ಬೆಂಗಳೂರು:ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರವೂ ಅಸಹಾಯಕತೆ, ಪ್ರಭಾವಿಗಳ ಮೇಲಾಟದ ಸುಳಿಯಿಂದ ಹೊರಬರಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ನಗುವವರ ಮುಂದೆ ಮತ್ತೆ ಮತ್ತೆ ಎಡವಿ ಬೀಳುತ್ತಿದ್ದೇವೆ ಎಂದು ಸ್ವಪಕ್ಷದವರೇ ಕೆಂಡವಾಗಿದ್ದಾರೆ.
ಮುಖ್ಯಮಂತ್ರಿಯನ್ನು ಬೇಗ ಆಯ್ಕೆ ಮಾಡಲಿಲ್ಲ. ಸಚಿವ ಸಂಪುಟ ವಿಸ್ತರಣೆ ವಿಳಂಬವಾಯಿತು ಎಂದು ಆಡಳಿತ ಪಕ್ಷ ಕಾಂಗ್ರೆಸ್ ಮೇಲೆ ಟೀಕಾಪ್ರಹಾರ ಮಾಡಿದ್ದ ಬಿಜೆಪಿ, ಪ್ರತಿಪಕ್ಷ ನಾಯಕನ ಆಯ್ಕೆಗೆ ತಿಣುಕಾಡುತ್ತಿರುವುದು ವಿಪರ್ಯಾಸ.
ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವುದು ಖಚಿತವಾದ ಮೇಲೂ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲವೆಂದು ಕಮಲಪಡೆ ನಾಯಕರನ್ನು ಕಾಂಗ್ರೆಸ್ ಲೇವಡಿ ಮಾಡಿ ತಿರುಗೇಟು ನೀಡಿದೆ. ಸಂಘಟನಾತ್ಮಕವಾಗಿ ಪುಟಿದೇಳುತ್ತೇವೆ, ರಚನಾತ್ಮಕ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ ಎಂಬ ಪಕ್ಷದ ನಾಯಕರ ವೀರಾವೇಶದ ಮಾತುಗಳು ಚುನಾವಣೆ ಕಣವನ್ನು ನೆನಪಿಸುವಂತಿವೆ. ಪ್ರತಿಪಕ್ಷ ನಾಯಕನ ಆಯ್ಕೆ ಮತ್ತು ಪಕ್ಷದ ರಾಜ್ಯ ಸಂಘಟನೆ ಪುನಾರಚನೆ ವಿಷಯದಲ್ಲಿ ಮತ್ತದೇ ವರಿಷ್ಠರತ್ತ ಚಿತ್ತ, ಬೆರಳೆಣಿಕೆಯಷ್ಟು ಪ್ರಭಾವಿ ನಾಯಕರ ಮೇಲಾಟಗಳು ಶುರುವಾಗಿವೆ.
ಸೋಲಿಗೆ ಪರಸ್ಪರ ದೋಷಾರೋಪಣೆಗೆ ಆತ್ಮಾವಲೋಕನ ಸಭೆಗಳು ಸಾಕ್ಷಿಯಾದವು. ಇದರಿಂದ ರಾಜ್ಯ, ರಾಷ್ಟ್ರ ನಾಯಕರು ಪಾಠ ಕಲಿತಿಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ಕಾರ್ಯಕರ್ತರು ಆಕ್ರೋಶಭರಿತರಾಗಿದ್ದಾರೆ.
ಮುಸುಕಿನ ಗುದ್ದಾಟ:ಪ್ರಭಾವಿಯೊಬ್ಬರು ಪ್ರತಿಷ್ಠೆಗೆ ಬಿದ್ದು ಪ್ರಮುಖ ಹುದ್ದೆಗೆ ಆಪ್ತರನ್ನು ಕೂಡಿಸಲು ತೆರೆಮರೆ ಕಸರತ್ತು ನಡೆಸಿದ್ದಾರೆ. ಮುಸುಕಿನ ಗುದ್ದಾಟ, ‘ಹಿಡಿತ‘ದ ಪೈಪೋಟಿಯಿಂದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆಯೇ ಪಕ್ಷದ ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ.
ಉಭಯ ಸದನಗಳ ಪ್ರತಿಪಕ್ಷ ನಾಯಕ, ಉಪನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗಳಿಗೆ ಯಾರು ಸೂಕ್ತ, ಸಮರ್ಥರು ಎಂಬ ತಲಾಷೆ ಮುಂದುವರಿದಿದೆ. ಐದು ಪ್ರಮುಖ ಹುದ್ದೆಗಳಿಗೆ ಜಾತಿ ಸಮೀಕರಣ ದೆಹಲಿ ನಾಯಕರ ತಲೆಬಿಸಿ ಮಾಡಿದೆ. ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಜತೆಗೆ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಬೇಕಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಲಿಂಗಾಯತರನ್ನು ನೇಮಿಸಿದರೆ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಒಕ್ಕಲಿಗರಿಗೆ ನೀಡಬೇಕೆಂಬ ಆಂತರಿಕ ಧ್ವನಿ ಗಟ್ಟಿಯಾಗಿದೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಸಮುದಾಯವನ್ನು ಕಡೆಗಣಿಸುವಂತಿಲ್ಲ. ಮುಖ್ಯವಾಗಿ ಸದನದ ಒಳಗೆ ಪ್ರತಿಪಕ್ಷ ನಾಯಕ ಸಮರ್ಥ, ಆಕ್ರಮಣಕಾರಿ ಮನೋಭಾವ ಹೊಂದಿರಬೇಕಾಗುತ್ತದೆ. ಆಡಳಿತ ಪಕ್ಷದ ಜನವಿರೋಧಿ ನೀತಿಗಳು, ವೈಫಲ್ಯಗಳನ್ನು ಎತ್ತಿಹಿಡಿಯುವುದಷ್ಟೇ ಅಲ್ಲ, ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ಪ್ರಬಲ ನಿಲುವು ತಳೆಯಬೇಕಾಗಿದೆ. ಅನುಭವ, ಪರಿಣತಿ, ವಾಕ್ಚಾತುರ್ಯದ ತಕ್ಕಡಿಯಲ್ಲಿಟ್ಟರೆ ಬೆರಳೆಣಿಕೆಯಷ್ಟು ಸರಿದೂಗಬಲ್ಲವರು ಲಭ್ಯವಿರುವುದು ಸವಾಲಿನ ಮೂಲ ಎಂದು ಹೇಳಲಾಗುತ್ತಿದೆ.
ಮೊದಲ ಸುತ್ತಿನ ಸಮಾಲೋಚನೆ:‘ಗುಂಪುಗಾರಿಕೆ‘ಗೆ ತೇಪೆ ಹಾಕಲೆಂದು ಶಾಸಕರ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಲಾಗಿದೆ. ಒಮ್ಮತ ಅಥವಾ ಬಹುಮತ ಬದಲಿಗೆ ವಿಭಜಿತ ಅಭಿಪ್ರಾಯಗಳು ವ್ಯಕ್ತವಾಗಿವೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಂಗ್ರಹಿಸಿದ ಅಭಿಪ್ರಾಯ ಆಧರಿಸಿ ವರದಿ ಸಲ್ಲಿಸಿದ್ದು, ಹಿರಿಯ ನಾಯಕರು ಒಂದು ಸುತ್ತಿನ ಸಮಾಲೋಚನೆ ಮಾಡಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕನನ್ನಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಟಿ. ರವಿ ಪರ ಪ್ರಭಾವಿ ನಾಯಕರೊಬ್ಬರು ಒಲವು ವ್ಯಕ್ತಪಡಿಸಿದ್ದಾರೆ. ಹೊಸಬರು, ಸಂಘದ ನೆಲೆಯವರಿಗೆ ಅವಕಾಶ ನೀಡುವ ಬಗ್ಗೆ ಆಲೋಚಿಸಿ ಎಂದು ಕೆಲವು ಹಿರಿಯ ನಾಯಕರು ಅನಿಸಿಕೆ ತಿಳಿಸಿದ್ದು, ವರಿಷ್ಠರು ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ.
ಪ್ರಬಲರ ಪೈಪೋಟಿ:ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಬೊಮ್ಮಾಯಿ ಸಹಜ ಆಯ್ಕೆ ಎನ್ನುತ್ತಿದ್ದರೂ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಡಾ.ಸಿ.ಎನ್. ಅಶ್ವತ್ಥ ನಾರಾಯಣ ಕೂಡ ಕಣ್ಣಿಟ್ಟಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಆರ್. ಅಶೋಕ್ ಹಾಗೂ ಸಿ.ಟಿ. ರವಿ ಮಧ್ಯೆ ಪೈಪೋಟಿಯಿದೆ. ಇವರೊಂದಿಗೆ ವಿ. ಸುನಿಲ್ ಕುಮಾರ್ ಹೆಸರೂ ಕೇಳಿಬರುತ್ತಿದೆ.
ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 4 =
Remember me
