| ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಒಂದೇ ಚಿನ್ನದಿಂದ ಮಾಡಿಸಿದ ಹಲವು ಆಭರಣಗಳಿದ್ದಂತೆ ಭಗವಂತನ ಅನೇಕ ಅವತಾರಗಳು. ಅನಂತ ರೂಪಗಳು. ಎಲ್ಲವೂ ಬೇರೆ ಬೇರೆಯಾಗಿ ಕಂಡರೂ ಗುಣ-ಸ್ವರೂಪದಲ್ಲಿ ಯಾವುದೇ ಭೇದವಿಲ್ಲ. ಹಾಗೆಯೇ ವಿಷ್ಣುವಿನ ರಾಮಕೃಷ್ಣ, ಹಯಗ್ರೀವ, ವೇದವ್ಯಾಸ, ವರಾಹ ಅನೇಕ ರೂಪಗಳಲ್ಲಿ ನರಸಿಂಹ ರೂಪವು ಅತಿ ವಿಶಿಷ್ಟವಾದ ಹಾಗೂ ಅತ್ಯುಗ್ರವಾದ ರೂಪ. ಅನಿಷ್ಟಗಳನ್ನು ನಿವೃತ್ತಿ ಮಾಡುವ ಮೂಲಕ ಇಷ್ಟಪ್ರಾಪ್ತಿಯನ್ನು ಮಾಡಿ ದ್ವಿದಳ ಫಲವನ್ನು ಕೊಡುವ ಪರಮದೈವ ನರಸಿಂಹದೇವ. ಆದ್ದರಿಂದಲೇ ಅವನನ್ನು ಪುರಾಣ ಶಾಸ್ತ್ರಗಳಲ್ಲಿ ಹಾಗೂ ಹರಿದಾಸರ ವಾಣಿಯಲ್ಲಿ ಭಯನಿವಾರಣ ಎಂದು ಸಂಬೋಧಿಸಿದ್ದಾರೆ. ಎಲ್ಲರ ಪಾಪಗಳೆಂಬ ಅಂಧಕಾರಕ್ಕೆ ಸೂರ್ಯನಂತಿರುವವನು ನರಸಿಂಹದೇವ. ಈ ನರಸಿಂಹ ಎಂಬ ಶಬ್ದದಲ್ಲಿ ಅನೇಕ ಸ್ವಾರಸ್ಯಗಳು ಅಡಗಿವೆ. ನರ(ಮನುಷ್ಯ) ಸಿಂಹ(ಮೃಗ) ಎರಡೂ ಆಕಾರಗಳನ್ನು ಒಂದೇ ದೇಹದಲ್ಲಿ ಉಳ್ಳವನೇ ‘ನರಸಿಂಹ’. ಅರ ಎಂದರೆದೋಷ. ನಾರ ಎಂದರೆ ದೋಷವೇ ಇಲ್ಲದವ. ಅಂತಹ ದೋಷಮುಕ್ತ ಸಿಂಹ ನರಸಿಂಹ. ನಾರಂ ಎಂದರೆ ವೈಕುಂಠ. ಅಲ್ಲಿಗೆ ಕರೆದೊಯ್ಯುವವ. ನರಸಿಂಹ ರೂಪದಿಂದಲೇ ಎಲ್ಲರಿಗೂ ಮೋಕ್ಷವನ್ನು ಕೊಡುವವ ಎಂದು ಶಾಸ್ತ್ರಗಳು ಸಾರುತ್ತವೆ.
ನರಸಿಂಹಾವತಾರ: ಭಗವಾನ್ ವಿಷ್ಣುವಿನ ನಾಲ್ಕನೇ ಅವತಾರವೇ ನರಸಿಂಹ ರೂಪ. ಅದು ಕೃತಯುಗದ ಇತಿಹಾಸ. ಅದನ್ನು ಸತ್ಯಯುಗವೆಂದೂ ಕರೆದಿದ್ದಾರೆ. ಅಸುರ ಹಿರಣ್ಯಕಶಿಪು ದೇವರು, ಧರ್ಮ, ಸತ್ಯ ಎಲ್ಲದರ ಅಸ್ತಿತ್ವವನ್ನು ಅಲ್ಲಗಳೆದು ಅನ್ಯಾಯದ ರಾಜ್ಯವಾಳಲು ಪ್ರಾರಂಭಿಸಿದ. ಆದರೆ ದೇವರ ಸಂಕಲ್ಪ! ಅಂತಹ ದಾನವನಲ್ಲಿ ಮಹಾದೈವಭಕ್ತ ಪ್ರಹ್ಲಾದ ಜನಿಸಿದ. ಅದು ತಾಯಿಯ ಪುಣ್ಯದ ಬುತ್ತಿ. ನಾರಾಯಣನ ನಾಮಸ್ಮರಣೆಯಲ್ಲಿಯೇ ನಿರತನಾದ ಮಗ ಪ್ರಹ್ಲಾದನನ್ನು ಎಲ್ಲ ಹರಸಾಹಸಗಳಿಂದ ಕೊಲ್ಲಲು ಪ್ರಯತ್ನಿಸಿದ. ಆದರೆ ದೈವ ಕೈ ಹಿಡಿದಾಗ ಯಾವ ಅಪಮೃತ್ಯು ಬರಲಾರದು. ಹಿರಣ್ಯಕಶಿಪುವಿಗೆ ಬ್ರಹ್ಮದೇವರ ವರವಿತ್ತು. ಯಾವ ಮನುಷ್ಯ ದೇವತೆ ಪ್ರಾಣಿಗಳಿಂದಲೂ, ಯಾವ ಆಯುಧ ಅಸ್ತ್ರಗಳಿಂದಲೂ, ಹಗಲು-ರಾತ್ರಿಯಲ್ಲಿಯೂ ಎಂದಿಗೂ ಮೃತ್ಯು ಬರಬಾರದೆಂದು.
ಅದು ವೈಶಾಖದ ಶುಕ್ಲ ಚತುರ್ದಶಿ. ಪ್ರಹ್ಲಾದನ ಭಕ್ತಿಯ ಪರಾಕಾಷ್ಠೆಯನ್ನು ಜಗತ್ತಿಗೆ ತೋರಿಸಲೆಂದೇ ವಿಷ್ಣು ತಾನೇ ಮನುಷ್ಯ-ಮೃಗ ಸೇರಿ ನರಸಿಂಹನಾದ. ಹಗಲು ರಾತ್ರಿ ತೊರೆದು ಮುಸ್ಸಂಜೆಯ ವೇಳೆಗೆ, ಯಾವ ತಂದೆ ತಾಯಿಯೂ ಇಲ್ಲದ ಜನನ ಮರಣಗಳಿಲ್ಲದ ಭಗವಂತ ಕಂಬದಿಂದ ಉದ್ಭವಿಸಿದ. ಮನೆಯ ಒಳಹೊರಗೆ ಬಾರದೇ ಹೊಸ್ತಿಲಲ್ಲಿ ಕುಳಿತು ಯಾವ ಅಸ್ತ್ರ-ಶಸ್ತ್ರಗಳಿಲ್ಲದೇ ಕೈ ಉಗುರಿನಿಂದಲೇ ಆ ದಾನವನ ಸಂಹಾರಗೈದ. ಸತ್ಯಯುಗದಲ್ಲಿ ಭಯೋತ್ಪಾದನೆಯ ಕಾಲವನ್ನು ಅಂತ್ಯಗೊಳಿಸಿದ. ಆ ದಿನವನ್ನೇ ನರಸಿಂಹ ಜಯಂತಿ ಎಂದು ಇಂದಿಗೂ ಭಕ್ತರು ಆಚರಿಸುತ್ತ ಬಂದಿದ್ದಾರೆ. ಮನೆಯ ಹೊಸ್ತಿಲಲ್ಲಿ ನರಸಿಂಹ ದೇವರು ಸದಾ ನೆಲೆಸಿದ್ದಾರೆ ಎಂಬ ಪ್ರತೀತಿ ನಂಬಿಕೆ ಬೆಳೆದು ಬಂದಿದೆ. ಆದ್ದರಿಂದಲೇ ಇಂದಿಗೂ ಎಲ್ಲ ಸಂಪ್ರದಾಯದವರೂ ಬ್ರಾಹ್ಮೀ ಮುಹೂರ್ತದಲ್ಲಿ ಹೊಸ್ತಿಲನ್ನು ತೊಳೆದು ರಂಗವಲ್ಲಿ ಹಾಕಿ ಪೂಜೆ ಮಾಡುತ್ತಾರೆ.
ಎಲ್ಲೆಡೆ ಆಚರಣೆ: ದೇಶದ ತುಂಬೆಲ್ಲ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ನರಸಿಂಹ ಸ್ವಾಮಿಯ ದೇಗುಲಗಳಿವೆ. ಅದರಲ್ಲೂ ಅತೀ ಪ್ರಾಚೀನ ಹಾಗೂ ಪುರಾಣಗಳಲ್ಲಿ ಉಲ್ಲೇಖಗೊಂಡ ಕೆಲವು ಕ್ಷೇತ್ರಗಳು ನಮ್ಮ ಕರ್ನಾಟಕದಲ್ಲಿವೆ. ಕೃಷ್ಣಾ ತೀರದಲ್ಲಿರುವ ಪರಶುರಾಮ ಕ್ಷೇತ್ರವೆಂದೇ ಪ್ರಸಿದ್ಧವಾದ ಶೂರ್ಪಾಲಯ. ನೀರಾ ನಾರಸಿಂಹ, ತೊರವೆ ನಾರಸಿಂಹ, ಅಹೋಬಲ ನಾರಸಿಂಹ, ಮುಕುಟಕಾನ ಹುಬ್ಬಳ್ಳಿಯ ನಾರಸಿಂಹ ಹೀಗೆ ಅನೇಕ ಕ್ಷೇತ್ರಗಳಲ್ಲಿ ನರಸಿಂಹ ಜಯಂತಿ ಉತ್ಸವ ವೈಭವದಿಂದ ನಡೆಯುತ್ತದೆ. ಆಚರಣೆಯಲ್ಲಿಯೂ ವಿಶೇಷ ಕ್ರಮವಿದೆ. ಸಾಯಂಕಾಲದ ವರೆಗೂ ಉಪವಾಸದಿಂದಲೇ ಪೂಜೆ, ಅಭಿಷೇಕ, ಹೋಮ, ಪಾರಾಯಣ ನೆರವೇರಿಸುತ್ತಾರೆ. ಸಂಜೆ 6 ರಿಂದ 6.30 ವರೆಗೆ ಜಯಂತೀಕಾಲವೆಂದು ತಿಳಿಸಿದ್ದಾರೆ. ಎಲ್ಲ ನರಸಿಂಹ ಕ್ಷೇತ್ರಗಳಲ್ಲಿಯೂ ಆ ಸಮಯದಲ್ಲಿ ರಥೋತ್ಸವ ನಡೆಯುತ್ತದೆ. ನಂತರದಲ್ಲಿಯೇ ನರಸಿಂಹ ದೇವರ ನೈವೇದ್ಯ ಹಾಗೂ ಭಕ್ತಾದಿಗಳ ತೀರ್ಥ ಪ್ರಸಾದ ನಡೆಯುವುದು.
ರಾಮಕೃಷ್ಣ ರೂಪವನ್ನು ಸತ್ಯದ ರಕ್ಷಣೆ, ವಿಜಯದ ಅಭಿಲಾಷೆಯಿಂದ ಮಾಡುತ್ತಾರೆ. ವಿದ್ಯೆ ಅಧ್ಯಯನಕ್ಕಾಗಿ ದೇವರ ವೇದವ್ಯಾಸ ಹಯಗ್ರೀವ ರೂಪದ ಉಪಾಸನೆಯನ್ನು ತಿಳಿಸಿದ್ದಾರೆ. ಆರೋಗ್ಯಕ್ಕಾಗಿ ಧನ್ವಂತರಿಯ ಆರಾಧನೆ. ಶತ್ರುಗಳ ನಿಗ್ರಹಕ್ಕೆ, ಅನ್ಯಾಯ ಅಧರ್ಮದ ನಾಶಕ್ಕೆ, ಅದರಲ್ಲೂ ವಿಶೇಷವಾಗಿ ಅಪಮೃತ್ಯು ಪರಿಹಾರಕ್ಕಾಗಿ ಭಯನಿವಾರಣ, ದುರಿತಗಜ ಪಂಚಾನನಎಂದೆಲ್ಲ ಪ್ರಸಿದ್ಧನಾದ ನರಸಿಂಹ ದೇವರ ಉಪಾಸನೆ ಪ್ರಮುಖವಾಗಿದೆ. ಆದ್ದರಿಂದಲೇ ಶ್ರೀಮಧ್ವಾಚಾರ್ಯರು ‘ನೃಸಿಂಹಾದಿಕ ಮನ್ಯಚ್ಚ ದುರಿತಾದಿ ನಿವೃತ್ತಯೇ’ ಎಂದು ವರ್ಣಿಸಿದ್ದಾರೆ. ಭಯೋತ್ಪಾದನೆ, ದುಷ್ಟರ ಹಾವಳಿಯ ಕಾಲದಲ್ಲಿ ನರಸಿಂಹ ಉಪಾಸನೆ ಬಹು ದೊಡ್ಡ ಶ್ರೇಯೋಮಾರ್ಗ.
ಗುಜರಾತ್​ನಲ್ಲಿ ಆತ್ಮಾಹುತಿ ದಾಳಿ ಸಂಚು: ಶ್ರೀಲಂಕಾ ಮೂಲದ 4 ಐಸಿಸ್ ಉಗ್ರರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
