|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ಸರ್ಕಾರ ರಚನೆಗೆ ಸಿದ್ಧತೆ ನಡೆಸಿರುವ ಬಿಜೆಪಿ, ಅಭ್ಯರ್ಥಿಗಳ ಆಯ್ಕೆಗಾಗಿ ಎರಡು ಖಾಸಗಿ ಸಂಸ್ಥೆಗಳಿಂದ ಏಪ್ರಿಲ್​ನಲ್ಲಿ ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಿದೆ. ಈ ಬೆಳವಣಿಗೆ ಚುನಾವಣೆ ಮೂಡಿಗೆ ಜಾರುತ್ತಿದ್ದ ಹಾಲಿ ಶಾಸಕರು ಹಾಗೂ ಕಳೆದ ಚುನಾವಣೆಯಲ್ಲಿ ಸೋತವರ ಎದೆಯಲ್ಲಿ ನಡುಕಹುಟ್ಟಿಸಿದೆ.
ಬಿಜೆಪಿ ಮುಂದಿನ ಚುನಾವಣೆ ಫಲಿತಾಂಶದ ಮೇಲಷ್ಟೇ ಕಣ್ಣಿಟ್ಟಿಲ್ಲ. ಬದಲಾಗಿ 2050ರ ಗುರಿ ಹೊಂದಿದೆ. ಮುಂದಿನ 25 ವರ್ಷಗಳಿಗೆ ರಾಜ್ಯ ರಾಜಕಾರಣಕ್ಕೆ ಯುವ ಮುಖ ಹೆಚ್ಚಿನ ಪ್ರಮಾಣದಲ್ಲಿ ಬರಬೇಕೆಂದು ಕಾರ್ಯತಂತ್ರ ರೂಪಿಸುತ್ತಿದೆ. ಅದಕ್ಕಾಗಿಯೇ ಈ ಸಮೀಕ್ಷೆ ನಡೆಸಲಾಗುತ್ತಿದೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಅಂದಾಜು 100 ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದಾಗಿ ಆಡಳಿತವಿರೋಧಿ ಅಲೆಯ ನಡುವೆಯೂ ಬಿಜೆಪಿ ಅಧಿಕಾರ ಉಳಿಸಿಕೊಂಡಿತು. ಅಭಿವೃದ್ಧಿ ಹಾಗೂ ಹಿಂದುತ್ವ ಪಕ್ಷದ ಕೈ ಹಿಡಿಯಿತು. ಅದೇ ಮಾದರಿಯನ್ನೇ ರಾಜ್ಯದಲ್ಲೂ ಅನುಸರಿಸುವ ಇರಾದೆ ಬಿಜೆಪಿಯದ್ದಾಗಿದೆ.
ಯಾವುದೇ ಒಂದು ಅಥವಾ ಎರಡು ಜಾತಿ ಮತ್ತು ಯಾವುದೇ ಒಬ್ಬಿಬ್ಬರು ನಾಯಕರನ್ನು ನಂಬಿ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಿಲ್ಲ. ಸ್ವಂತ ಬಲದ ಮೇಲೆ ಕನಿಷ್ಠ 130 ಸ್ಥಾನ ಗಳಿಸಬೇಕೆಂದು ಸಿದ್ಧತೆ ಮಾಡುತ್ತಿದೆ. ಪಕ್ಷದ ವರಿಷ್ಠರು ಸ್ಥಳೀಯ ನಾಯಕತ್ವಕ್ಕಿಂತ ತಮ್ಮ ಪ್ರಭಾವದ ಮೇಲೆ ಚುನಾವಣೆ ಎದುರಿಸುವ ವಿಶ್ವಾಸದಲ್ಲಿದ್ದಾರೆ.
ಮುಂದೇನು?:ಸಮೀಕ್ಷೆ ಬಳಿಕ ಮಾಹಿತಿ ಪಡೆದು ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅಭ್ಯರ್ಥಿ ಬದಲಾವಣೆ ಮಾಡುವ ಕಡೆ ಹೊಸಬರನ್ನು ಗುರುತಿಸಿ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗುತ್ತದೆ. ಬಹುತೇಕ ಮೇ ಅಥವಾ ಜೂನ್​ನಲ್ಲಿ ಈ ಕೆಲಸ ಆಗಬಹುದು. ಇನ್ನು ಜುಲೈ ಬಳಿಕ ಚುನಾವಣೆವರೆಗೆ ಪ್ರತಿ ತಿಂಗಳು ಸಮೀಕ್ಷೆ ಕಾರ್ಯ ಮುಂದುವರಿಯುತ್ತದೆ. ಆ ಸಂದರ್ಭದಲ್ಲಿ ಲೋಪ ಸರಿಪಡಿಸಿಕೊಳ್ಳುತ್ತ ಮುಂದುವರಿಯಲಾಗುತ್ತದೆ. ಸಮೀಕ್ಷೆ ಆಧಾರದಲ್ಲೇ ಚುನಾವಣೆ ಘೋಷವಾಕ್ಯ ನಿಗದಿ ಮಾಡಲಾಗುತ್ತದೆ.
ಎಷ್ಟು ಜನರಿಗೆ ಕೈ ತಪ್ಪಬಹುದು?:ಬಿಜೆಪಿ ಮೂಲಗಳ ಪ್ರಕಾರ ಶೇ.40 ಶಾಸಕರು ಹಾಗೂ ಅಷ್ಟೇ ಪ್ರಮಾಣದಲ್ಲಿ ಕಳೆದ ಬಾರಿ ಸೋತವರಿಗೆ ಟಿಕೆಟ್ ಸಿಕ್ಕುವ ಸಾಧ್ಯತೆಗಳಿಲ್ಲ. ಪಕ್ಷ ಈಗ ಟಿಕೆಟ್ ನೀಡಲು 75 ವರ್ಷದ ಮಾನದಂಡ ಹಾಕಿಕೊಂಡಿದೆ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಅಥವಾ ವಿಧಾನಸಭೆ ಅವಧಿ ಮುಗಿಯುವುದರೊಳಗೆ 75 ವರ್ಷಕ್ಕೆ ಬರುವವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಹುತೇಕ ಹಿರಿಯರಿಗೆ ಮಾಹಿತಿಯೂ ರವಾನೆಯಾಗಿದೆ. ಹೊಸಬರಿಗಾಗಿ ಸ್ಥಾನ ತ್ಯಜಿಸಿ, ಪಕ್ಷ ಗೆಲ್ಲಿಸಿ ಎಂಬ ಸೂಚನೆ ನೀಡಲಾಗಿದೆ.
ಲೋಕಸಭೆಗೂ ಮಾಹಿತಿಗೂ ಸಂಗ್ರಹ:ವಿಧಾನಸಭಾ ಚುನಾವಣೆಗೆ ಮಾತ್ರವಲ್ಲದೆ ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆಯೂ ಈ ಸಮೀಕ್ಷೆ ನಡೆಯುತ್ತಿದೆ. ಸಂಸತ್ ಸಮರದಲ್ಲಿ ಕನಿಷ್ಠ 5 ರಿಂದ 6 ಕಡೆ ಅಭ್ಯರ್ಥಿಗಳನ್ನು ಬದಲಾಯಿಸುವುದು ಪಕ್ಷದ ಉದ್ದೇಶವೆಂದು ಮೂಲಗಳು ಹೇಳಿವೆ.
ಎರಡು ಸಂಸ್ಥೆಗಳು ಏಕೆ?:ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿಯೂ 2 ಸಂಸ್ಥೆಗಳು ಸಮೀಕ್ಷೆ ನಡೆಸಲಿವೆ. ಹೈಕಮಾಂಡ್ ಮುಖಂಡರಿಗೆ ವಿಶ್ವಾಸ ಇರುವ ಸಂಸ್ಥೆಗಳು ಸಮೀಕ್ಷೆ ನಡೆಸಿದರೆ ಹೆಚ್ಚು ನಿಖರತೆ ಇರುತ್ತದೆ. ಎಲ್ಲ ಕ್ಷೇತ್ರಗಳ ಫ್ಲಸ್ ಮತ್ತು ಮೈನಸ್ ಅಂಶಗಳು ಸಿಕ್ಕು ಸುಲಭವಾಗಿ ಚುನಾವಣೆ ಎದುರಿಸಬಹುದು ಎಂಬುದು ಪಕ್ಷದ ಮೂಲಗಳ ಅಭಿಪ್ರಾಯ.
ಯಾವ ರೀತಿ ಸಮೀಕ್ಷೆ?:ಎರಡು ಸಂಸ್ಥೆಗಳು ಪ್ರತ್ಯೇಕ ರೀತಿಯಲ್ಲಿ ಸಮೀಕ್ಷೆ ನಡೆಸಲಿವೆ. ಒಟ್ಟಾರೆ ಕ್ಷೇತ್ರದ ಪರಿಸ್ಥಿತಿ ಒಂದು ಮಾಹಿತಿಯಾದರೆ, ಮತ್ತೊಂದು ಅಭ್ಯರ್ಥಿಗಳ ಆಯ್ಕೆಯ ವಿಚಾರ ಒಳಗೊಂಡಿ ರುತ್ತದೆ. ಈ 2 ಸಂಸ್ಥೆಗಳ ವರದಿ ಆಧಾರದಲ್ಲಿಯೇ ಮುಂದೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಆದ್ದರಿಂದ ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇಲ್ಲ.
ರಾಜ್ಯದ 224 ಕ್ಷೇತ್ರವನ್ನು ಎ,ಬಿ, ಸಿ ಮತ್ತು ಡಿ ಎಂದು ನಾಲ್ಕು ಭಾಗ ಮಾಡಲಾಗುತ್ತದೆ. ಎ ವಲಯದಲ್ಲಿ ಬಿಜೆಪಿ ಗೆದ್ದೇ ಗೆಲ್ಲುವ ಕ್ಷೇತ್ರವಾಗಿರುತ್ತದೆ. ಬಿ ವಲಯದಲ್ಲಿ ಬಿಜೆಪಿಗೆ ಅವಕಾಶ ಇದ್ದರೂ ಹೆಚ್ಚು ಶ್ರಮ ಹಾಕುವ ಕ್ಷೇತ್ರಗಳು ಯಾವುವು ಎಂಬುದನ್ನು ಗುರುತಿಸಬೇಕಾಗುತ್ತದೆ. ಬಿಜೆಪಿ ಗೆಲ್ಲಲು ಸಾಧ್ಯವೇ ಎಲ್ಲ ಎಂಬ ಕ್ಷೇತ್ರಗಳನ್ನು ಸಿ ವಲಯದಲ್ಲಿ ಗುರುತಿಸಬೇಕಾಗುತ್ತದೆ. ಎದುರಾಳಿ ಅದರಲ್ಲೂ ಕಾಂಗ್ರೆಸ್ ಎಲ್ಲಿ ಪ್ರಬಲವಾಗಿದೆ ಎಂಬುದನ್ನು ಡಿ ವಲಯದಲ್ಲಿ ಗುರುತಿಸಬೇಕಾಗುತ್ತದೆ. ಆಯಾ ವಲಯಕ್ಕೆ ತಕ್ಕಂತೆ ಪಕ್ಷದ ವರಿಷ್ಠರು ಕಾರ್ಯತಂತ್ರಗಳನ್ನು ರೂಪಿಸುತ್ತ ಹೋಗುತ್ತಾರೆ.
ಎರಡನೇ ಸಮೀಕ್ಷೆಯಲ್ಲಿ ಹಾಲಿ ಶಾಸಕರ ಸಾಧನೆ ಒರೆಗೆ ಹಚ್ಚಿ, ಎಷ್ಟರ ಮಟ್ಟಿಗೆ ಜನಾನುರಾಗಿಯಾಗಿದ್ದಾರೆ, ಅಭಿವೃದ್ಧಿ ಕಾರ್ಯ ಎಷ್ಟು ಮಾಡಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತದೆ. ಹಿರಿಯ ಶಾಸಕರಿರುವ ಕ್ಷೇತ್ರಗಳಲ್ಲಿ ಹೊಸಬರನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ. ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲದಂತೆ ಎಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 120 ಕ್ಷೇತ್ರಗಳಲ್ಲಿ ಸೋತಿತ್ತು. ಸೋತವರ ಪೈಕಿ ಎಷ್ಟು ಜನ ಮತದಾರರ ನಡುವೆ ಇದ್ದಾರೆ? ಅವರಲ್ಲಿ ಎಷ್ಟು ಜನರಿಗೆ ಟಿಕೆಟ್ ನೀಡಬಹುದು? ಹೊಸ ಮುಖಗಳನ್ನು ಎಲ್ಲೆಲ್ಲಿ ತರಲು ಸಾಧ್ಯ? ಕ್ಷೇತ್ರದಲ್ಲಿರುವ ಹೆಸರು ಸಂಪಾದಿಸಿರುವ ಯುವಕರು ಯಾರು? ಅವರ ಆರ್ಥಿಕ ಶಕ್ತಿ ಹೇಗಿದೆ ಎಂಬ ಮಾಹಿತಿ ಸಂಗ್ರಹವಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 1 =
Remember me
