ಬೆಂಗಳೂರು:ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ದಿನೇ ದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹೋಟೆಲ್​ನಲ್ಲಿ ಬಾಂಬ್ ಇಟ್ಟ ಬಳಿಕ ಸರ್ಕಾರಿ ಬಸ್​ನಲ್ಲಿ ಕರ್ನಾಟಕ ಸುತ್ತುತ್ತಿರುವ ಬಾಂಬರ್, ಘಟನೆಯ ದಿನ ಕುಂದಲಹಳ್ಳಿ ಸಮೀಪದ ಹೂಡಿ ಪ್ರಾರ್ಥನಾ ಮಂದಿರಕ್ಕೆ ತೆರಳಿ ಶರ್ಟ್, ಟೋಪಿ ಬದಲಿಸಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಬೆಳಕಿಗೆ ಬಂದಿದೆ.
ಮತ್ತೊಂದೆಡೆ ಕೆಫೆಗೆ ಬಾಂಬ್ ಇಡಲು ಮಾರ್ಚ್ 1ರಂದು ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸುವಾಗ ಶಂಕಿತ ವ್ಯಕ್ತಿಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕ್ಯಾಮರಾ ಕಂಡು ಬಸ್​ನಿಂದ ಇಳಿದು ಹೋಗುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್​ಐಎ, ಸಿಸಿಬಿ ಮತ್ತು ವೈಟ್​ಫೀಲ್ಡ್ ವಿಭಾಗದ ಪೊಲೀಸರು, ಘಟನಾ ಸ್ಥಳದ ಸುತ್ತಲಿನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಶಂಕಿತನ ಚಲನವಲನದ ದೃಶ್ಯಾವಳಿಗಳು ಪತ್ತೆಯಾಗಿದ್ದವು. ಇವುಗಳ ಪರಿಶೀಲನೆ ವೇಳೆ ಬಿಎಂಟಿಸಿ ಬಸ್ಸಿನಲ್ಲಿ ಸಂಚರಿಸಿರುವ ಮಾಹಿತಿ ತಿಳಿದು ಪೊಲೀಸರು, ಕಾಡುಗೋಡಿ-ಕುಂದಲಹಳ್ಳಿ ಮಾರ್ಗದ 14ಕ್ಕೂ ಹೆಚ್ಚಿನ ಬಿಎಂಟಿಸಿ ಬಸ್​ಗಳಲ್ಲಿ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಓಡಾಟದ ದೃಶ್ಯ ಸಿಕ್ಕಿದೆ.
ಕಟ್ಟು ಬಿಗಿಯಾಗಿದ್ದರೇ ಹೆಚ್ಚು ಸಾವು-ನೋವು:ಕೆಫೆ ಬಾಂಬ್ ಸ್ಪೋಟಕಕ್ಕೆ ನಿಷೇಧಿತ ಅಮೋನಿಯಂ ನೈಟ್ರೇಟ್​ನ್ನು ಶಂಕಿತ ಬಳಕೆ ಮಾಡಿದ್ದ. ಇದನ್ನು ಕಲ್ಲು ಗಣಿಗಾರಿಕೆಯಲ್ಲಿ ಬಂಡೆ ಸಿಡಿಸಲು ಬಳಸಲಾಗುತ್ತದೆ. ಇದರ ಜತೆಗೆ ನಟ್, ಬೋಲ್ಟ್​ಗಳು, ಸರ್ಕ್ಯೂಟ್, ಟೈಮರ್ ಬಳಸಿ ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದ. ಕಾಲೇಜು ವಿದ್ಯಾರ್ಥಿಗಳು ಪ್ರಾಜೆಕ್ಟ್​ಗೆ ಬಳಸುವ ಮತ್ತು ಆನ್​ಲೈನ್​ನಲ್ಲಿ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸರ್ಕ್ಯೂಟ್ ಬೋರ್ಡ್ ಬಳಸಲಾಗಿದೆ. ಟೈಮರ್​ಗೆ ಸಂಪರ್ಕ ಕಲ್ಪಿಸಿದಾಗ ಬ್ಯಾಂಡೇಜ್ ಬಟ್ಟೆಯಿಂದ (ಹತ್ತಿ ಬಟ್ಟೆಯಲ್ಲ) ಬಿಗಿಯಲಾಗಿತ್ತು. ಬಳಿಕ ಟಿಫನ್ ಕ್ಯಾರಿಯರ್ ಒಯ್ಯುವ ಚಿಕ್ಕ ಬ್ಯಾಗ್​ನಲ್ಲಿ ಇಟ್ಟು ಕೆಫೆಗೆ ತಂದಿದ್ದಾನೆ. ಆದರೆ, ಬಾಂಬ್ ಅನ್ನು ಟಿಫನ್ ಬಾಕ್ಸ್​ನಲ್ಲಿ ಇಟ್ಟಿರಲಿಲ್ಲ. ಘಟನಾ ಸ್ಥಳದಲ್ಲಿ ಟಿಫನ್ ಬಾಕ್ಸ್ ಚೂರುಗಳು ಸಿಕ್ಕಿಲ್ಲ.
ಬ್ಯಾಂಡೇಜ್ ಕಟ್ಟು ಬಿಗಿಯಾಗಿಲ್ಲದ ಕಾರಣ ಉಷ್ಣಾಂಶ ಕಡಿಮೆಯಾಗಿ ಸ್ಪೋಟದ ತೀವ್ರತೆ ಕಡಿಮೆ ಆಗಿದೆ. ಕಟ್ಟು ಬಿಗಿಯಾಗಿದ್ದರೆ ನೆಲದ ಮಟ್ಟದಲ್ಲಿ ಸ್ಪೋಟಿಸಿ ಹೆಚ್ಚಾಗಿ ಸಾವು-ನೋವು ಸಂಭವಿಸುತ್ತಿತ್ತು. ಆದರೆ, ಬಾಂಬ್ ಮೇಲಕ್ಕೆ ಚಿಮ್ಮಿ ತಾರಸಿ ತೂತು ಬಿದ್ದಿದೆ. ಅಳವಡಿಸಿದ್ದ ನಟ್, ಬೋಲ್ಟ್ ಸಿಡಿದು ಜನರಿಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆಯೂ ಅಮೋನಿಯಂ ಪತ್ತೆ:ಮಂಗಳೂರು ಮತ್ತು ಶಿವಮೊಗ್ಗ ಪ್ರಕರಣಗಳಲ್ಲಿ ಸಲ್ಪರ್ (ಗನ್ ಪೌಡರ್) ಮತ್ತು ಪೋಟಾಶಿಯಂ ನೈಟ್ರೇಟ್ (ಬೆಂಕಿ ಕಡ್ಡಿಯಲ್ಲಿ ಬಳಸುವ ರಾಸಾಯನಿಕ ವಸ್ತು) ಬಳಸಲಾಗಿತ್ತು. ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದಲ್ಲಿ ಶಂಕಿತ ಸಲ್ಪರ್ ಮತ್ತು ಪೋಟಾಶಿಯಂ ನೈಟ್ರೇಟ್ ಜತೆ ಅಲ್ಪಪ್ರಮಾಣದ ಅಮೋನಿಯಂ ಮಿಶ್ರಣ ಮಾಡಿ ಕಚ್ಚಾ ಬಾಂಬ್ ಸಿದ್ದಪಡಿಸಿರುವ ಅನುಮಾನವಿದೆ. 2015ರಲ್ಲಿ ಪುಲಿಕೇಶಿನಗರದಲ್ಲಿ ವಾಸವಾಗಿದ್ದ ಭಟ್ಕಳದ ವೈದ್ಯನೊಬ್ಬನ ಮನೆ ಮೇಲೆ ಐಎಸ್​ಡಿ ಮತ್ತು ಬೆಂಗಳೂರು ಪೊಲೀಸರು ದಾಳಿ ನಡೆಸಿದಾಗ ಅಪಾರ ಪ್ರಮಾಣದ ಅಮೋನಿಯಂ ಪತ್ತೆ ಆಗಿತ್ತು.
ಭಟ್ಕಳ, ಬಳ್ಳಾರಿಯಲ್ಲಿ ಶೋಧ:ಬೆಂಗಳೂರು ಬಾಂಬರ್ ಬೆನ್ನತ್ತಿರುವ ಪೊಲೀಸರು ಭಟ್ಕಳ ಪಟ್ಟಣ ಹಾಗೂ ತಾಲೂಕಿನ ಎಲ್ಲ ವಸತಿಗೃಹಗಳಲ್ಲಿ ಶೋಧ ನಡೆಸಿದ್ದಾರೆ. ಗುರುವಾರ ಬೆಳಗಿನ ಜಾವ ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ ಎನ್​ಐಎ ತಂಡಕ್ಕೆ ಬಳ್ಳಾರಿ-ತುಮಕೂರು ಪೊಲೀಸರು ಸಹಕರಿಸಿದರು. ಬಾಂಬ್ ಬ್ಲಾಸ್ಟ್ ನಡೆದ ನಂತರದಲ್ಲಿ ಆರೋಪಿ ತುಮಕೂರು ಮೂಲಕ ಬಳ್ಳಾರಿ ಬಸ್ ನಿಲ್ದಾಣಕ್ಕೆ ಬಂದಿದ್ದ ಎಂಬ ಮಾಹಿತಿ ಜಾಡು ಹಿಡಿದು ಎನ್​ಐಎ ತನಿಖೆ ಕೈಗೊಂಡಿದೆ. ಬಳ್ಳಾರಿಯಿಂದ ಬಾಂಬರ್ ಭಟ್ಕಳ ಕಡೆ ಬಂದಿರಬಹುದು ಎಂದು ಮಾಹಿತಿ ಬಂದಿದ್ದರಿಂದ ಶೋಧ ನಡೆಸಲಾಯಿತು. ಮತ್ತೊಂದೆಡೆ ತುಮಕೂರು ಮತ್ತು ಬೀದರ್ ಜಿಲ್ಲೆ ಮೂಲಕ ಬಾಂಬರ್ ಮಹಾರಾಷ್ಟ್ರದ ಪುಣೆಗೆ ಕಾಲ್ಕಿತ್ತಿರಬಹುದೆಂಬ ಅನುಮಾನವೂ ಇದೆ.
ರೇಖಾ ಚಿತ್ರ ರಚಿಸಿದ ಕಲಾವಿದ:ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಸಿಸಿ ಕ್ಯಾಮರಾ ಆಧರಿಸಿದ ಭಾವಚಿತ್ರವನ್ನು ಎನ್​ಐಎ ಬಿಡುಗಡೆ ಮಾಡಿದ ಬೆನ್ನಲ್ಲೇ ಆ ಭಾವಚಿತ್ರ ಆಧರಿಸಿ ಕಲಾವಿದ ಹರ್ಷ ಶಂಕಿತನ ವಿವಿಧ ಬಗೆಯ ರೇಖಾಚಿತ್ರ ರಚಿಸಿದ್ದಾರೆ. ರೇಖಾಚಿತ್ರವನ್ನು ಎಕ್ಸ್​ನಲ್ಲಿ ಎನ್​ಐಎ, ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಅಗತ್ಯ ಇದ್ದರೆ ತನಿಖೆಗೆ ಬಳಸಿಕೊಳ್ಳಿ ಎಂದು ಹರ್ಷ ಕೋರಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + four =
Remember me
