ್ದು ಮುಖ್ಯಮಂತ್ರಿಯೇ ಮುಂದಾಗಿದ್ದಾರೆ. ಸಿಎಂ ಸೇರಿ ಸಚಿವರುಗಳ ಮತವನ್ನು ನಿರ್ಮಲಾ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಇನ್ನುಳಿದಂತೆ 2ನೇ ಮತ್ತು 3ನೇ ಅಭ್ಯರ್ಥಿಗೆ ಇತರರ ಮತ ಹಂಚಿಕೆ ಮಾಡಲು ತೀರ್ವನಿಸಲಾಗಿದೆ.
ಲೇಹರ್​ಸಿಂಗ್:ಪಕ್ಷದ 3ನೇ ಅಭ್ಯರ್ಥಿಯಾಗಿರುವ ಲೇಹರ್​ಸಿಂಗ್ ಗೆಲ್ಲಿಸಿಕೊಳ್ಳುವ ಸವಾಲು ಎದುರಾಗಿದೆ. ತಮ್ಮ ಪರಮಾಪ್ತ ಲೇಹರ್​ಸಿಂಗ್ ಅವರನ್ನು ರಾಜ್ಯಸಭೆಗೆ ಕಳುಹಿಸಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್​ನಲ್ಲಿರುವ ಕೆಲ ಆಪ್ತ ಶಾಸಕರಿಗೂ ಪೋನ್ ಮಾಡಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷದ ಶಾಸಕಾಂಗ ಪಕ್ಷದ ಸಭೆ ಬುಧವಾರ ಸಂಜೆ ಕರೆಯಲಾಗಿದೆ. ರಾಜ್ಯಸಭೆ ಚುನಾವಣೆಗೆ ಪಕ್ಷದಿಂದ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮತದಾನ ಪ್ರಕ್ರಿಯೆ ಕುರಿತು ಶಾಸಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಸಭೆ ನಿಗದಿಯಾಗಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಚುನಾವಣೆಯಲ್ಲಿ ಸೋಲು ನಿಶ್ಚಿತ ಆಗುತ್ತಿರುವುದರಿಂದ ಕಾಂಗ್ರೆಸ್​ನ ಸಿದ್ದರಾಮಯ್ಯ ಹತಾಶಗೊಂಡಿದ್ದಾರೆ. ಹಗುರವಾಗಿ ಮಾತನಾಡುವುದು ಅವರಿಗೆ ಚಟವಾಗಿದೆ. ಮುಂದಿನ ಚುನಾವಣೆ ಎದುರಿಸಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸಾಮೂಹಿಕ ನಾಯಕತ್ವದಡಿ ಯಾವುದೇ ಕಾರ್ಯಕರ್ತರಿಗೆ ನೋವಾಗದಂತೆ ಪಕ್ಷ ಸಂಘಟನೆ ಮಾಡಲಾಗುವುದು. ಸಂಘಟನೆಗಾಗಿ ಇನ್ನೂ ಹತ್ತು ವರ್ಷ ಎಲ್ಲೇ ಕರೆದರೂ 24 ಗಂಟೆಗಳ ಕಾಲ ಪ್ರವಾಸ ನಡೆಸಲು ಸಿದ್ಧನಿದ್ದೇನೆ. ಉತ್ತರ ಪ್ರದೇಶದ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ.
|ಬಿ.ಎಸ್.ಯಡಿಯೂರಪ್ಪಮಾಜಿ ಸಿಎಂ
ಬಿಜೆಪಿಯವರಿಗೆ ನನ್ನ ಕಂಡರೆ ಭಯ. ಹೀಗಾಗಿಯೇ ನಾನೊಬ್ಬ ಮಾತನಾಡಿದರೆ ಅವರು 20 ಜನರು ಮುಗಿಬೀಳುತ್ತಾರೆ. ಅವರನ್ನು ಎದುರಿಸುವ ಶಕ್ತಿ ಇದೆ. ನಾನು ಆರ್​ಎಸ್​ಎಸ್ ಚಡ್ಡಿ ಸುಡುವುದು ಅಂತ ಹೇಳಿದ್ದರ ಅರ್ಥವೆನೆಂದರೆ ಆರ್​ಎಸ್​ಎಸ್ ಸಿದ್ಧಾಂತ ಸುಡುವುದು ಎಂದು. ಆದರೆ, ಅವರು ಚಡ್ಡಿ ಕೆಲಸ ಬಿಟ್ಟು ಬೇರೇನು ಮಾಡುತ್ತಿಲ್ಲ.
|ಸಿದ್ದರಾಮಯ್ಯಮಾಜಿ ಸಿಎಂ
ಎಲ್ಲ ಪಕ್ಷದ ನಾಯಕರುಗಳು ತಮ್ಮ ಆತ್ಮಸಾಕ್ಷಿ ಮತವನ್ನು ಕಾಂಗ್ರೆಸ್ ಎರಡನೇ ಅಭ್ಯರ್ಥಿಗೆ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಅವರಿಗೆ ಬೇರೆ ಸಂದರ್ಭಗಳಲ್ಲಿ ಸಾಕಷ್ಟು ಸಹಾಯ ಮಾಡಿದ್ದೇವೆ. ಯಾರೆಲ್ಲ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದಾರೋ ಅವರೆಲ್ಲ ಕಾಂಗ್ರೆಸ್​ಗೆ ಮತ ನೀಡಲಿ
|ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಪಾಪದ ಸರ್ಕಾರ ಜನಕ ಸಿದ್ದರಾಮಯ್ಯ. ಕೇವಲ ಪ್ರತಿಪಕ್ಷ ನಾಯಕನ ಸ್ಥಾನ ಪಡೆಯಲು ಕೋಲಾರದ ಮಾಸ್ಟರ್ ಮೈಂಡ್ ಸಹಕಾರದಿಂದ ನಮ್ಮ ಸರ್ಕಾರ ತೆಗೆದರು. ಅವರು ನಿಜವಾಗೂ ಜಾತ್ಯತೀತರ ಪರವಾಗಿದ್ದರೆ ಜೆಡಿಎಸ್​ಗೆ 2ನೇ ಪ್ರಾಶಸ್ತ್ಯ ಮತಕೊಡುವ ನನ್ನ ಆಫರ್ ಒಪ್ಪಿಕೊಳ್ಳಲಿ.
|ಎಚ್.ಡಿ.ಕುಮಾರಸ್ವಾಮಿಮಾಜಿ ಮುಖ್ಯಮಂತ್ರಿ
ಅಡ್ಡ ಮತದಾನ ಭಯ:ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಅಡ್ಡ ಮತದಾನದ್ದೆ ದೊಡ್ಡ ಸವಾಲಾಗಿ ಕಾಡುತ್ತಿದೆ. ಪಕ್ಷದೊಳಗೆ ಇರುವ ಡಾರ್ಕ್​ಹಾರ್ಸ್​ಗಳನ್ನು ಮೊದಲೇ ಪತ್ತೆ ಮಾಡುವುದು ಹೇಗೆ ಎನ್ನುವುದು ಮೂರು ಪಕ್ಷದ ನಾಯಕರಿಗೆ ಸಮಸ್ಯೆಯಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ ಬಿಜೆಪಿಯಿಂದ ಅಡ್ಡ ಮತದಾನವಾಗುವ ಸಾಧ್ಯತೆಗಳು ಕಡಿಮೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪರಿಸ್ಥಿತಿ ಇದಕ್ಕೆ ತದ್ವಿರುದ್ದವಾಗಿದೆ. ಜೆಡಿಎಸ್ ಪಕ್ಷದಲ್ಲಿದ್ದು, ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸ್​ಗೆ ಜಿಗಿಯಲು ಮುಂದಾಗಿರುವ ಕೆಲ ಶಾಸಕರ ಮತಗಳ ಮೇಲೆ ಕಣ್ಣಿಟ್ಟು, ಅವರ ಮನವೊಲಿಕೆ ಮಾಡಲು ದಳಪತಿಗಳು ನಡೆಸಿದ ಪ್ರಯತ್ನಗಳು ಫಲ ನೀಡಿಲ್ಲ ಎನ್ನಲಾಗಿದೆ. ಅಂತಿಮವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕೆಲ ಶಾಸಕರಿಗೆ ಮನವಿ ಮಾಡಿ, ಟಿಕೆಟ್ ನೀಡುವ ತೀರ್ವನವನ್ನು ನಾನೇ ತೆಗೆದುಕೊಳ್ಳುತ್ತೇನೆ. ನೀವು ಧೈರ್ಯವಾಗಿ ಪಕ್ಷದೊಳಗೆ ಇದ್ದು, ಶಿಸ್ತು ಕಾಪಾಡಿಕೊಳ್ಳಿ ಎಂದು ವಿನಯಪೂರ್ವಕವಾಗಿ ಮನವೊಲಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್​ನಲ್ಲಿಯೂ ಇಂಥದ್ದೆ ಪರಿಸ್ಥಿತಿ ಎದುರಾಗಿದೆ. ಕೆಲ ಶಾಸಕರು ಮುಂಬರುವ ಚುನಾವಣೆಗೆ ಪಕ್ಷ ಬದಲಿಸುವ ಲೆಕ್ಕಾಚಾರದಲ್ಲಿದ್ದು, ಬಿಜೆಪಿ ಜತೆಗೆ ತೆರೆ ಮರೆಯಲ್ಲಿ ಸಾಥ್ ನೀಡುತ್ತಿರುವುದು ಗುಟ್ಟಾಗಿರುವ ಸಂಗತಿಯೇನಲ್ಲ. ಇನ್ನು ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಆಂತರಿಕ ಸಂಘರ್ಷದಲ್ಲಿಯೂ ಕೆಲ ವ್ಯತ್ಯಾಸಗಳಾಗಿವೆ. ಅಂತಹ ಶಾಸಕರುಗಳ ಮತವನ್ನು ಕಾಯ್ದುಕೊಳ್ಳುವುದು ನಾಯಕರಿಗೆ ಸವಾಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 17 =
Remember me
