ಕೀರ್ತಿನಾರಾಯಣ ಸಿ. ಬೆಂಗಳೂರುಯಾರದ್ದೋ ಕೃಷಿ ಜಮೀನಿಗೆ ಇನ್ಯಾರ ಹೆಸರಿನಲ್ಲೋ ‘ಬೋನಫೈಡ್ ಸರ್ಟಿಫಿಕೇಟ್’ಗಳನ್ನು ವಿತರಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ವಂಚಿಸಿರುವ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ತನಿಖಾ ವರದಿ ಆಧರಿಸಿ ಉಪ ಲೋಕಾಯುಕ್ತರು ವಿಚಾರಣೆ ಆರಂಭಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್​ಐಆರ್ ದಾಖಲಿಸಲು ತನಿಖಾಧಿಕಾರಿಗಳು ಅನುಮತಿ ಕೇಳಿದ್ದಾರೆ. ಏತನ್ಮಧ್ಯೆ ರೈತರ ಹೆಸರಲ್ಲಿ ಸರ್ಟಿಫಿಕೇಟ್ ಪಡೆದು ಟ್ರಾಕ್ಟರ್ ನೋಂದಣಿ ಮಾಡಿಸಿಕೊಂಡಿರುವ ಮಾಲೀಕರಿಗೆ ನೋಟಿಸ್ ಕೊಡಲು ಕೋಲಾರ ಆರ್‌ಟಿಒ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಕೋಲಾರ ಜಿಲ್ಲೆಯ ನರಸಾಪುರ ನಾಡಕಚೇರಿಯಲ್ಲಿ ನಡೆದಿದ್ದ ಬೋನಫೈಡ್ ಸರ್ಟಿಫಿಕೇಟ್ ಹಗರಣವನ್ನು ‘ವಿಜಯವಾಣಿ’ ಬಯಲಿಗೆಳೆದ ನಂತರ ಸುಮೋಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು, 5000 ಪುಟಗಳ ಮಧ್ಯಂತರ ವರದಿಯನ್ನು ಲೋಕಾಯುಕ್ತರ ಅವಗಾಹನೆಗೆ ಸಲ್ಲಿಸಿದ್ದಾರೆ. ಸಾವಿರಾರು ನಕಲಿ ರೈತರಿಗೆ ಬೋನಫೈಡ್ ಸರ್ಟಿಫಿಕೇಟ್ ಕೊಟ್ಟಿರುವುದು ತನಿಖೆಯಲ್ಲಿ ದೃಢಪಟ್ಟಿದ್ದು, ಇದರ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಈಗಾಗಲೇ ಪ್ರಕರಣದಲ್ಲಿರುವ ಪ್ರತಿವಾದಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಗುರುವಾರ (ಡಿ.21) ಉಪ ಲೋಕಾಯುಕ್ತರ ವಿಚಾರಣೆ ನಡೆಸಿದರು. ಮುಂದಿನ ವಿಚಾರಣೆಯನ್ನು 2024ರ ಫೆ.17ಕ್ಕೆ ಮುಂದೂಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಕೇಳಲಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಅಮಾನತುಗೊಂಡಿದ್ದ ಉಪ ತಹಶೀಲ್ದಾರ್ ನಾರಾಯಣ ಸ್ವಾಮಿ ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಮತ್ತೊಬ್ಬ ಆರೋಪಿತೆ ನಾಡಕಚೇರಿ ಕಂಪ್ಯೂಟರ್ ಆಪರೇಟರ್ ಅಂಬುಜಾ ಅವರನ್ನು ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲೇ ಗುತ್ತಿಗೆ ಕೆಲಸದಿಂದ ತೆಗೆಯಲಾಗಿದೆ.
ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಅಕ್ರಮ ಎಸಗಿರುವುದು ಸಾಕ್ಷ್ಯಸಮೇತ ದೃಢಪಟ್ಟಿದೆ. ಈ ವರದಿಯನ್ನು ಆಧರಿಸಿ ಉಪ ಲೋಕಾಯುಕ್ತರು ವಿಚಾರಣೆ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ಕಾನೂನು ಕ್ರಮವಾಗುವುದು ನಿಶ್ಚಿತ. ಜತೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17(ಎ) ಅನ್ವಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತರ ಅನುಮತಿ ಕೇಳಲಾಗಿದೆ. ಅನುಮತಿ ಸಿಕ್ಕ ಕೂಡಲೇ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದ ಬೇರೆಬೇರೆ ನಾಡಕಚೇರಿಗಳಲ್ಲೂ ನಕಲಿ ರೈತರಿಗೆ ಬೋನಫೈಡ್ ಸರ್ಟಿಫಿಕೇಟ್‌ಗಳನ್ನು ವಿತರಣೆ ಮಾಡಲಾಗಿತ್ತು. ನರಸಾಪುರ ನಾಡಕಚೇರಿ ಹಗರಣವನ್ನು ವಿಜಯವಾಣಿ ಬಯಲಿಗೆಳೆದು, ಲೋಕಾಯುಕ್ತ ತನಿಖೆ ಆರಂಭವಾದ ಬಳಿಕ ದಂಧೆ ಬಹುತೇಕ ಬಂದ್ ಆಗಿದೆ. ಕೆಲವೆಡೆ ಮಾತ್ರ ನಡೆಯುತ್ತಿರುವ ದೂರುಗಳು ಕೇಳಿಬರುತ್ತಿವೆ ಎಂದು ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ರೈತರ ಹೆಸರಲ್ಲಿ ಬೋನಫೈಡ್ ಸರ್ಟಿಫಿಕೇಟ್ ಪಡೆದುಕೊಂಡು ನೋಂದಣಿ ಮಾಡಿಸಿರುವ ಟ್ರ್ಯಾಕ್ಟರ್ ಮಾಲೀಕರಿಗೆ ನೋಟಿಸ್ ಕೊಡಲು ಕೋಲಾರ ಆರ್‌ಟಿಒ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ವಿಭಾಗದ ಜಂಟಿ ಆಯುಕ್ತರ ಸೂಚನೆ ಮೇರೆಗೆ ನೋಟಿಸ್ ಕೊಡುತ್ತಿದ್ದು, 600ಕ್ಕೂ ಅಧಿಕ ಟ್ರ್ಯಾಕ್ಟರ್ ಮಾಲೀಕರ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತದಲ್ಲಿ ಪ್ರಕರಣವಿದ್ದರು ಟ್ರ್ಯಾಕ್ಟರ್ ಮಾಲೀಕರಿಗೆ ನೋಟಿಸ್ ಕೊಟ್ಟು ನಿಯಮಬದ್ಧವಾಗಿ ಸರ್ಕಾರಕ್ಕೆ ಬರಬೇಕಾದ ಟ್ಯಾಕ್ಸ್ ಕಟ್ಟಿಸಿಕೊಳ್ಳಲು ಆರ್‌ಟಿಒ ಅಧಿಕಾರಿಗಳಿಗೆ ಅವಕಾಶ ಇದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಉಪ ಲೋಕಾಯುಕ್ತರ ಆದೇಶದಂತೆ ಬೋನಫೈಡ್ ಸರ್ಟಿಫಿಕೇಟ್ ದಂಧೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲಾಗಿದೆ. ನಕಲಿ ರೈತರಿಗೆ ಸರ್ಟಿಫಿಕೇಟ್‌ಗಳನ್ನು ವಿತರಣೆ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17(ಎ) ಅನ್ವಯ ಕೇಸ್ ದಾಖಲಿಸಲು ಅನುಮತಿ ಕೇಳಲಾಗಿದೆ. ಅನುಮತಿ ಸಿಕ್ಕ ನಂತರ ಎಫ್​ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗುತ್ತದೆ.– ಬಿ.ಕೆ.ಉಮೇಶ್‌, ಲೋಕಾಯುಕ್ತ ಎಸ್ಪಿ, ಕೋಲಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 15 =
Remember me
