ಮಂಗಳೂರು:ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಸ್ಪಷ್ಟವಾದ ಉತ್ತರ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕೈ ಬಲಪಡಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಜತೆಗೆ ಸ್ಥಳೀಯ ನಾಯಕರಿಗೆ ಗೆಲುವಿನ ಟಾಸ್ಕ್ ನೀಡಿದ್ದಾರೆ.
ಪುತ್ತೂರಿನಲ್ಲಿ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಷಾ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುವುದರ ಜೊತೆಯಲ್ಲಿ ಸಿಎಂ ಬೊಮ್ಮಾಯಿ ಕೈ ಬಲಪಡಿಸಲು ಕಾರ್ಯಕರ್ತರಿಗೆ ಕರೆ ನೀಡುವ ಮೂಲಕ ಒಂದೆರಡು ವಿಷಯಗಳನ್ನು ಸ್ಪಷ್ಟಪಡಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಕುರಿತಂತೆ ವಿಪಕ್ಷಗಳು ಎತ್ತಿರುವ ಧ್ವನಿಗೆ ಪೂರ್ಣವಿರಾಮ ಹಾಕಿ, ಮುಖ್ಯಮಂತ್ರಿ ಅಭ್ಯರ್ಥಿ ಯಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದರು.
ಕರಾವಳಿಯಲ್ಲಿ ಇದುವರೆಗೆ ಬಿಜೆಪಿ ಸುಭದ್ರವೆಂದೇ ಭಾವಿಸಲಾಗಿತ್ತು. ಯಾವಾಗ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಒಂದಿಷ್ಟು ಅನುಮಾನಗಳು ವ್ಯಕ್ತವಾದವೋ, ವರಿಷ್ಠ ಕಾರ್ಯಸೂಚಿಗಳಲ್ಲೂ ಒಂದಿಷ್ಟು ಬದಲಾವಣೆಗಳಾದಂತೆ ಕಂಡುಬರುತ್ತಿದೆ. ಕರಾವಳಿಯಲ್ಲಿ ಈ ಬಾರಿ ಒಂದಿಷ್ಟು ಪ್ರಯೋಗಗಳನ್ನು ಮಾಡುವ ಮನಸ್ಸು ವರಿಷ್ಠರಲ್ಲಿತ್ತು. ಆದರೆ ಈಗ ಅಂತಹ ಯಾವುದೇ ಸಾಹಸಕ್ಕೆ ಕೈ ಹಾಕುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.
ಮುಂದಿನ ಒಂದು ತಿಂಗಳಲ್ಲಿ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸಬೇಕು. ಒಂದು ತಿಂಗಳ ಬಳಿಕ ಮತ್ತೆ ಬಂದು ಪಕ್ಷದ ಚಟುವಟಿಕೆಗಳನ್ನು ಪರಿಶೀಲಿಸು ವುದಾಗಿ ಅಮಿತ್ ಷಾ ಹೇಳಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರವಾಗಿ ವಿಭಾಗ ಪ್ರಮುಖರ ಸಭೆಯಲ್ಲಿ ಯಾವುದೆ ಚರ್ಚೆ ನಡೆದಿಲ್ಲ.
|ಬಿ.ಎಸ್. ಯಡಿಯೂರಪ್ಪಮಾಜಿ ಸಿಎಂ
ಬಿಎಸ್​ವೈಗೆ ಗೌರವ:ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರಿತಂತೆ ಕಾರ್ಯಕರ್ತರಲ್ಲಿರುವ ಗೌರವ ಭಾವನೆಗಳನ್ನು ಅರಿತುಕೊಂಡಿರುವ ಅಮಿತ್ ಷಾ, ಅವರನ್ನು ಮುಂಚೂಣಿಯಲ್ಲಿರುವಂತೆ ನೋಡಿಕೊಂಡರು. ಕಾರ್ಯಕ್ರಮಕ್ಕೆ ಷಾ ವೇದಿಕೆ ಹತ್ತಿದಾಗ ಕಾರ್ಯಕ್ರಮ ಉದ್ಘಾಟಿಸಿ, ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವಂತೆ ನಿರೂಪಕರು ಎರಡೆರಡು ಬಾರಿ ಮನವಿ ಮಾಡಿದರು. ಆದರೆ ಯಡಿಯೂರಪ್ಪ ವೇದಿಕೆಗೆ ಬಾರದಿರುವುದನ್ನು ಗಮನಿಸಿದ ಷಾ, ಅವರು ಬರುವವರೆಗೆ ಕಾದು, ಜೊತೆಯಲ್ಲಿ ದೀಪ ಬೆಳಗಿದರು. ಯಡಿಯೂರಪ್ಪ ಭಾಷಣ ಮಾಡುತ್ತಿದ್ದಂತೆ ಕಾರ್ಯಕರ್ತರ ಉತ್ಸಾಹವನ್ನು ಷಾ ಸೂಕ್ಷ್ಮವಾಗಿ ಗಮನಿಸಿದ್ದರು. ಭಾಷಣದಲ್ಲೂ ಯಡಿಯೂರಪ್ಪ ಅವರ ಸಾಧನೆಗಳನ್ನು ಪದೇಪದೆ ನೆನೆಪಿಸಿಕೊಂಡರು. ಯಡಿಯೂರಪ್ಪ ಅವರನ್ನು ಪಕ್ಷ ಎಂದಿಗೂ ಬಿಡುವುದಿಲ್ಲ. ಅವರ ಅನುಭವವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತದೆ ಎನ್ನುವ ಸಂದೇಶವೂ ಅದರಲ್ಲಿ ಅಡಕವಾಗಿತ್ತು. ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ಹಾಗೂ ಯಡಿಯೂರಪ್ಪ ಅವರನ್ನು ಗೌರವಿಸುವ ಸೂಚನೆಯನ್ನು ನೀಡುವ ಮೂಲಕ ಲಿಂಗಾಯತ ಸಮುದಾಯದೊಂದಿಗೆ ಬಿಜೆಪಿ ಸದಾ ಇರುತ್ತದೆ ಎನ್ನುವ ಸ್ಪಷ್ಟತೆ ಅಮಿತ್ ಷಾ ಭಾಷಣದಲ್ಲಿ ಕಂಡುಬಂತು. ಇದು ವಿಪಕ್ಷಗಳ ತಂತ್ರಗಾರಿಕೆಗೆ ಪ್ರತಿತಂತ್ರ ಎಂದೇ ಭಾವಿಸಲಾಗುತ್ತಿದೆ.
ಮಂಗಳೂರು:ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಪ್ಲಸ್ ಗುರಿ ಹೊಂದಿದ್ದು, ಮಂಗಳೂರು ಮತ್ತು ಶಿವಮೊಗ್ಗ ವಿಭಾಗದಲ್ಲಿ ಗರಿಷ್ಠ ಸ್ಥಾನದ ಕೊಡುಗೆ ನೀಡಬೇಕು. ಕಳೆದ ಬಾರಿ ಗೆದ್ದಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜತೆಗೆ ಕೈ ತಪ್ಪಿದ ಕ್ಷೇತ್ರಗಳನ್ನು ಕೂಡ ಈ ಬಾರಿ ವಶಪಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೆ, ಚುನಾವಣೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಬೇಕೆಂದು ಬಿಜೆಪಿ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕರಾವಳಿ ಮತ್ತು ಮಲೆನಾಡು ಭಾಗದ ಬಿಜೆಪಿ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕೆಂಜಾರಿನ ಶ್ರೀ ದೇವಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಮಂಗಳೂರು ಮತ್ತು ಶಿವಮೊಗ್ಗ ವಿಭಾಗದ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗವಹಿಸಿದ ಅವರು ಚುನಾವಣಾ ರಣತಂತ್ರದ ಬಗ್ಗೆ ಸುಮಾರು ಒಂದೂವರೆ ತಾಸು ಚರ್ಚಿಸಿದರು. ಮಂಗಳೂರು ಮತ್ತು ಶಿವಮೊಗ್ಗ ವಿಭಾಗ ವ್ಯಾಪ್ತಿಯ 33 ಕ್ಷೇತ್ರಗಳ ಪೈಕಿ 29 ಕ್ಷೇತ್ರ ಬಿಜೆಪಿ ವಶದಲ್ಲಿದೆ. ಉಳಿದ 4 ಕ್ಷೇತ್ರಗಳಲ್ಲಿ ಹಿಂದಿನ ಚುನಾವಣೆಯಲ್ಲಿ ಯಾಕೆ ಸೋಲು ಉಂಟಾಗಿದೆ ಎನ್ನುವ ಬಗ್ಗೆ ಅವಲೋಕನ ಮಾಡಬೇಕು. ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕು. ಮಹಿಳಾ ಮೋರ್ಚಾ, ಯುವ ಮೋರ್ಚಾ ಸಹಿತ ಪಕ್ಷದ ಎಲ್ಲ ಮೋರ್ಚಾಗಳನ್ನು ಸಕ್ರಿಯಗೊಳಿಸಬೇಕು. ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಅಣಿಗೊಳಿಸಬೇಕು. ಪಕ್ಷದ ಚಟುವಟಿಕೆಯಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಷಾ ಸೂಚನೆ ನೀಡಿರುವುದಾಗಿ ಸಭೆಯಲ್ಲಿ ಪಾಲ್ಗೊಂಡ ಪ್ರಮುಖರು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರು ವೇದಿಕೆಯಲ್ಲಿದ್ದರು. ಬಿಜೆಪಿ ಶಾಸಕರು, ಮಾಜಿ ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು ಸಹಿತ 118 ಮಂದಿ ಆಹ್ವಾನಿತ ಪ್ರಮುಖ ನಾಯಕರ ಪೈಕಿ 110 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
