ಬೆಂಗಳೂರು:ಕಾಂಗ್ರೆಸ್ ಸರ್ಕಾರ ‘ಹನಿಮೂನ್’ ಅವಧಿ ಮುಗಿಸುವ ಹೊತ್ತಿಗೆ ಪ್ರತಿಪಕ್ಷ ಬಿಜೆಪಿಗೆ ಚೈತನ್ಯದ ಟಾನಿಕ್ ದೊರೆತಿದೆ. ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೂಲಕ ಕಳಾಹೀನ ಕಮಲಪಡೆಯು ಮತ್ತೆ ಹೊಳಪು ಪಡೆದುಕೊಂಡಿದ್ದು, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಸಂಘಟನೆಗೊಂದು ಹೊಸ ಛಾಪು ಮೂಡಿದೆ. ಮುಂದಿನ ಬೆಳವಣಿಗೆ, ನಿರ್ಧಾರ, ಸಂಘಟನಾ ಪಡೆ ಹೇಗೆಲ್ಲ ರೂಪುಗೊಳ್ಳಲಿವೆ ಎಂಬ ಕೌತುಕ ಗರಿಗೆದರಿದೆ.
ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಸೋತ ಬಳಿಕ ಪಕ್ಷದ ರಾಜ್ಯ ಸಂಘಟನೆಯು ಹತಾಶೆ ಮಡುವಿಗೆ ಬಿದ್ದಿತ್ತು. ಅದರಲ್ಲೂ ಪ್ರತಿಪಕ್ಷ ನಾಯಕ, ಪಕ್ಷದ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ವರಿಷ್ಠರು ತಳೆದ ಉದಾಸೀನತೆ ಮುಖಂಡರು, ಕಾರ್ಯಕರ್ತರಲ್ಲಿ ಸಿನಿಕತನದ ಭಾವನೆ ಮೂಡಿಸಿತ್ತು. ಚುನಾವಣೆ, ನೇಮಕದ ವಿಷಯದಲ್ಲಿ ವರಿಷ್ಠರು ಅಚ್ಚರಿ ನಿರ್ಧಾರ ಕೈಗೊಳ್ಳುವಲ್ಲಿ ಎತ್ತಿದ ಕೈ. ಈಗ ಪಂಚ ರಾಜ್ಯಗಳ ಚುನಾವಣೆ ತನಕ ದೆಹಲಿ ನಾಯಕರು ಇತ್ತ ನೋಡುವುದಿಲ್ಲವೆಂಬ ಲೆಕ್ಕಾಚಾರ ತಲೆಕೆಳಗು ಮಾಡಿ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮಾತ್ರ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯವಿದೆ ಎಂದು ಅರಿತ ವರಿಷ್ಠರು, ಅವರ ಕಿರಿಯ ಪುತ್ರನಿಗೆ ಮಣೆ ಹಾಕಿದಂತಿದೆ. ಇದರ ಜತೆಗೆ ಸಂಘಟನೆಯಲ್ಲಿ ತಮ್ಮದೇ ಆದ ವರ್ಚಸ್ಸು, ಮುನ್ನುಗ್ಗುವ ಶೈಲಿ, ಚುನಾವಣೆ ತಂತ್ರಗಾರಿಕೆ ಹೊಂದಿರುವ ವಿಜಯೇಂದ್ರಗೆ ಅರ್ಹ ಜವಾಬ್ದಾರಿ ಅರಸಿಕೊಂಡು ಬಂದಿದೆ.
ಕಾಂಗ್ರೆಸ್​ಗೆ ಚೆಕ್​ವೆುೕಟ್:ಸಿಎಂ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಕೆಳಗಿಳಿಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಸೇರಿ ಇನ್ನೂ ಕೆಲವರಿಗೆ ಟಿಕೆಟ್ ನಿರಾಕರಿಸಿದ್ದನ್ನು ಕಾಂಗ್ರೆಸ್ ದಾಳವಾಗಿ ಬಳಸಿಕೊಂಡಿತು. ಲಿಂಗಾಯತರಿಗೆ ಅನ್ಯಾಯವೆಂದು ಬಿಂಬಿಸುವ ಮೂಲಕ ಬಿಜೆಪಿಯೊಂದಿಗೆ ಒಟ್ಟಾಗಿದ್ದ ಪ್ರಬಲ ಸಮುದಾಯದಲ್ಲಿ ಒಡಕು ಮೂಡಿಸಿ ಭಾಗಶಃ ತನ್ನತ ಸೆಳೆಯುವಲ್ಲಿ ಸಫಲವಾಗಿತ್ತು. ಮತ್ತದೇ ದಾಳವನ್ನು ಲೋಕಸಭಾ ಚುನಾವಣೆಗೂ ಉರುಳಿಸಲು ಸಿದ್ಧವಾಗಿತ್ತು. ಆದರೆ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡಿ, ಕಾಂಗ್ರೆಸ್​ನ ದಾಳಕ್ಕೆ ಬಿಜೆಪಿ ಚೆಕ್​ವೆುೕಟ್ ಇಟ್ಟಿದೆ. ಅಷ್ಟೇ ಅಲ್ಲ, ಕಿರಿಯ ಪುತ್ರನಿಗೆ ದೊಡ್ಡ ಜವಾಬ್ದಾರಿ ನೀಡುವ ಮೂಲಕ ಬಿಎಸ್​ವೈ ಮತ್ತೆ ಪಕ್ಷದ ಬೆನ್ನಿಗೆ ನಿಂತುಕೊಳ್ಳುವಂತೆ ಮನವಿ ಮಾಡಿಕೊಂಡಂತಿದೆ.
ವರಿಷ್ಠರ ಸಮೀಕರಣ ಸೂತ್ರದ ಪೈಕಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತರಿಗೆ ನೀಡಿದ್ದು, ಪ್ರತಿಪಕ್ಷ ನಾಯಕ ಸ್ಥಾನ ಹಿಂದುಳಿದ ಅಥವಾ ದಲಿತ ಸಮುದಾಯಕ್ಕೆ ನೀಡುವ ಸಂಭವವಿದೆ. ಉಪನಾಯಕ, ಮುಖ್ಯಸಚೇತಕ ಹುದ್ದೆಗಳನ್ನು ಒಕ್ಕಲಿಗ ಇನ್ನಿತರ ಸಣ್ಣ ಸಮುದಾಯಗಳಿಗೆ ನೀಡಿ ಪ್ರದೇಶ, ಜಾತಿವಾರು ಪ್ರಾತಿನಿಧ್ಯದ ಸಮತೋಲನ ಕಾಯ್ದುಕೊಳ್ಳುವ ಚಿಂತನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ರಾಜ್ಯದಿಂದ ಹೆಚ್ಚಿನ ಸಂಸದರನ್ನು ಗೆಲ್ಲಿಸಿಕೊಂಡು ಬರಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಯಡಿಯೂರಪ್ಪ ಅವರ ಮಗ ಎನ್ನುವುದಕ್ಕೆ ಹೆಮ್ಮೆ ಇದೆ. ಪಕ್ಷದ ವರಿಷ್ಠರು ವಿಶ್ವಾಸವಿಟ್ಟು ದೊಡ್ಡ ಜವಾಬ್ದಾರಿ ನೀಡಿದ್ದು, ಯಶಸ್ವಿಯಾಗಿ ನಿಭಾಯಿಸುತ್ತೇನೆ. ಪಕ್ಷದಲ್ಲಿನ ಕೆ.ಎಸ್.ಈಶ್ವರಪ್ಪ, ಆರ್. ಅಶೋಕ್, ಸೋಮಣ್ಣ ಎಲ್ಲರೂ ಪಕ್ಷ ಕಟ್ಟಲು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಯಾರೊಬ್ಬರೂ ಪಕ್ಷ ಬಿಡಲ್ಲ:ಯಾವುದೇ ಶಾಸಕರು ಅಥವಾ ಮುಖಂಡರು ಬಿಜೆಪಿ ಬಿಡುವುದಿಲ್ಲ. ಎಲ್ಲರೂ ಪಕ್ಷದಲ್ಲಿಯೇ ಇದ್ದು ಲೋಕಸಭಾ ಚುನಾವಣೆಗೆ ಒಗ್ಗಟ್ಟಿನಿಂದ ದುಡಿಯಲಿದ್ದಾರೆ. ಕೆಳಹಂತದ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರ ತನಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದು ವಿಜಯೇಂದ್ರ ಹೇಳಿದರು.
17ಕ್ಕೆ ವಿಪಕ್ಷ ನಾಯಕರ ಆಯ್ಕೆ:ಮುಂದಿನ ಶುಕ್ರವಾರ (ನ.17) ಶಾಸಕಾಂಗ ಪಕ್ಷದ ಸಭೆ ನಡೆಸಲಾಗುವುದು. ಅಲ್ಲಿ ಎಲ್ಲರ ಅಭಿಪ್ರಾಯ ಪಡೆದು ಪ್ರತಿಪಕ್ಷ ನಾಯಕರ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ ವಿಜಯೇಂದ್ರ, ಪ್ರತಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ಯಾವುದೇ ಮುಖಂಡರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಎಲ್ಲರೂ ಸೇರಿ ಒಮ್ಮತದಿಂದ ಸಮರ್ಥರನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಹಿರಿಯರಿಂದ ಶುಭ ಹಾರೈಕೆ:ವಿಜಯೇಂದ್ರ ಅಧ್ಯಕ್ಷರಾಗಿ ನೇಮಕ ಆಗುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ದೂರವಾಣಿ ಮೂಲಕ ಅಭಿನಂದಿಸಿ ಶುಭ ಕೋರಿದರು.
ಬಿ.ವೈ.ವಿಜಯೇಂದ್ರ ಕಾನೂನು ಪದವಿ ವ್ಯಾಸಂಗದ ಅವಧಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿ ಸಂಘಟನೆ ಹೊಣೆ ನಿಭಾಯಿಸಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕಿರಿಯಪುತ್ರನೆಂದು ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದರೂ ಕ್ರಮೇಣ ತಮ್ಮದೇ ಆದ ‘ಐಡೆಂಟಿಟಿ’ ದಾಖಲಿಸಿದರು. ಅಲ್ಪ ಕಾಲ ವಕೀಲ ವೃತ್ತಿಯಲ್ಲಿದ್ದರು. ಪಕ್ಷದ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಯುವ ಪಡೆಯೊಂದಿಗೆ ನಿಕಟತೆ ಸಂಪಾದಿಸಿದರು. ಕಳೆದ 3ವರ್ಷಗಳಿಂದ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಮಿತಿ 25 ಸದಸ್ಯರಲ್ಲಿ ಒಬ್ಬರಾಗಿದ್ದರು. ಯಡಿಯೂರಪ್ಪ 1983ರಿಂದ ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಗೆದ್ದ ವಿಜಯೇಂದ್ರ ವಿಧಾನಸಭೆ ಪ್ರವೇಶಿಸಿದ್ದಾರೆ. ಅಣ್ಣ ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಉಪಚುನಾವಣೆ ಗೆಲುವು ಛಾಪು:ಪಕ್ಷಕ್ಕೆ ಗಟ್ಟಿ ನೆಲೆಯಿಲ್ಲ, ಬಲವೂ ಇಲ್ಲದ ಕೆ.ಆರ್.ಪೇಟೆ, ಶಿರಾ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಜಯೇಂದ್ರ ಪಕ್ಷದ ಉದಯೋನ್ಮುಖ ನಾಯಕನೆಂಬ ಛಾಪು ಮೂಡಿಸಿತು. ಅದಕ್ಕೂ ಮುನ್ನ ವರುಣಾ ಕ್ಷೇತ್ರದಲ್ಲಿ ಬಿರುಸಿನ ಸಂಚಾರ, ತಮ್ಮದೇ ಆದ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಹುರುಪು ತುಂಬಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಟಿಕೆಟ್ ಫಿಕ್ಸ್ ಎಂಬ ಹಂತಕ್ಕೆ ಬಂದು ನಿಂತ ಹೊತ್ತಿಗೆ ಪಕ್ಷವು ಬೇರೊಬ್ಬರಿಗೆ ಮಣೆ ಹಾಕಿತ್ತು. ಇದರಿಂದಾಗಿ ಕಾರ್ಯಕರ್ತರು, ಬೆಂಬಲಿಗರು ಪ್ರಾರಂಭಿಕವಾಗಿ ಅಸಮಾಧಾನ ಹೊರಹಾಕಿದರೂ ವಿಜಯೇಂದ್ರ ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ಮುಖಂಡರು ಶುಭ ಕೋರಿದ್ದು, ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ಪಕ್ಷ ಕಟ್ಟುವ ಸಂದೇಶ ರವಾನಿಸಿದ್ದಾರೆ. ಅನೇಕ ಮುಖಂಡರು ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ್ದರೆ, ಕೆಲವರು ತಮ್ಮ ಎಕ್ಸ್ ಖಾತೆಯಲ್ಲಿ ಶುಭ ಕೋರಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವೈ.ವಿಜಯೇಂದ್ರ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪಕ್ಷವು ತಮ್ಮ ಅವಧಿಯಲ್ಲಿ ಸಂಘಟನಾತ್ಮಕವಾಗಿ ಬಲಗೊಂಡು ಮುಂಬರುವ ಎಲ್ಲ ಚುನಾವಣೆಗಳಲ್ಲಿ ಅತ್ಯಂತ ಯಶಸ್ಸನ್ನು ಗಳಿಸಲೆಂದು ಶುಭಹಾರೈಸುತ್ತೇನೆ. ಪಕ್ಷದ ಬಲವರ್ಧನೆಗೆ ವಿಜಯೇಂದ್ರ ಅವರೊಂದಿಗೆ ನಾವೆಲ್ಲರೂ ಜತೆಯಲ್ಲಿರುತ್ತೇವೆ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯೇಂದ್ರ ಅವಧಿಯಲ್ಲಿ ಪಕ್ಷ ಮತ್ತಷ್ಟು ಬಲಗೊಂಡು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವಂತಾಗಲಿ ಎಂದು ಹೇಳಿದ್ದಾರೆ. ಮಾಜಿ ಸಚಿವ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ನೇಮಕ ಮಾಡಿದ ಪ್ರಧಾನಿ ಮೋದಿ, ಅಮಿತ್ ಷಾ, ಜೆಪಿ ನಡ್ಡಾ ಅವರಿಗೆ ಧನ್ಯವಾದಗಳು. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠಗೊಳ್ಳಲಿ ಎಂದು ಹಾರೈಸಿದ್ದಾರೆ.
ಮಾಜಿ ಸಚಿವ ಪ್ರಭು ಚವ್ಹಾಣ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಾದಿಯಲ್ಲಿ ಸಾಗುತ್ತಿರುವ ಬಿ.ವೈ ವಿಜಯೇಂದ್ರ ಅವರು ಪಕ್ಷಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಯುವಜನತೆ ಸೇರಿ ಎಲ್ಲ ವರ್ಗದವರ ನೆಚ್ಚಿನ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಷದ ಬಲ ಮತ್ತಷ್ಟು ವೃದ್ಧಿಸಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಿಗಲಿದೆ ಎಂದಿದ್ದಾರೆ.
ಮಂಗಳೂರು:ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರ ಜತೆ ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಶ್ರಮಿಸುವುದಾಗಿ ಬಿಜೆಪಿ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ವಿಜಯೇಂದ್ರ ನೇಮಕದಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ. ಕಾಂಗ್ರೆಸ್ ಆಡಳಿತ ವೈಫಲ್ಯಗಳು ಕಂಡುಬರುತ್ತಿವೆ. ಆರು ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲದರ ವಿರುದ್ಧ ಹೋರಾಟ ಕೈಗೆತ್ತಿಕೊಂಡು ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುವ ಶಕ್ತಿ ವಿಜಯೇಂದ್ರ ಅವರಿಗೆ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನಮ್ಮ ಜತೆ ಪ್ರವಾಸ ಮಾಡುತ್ತಿದ್ದವರು. ಯುವಮೋರ್ಚಾ ರಾಜ್ಯಾಧ್ಯಕ್ಷರಾಗಿಯೂ ಓಡಾಡಿದ ಅನುಭವಿ. ಅವರು ಉತ್ತಮ ರೀತಿಯಲ್ಲಿ ಪಕ್ಷ ಸಂಘಟಿಸಿ ಬಿಜೆಪಿಯನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು:ರಾಜ್ಯದ ಬಿಜೆಪಿ ಚುಕ್ಕಾಣಿಯನ್ನು ಯುವ ನಾಯಕ ಬಿ.ವೈ.ವಿಜಯೇಂದ್ರ ಅವರಿಗೆ ನೀಡುವ ಮೂಲಕ ಹೈಕಮಾಂಡ್ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಲ್ಲದೆ, ಪಕ್ಷದೊಳಗಿನ ಟೀಕಾಕಾರರ ಬಾಯಿ ಮುಚ್ಚಿಸಿದೆ. ಜತೆಗೆ ಬಿ.ಎಸ್.ಯಡಿಯೂರಪ್ಪ ಅವರಿಗೂ ದೀಪಾವಳಿ ಉಡುಗೊರೆ ನೀಡಿದೆ.
ಪಂಚರಾಜ್ಯಗಳ ಚುನಾವಣೆ ನಡುವೆಯೇ, ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ವೇದಿಕೆಯನ್ನು ಭರ್ಜರಿಯಾಗಿಯೇ ಸಿದ್ಧಪಡಿಸಿಕೊಳ್ಳಲು ಮುಂದಡಿ ಇಟ್ಟಿರುವ ಹೈಕಮಾಂಡ್, ಎಲ್ಲವನ್ನೂ ಅಳೆದು ತೂಗಿ ಲೆಕ್ಕಾಚಾರ ಹಾಕಿಯೇ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಿದೆ.
ಸಮುದಾಯದ ಮೇಲಿನ ಹಿಡಿತ:ಲಿಂಗಾಯತ ವೀರಶೈವ ಮಠಗಳ ವಿಶ್ವಾಸವನ್ನು ದೊಡ್ಡ ಪ್ರಮಾಣದಲ್ಲಿ ಸಂಪಾದಿಸಿಕೊಂಡಿದ್ದ ಯಡಿಯೂರಪ್ಪ, ಯಾವುದೇ ಸಂದರ್ಭದಲ್ಲಿಯೂ ಸಮುದಾಯದ ಮೇಲಿನ ಬಿಗಿ ಹಿಡಿತವನ್ನು ಸಡಲಿಸಲಿಲ್ಲ. ಸದಾ ಯಡಿಯೂರಪ್ಪ ಬೆನ್ನಗೆ ನಿಂತಿದ್ದ ಈ ಸಮುದಾಯ ಮುಂದಿನ ನಾಯಕನ ಸ್ಥಾನದಲ್ಲಿ ಸಹಜವಾಗಿಯೇ ವಿಜಯೇಂದ್ರ ಅವರಿಗೆ ಮಣೆ ಹಾಕಿತ್ತು. ವಿಜಯೇಂದ್ರ ಪ್ರವಾಸ ಮಾಡಿದ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಯುವ ಸಮುದಾಯ ಅವರ ಬೆನ್ನಿಗೆ ನಿಂತಿದ್ದು ನೋಡಿದಾಗಲೇ ಅವರು ಭವಿಷ್ಯದ ನಾಯಕನಾಗಿ ಬೆಳೆಯುತ್ತಿರುವುದು ಹೈಕಮಾಂಡ್​ಗೆ ನಿಧಾನವಾಗಿ ಅರ್ಥವಾಗತೊಡಗಿತ್ತು. ಅದರ ಫಲಿತಾಂಶವೇ ಈಗಿನ ಆಯ್ಕೆಗೆ ಕಾರಣ ಎಂದರೂ ತಪ್ಪಿಲ್ಲ.
ಬಿಎಸ್​ವೈ ಉತ್ತರಾಧಿಕಾರಿ:ಐದು ದಶಕಗಳ ಕಾಲ ಬಿಜೆಪಿಯನ್ನು ಹೋರಾಟದ ಕಿಚ್ಚಿನಿಂದಲೇ ಕಟ್ಟಿ ಬೆಳೆಸಿದ ಬಿ.ಎಸ್.ಯಡಿಯೂರಪ್ಪ ಅವರ ನಂತರದ ಉತ್ತರಾಧಿಕಾರಿ ಯಾರು ಎನ್ನುವ ಪಕ್ಷದೊಳಗಿನ ವೀರಶೈವ ಲಿಂಗಾಯತ ಸಮುದಾಯದ ಕೆಲ ನಾಯಕರ ಪ್ರಶ್ನೆಗೂ ವಿಜಯೇಂದ್ರ ಆಯ್ಕೆ ಮೂಲಕವೇ ಹೈಕಮಾಂಡ್ ಉತ್ತರ ನೀಡಿದೆ.
ಷಡ್ಯಂತ್ರಗಳ ನಡುವೆ ಸಹನೆ:ವಿಜಯೇಂದ್ರ ನಡೆದು ಬಂದ ಹಾದಿ ಸುಲಭವೇನಲ್ಲ. ಹೊರಗಿನ ಸವಾಲುಗಳಿಗಿಂತ ಪಕ್ಷದೊಳಗಿನ ಸವಾಲುಗಳನ್ನು ಎದುರಿಸಿದ್ದೇ ಹೆಚ್ಚು. ಅನೇಕ ಅಡ್ಡಿ ಆತಂಕಗಳ ನಡುವೆಯೂ ಅವರು ಸಹನೆ ಕಳೆದುಕೊಳ್ಳಲಿಲ್ಲ. 2018ರಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧವಾಗಿದ್ದ ಅವರಿಗೆ ಪಕ್ಷದೊಳಗಿನ ಷಡ್ಯಂತ್ರಕ್ಕೆ ಸಿಲುಕಿ ಟಿಕೆಟ್ ವಂಚಿತರಾದರು. ಕಳೆದ ಬಾರಿ ತಮ್ಮದೇ ಸರ್ಕಾರ ಇದ್ದಾಗಲೂ ವಿಧಾನ ಪರಿಷತ್ ಟಿಕೆಟ್ ವಂಚಿತರಾಗಬೇಕಾಯಿತು. ಆದರೂ, ತನಗೆ ಅನ್ಯಾಯವಾಗುತ್ತಿದೆ ಎಂದು ಸ್ಪೋಟಗೊಳ್ಳಲಿಲ್ಲ. ತಂದೆಯ ಕಿವಿ ಮಾತು ಕೇಳಿಯೇ ನೋವು ನುಂಗಿಕೊಂಡು ತಣ್ಣಗಾಗಿದ್ದು ಈಗ ಅದು ದೊಡ್ಡ ಫಲವನ್ನೇ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕದ ಹಿಂದೆ ಏನೇನಿದೆ ಲೆಕ್ಕಾಚಾರ?

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ: ಅವರ ಮುಂದಿರುವ ಸವಾಲುಗಳು ಯಾವುವು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
