ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರಸರಿಯುವ ಹೇಳಿಕೆಯೂ ರಾಜ್ಯ ಬಿಜೆಪಿಯಲ್ಲಿ ಕಂಪನ ಸೃಷ್ಟಿಸಿದೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಪ್ರವಾಸಕ್ಕೆ ಮುನ್ನ ಬಿಎಸ್​ವೈ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಶಿಕಾರಿಪುರ ಕ್ಷೇತ್ರದ ಜನರ ಒತ್ತಾಸೆಗೆ ಕಟ್ಟುಬಿದ್ದ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಸ್ವಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಸಲಹೆ ನೀಡಿದ್ದಾರೆ ಹೊರತು ಬೇರೇನೂ ಅಲ್ಲ ಬೊಮ್ಮಾಯಿ ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ಹಾಗೆಯೇ, ಯಡಿಯೂರಪ್ಪ ಅಭಿಪ್ರಾಯದ ಪರಿಣಾಮ, ಪ್ರಭಾವವನ್ನು ದೆಹಲಿ ನಾಯಕರಿಗೆ ತಲುಪಿಸಲೂ ಸಹ ಸಿಎಂ ಮುಂದಾಗಿದ್ದಾರೆ.
ಶನಿವಾರ ಮಾಧ್ಯಮದ ಮುಂದೆ ಹಾಜರಾದ ಬಿ.ಎಸ್. ಯಡಿಯೂರಪ್ಪ, ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ನಿರ್ಧಾರವೇ ಅಂತಿಮ. ವಿಜಯೇಂದ್ರ ಬೇರೆ ಕ್ಷೇತ್ರದಲ್ಲೂ ಸ್ಪರ್ಧಿಸಿ ಗೆಲ್ಲುವ ಅವಕಾಶ ಇದೆ. ಶಿಕಾರಿಪುರ ಜನರ ಒತ್ತಾಯಕ್ಕೆ ನಾನು ಹಾಗೆ ಹೇಳಿದ್ದಷ್ಟೆ ಎಂದು ತಮ್ಮ ಬಿಚ್ಚು ಮನಸ್ಸಿನ ಇಂಗಿತ ಹೊರಹಾಕಿದರು. ಇನ್ನೊಂದೆಡೆ ಬಿಎಸ್​ವೈ ವಾಸ್ತವ್ಯ ಇರುವ ಕಾವೇರಿ ನಿವಾಸಕ್ಕೆ ಭೇಟಿಕೊಟ್ಟ ಸಿಎಂ ಹಾಗೂ ಸಚಿವ ಆರ್.ಅಶೋಕ್ ಜೋಡಿ ಹೇಳಿಕೆ ಕುರಿತು ಚರ್ಚೆ ನಡೆಸಿ, ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡರು. ಅಚ್ಚರಿ ಎಂದರೆ, ನೀನೇ (ಬೊಮ್ಮಾಯಿ) ಹೇಳಿದ್ದೆಯಲ್ಲಪ್ಪ, ನನಗೆ ಟಯರ್ಡ್ ಇಲ್ಲ, ರಿಟೈರ್ಡ್ ಇಲ್ಲ ಎಂದು. ಈಗಲೂ ಅಷ್ಟೇ ಕಾರ್ಯಕ್ರಮ ತಯಾರು ಮಾಡು ರಾಜ್ಯಸುತ್ತೋಣ, ಕೇಂದ್ರ- ರಾಜ್ಯ ಸರ್ಕಾರದ ಕಾರ್ಯಕ್ರಮ ತಿಳಿಸೋಣ, ಜನರ ಮನ ಗೆದ್ದು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರೋಣ ಎಂದು ಹುರಿದುಂಬಿಸಿ ಕಳಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಈ ಬೆಳವಣಿಗೆ ಬಗ್ಗೆ ಸ್ಪಷ್ಟನೆ ನೀಡಿ, ತಂದೆಯವರು ಸಕ್ರಿಯ ರಾಜಕಾರಣದಿಂದ ದೂರಾಗಲ್ಲ. ಅವರು ಚುನಾವಣಾ ರಾಜಕೀಯದಿಂದ ಮಾತ್ರ ಹಿಂದೆ ಸರಿಯಬಹುದಷ್ಟೇ. ನಾನು ಕೂಡ ರಾಜ್ಯ ಪ್ರವಾಸ ಮಾಡುತ್ತೇನೆ, ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು.
28ರಂದು ರಣ ವ್ಯೂಹ ಪ್ರಕಟ:ಬಿಎಸ್​ವೈ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಸಾಧನಾ ಸಮಾವೇಶದಲ್ಲಿ ಪಕ್ಷದ ಮುಂದಿನ ಕಾರ್ಯಕ್ರಮಗಳು ಹಾಗೂ ರಣವ್ಯೂಹವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಲಿದ್ದಾರೆ. ಮುಖ್ಯಮಂತ್ರಿ ಹುದ್ದೆಯನ್ನೇ ಅತ್ಯಂತ ಘನತೆ, ಗೌರವದಿಂದ ತ್ಯಜಿಸಿರುವ ಯಡಿಯೂರಪ್ಪ ಅವರು ತೆಗೆದುಕೊಂಡ ತೀರ್ವನಗಳೆಲ್ಲವೂ ಪಕ್ಷದ ಹಿತಕ್ಕೆ ಪೂರಕವಾಗಿರುತ್ತವೆ ಎಂದರು.
ಪ್ರಧಾನಿ ಮೋದಿ, ಅಮಿತ್ ಷಾ ಅವರು ಎಲ್ಲಿ ಹೇಳುತ್ತಾರೋ ಅಲ್ಲಿ ಸ್ಪರ್ಧಿಸಲು ವಿಜಯೇಂದ್ರ ಸಿದ್ಧರಿದ್ದಾರೆ. ಈ ವಿಷಯದಲ್ಲಿ ವರಿಷ್ಠರು ತೆಗೆದುಕೊಳ್ಳುವ ತೀರ್ವನಕ್ಕೆ ಬದ್ಧ. ರಾಜ್ಯದ ಜನರ ದಯೆಯಿಂದ ವಿಜಯೇಂದ್ರ ಎಲ್ಲಿಯೇ ಸ್ಪರ್ಧಿಸಿ ದರೂ ಗೆಲ್ಲುವ ಶಕ್ತಿ ಹೊಂದಿದ್ದಾರೆ.
|ಬಿ.ಎಸ್.ಯಡಿಯೂರಪ್ಪಮಾಜಿ ಮುಖ್ಯಮಂತ್ರಿ
ಹೊನ್ನಾಳಿ:ಮಾತು ಕಡಿಮೆ, ಮೌನ ಹೆಚ್ಚು, ಒಮ್ಮೊಮ್ಮೆ ಸಣ್ಣ ನಗು. ಎಲ್ಲವೂ ನಿಗೂಢ. ಭಾವುಕತೆ… ಶಿಕಾರಿಪುರದಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ನಿವಾಸಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿದ್ದ ಬಿ.ಎಸ್.ಯಡಿಯೂರಪ್ಪ, ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ರೀತಿ ಇದು. ನಿಮ್ಮ ರಾಜಕೀಯ ನಿವೃತ್ತಿ ಬಿಜೆಪಿಗೆ ಮಾರಕವಾಗುವುದಿಲ್ಲವೆ ಎಂಬ ಪ್ರಶ್ನೆಗೆ ಭಾವುಕರಾದ ಬಿಎಸ್​ವೈ, ಕಣ್ಣಂಚಿನಲ್ಲಿ ನೀರು ತಂದುಕೊಂಡರೂ ತೋರ್ಪಡಿಸಿಕೊಳ್ಳಲಿಲ್ಲ. ಮೈಸೂರಿನ ಹಲವು ಭಾಗಗಳಲ್ಲಿ ವಿಜಯೇಂದ್ರ ಸ್ಪರ್ಧಿಸಲು ವಿಪುಲ ಅವಕಾಶ ಇದ್ದರೂ ಶಿಕಾರಿಪುರ ಕ್ಷೇತ್ರವನ್ನೇ ಮಗನಿಗಾಗಿ ಬಿಟ್ಟುಕೊಟ್ಟಿದ್ದೀರಲ್ಲ ಎಂದಾಗ ನಗುತ್ತ ಮೌನಕ್ಕೆ ಜಾರಿದರು. ಪಕ್ಕದಲ್ಲಿಯೇ ಇದ್ದ ರೇಣುಕಾಚಾರ್ಯ ಕಣ್ಣೀರು ಹಾಕುತ್ತಲೇ, ಸರ್ ಈ ಬಾರಿ ಚುನಾವಣೆಗೆ ಸ್ಪರ್ಧಿಸಲೇಬೇಕೆಂದು ಒತ್ತಾಸೆ ವ್ಯಕ್ತಪಡಿಸುತ್ತಿದ್ದಂತೆ, ಬೆಂಗಳೂರಿನಲ್ಲಿ ಎಲ್ಲ ಹಿರಿಯರ ಜತೆ ರ್ಚಚಿಸುತ್ತೇನೆ ನೀನು ಸುಮ್ಮನಿರು ಎಂದು ಕೈಸನ್ನೆ ಮಾಡಿದರು. ಈ ಮೂಲಕ ತಮ್ಮ ಸ್ಪರ್ಧೆ, ಕ್ಷೇತ್ರ ಕುರಿತು ಹಿರಿಯರೇ ತೀರ್ಮಾನ ಕೈಗೊಳ್ಳಲಿ ಎಂಬ ರೀತಿ ಪರೋಕ್ಷವಾಗಿ ವರಿಷ್ಠರ ಹೆಗಲಿಗೆ ವರ್ಗಾಯಿಸಿದರು.
ವಿಧಾನಸಭೆ 2023ರ ಚುನಾವಣೆಗೆ ‘ಮಿಷನ್ 150’ ಗುರಿ ಸಾಧಿಸುವ ನಿಟ್ಟಿನಲ್ಲಿ ಡಬಲ್ ಇಂಜಿನ್ ಸರ್ಕಾರದ ಫೀಲ್​ಗೆ ಮತ್ತಷ್ಟು ಕಸರತ್ತು ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಅಧಿಕೃತ ಕಾರ್ಯಕ್ರಮಗಳ ನಿಮಿತ್ತ ಎರಡು ದಿನ ಬಿಡಾರ ಹೂಡಲಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ವರಿಷ್ಠರೊಂದಿಗೆ ಸರ್ಕಾರ ಮತ್ತು ಪಕ್ಷದ ತಾಲೀಮಿನ ಮಾಹಿತಿ ನೀಡಿ ಮುಂದಿನ ನಡೆಗೆ ನಿರ್ದಿಷ್ಟ ಫಾಮುಲಾಗಳನ್ನು ಪಡೆದುಕೊಂಡು ಮರಳುವ ಸಾಧ್ಯತೆಗಳಿವೆ. ‘ಡಬಲ್ ಇಂಜಿನ್ ಸರ್ಕಾರ’ವೆಂದು ಪ್ರತಿಪಕ್ಷಗಳು ಹಂಗಿಸಿದ್ದನ್ನೇ ಮುಂದಿನ ಚುನಾವಣೆಗೆ ಅಸ್ತ್ರ ಮಾಡಿಕೊಳ್ಳುತ್ತೇವೆ ಎಂಬ ಸೂಕ್ಷ್ಮ ಸುಳಿವು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೆ.
ಸಂಪುಟ ವಿಸ್ತರಣೆ ಕಸರತ್ತು:ಈ ಬಾರಿ ವರಿಷ್ಠರ ಭೇಟಿ ವೇಳೆ ಸಚಿವ ಸಂಪುಟ ವಿಸ್ತರಣೆ ಅಥವಾ ಅಲ್ಪಮಟ್ಟಿಗೆ ಪುನಾರಚನೆಗೆ ಗ್ರೀನ್ ಸಿಗ್ನಲ್ ಪಡೆಯಲು ಬೊಮ್ಮಾಯಿ ಪ್ರಯತ್ನಿಸುವ ಸಾಧ್ಯತೆಗಳಿವೆ. ಖಾಲಿ ಸ್ಥಾನಗಳನ್ನು ಹಾಗೆಯೇ ಬಿಟ್ಟುಕೊಂಡರೆ ಬೇರೆಯೇ ಸಂದೇಶ ಹೋಗಲಿದೆ. ಅಷ್ಟೇ ಅಲ್ಲ, ವಿಳಂಬದ ಕಾರಣಕ್ಕೆ ಬಹುತೇಕ ಆಕಾಂಕ್ಷಿಗಳು ನಿರ್ಲಿಪ್ತರಾಗಿಬಿಟ್ಟಿದ್ದಾರೆ. ಹಿರಿಯರಾದ ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಪಕ್ಷದ ಸಹ ಸದಸ್ಯ ಎಚ್.ನಾಗೇಶ್ ಮತ್ತೆ ಸಚಿವರಾಗಬೇಕು ಎಂದು ತುದಿಗಾಲಲ್ಲಿ ನಿಂತಿದ್ದಾರೆ. ಒತ್ತಡ ಸರಿದೂಗಿಸಿ, ಹುರುಪು ತುಂಬಲು ವಿಸ್ತರಣೆ ಅಗತ್ಯವೆಂಬ ಅಭಿಪ್ರಾಯಗಳಿವೆ. ಈ ಸಲದ ಪ್ರಯತ್ನದಲ್ಲಿ ಬೊಮ್ಮಾಯಿ ಸಫಲವಾದರೆ ಆಷಾಢ ಮಾಸ (ಜು.28)ದ ಬಳಿಕ ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕಗಳಿಗೆ ಮಹೂರ್ತ ಫಿಕ್ಸ್ ಆಗುವ ಲೆಕ್ಕಾಚಾರಗಳಿವೆ.
ಸಮಾವೇಶಗಳಿಗೆ ಭರದ ಸಿದ್ಧತೆ:ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳು, ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲೆಂದು ಸಾಧನಾ ಸಮಾವೇಶ ಆಯೋಜಿಸಲು ತೀರ್ವನವಾಗಿದೆ. ಬೊಮ್ಮಾಯಿ ಸರ್ಕಾರ ಒಂದು ವರ್ಷ ಪೂರೈಸಲಿರುವ ಜು.28ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶಕ್ಕೆ ಬಿರುಸಿನ ಸಿದ್ಧತೆಗಳಾಗಿವೆ. ಇದಾದ ಬಳಿಕ ಪ್ರತಿ ತಿಂಗಳು ಎರಡು ಸಮಾವೇಶಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಘಟಿಸಲು, ಪೂರ್ವಭಾವಿ ಸಿದ್ಧತೆಗಳಿಗೆ ಪಕ್ಷದ ವೇದಿಕೆಯಲ್ಲಿ ಪ್ರತ್ಯೇಕ ತಂಡಗಳು ರಚನೆಯಾಗಿವೆ. ಪ್ರವಾಸದ ವಿವರ: ಬೊಮ್ಮಾಯಿಯವರು ಬೆಂಗಳೂರಿನಿಂದ ಬೆಳಗ್ಗೆ 10ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಮಧ್ಯಾಹ್ನ 2ಕ್ಕೆ ಆಯೋಜಿಸಿರುವ ಸಿಎಂ ಮತ್ತು ಡಿಸಿಎಂಗಳ ಸಮಾವೇಶದಲ್ಲಿ ಭಾಗವಹಿಸುವರು. ಪಕ್ಷದ ಆಡಳಿತವಿರುವ ರಾಜ್ಯಗಳ ಸಿಎಂಗಳಿಗೆ ಬಿಜೆಪಿ ಮುಖ್ಯ ಕಚೇರಿಯಲ್ಲಿ ರಾತ್ರಿ 7ಕ್ಕೆ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳುವರು. ಜು.25 ಮಧ್ಯಾಹ್ನ 1ಕ್ಕೆ ಸಂಸತ್ ಭವನದ ಸೆಂಟ್ರಲ್ ಹಾಲ್​ನಲ್ಲಿ ಆಯೋಜಿಸಿರುವ ನೂತನ ರಾಷ್ಟ್ರಪತಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದು, ನಂತರ ಕೇಂದ್ರ ಸಚಿವರಿಗೆ ಭೇಟಿಯಾಗುವರು. ಜು.26ರಂದು ಕೂಡ ಕೇಂದ್ರ ಹಲವು ಸಚಿವರನ್ನು ಭೇಟಿ ಮಾಡಲಿದ್ದಾರೆ. ತಜ್ಞ ಡಾ.ಕಸ್ತೂರಿ ರಂಗನ್ ವರದಿ ತಿರಸ್ಕರಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿ ಸಲು ನಿಯೋಗವು ಮಂಗಳವಾರ ದೆಹಲಿಗೆ ತೆರಳಲಿದ್ದು, ಬೊಮ್ಮಾಯಿ ನೇತೃತ್ವವಹಿಸಲಿದ್ದಾರೆ ಎಂದು ತಿಳಿದಿದೆ.
ನೆಗೆಟಿವ್ ಹೇಳಿಕೆ, ಟೀಕೆಗಳನ್ನೇ ಪಾಸಿಟಿವ್ ಆಗಿ ಪರಿವರ್ತಿಸಿ ಪ್ರಯೋಜನ ಪಡೆಯುವಲ್ಲಿ ಮೋದಿ ಸಿದ್ಧಹಸ್ತರು ಹಿಂದಿನ ಚುನಾವಣೆಗಳಲ್ಲಿ ರುಜುವಾತಾಗಿದೆ. ಚಾಯ್ವಾಲಾ ಎಂದಿದ್ದನ್ನೇ ಚಾಯ್ಪೇ ಚರ್ಚಾ ಮಾಡಿ ಜನರಿಗೆ ಹತ್ತಿರವಾಗಿದ್ದರು. ಈ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ಬಗ್ಗೆ ಜನರಲ್ಲಿ ಸಕಾರಾತ್ಮಕ ಭಾವನೆ ಜತೆಗೆ ಉತ್ತಮ ಅಭಿಪ್ರಾಯ ಮೂಡಿಸಲೆಂದು ಬಿಜೆಪಿ ಚಿಂತನೆ ಸಭೆಯಲ್ಲಿ ಪ್ರಾಥಮಿಕ ರೂಪರೇಷೆ ತಯಾರಾಗಿದೆ. ಬೊಮ್ಮಾಯಿ ದೆಹಲಿ ಪ್ರವಾಸದ ವೇಳೆ ಈ ರೂಪರೇಷೆಗೆ ಅಂತಿಮ ಸ್ಪರ್ಶ ಸಿಗುವ ಸಾಧ್ಯತೆಗಳಿದ್ದು, ಮಹತ್ವದ ಅಭಿವೃದ್ಧಿ ಮತ್ತು ರಾಜಕೀಯ ತೀರ್ವನಗಳಾಗಲಿವೆ ಮೂಲಗಳು ತಿಳಿಸಿವೆ. ರಾಜ್ಯದ ಮೇಲೆ ಪ್ರಭಾವಬೀರುವ ಅಭಿವೃದ್ಧಿ ಕೆಲಸಗಳ ಪಟ್ಟಿ ಸಿದ್ಧವಾಗಲಿದೆ. ಜತೆಗೆ ರಾಜಕೀಯವಾಗಿ ನಿರ್ಧಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳಿವೆ.
ತುಮಕೂರು:ತುಮಕೂರು ಸಂಸದ ಜಿ.ಎಸ್.ಬಸವರಾಜು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೊಷಿಸಿದ್ದಾರೆ. ನಗರದಲ್ಲಿ ಶನಿವಾರ ಮಾತನಾಡಿದ ಅವರು, ನನಗೆ 84 ವರ್ಷ ವಯಸ್ಸಾಗಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಪಕ್ಷದಿಂದಲೂ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಚುನಾವಣೆ ಪ್ರಚಾರಗಳಲ್ಲಿ ಹೇಳುವಂತೆ ತುಮಕೂರಿಗೆ ಮತ್ತೆ ಬಂದು ಸ್ಪರ್ಧಿಸಿದರೆ ಸುಮ್ಮನಿರುವುದಿಲ್ಲ, ಕಣಕ್ಕಿಳಿಯುತ್ತೇನೆ, ಪಕ್ಷೇತರನಾಗಿಯಾದರೂ ಸರಿ ಎಂದು ಸವಾಲೆಸೆದರು.
ಬೆಂಗಳೂರು:ವಿಧಾನ ಪರಿಷತ್​ನ ತೆರವಾಗಿರುವ ಒಂದು ಸ್ಥಾನಕ್ಕೆ ಉಪ ಚುನಾವಣೆಗಾಗಿ ಸೋಮವಾರ ಅಧಿಸೂಚನೆ ಪ್ರಕಟಣೆಯೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ. ಸಿ.ಎಂ.ಇಬ್ರಾಹಿಂ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿದ್ದು, ಬಾಕಿಯಿರುವ 22 ತಿಂಗಳ ಅವಧಿಗಾಗಿ ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ಉಪ ಚುನಾವಣೆ ನಿಗದಿಯಾಗಿದೆ. ಇಬ್ರಾಹಿಂ ನಿರ್ಧಾರವು ಕಮಲಪಡೆಗೆ ಆಕಸ್ಮಿಕ ಲಾಭ ತಂದುಕೊಟ್ಟಿದೆ. ವಿಧಾನಸಭೆಯಲ್ಲಿನ ಪಕ್ಷದ ಬಲಾಬಲದ ಲೆಕ್ಕಾಚಾರದಂತೆ ಬಿಜೆಪಿ ಗೆಲುವು ಅನಾಯಾಸ. ಎರಡೂ ವರ್ಷಕ್ಕಿಂತಲೂ ಕಡಿಮೆ ಅವಧಿಯ ಒಂದು ಸ್ಥಾನಕ್ಕೆ ಆಡಳಿತ ಬಿಜೆಪಿಯಲ್ಲಿ ಆಕಾಂಕ್ಷಿಗಳ ದೊಡ್ಡ ದಂಡು ತೆರೆಮರೆಯಲ್ಲಿ ಲಾಬಿ ಶುರುವಿಟ್ಟುಕೊಂಡಿದೆ. ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ, ಸಿದ್ದರಾಜು ಸೇರಿ ಹಲವರ ಹೆಸರುಗಳು ಚರ್ಚೆಯಲ್ಲಿವೆ. ವಿಧಾನ ಪರಿಷತ್ ವಾಯವ್ಯ ಶಿಕ್ಷಕರ ಚುನಾವಣೆಯಲ್ಲಿ ಸೋತ, ಸಂಘ ಮೂಲದ ಮಾಜಿ ಎಂಎಲ್ಸಿ ಅರುಣ್ ಶಹಾಪುರರನ್ನು ಪಕ್ಷದ ವರಿಷ್ಠರು ಪರಿಗಣಿಸಿದರೂ ಅಚ್ಚರಿಯಿಲ್ಲ ಎಂದು ಮೂಲಗಳು ತಿಳಿಸಿವೆ. ಪಕ್ಷದ ಕೋರ್ ಕಮಿಟಿ ಶಿಫಾರಸು ಮಾಡಿದ ಹೆಸರುಗಳ ಹೊರತಾಗಿ ಕೇಂದ್ರದ ನಾಯಕರು ಹೊಸ ಮುಖಗಳಿಗೆ ಮಣೆ ಹಾಕಿದ್ದರೂ ಆಕಾಂಕ್ಷಿಗಳು ತೆರೆಮರೆ ಕಸರತ್ತು ಮುಂದುವರಿಸಿದ್ದಾರೆ.
ಮಾಸಾಂತ್ಯಕ್ಕೆ ಕೋರ್ ಕಮಿಟಿ?:ದೆಹಲಿಗೆ ಸಿಎಂ ಭೇಟಿ, ಸಂಸತ್ತಿನ ಅಧಿವೇಶನ ನಿಮಿತ್ತ ಪಕ್ಷದ ರಾಜ್ಯಾಧ್ಯಕ್ಷರು ದೆಹಲಿಯಲ್ಲಿದ್ದು, ಸಿಎಂ ಭೇಟಿ ವೇಳೆ ಈ ಬಗ್ಗೆ ಔಪಚಾರಿಕ ಚರ್ಚೆಯಾಗಬಹುದು. ಜು.28ರ ಸಾಧನಾ ಸಮಾವೇಶ ಮುಗಿಯುವ ತನಕ ಈ ವಿಷಯದಲ್ಲಿ ನಿರ್ಧಾರ ಹೊರಬೀಳದು.
ಬಿ.ಎಸ್.ಯಡಿಯೂರಪ್ಪ ಅವರ ಚುನಾವಣೆಯಿಂದ ಹಿಂದೆ ಸರಿಯುವ ಹೇಳಿಕೆ ಬಿಜೆಪಿಯ ಹಲವು ನಾಯಕರು ಗಲಿಬಿಲಿಗೊಂಡಿದ್ದಾರೆ. ಜನ ಸಮೂಹವನ್ನು ಸೆಳೆಯಬಲ್ಲ ಶಕ್ತಿ-ಸಾಮರ್ಥ್ಯವುಳ್ಳ ರಾಜ್ಯದ ಬೆರಳೆಣಿಕೆಯಷ್ಟು ನಾಯಕರಲ್ಲಿ ಬಿಎಸ್​ವೈ ಒಬ್ಬರಾಗಿದ್ದು, ಅವರ ನಿಲುವು ರಾಜ್ಯ ರಾಜಕೀಯ ರಂಗಕ್ಕೆ ನೀಡಿದ ಮಾಸ್ಟರ್ ಸ್ಟ್ರೋಕ್ ಎಂದು ವಿಶ್ಲೇಷಿಸಲಾಗುತ್ತಿದೆ. ಶಿಕಾರಿಪುರ ಕ್ಷೇತ್ರದ ಜನರು, ಕಾರ್ಯಕರ್ತರ ನಿರಂತರ ಒತ್ತಡವು ಬಿಎಸ್​ವೈ ಬಾಯಿಂದ ಈ ಮಾತು ಹೇಳಿಸಿದ್ದರೆ, ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮಬೀರಲಿದೆ ಎಂದು ಹಲವು ನಾಯಕರು ಚಿಂತಿತರಾಗಿದ್ದಾರೆ.
ಪ್ರತಿಪಕ್ಷಗಳಿಗೂ ತಳಮಳ: ಬಿಎಸ್​ವೈ ಈ ನಿಲುವಿನ ಹಿಂದೆ ಪುತ್ರ ವಿಜಯೇಂದ್ರನಿಗೆ ‘ಸುರಕ್ಷಿತ’ ಸ್ಥಾನ ಕಲ್ಪಿಸುವ ಪ್ರಯತ್ನ ಮೇಲ್ನೋಟಕ್ಕೆ ಬಿಂಬಿಸಲಾಗುತ್ತಿದೆ.ಆದರೆ ಗಟ್ಟಿ ನಿರ್ಧಾರ, ನಿಷ್ಠೂರ ನಿಲುವಿನಲ್ಲಿ ಅವರದು ಎತ್ತಿದ ಕೈ. ಪ್ರಮುಖ ಹೇಳಿಕೆ ನೀಡಿರುವುದು ಸ್ವಪಕ್ಷದ ಜತೆಗೆ ವಿಪಕ್ಷ ನಾಯಕರಲ್ಲೂ ತಳಮಳ ಹುಟ್ಟಿಸಿದೆ. ಬಿಎಸ್​ವೈ ಈಗ ತಳೆದ ನಿಲುವಿಗೆ ಅಂಟಿಕೊಂಡು ಪಕ್ಷದ ವರಿಷ್ಠರು ಅಸ್ತು ಎಂದರೆ ಪ್ರತಿಪಕ್ಷಗಳ ತಮ್ಮ ಚುನಾವಣಾ ರಾಜಕೀಯ ತಂತ್ರಗಾರಿಕೆ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಕಾಲಿಗೆ ಚಕ್ರಕಟ್ಟಿಕೊಂಡು ದಣಿವರಿಯದೆ ರಾಜ್ಯವನ್ನು ಸುತ್ತುವ ಉತ್ಸಾಹ, ತಾಕತ್ತು ಅವರಲ್ಲಿದ್ದು, ಸ್ಪರ್ಧೆಯ ಗೊಡವೆ ಇಲ್ಲದಿದ್ದರೆ ಬಿಎಸ್​ವೈ ಓಡಾಟ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಪುತ್ರ ವ್ಯಾಮೋಹ, ಪಕ್ಷದ ಅಂತರಿಕ ಒತ್ತಡವೆಂದು ಪ್ರತಿಪಕ್ಷಗಳು ಟೀಕಿಸಿ, ಜನರ ಗಮನ ಬೇರೆಡೆ ಸೆಳೆಯುವ ತಂತ್ರಗಾರಿಕೆ ಹೂಡಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಯಶಸ್ವಿಯಾಗಿ ಕೆಳ ಮಟ್ಟದಿಂದ ಕಟ್ಟಿ ಅಧಿಕಾರ ಕೊಡಿಸಿದ ಯಡಿಯೂರಪ್ಪ ಅವರಿಂದ ಪಕ್ಷದ ನಾಯಕರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಪರಿಸ್ಥಿತಿ ತಂದಿಟ್ಟರು. ನಂತರ ಮೂಲೆಗುಂಪು ಮಾಡಲಾಗುತ್ತಿದೆ.
|ಎಂ.ಬಿ.ಪಾಟೀಲ್ಕೆಪಿಸಿಸಿ ಕಾರ್ಯಾಧ್ಯಕ್ಷ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಠರು ತೀರ್ವನಿಸುತ್ತಾರೆ. ನಮ್ಮ ಹೈಕಮಾಂಡ್ ಬಲಿಷ್ಠವಾಗಿದ್ದು, ಕಾಂಗ್ರೆಸ್​ನಂತೆ ದುರ್ಬಲವಾಗಿಲ್ಲ.
|ಆರ್.ಅಶೋಕ್ಕಂದಾಯ ಸಚಿವ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 × five =
Remember me
