| ಕೀರ್ತಿನಾರಾಯಣ ಸಿ. ಬೆಂಗಳೂರು
ಕರೊನಾ ನಿರ್ವಹಣೆ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ಹಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರದ ಕೈಗೆ ಪ್ರಬಲ ಅಸ್ತ್ರವೊಂದು ಸಿಗುವ ಸಾಧ್ಯತೆ ಇದೆ. ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರಗಳ ಆಡಳಿತದ ಅವಧಿಯಲ್ಲಿ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ‘ಬೋರ್​ವೆಲ್ ಗೋಲ್ಮಾಲ್’ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (ಕೋಲಾರ ಉಪವಿಭಾಗ) ಕೋಲಾರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 2017-18, 2018-19ರಲ್ಲಿ 400ಕ್ಕೂ ಅಧಿಕ ಬೋರ್​ವೆಲ್ ಕೊರೆಸಿರುವುದಾಗಿ ಹೇಳಿ ಕೋಟ್ಯಂತರ ರೂ. ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಇದರಲ್ಲಿ ಶೇ.40ಕ್ಕಿಂತ ಹೆಚ್ಚು ಕಡೆ ಕೊಳವೆಬಾವಿಗಳನ್ನೇ ಕೊರೆಯದಿದ್ದರೂ ಕೊರೆದಿರುವು ದಾಗಿ ಹಣ ಬಿಡುಗಡೆ ಮಾಡಿರು ವುದು ದೃಢಪಟ್ಟಿದೆ. ಇದೇ ರೀತಿ ರಾಜ್ಯಾದ್ಯಂತ ಕಳ್ಳಾಟ ನಡೆದಿರುವ ಬಗ್ಗೆ ಇಲಾಖೆಯ ಅಧಿಕಾರಿಗಳು ಹಾಗೂ ಭೂ ವಿಜ್ಞಾನಿಗಳೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಬೋರ್​ವೆಲ್ ಕೊರೆದಿರುವ ಬಗ್ಗೆ ಆಯಾ ಗ್ರಾಮ ಪಂಚಾಯಿತಿ, ಪಿಡಿಒ ಹಾಗೂ ವಾಟರ್​ವುನ್​ಗಳಿಗೇ ಗೊತ್ತಿಲ್ಲ. ಆದರೂ ಕೊಳವೆಬಾವಿ ಕೊರೆಯಲಾಗಿದೆ ಎಂದು ಇಲಾಖೆಯಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಿದೆ. ಮತ್ತೆ ಕೆಲವೆಡೆ 900 ಅಡಿ ಬೋರ್​ವೆಲ್ ಕೊರೆದಿದ್ದರೂ, 1400ಕ್ಕೂ ಹೆಚ್ಚು ಅಡಿ ಕೊರೆಯಲಾಗಿದೆ ಎಂದು ಬಿಲ್ ಸೃಷ್ಟಿಸಿ ಹಣ ಲಪಟಾಯಿಸಲಾಗಿದೆ. ಬೋರ್​ವೆಲ್ ಕೊರೆದಿರುವ ಆಳದ ಬಗ್ಗೆ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಹೇಳುವ ಲೆಕ್ಕವೇ ಬೇರೆ, ಇಲಾಖೆ ಹಣ ಬಿಡುಗಡೆ ಮಾಡಿರುವ ಲೆಕ್ಕವೇ ಬೇರೆಯಾಗಿದೆ.
ಹಳ್ಳಿಗಳಿಗೆ ಹೋಗಿ ಪರಿಶೀಲನೆ: ಬೆಂಗಳೂರಿನ ಖಾಸಗಿ ಕಂಪನಿಯ ಕಾನೂನು ಸಲಹೆಗಾರ ಕೋಲಾರ ಮೂಲದ ಎಚ್.ಜಿ. ಅನಿಲ್ ಕುಮಾರ್ ಕೋಲಾರ ಉಪ ವಿಭಾಗದಲ್ಲಿ ಕೊರೆದಿರುವ ಕೊಳವೆಬಾವಿಗಳ ಮಾಹಿತಿ ಹಾಗೂ ದಾಖಲೆಯನ್ನು ಆಯೋಗದ ಮೆಟ್ಟಿಲೇರಿ, 1 ವರ್ಷ ಹೋರಾಡಿ ಪಡೆದಿದ್ದಾರೆ. ಅವುಗಳಲ್ಲಿ ಉಲ್ಲೇಖಿಸಿ ರುವ ಕೆಲ ಹಳ್ಳಿಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಗ್ರಾಮದ ಜನರು, ವಾಟರ್​ವುನ್, ಗ್ರಾ.ಪಂ. ಸದಸ್ಯರನ್ನೇ ಖುದ್ದು ಬೋರ್​ವೆಲ್ ಕೊರೆದಿದೆ ಎನ್ನಲಾದ ಜಾಗಕ್ಕೆ ಕರೆದೊಯ್ದು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಸಂಗ್ರಹಿಸಿರುವ ಎಲ್ಲ ದಾಖಲಾತಿಗಳನ್ನು ಇಲಾಖೆ ಆಯುಕ್ತರಿಗೆ ರವಾನಿಸಿದ್ದಾರೆ.
ಈ ಅಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೇ ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಗುತ್ತಿಗೆ ಮಂಜೂರು ಮಾಡುವ ಅಧಿಕಾರಿ, ಸ್ಥಳ ಪರಿಶೀಲನೆ ನಡೆಸುವ ಅಧಿಕಾರಿ, ಭೂ ವಿಜ್ಞಾನಿ, ಜೂನಿಯರ್ ಇಂಜಿನಿಯರ್, ಸಹಾಯಕ ಅಭಿಯಂತರರೇ ನೇರವಾಗಿ ಜವಾಬ್ದಾರಿ ಹೊತ್ತಿರುತ್ತಾರೆ. ಹೀಗಾಗಿ ಅಧಿಕಾರಿಗಳು ಭಾಗಿ ಯಾಗದೆ ಅಕ್ರಮ ನಡೆಯಲು ಸಾಧ್ಯವಿಲ್ಲ.
ಅಕ್ರಮ ತಡೆಯುವ ಉದ್ದೇಶದಿಂದಲೇ ಪ್ರತಿಯೊಂದು ಬೋರ್​ವೆಲ್ ಕೊರೆಯಲು ಜಿಪಿಎಸ್ ಲೊಕೇಷನ್ ಜಾರಿಗೆ ತರಲಾಗಿದೆ. ಆದರೆ, ಒಂದೇ ಜಿಪಿಎಸ್ ಲೊಕೇಷನ್​ನಲ್ಲಿ ಬೇರೆಬೇರೆ ದಿನಾಂಕಗಳಲ್ಲಿ ಬೋರ್​ವೆಲ್ ಕೊರೆದಿರುವಂತೆ ಹಣ ಬಿಡುಗಡೆ ಮಾಡಿಸಿಕೊಂಡಿರುವುದು ಕೂಡ ಲಭ್ಯವಿರುವ ದಾಖಲೆಗಳಿಂದ ದೃಢಪಟ್ಟಿದೆ.
ನಿಯಮಾವಳಿ ಪ್ರಕಾರ ರಿಗ್ ಇರುವವರಿಗೆ ಮಾತ್ರವೇ ಕೊಳವೆಬಾವಿ ಕೊರೆಯುವ ಕಾಂಟ್ರಾಕ್ಟ್ ಕೊಡಬೇಕಿದೆ. ಆದರೆ, ರಿಗ್ ಇಲ್ಲದವರಿಗೂ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದ ಕಾಂಟ್ರಾಕ್ಟರ್ ತಮಿಳುನಾಡು, ಆಂಧ್ರಪ್ರದೇಶ ಸೇರಿ ಬೇರೆ ರಾಜ್ಯಗಳಿಂದ ರಿಗ್ ತರಿಸಿ ಇಲ್ಲಿ ಬೋರ್​ವೆಲ್ ಕೊರೆಸುತ್ತಿರುವ ಪ್ರಕರಣಗಳೂ ವರದಿಯಾಗಿವೆ.
ಬೋರ್​ವೆಲ್ ಕೊರೆಸಲಿರುವ ಎಲ್ಲ ನಿಯಮಾವಳಿ ಪಾಲಿಸಿರುವ ದಾಖಲಾತಿ ಹಾಗೂ ಸ್ಥಳ ಪರಿಶೀಲನೆ ನಂತರವೇ ಅನುಮೋದನೆ ಸಿಕ್ಕಿ, ಹಣ ಬಿಡುಗಡೆಯಾಗುತ್ತದೆ. ಜಿಪಿಎಸ್ ಲೊಕೇಷನ್ ಕಡ್ಡಾಯವಾಗಿರುವುದರಿಂದ ಗೋಲ್‍ಮಾಲ್ ಆಗಲು ಸಾಧ್ಯವೇ ಇಲ್ಲ. ಶಾಸಕರ ಒತ್ತಡದಿಂದ ಕೊರೆದಿರುವ 1000ಕ್ಕೂ ಹೆಚ್ಚು ಬೋರ್​ವೆಲ್​ಗಳ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿಲ್ಲ.
| ಬಿ.ಪಿ. ನಾಗರಾಜು-ಎಕ್ಸಿಕ್ಯುಟಿವ್ ಇಂಜಿನಿಯರ್ – ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಕೋಲಾರ ಭಾಗದಲ್ಲೇ ಹೆಚ್ಚು
ಕೋಲಾರ ಭಾಗದಲ್ಲಿ ಹೆಚ್ಚು ನೀರಿನ ಬರವಿದೆ. ಅಂತರ್ಜಲ ಮಟ್ಟ ತೀರಾ ಕಡಿಮೆ ಇರುವುದರಿಂದ ಇಲಾಖೆ ವತಿಯಿಂದ ಹೆಚ್ಚು ಬೋರ್​ವೆಲ್​ಗಳನ್ನು ಕೊರೆಯಲಾಗುತ್ತಿದೆ. ಇದನ್ನೇ ಕೆಲ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ದುರ್ಬಳಕೆ ಮಾಡಿಕೊಂಡು ಕೊಳವೆಬಾವಿ ಕೊರೆಯುವ ಹೆಸರಿನಲ್ಲಿ ಸರ್ಕಾರದ ಹಣ ಲೂಟಿ ಮಾಡುತ್ತಿದ್ದಾರೆ.
| ಭೂಗರ್ಭ ಶಾಸ್ತ್ರಜ್ಞ
ಐಪಿಎಲ್​ಗೆ ಮುನ್ನ ರಾಜಸ್ಥಾನ ರಾಯಲ್ಸ್​-ಕಿಂಗ್ಸ್​ ಇಲೆವೆನ್​ ಪಂಜಾಬ್​ ಟ್ಯಾಟೂ ವಾರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − seven =
Remember me
