|ಕೀರ್ತಿನಾರಾಯಣ ಸಿ.ಬೆಂಗಳೂರು
ಗಂಭೀರ ಅಪರಾಧಗಳನ್ನು ಎಸಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ದುಷ್ಕರ್ವಿುಗಳಿಗೆ ಕಾರಾಗೃಹದಲ್ಲಿ ರಾಜಾತಿಥ್ಯ ಹಾಗೂ ಅಧಿಕಾರಿಗಳ ಲಂಚಾವತಾರಕ್ಕೆ ಕಡಿವಾಣ ಬೀಳುವ ಕಾಲ ಸನ್ನಿಹಿತವಾಗಿದೆ. ಕರ್ನಾಟಕದ 104 ಕಾರಾಗೃಹಗಳು ಸೇರಿ ಭಾರತದಲ್ಲಿರುವ ಎಲ್ಲ ಮಾದರಿಯ 1350 ಜೈಲುಗಳಲ್ಲಿ ಅಕ್ರಮ ತಡೆಯಲು ಡಿಜಿಟಲ್ ಬೇಲಿ ಬೀಳಲಿದೆ. ಹಾಗೇ, ಕೈದಿಗಳಿಗೆ ಕೌಶಲ ತರಬೇತಿ ಮೂಲಕ ಆದಾಯ ಹೆಚ್ಚಿಸಲೂ ಯೋಜನೆ ಸಿದ್ಧವಾಗಿದೆ.
ಅಗತ್ಯ ಮೂಲಸೌಕರ್ಯ, ಅತ್ಯಾಧುನಿಕ ಭದ್ರತಾ ಸಲಕರಣೆಗಳನ್ನು ಪೂರೈಸುವ ಮೂಲಕ ಜೈಲುಗಳ ಭದ್ರತಾ ವೈಫಲ್ಯ ನಿವಾರಿಸುವುದು, ಕಣ್ಗಾವಲು ಹೆಚ್ಚಿಸುವುದು ಯೋಜನೆ ಉದ್ದೇಶವಾಗಿದೆ. ಜೈಲಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವ ಮೂಲಕ ಕೈದಿಗಳ ಮನಪರಿವರ್ತನೆ ಹಾಗೂ ಕೌಶಲ ತರಬೇತಿಗಾಗಿ ವಿವಿಧ ಕಾರ್ಯಕ್ರಮಗಳನ್ನೂ ಆರಂಭಿಸಲು ಮಾರ್ಗಸೂಚಿ ರೂಪಿಸಲಾಗಿದೆ. 2025ರ ವೇಳೆಗೆ ಪೂರ್ಣಪ್ರಮಾಣದಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಜೈಲುಗಳ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿರುವ ಜೈಲುಗಳು, ಕೈದಿಗಳು, ಜೈಲು ಸಿಬ್ಬಂದಿ ಸಂಖ್ಯೆಯನ್ನಾಧರಿಸಿ ಜೈಲು ಸಮಿತಿ ನೀಡುವ ಶಿಫಾರಸನ್ನು ಪರಿಶೀಲಿಸಿದ ಬಳಿಕ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಕೈದಿಗಳ ಸುಧಾರಣೆ ಕಾರ್ಯಕ್ರಮ:ಕೈದಿಗಳ ಮನಪರಿವರ್ತನೆ ಹಾಗೂ ಸುಧಾರಣೆಗೂ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೌನ್ಸೆಲಿಂಗ್, ಥೆರಪಿ ಹಾಗೂ ಕೌಶಲಾಭಿವೃದ್ಧಿ ಶಿಬಿರಗಳನ್ನು ಆಯೋಜಿಸಲು ಸೂಚಿಸಲಾಗಿದೆ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ತಜ್ಞರನ್ನು ಜೈಲಿಗೆ ಕರೆಸಿ ಕಾರ್ಯಕ್ರಮ ಕೊಡಬೇಕು ಎಂದು ಸೂಚನೆ ನೀಡಲಾಗಿದೆ.
ದೇಶದಲ್ಲಿ ಎಷ್ಟು ಜೈಲುಗಳಿವೆ?:1350 ಜೈಲುಗಳಿವೆ. ಇದರಲ್ಲಿ 617 ಉಪ ಜೈಲುಗಳು, 410 ಜಿಲ್ಲಾ ಜೈಲುಗಳು, 144 ಸೆಂಟ್ರಲ್ ಜೈಲುಗಳು, 86 ತೆರೆದ ಜೈಲುಗಳು, 41 ವಿಶೇಷ ಕಾರಾಗೃಹಗಳು, 31 ಮಹಿಳಾ ಜೈಲುಗಳು, 19 ಬಾಲಾಪರಾಧ ಸುಧಾರಣಾ ಜೈಲುಗಳು.
ಮಾರ್ಗಸೂಚಿ ಅನ್ವಯ ಜಾರಿ:ರಾಜ್ಯದಲ್ಲಿರುವ ಜೈಲುಗಳಿಗೆ ಅಗತ್ಯ ಸಲಕರಣೆಗಳನ್ನು ಈಗಾಗಲೇ ನೀಡಲಾಗಿದೆ. ಕೇಂದ್ರ ಸರ್ಕಾರವೂ ಯೋಜನೆ ರೂಪಿಸಿದ್ದು, ಅಲ್ಲಿಂದ ಮಾರ್ಗಸೂಚಿ ಬಂದ ನಂತರ ಜಾರಿಗೊಳಿಸಲಾಗುತ್ತದೆ ಎಂದು ರಾಜ್ಯ ಕಾರಾಗೃಹ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರದ ಗಮನ ಸೆಳೆದಿದ್ದ ಚಿನ್ನಮ್ಮನ ರಾಜಾತಿಥ್ಯ:ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿದ್ದ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾಗೆ ರಾಜಾತಿಥ್ಯ ನೀಡಿದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲು ಜೈಲಧಿಕಾರಿಗಳು 2 ಕೋಟಿ ರೂ. ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣವನ್ನು ಆಗ ಕಾರಾಗೃಹ ಇಲಾಖೆ ಡಿಐಜಿ ಆಗಿದ್ದ ಡಿ. ರೂಪಾ ಬಯಲಿಗೆಳೆದಿದ್ದರು. ನಂತರ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ಆಯೋಗ ರಚಿಸಿತ್ತು. ಆಗಿನ ಡಿಜಿಪಿ ಸೇರಿ ಜೈಲಧಿಕಾರಿಗಳ ವಿರುದ್ಧ ಆರೋಪವಿತ್ತು. ಕೆಲ ಜೈಲು ಅಧಿಕಾರಿಗಳ ವಿರುದ್ಧ ಇತ್ತೀಚೆಗೆ ಎಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ರಾಜಸ್ಥಾನದಲ್ಲಿ ಅತಿಹೆಚ್ಚು ಜೈಲುಗಳು:ರಾಜಸ್ಥಾನದಲ್ಲಿ ಅತಿ ಹೆಚ್ಚು 144 ಜೈಲುಗಳಿವೆ. ತಮಿಳುನಾಡಿನಲ್ಲಿ 141, ಮಧ್ಯಪ್ರದೇಶ 131, ಆಂಧ್ರಪ್ರದೇಶ 106, ಕರ್ನಾಟಕ 104 ಹಾಗೂ ಒಡಿಶಾದಲ್ಲಿ 91 ಜೈಲುಗಳಿವೆ. ದೇಶದಲ್ಲಿರುವ ಒಟ್ಟಾರೆ ಜೈಲುಗಳ ಪೈಕಿ ಈ 6 ರಾಜ್ಯಗಳಲ್ಲೇ ಶೇ.53.11 ಜೈಲುಗಳಿವೆ. ದೆಹಲಿಯಲ್ಲಿ ಅತಿಹೆಚ್ಚು 14 ಸೆಂಟ್ರಲ್ ಜೈಲುಗಳಿವೆ. 15 ರಾಜ್ಯಗಳಲ್ಲಿ ಮಾತ್ರ ಪ್ರತ್ಯೇಕ ಮಹಿಳಾ ಜೈಲುಗಳಿವೆ.
ಹೈಕೋರ್ಟ್ ಆದೇಶ:ರಾಜ್ಯದ ಜೈಲುಗಳಲ್ಲಿ ಮೊಬೈಲ್, ಡ್ರಗ್ಸ್ ಬಳಕೆ, ಕಳ್ಳ ಸಾಗಾಣಿಕೆ ಸೇರಿ ಅಕ್ರಮ ಚಟುವಟಿಕೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಕ್ರಮ ತಡೆಯುವಂತೆ ಹೈಕೋರ್ಟ್ ಈಚೆಗೆ ಆದೇಶಿಸಿತ್ತು. ಅಕ್ರಮ ಚಟುವಟಿಕೆ ತಡೆಯುವ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಿ ಸರ್ಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಕನಿಷ್ಠ ತಿಂಗಳಿಗೆ ಒಮ್ಮೆ ತಮ್ಮ ವ್ಯಾಪ್ತಿಯ ಜೈಲುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜೈಲಿನಲ್ಲಿ ಮೊಬೈಲ್ ಬಳಕೆ ಮತ್ತು ನಿಷೇಧಿತ ವಸ್ತುಗಳ ಕಳ್ಳ ಸಾಗಾಣಿಕೆ, ಅಪರಾಧ ಚಟುವಟಿಕೆ ತಡೆ ಸೇರಿ 15 ಅಂಶಗಳ ಬಗ್ಗೆ ಗೃಹ ಇಲಾಖೆ ಸೂಚಿಸಿದೆ.
ಜೈಲಲ್ಲಿ ಎಲ್ಲವೂ ಸಿಗುತ್ತೆ:ರೌಡಿಗಳಿಗೆ ವಿಶೇಷ ಸೌಲಭ್ಯ ಕೊಟ್ಟಿರುವ ದೃಶ್ಯಾವಳಿಯೊಂದು ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಬೆಳಗಾವಿ ಜೈಲಿನ ಡಿಐಜಿ ಸೋಮಶೇಖರ್ ಅವರನ್ನು ಸರ್ಕಾರ ತನಿಖಾಧಿಕಾರಿಯಾಗಿ ನೇಮಿಸಿತ್ತು. ಅಲ್ಲದೆ, ಕೈದಿಗಳು ಗಾಂಜಾ ಹಾಗೂ ಮೊಬೈಲ್ ಬಳಸಿರುವ ಸಂಬಂಧ 12 ಎಫ್​ಐಆರ್ ದಾಖಲಾಗಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ, ಹಲವು ವರ್ಷಗಳಿಂದ ಉಳಿದಿದ್ದ 54 ಜೈಲು ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿತ್ತು.
ಕಾರಾಗೃಹಗಳ ಆಧುನೀಕರಣ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಅದರಂತೆ ರಾಜ್ಯದ ಎಲ್ಲ ಜೈಲುಗಳು ಆಧುನೀಕರಣ ಗೊಳ್ಳಲಿವೆ. ಕೇಂದ್ರದ ಮಾರ್ಗಸೂಚಿ ಅನ್ವಯ ಈ ವರ್ಷದಿಂದಲೇ ಯೋಜನೆ ಅನುಷ್ಠಾನ ಪ್ರಕ್ರಿಯೆ ಆರಂಭವಾಗಲಿದೆ. ಕೇಂದ್ರದ ಜತೆಗೆ ರಾಜ್ಯ ಸರ್ಕಾರದಿಂದಲೂ ಆರ್ಥಿಕ ನೆರವು ಸಿಗಲಿದೆ.
|ಡಾ.ಅಲೋಕ್ ಮೋಹನ್ಡಿಜಿಪಿ, ಕಾರಾಗೃಹ ಇಲಾಖೆ
ಕೇಂದ್ರ ಸರ್ಕಾರದ ಜೈಲುಗಳ ಆಧುನೀಕರಣ ಯೋಜನೆ ಕಾರಾಗೃಹಗಳಲ್ಲಿ ನಡೆಯುವ ಭ್ರಷ್ಟಾಚಾರ ತಡೆಗೆ ಅನುಕೂಲವಾಗಲಿದೆ. ಬಾಡಿ ವೋರ್ನ್ ಕ್ಯಾಮರಾ, ಮೊಬೈಲ್ ಜಾಮರ್ ಅಳವಡಿಕೆ, ವಿಡಿಯೋ ಕಾನ್ಪೆರೆನ್ಸ್ ಎಲ್ಲವೂ ಉಪಯುಕ್ತ. ಆದರೆ, ಜೈಲು ಸಿಬ್ಬಂದಿ ಬಾಡಿ ವೋರ್ನ್ ಕ್ಯಾಮರಾ ಸಮವಸ್ತ್ರದ ಮೇಲೆ ಧರಿಸಿ ಆನ್ ಮಾಡಿಕೊಂಡಿರಬೇಕು. ಅದೇ ರೀತಿ ಮೊಬೈಲ್ ಜಾಮರ್ಸ್ ಕೂಡ ಆನ್ ಆಗಿರಬೇಕು. ಆಫ್​ನಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಪ್ರಯೋಜನವಿಲ್ಲ. ಈ ಬಗ್ಗೆ ಮೇಲಧಿಕಾರಿಗಳು ನಿಗಾ ವಹಿಸಬೇಕು.
|ಡಿ.ರೂಪಾಹಿರಿಯ ಐಪಿಎಸ್ ಅಧಿಕಾರಿ
ಎಲ್ಲೆಲ್ಲಿ ಅನ್ವಯ?:ಕೇಂದ್ರ ಕಾರಾಗೃಹಗಳು, ಜಿಲ್ಲಾ ಜೈಲುಗಳು, ಉಪ ಕಾರಾಗೃಹಗಳು, ಮಹಿಳಾ ಜೈಲುಗಳು, ತೆರೆದ ಜೈಲುಗಳು ಹಾಗೂ ವಿಶೇಷ ಜೈಲುಗಳು.
ಬಾಡಿವೋರ್ನ್ ಕ್ಯಾಮರಾ ಕಡ್ಡಾಯ:ಜೈಲು ಸಿಬ್ಬಂದಿ ಬಾಡಿವೋರ್ನ್ ಕ್ಯಾಮರಾ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಕೈದಿಗಳ ಮೇಲೆ ನಿಗಾ ವಹಿಸಲು ಅನುಕೂಲವಾಗುತ್ತದೆ. ಅಶಿಸ್ತು, ಕೈದಿಗಳ ಗಲಾಟೆ ರೆಕಾರ್ಡ್ ಆಗುತ್ತದೆ. ಜತೆಗೆ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಲಂಚ ಕೇಳುತ್ತಾರೆ ಎಂಬ ಆರೋಪಕ್ಕೂ ತಡೆಬೀಳಲಿದೆ. ನ್ಯಾಯಾಂಗ ಸಿಬ್ಬಂದಿ ಹಾಗೂ ಪೊಲೀಸರು ದಿಢೀರ್ ಪರಿಶೀಲನೆಗೆ ಬಂದಾಗಲೂ ಬಾಡಿವೋರ್ನ್ ಕ್ಯಾಮರಾ ಸಹಕಾರಿಯಾಗಲಿದೆ.
ರಾಜ್ಯದಲ್ಲಿ 4 ಹೊಸ ಜೈಲು:ರಾಜ್ಯದಲ್ಲಿ ಹೊಸದಾಗಿ 4 ಜೈಲುಗಳನ್ನು ಸ್ಥಾಪಿಸಲಾಗುತ್ತಿದೆ. ಬೆಂಗಳೂರು, ಮಂಗಳೂರು, ಬೀದರ್ ಹಾಗೂ ವಿಜಯಪುರದಲ್ಲಿ ಕಾರಾಗೃಹಗಳು ಆರಂಭವಾಗಲಿವೆ. ಈಗಾಗಲೇ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ತಲಾ ಜೈಲಿನಲ್ಲಿ 1000 ಕೈದಿಗಳನ್ನು ಇರಿಸುವ ಸಾಮರ್ಥ್ಯ ಹೊಂದಿರಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
