ರಾಮಾಯಣವು ಒಂದು ಅದ್ಭುತವಾದ ಕಥೆಯೆಂಬುದರಲ್ಲಿ ಸಂಶಯವಿಲ್ಲ. ಆದರೆ ಅದನ್ನು ಬರೀ ಕಥೆಯೆಂದು ಭಾರತೀಯ-ಪರಂಪರೆ ಗಣಿಸುವುದಿಲ್ಲ. ಮೂಲ-ವಾಲ್ಮೀಕಿ ರಾಮಾಯಣವನ್ನು ನಿತ್ಯವೂ ಒಂದಿಷ್ಟು ಪಠಿಸುವುದುಂಟು. ಆದರೆ ಪಠಿಸಲು ಪರಂಪರಾಗತವಾದ ಕ್ರಮವಿದೆ. ಅದನ್ನು ಪಾರಾಯಣವೆನ್ನುವರು. ಪಾರಾಯಣಕ್ರಮದಲ್ಲಿ ಆರಂಭದಲ್ಲಿ ಕೆಲವು ನಮಸ್ಕಾರ-ಶ್ಲೋಕಗಳನ್ನೂ, ಮುಗಿಸುವಾಗ ಕೆಲವು ಮಂಗಲ-ಶ್ಲೋಕಗಳನ್ನೂ, ಹೇಳುವುದುಂಟು; ಅವನ್ನು ಉಪಕ್ರಮ ಹಾಗೂ ಸಮಾಪನ ಎನ್ನುತ್ತಾರೆ.
ಸಮಾಪನದಲ್ಲಿ ರಾಮ-ಮಂಗಳಗಳನ್ನು ಹೇಳುವಲ್ಲಿ, ಜಟಾಯು ವಿಗೆ ರಾಮನು ಮಾಡಿದ ಅನುಗ್ರಹವನ್ನು ಸ್ಮರಿಸುವ ಶ್ಲೋಕವೊಂದು ಕೆಲ ಸಂಪ್ರದಾಯಗಳಲ್ಲುಂಟು. ದಂಡಕಾರಣ್ಯದಲ್ಲಿ ವಾಸಮಾಡಿ, ರಾಕ್ಷಸರನ್ನು ಖಂಡಿಸಿ (ಎಂದರೆ ಸಂಹರಿಸಿ), ಗೃಧ್ರ-ರಾಜನಾದ ಭಕ್ತ-ಜಟಾಯುವಿಗೆ ಮುಕ್ತಿಯಿತ್ತವನಿಗೆ ಮಂಗಳವಾಗಲಿ ಎನ್ನುತ್ತದೆ ಆ ಶ್ಲೋಕ: ಮುಕ್ತಿದಾಯಾಸ್ತು ಮಂಗಲಂ.
ಏನು ಜಟಾಯುವಿನ ವಿಶೇಷ? ಎಂಬ ಪ್ರಶ್ನೆ ಸಹಜವಷ್ಟೆ. ಅರಣ್ಯಕಾಂಡದಲ್ಲಿ ನಾವು ಜಟಾಯುವನ್ನು ಕಾಣುತ್ತೇವೆ. ಮೊಟ್ಟಮೊದಲಿಗೆ ಆತನನು ಕಂಡಾಗ ರಾಮಲಕ್ಷ್ಮಣರಿಬ್ಬರೂ ಆತನನ್ನು ರಾಕ್ಷಸನೆಂದೇ ಭಾವಿಸಿದ್ದರು! ವೃದ್ಧ-ಜಟಾಯುವಿನ ಸೌಮ್ಯವೂ ಮಧುರವೂ ಆದ ಮಾತು ಆತನ ವಿಷಯದಲ್ಲಿ ಇವರಿಗೆ ಸಂತೋಷವುಂಟುಮಾಡಿತು. ದಶರಥನ ಸ್ನೇಹಿತನು ಆತನೆಂಬುದು ತಿಳಿಯಿತು. ತನ್ನ ವಂಶಾವಲಿಯನ್ನು ತಿಳಿಸಿದ ಆತ ತಾನಾಗಿ ಒಂದು ಮಾತನಾಡುತ್ತಾನೆ: ನೀವಿಬ್ಬರೂ ಹೊರಗೆ ಹೋಗಿರುವಲ್ಲಿ ಸೀತೆಯನ್ನು ರಕ್ಷಿಸುವೆನೆನ್ನುತ್ತಾನೆ. ತನ್ನ ಮಾತನ್ನು ಉಳಿಸಿಕೊಳ್ಳಲೆಳಸುತ್ತಾನೆ ಕೂಡ.
ಇಷ್ಟಾಗಿಯೂ, ಮಾಯಾಮೃಗ -ಪ್ರಸಂಗದಲ್ಲಿ, ಮಾರೀಚ- ಸಂಹಾರವಾದ ಬಳಿಕ ರಾಮನು ಹಿಂತಿರುಗುತ್ತಾ, ಲಕ್ಷ್ಮಣನೊಬ್ಬನೇ ಬರುತ್ತಿರುವುದನ್ನು ಕಂಡು ಕಂಗಾಲಾಗುತ್ತಾನೆ. ‘ಏನು ಕೆಲಸ ಮಾಡಿದೆ? ಸೀತೆಯೊಬ್ಬಳನ್ನೇ ಬಿಟ್ಟು ಬರುವುದೇ?!’ – ಎಂದು ಆಕ್ರೋಶದಿಂದ ಉದ್ಗರಿಸುತ್ತಾನೆ. ರಾಕ್ಷಸರು ಅವಳನ್ನು ತಿಂದುಹಾಕಿರಲಿಕ್ಕೂ ಸಾಕೆಂದುಕೊಳ್ಳುತ್ತಾನೆ. ‘ಹಾ ಸೀತೇ! ಹಾ ಲಕ್ಷ್ಮಣಾ!’ ಎಂಬುದಾಗಿ ಮಾರೀಚನು ರಾಮನ ಧ್ವನಿಯಲ್ಲೇ ಕೂಗಿಕೊಂಡನಲ್ಲವೇ (ಮೊಟ್ಟಮೊದಲ ಡೀಪ್ ಫೇಕ್!)? ಅದರಿಂದ ಆಗ(ಗಿರ)ಬಹುದಾದ ಅನರ್ಥವನ್ನು ರಾಮನು ಊಹಿಸಿಕೊಳ್ಳುತ್ತಾನೆ: ತನ್ನ ಪ್ರಾಣದ ಪ್ರಶ್ನೆಯಿದು; ಅಥವಾ ಪ್ರಾಣಕ್ಕಿಂತ ಹೆಚ್ಚಾದವಳ ಜೀವಿತದ ಪ್ರಶ್ನೆಯಿದು!
ತೀವ್ರ-ಶೋಕಾವಿಷ್ಟರಾಗಿ ಸೀತಾನ್ವೇಷಣೆ ಮಾಡುತ್ತಿರುವಲ್ಲಿ ರಕ್ತ- ಸಿಕ್ತನಾದ ಜಟಾಯು ಕಾಣುತ್ತಾನೆ. ಆತನನ್ನು ಕಂಡು ರಾಮನು ಮೊದಲೆಂದು ಕೊಳ್ಳುವುದೇ, ಈ ರೂಪದಲ್ಲಿರುವುದು ಯಾವನೋ ರಾಕ್ಷಸನೇ ಸರಿ! ಸೀತೆಯನ್ನು ಈತನೇ ತಿಂದುಹಾಕಿ ಸುಖವಾಗಿ ನಿದ್ರಿಸುತ್ತಿರಬೇಕು! ಈತನನ್ನೀಗಲೇ ಸಂಹರಿಸಿಬಿಡುವೆ ಎಂಬುದಾಗಿ!
ಅಷ್ಟರಲ್ಲಿ ಜಟಾಯುವೇ ದೀನನಾಗಿ ಮಾತನಾಡಿ, ಸೀತೆಯನ್ನುಳಿಸಲಿಕ್ಕಾಗಿ ಸೆಣಸಿ ಹೆಣಗಿ ತಾನು ರೆಕ್ಕೆ ಕಳೆದುಕೊಂಡು ಬಿದ್ದಿರುವುದನ್ನೂ, ತನಗೆ ಕೊನೆಗಾಲವೀಗ ಬಂದಿರುವುದನ್ನೂ ತಿಳಿಸುತ್ತಾನೆ. ‘ಸೀತಾಪಹರಣ ಮಾಡಿದವನು ರಾವಣ, ದಕ್ಷಿಣದಿಕ್ಕಿಗಾತ ಸಾಗಿದ’ – ಮುಂತಾದ ವಿವರಗಳನ್ನೂ ತಿಳಿಸುತ್ತಾನೆ. ‘ನಿನಗೆ ಸೀತೆ ಮತ್ತೆ ದೊರೆಯುವಳು’ ಎಂದು (ಮುಹೂರ್ತದ ಆಧಾರದ ಮೇಲೆ) ತಿಳಿಸಿ, ಅಸುನೀಗುತ್ತಾನೆ. ನನಗಾಗಿ ಪ್ರಾಣಬಿಟ್ಟ ಈ ಪಕ್ಷಿರಾಜನು ನನಗೆ ಮಹೋಪಕಾರವನ್ನು ಮಾಡಿದ್ದಾನೆ; ತಂದೆ ದಶರಥನೆಂತೋ ಈತನು ನನಗಂತೆಯೇ ಸರಿ: ಈತನಿಗೆ ಸಂಸ್ಕಾರವನ್ನು ಮಾಡಬೇಕು ಎನ್ನುತ್ತಾ ರಾಮನು ಹೀಗನುಗ್ರಹಿಸುತ್ತಾನೆ: ‘ಯಜ್ಞ-ಶೀಲರಿಗೆ ಯಾವ ಗತಿಯೋ, ರಣದಲ್ಲಿ ಹಿಂದಿರುಗದವರಿಗೆ ಯಾವ ಗತಿಯೋ ಆ ಗತಿಯನ್ನು ಇದೋ ನನ್ನ ಆಣತಿಯಂತೆ ನೀನು ಹೊಂದುವವನಾಗು!’ ಜಟಾಯುವಿಗೆ ದಹನ-ಸಂಸ್ಕಾರವನ್ನು ಮಾಡುತ್ತಾನೆ; ಪಿತ್ರ್ಯ-ಮಂತ್ರಗಳನ್ನು ಜಪಿಸುತ್ತಾನೆ. ಗೋದಾವರಿ ಯಲ್ಲಿ ಜಲೋದಕವನ್ನು ಇಬ್ಬರೂ ಬಿಡುತ್ತಾರೆ. ರಾಮನಿಂದಾದ ಸಂಸ್ಕಾರವು ಮಹರ್ಷಿಯೊಬ್ಬನಿಂದಾದ ಸಂಸ್ಕಾರದಂತೆ! – ಎಂದು ವಾಲ್ಮೀಕಿ-ಮಹರ್ಷಿಗಳು ಇದನ್ನು ಚಿತ್ರಿಸಿದ್ದಾರೆ.
ವ್ಯಾಧಿಯು ಬಂದಾಗ ವೈದ್ಯರ ವಶಕ್ಕೆ ರುಗ್ಣನನ್ನು ಒಪ್ಪಿಸುತ್ತೇವೆ. ಅಂತೆಯೇ ಆಧಿನಿವಾರಣೆಗಾಗಿ ಜ್ಞಾನಿಯ ವಶಕ್ಕೆ ಒಪ್ಪಿಸುವುದುಂಟು. ಸಾರಾಂಶವಾಗಿ ‘ಚೈತನ್ಯಾಮೃತವನ್ನು ಕೊಡುವವರ ಉಡಿಗೆ ಚೇತನನನ್ನು ಒಪ್ಪಿಸಬೇಕು’ ಎಂಬುದು ಶ್ರೀರಂಗಮಹಾಗುರುಗಳ ಸಾರವಾದ ವಾಣಿ.
ಪ್ರಕೃತ, ತನ್ನ ಮಾನವ-ವರ್ತನೆಯನ್ನು ಬದಿಗಿಟ್ಟು ದೈವ-ಭಾವದಲ್ಲಿ ನಿಂತು, ಪರಮಾನುಗ್ರಹವನ್ನೂ, ಜೊತೆಗೆ ಸಾಂಗೋಪಾಂಗವಾದ ಉತ್ತರ-ಕ್ರಿಯೆಯನ್ನೂ, ನೆರವೇರಿಸಿದ್ದಾನೆ ಶ್ರೀರಾಮ! ಆತನ ಕೃಪೆಗೆ ಪಾತ್ರನಾದ ಜಟಾಯುವು ಅದೆಷ್ಟು ಧನ್ಯ! ಆತನಿಗೆ ದೊರೆತ ಈ ಸದ್ಗತಿಯನ್ನು ಭಾವಿಸಿಯೇ, ‘ಮುಕ್ತಿದಾಯಾಸ್ತು ಮಂಗಲಂ’ ಎಂದು ರಾಮನಿಗೆ ಮಂಗಳಾಶಾಸನವನ್ನು ಮಾಡುವುದು. ನಮಗೆ ಆಪ್ತರಾದವರು ಮರಣಹೊಂದಿದಾಗ ಅವರಿಗೆ ನಾವು ಸದ್ಗತಿಯನ್ನು ಕೋರಿಯೇವು ಅಷ್ಟೆ. ಆದರೆ ರಾಮನು ಸದ್ಗತಿ-ಪ್ರದಾಯಕ: ಮುಕ್ತಿ-ಪ್ರದ, ಚೈತನ್ಯಾಮೃತದ ಬುಗ್ಗೆ. ಹೀಗೆ ಈ ಪ್ರಸಂಗದಲ್ಲಿ, ಆರಂಭದಲ್ಲಿ ರಾಮನ ಮನುಷ್ಯತ್ವವೂ ಕೊನೆಯಲ್ಲಿ ಸಾಕ್ಷಾದ್-ದೈವತ್ವವೂ ಸುಭಗವಾಗಿ ಪ್ರತಿಪಾದಿತವಾಗಿವೆ, ವಾಲ್ಮೀಕಿ-ರಾಮಾಯಣದಲ್ಲಿ.


ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ಮುಖಂಡ ದೇವರಾಜೇಗೌಡ ಪೊಲೀಸರ ವಶಕ್ಕೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
