
ಆರ್​.ತುಳಸಿಕುಮಾರ್​ ಬೆಂಗಳೂರು
ರಾಜಧಾನಿ ಬೆಂಗಳೂರಿಗೆ ಏಕೈಕ ಕುಡಿಯುವ ನೀರಿನ ಜಲಮೂಲವಾಗಿರುವ ಕಾವೇರಿ ನದಿ ನೀರು ಪೂರೈಕೆಯಲ್ಲಿ ಕೊರತೆ ಉಂಟಾದರೆ ಬೋರ್‌ವೆಲ್ ಹಾಗೂ ಮಳೆನೀರು ಕೊಯ್ಲು ಪರ್ಯಾಯ ಆಗಿರಲಿದೆ. ಸದ್ಯಕ್ಕೆ ಈ ಎರಡೂ ಜಲಮೂಲಗಳು ಮಾತ್ರ ಸಂಕಷ್ಟ ಪರಿಸ್ಥಿತಿಯಲ್ಲಿ ನೆರವಿಗೆ ಬರಲಿವೆ.
ಪ್ರಸ್ತುತ ಮುಂಗಾರು ಕೊರತೆಯಿಂದ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯ ಪೂರ್ಣಮಟ್ಟ ತುಂಬಿಲ್ಲ. ಈ ಮಧ್ಯೆ ತಮಿಳುನಾಡು ಪಾಲಿನ ನೀರನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವುದು ಕೆಆರ್‌ಎಸ್‌ನಲ್ಲಿ ಇನ್ನಷ್ಟು ಜಲ ಸಂಗ್ರಹ ಕುಸಿಯುವ ಸಾಧ್ಯತೆ ಇದೆ. ಮುಂದಿನ ತಿಂಗಳಿನಲ್ಲಿ ನಿರೀಕ್ಷಿತ ಮಳೆಯಾಗದೆ ಜಲಾಶಯಕ್ಕೆ ನೀರಿನ ಹರಿವು ಕಡಿಮೆಯಾದಲ್ಲಿ ಅದರ ನೇರ ಪರಿಣಾಮ ಬೆಂಗಳೂರು ಮೇಲೂ ಆಗಬಹುದು. ಸಂಕಷ್ಟ ಸ್ಥಿತಿಯಲ್ಲಿ ಬೆಂಗಳೂರಿಗೆ ಅಗತ್ಯ ನೀರು ಪೂರೈಕೆ ಮಾಡಲು ಕ್ರಮ ಕೈಗೊಂಡರೂ, ಮುಂದಿನ ಬೇಸಿಗೆಗೆ ಕೊರತೆ ಉಂಟಾಗುವ ಸಾಧ್ಯತೆ ಇದೆ. ಇದನ್ನು ಅರಿತೇ ಬೆಂಗಳೂರು ಜಲಮಂಡಳಿಯು ರಾಜಧಾನಿಗೆ ಬೇಕಿರುವಷ್ಟು ನೀರನ್ನು ಕೆಆರ್‌ಎಸ್‌ನಲ್ಲಿ ಮೀಸಲಿಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದು ಕೋರಿಕೊಂಡಿದೆ.
ಆದರೆ, ರಾಜಧಾನಿಯ ಬೇಡಿಕೆಯಷ್ಟು ನೀರನ್ನು ಪೂರೈಸಲು ಜಲಮಂಡಳಿಗೆ ಈವರೆಗೂ ಸಾಧ್ಯವಾಗಿಲ್ಲ. ಹಾಲಿ ಜನಸಂಖ್ಯೆ ಒಂದು ಕೋಟಿ ದಾಟಿದ್ದು, ಅಷ್ಟೂ ಜನರಿಗೆ ಕುಡಿಯುವ ನೀರು ಪೂರೈಸಲು ನಿತ್ಯ 1,400 ಎಂಎಲ್‌ಡಿ ಅಗತ್ಯವಿದೆ.
ಆದರೆ, ನೀರು ಪೂರೈಕೆಯಲ್ಲಿ ಶೇ.29 ಸೋರಿಕೆಯಾಗುತ್ತಿರುವುದರಿಂದ ಜನರ ಬೇಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ನಿತ್ಯ ವ್ಯಕ್ತಿಯೊಬ್ಬರಿಗೆ ಸರಾಸರಿ 150 ಲೀಟರ್ ನೀರು ಅವಶ್ಯವಿದ್ದರೂ, ಪ್ರಸ್ತುತ 108 ಲೀ. ಮಾತ್ರ ವಿತರಿಸಲಾಗುತ್ತಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಹೀಗಾಗಿ ಕೊರತೆಯಾಗುವ ನೀರನ್ನು ಇತರ ಮೂಲದಿಂದ ಪಡೆಯುವು ಅನಿವಾರ್ಯವಾಗಿದೆ.
ಉತ್ತರ ಭಾಗಕ್ಕೆ ಜಲ ಸಂಕಷ್ಟ:
ಸದ್ಯ ಕೆಆರ್‌ಎಸ್‌ನಲ್ಲಿ 96 ಅಡಿ ನೀರು ಸಂಗ್ರಹಗೊಂಡಿದೆ. ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯವೂ 5 ಸಾವಿರ ಕ್ಯೂಸೆಕ್ ನೀರು ಹರಿಸಿದರೆ 90 ಅಡಿಗೆ ಬಂದು ನಿಲ್ಲಲಿದೆ. ಬೆಳೆಗಳಿಗೆ ತುರ್ತು ನೀರು ಹಾಗೂ ಸೀಪೇಜ್ ರೂಪದಲ್ಲಿ ನೀರು ಹೊರಹೋದಲ್ಲಿ ನೀರಿನ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಈ ವರ್ಷಾಂತ್ಯದವರೆಗೆ ಬೆಂಗಳೂರಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದು. ಆ ಬಳಿಕವೂ ಪೂರೈಕೆಯಾದರೂ, ಸೋರಿಕೆ ಕಾರಣದಿಂದ ಬೇಡಿಕೆಯಷ್ಟು ನೀರು ವಿತರಣೆ ಕಷ್ಟವಾಗಬಹುದು. ಕಾವೇರಿ ನದಿಯಿಂದ ನಗರಕ್ಕೆ ಪೂರೈಕೆಯಾಗುವ ಮುಖ್ಯ ಕೊಳವೆ ಹಾಗೂ ಜಲಸಂಗ್ರಹಾಗಾರ ನಗರದ ದಕ್ಷಿಣ ಭಾಗದಲ್ಲಿರುವುದರಿಂದ ಈ ಪ್ರದೇಶಕ್ಕೆ ನೀರಿನ ವಿತರಣೆ ಕೊರತೆಯಾಗದು. ಜತೆಗೆ ಪಶ್ಚಿಮ ಮತ್ತು ಮಧ್ಯ ಭಾಗವೂ ಸಮಸ್ಯೆಯಿಂದ ಪರಾಗಬಹುದು. ಆದರೆ, ಪೂರ್ವ ಹಾಗೂ ಉತ್ತರ ಭಾಗವು ಸಾಕಷ್ಟು ಬೆಳೆದಿದ್ದು, ಆ ಪ್ರದೇಶದವರೆಗೂ ಕಡಿಮೆ ಒತ್ತಡದಲ್ಲಿ ನೀರು ಹಾಯಿಸುವುದು ಸವಾಲಿನಿಂದ ಕೂಡಿದೆ. ಹೀಗಾಗಿ ಈ ಎರಡೂ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಂಕಷ್ಟ ಎದುರಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ.
ಭವಿಷ್ಯದಲ್ಲಿ ಒಂದಿಷ್ಟು ನಿರಾಳ?:
ಬೆಂಗಳೂರು ಮಹಾನಗರದ ಜನಸಂಖ್ಯೆ ಒಂದು ಕೋಟಿ ದಾಟಿದ್ದಲ್ಲಿ ಕುಡಿಯುವ ನೀರಿನ ಕೊರತೆ ಕಾಡಬಹುದು ಎಂದು ಜಲತಜ್ಞರು ವರ್ಷಗಳ ಹಿಂದೆಯೇ ಎಚ್ಚರಿಸಿದ್ದರು. ಇದೀಗ ಈ ಊಹೆ ನಿಜವಾಗಿದ್ದು, ಹಾಲಿ 1.2 ಕೋಟಿ ಜನರಿಗೆ ವರ್ಷ ಪೂರ್ತಿ ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಬೇಡಿಕೆಯಷ್ಟು ಪೂರೈಕೆಗೆ ಪರ್ಯಾಯ ಜಲಮೂಲಗಳ ಹುಡುಕಾಟ ಹಿಂದೆಯೇ ಆಗಿದ್ದು, ಅವಿನ್ನೂ ಪ್ರಸ್ತಾವನೆ ರೂಪದಲ್ಲಿವೆ. ಇವುಗಳಲ್ಲಿ ಎತ್ತಿನಹೊಳೆ ಯೋಜನೆ ಹಾಗೂ ಮೇಕೆದಾಟು ಯೋಜನೆ ಮುಖ್ಯವಾದವು. ಈ ಎರಡೂ ಯೋಜನೆಗಳು ಆರಂಭಗೊಂಡು ಐದು ವರ್ಷಗಳ ಬಳಿಕ ಅಂದಾಜು 10 ಟಿಎಂಸಿ ನೀರು ಲಭ್ಯವಾಗಬಹುದು. ಎತ್ತಿನಹೊಳೆ ಯೋಜನೆಯಿಂದ ತುಮಕೂರು ಭಾಗಕ್ಕೆ ನೀರು ಹರಿಸಿದರೆ ಅಲ್ಲಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ 2 ಟಿಎಂಸಿ ನೀರು ಹರಿಸಿ ಅದನ್ನು ನಗರಕ್ಕೆ ಬಳಸಿಕೊಳ್ಳುವ ಉದ್ದೇಶ ಇದೆ.
ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಕ್ಕಿದಲ್ಲಿ 8 ಟಿಎಂಸಿ ನೀರು ಲಭಿಸಲಿದೆ. ಇದರ ಹೊರತಾಗಿಯೂ ಹೇಮಾವತಿ ನದಿ ನೀರನ್ನು ಕುಣಿಗಲ್ ಬಳಿಯಿಂದ ಪಂಪಿಂಗ್ ಮಾಡಿ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿಸಿ, ಅಲ್ಲಿಂದ ನಗರಕ್ಕೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಜಲಮಂಡಲಿ ಹೊಂದಿದೆ. ಭವಿಷ್ಯದ ಈ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಮುಂದಾದರೂ, ಆ ಸಂದರ್ಭಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿಯೇ ನೀರು ಪೂರೈಸಲು ಹರಸಾಹಸ ಮಾಡಬೇಕಾಗುತ್ತದೆ.
ಆಲಮಟ್ಟಿ ಯೋಜನೆಗೆ ಕೊಕ್?:
ಬೆಂಗಳೂರಿನ ಕುಡಿಯುವ ನೀರಿನ ಕೊರತೆ ನೀಗಿಸಿಕೊಳ್ಳಲು ಪರ್ಯಾಯವಾಗಿ ದೂರದ ಆಲಮಟ್ಟಿ ಜಲಾಶಯದಿಂದ ನೀರು ಪೂರೈಕೆಗೆ ಒಲವು ವ್ಯಕ್ತವಾಗಿತ್ತು. ದಶಕದ ಹಿಂದೆ ಸದ್ದು ಮಾಡಿದ್ದ ಈ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯು ಕೋಲ್ಡ್ ಸ್ಟೋರೇಜ್ ಸೇರಿತು. ಕಾರಣ, 400 ಕಿ.ಮೀ. ದೂರದಿಂದ ನೀರು ತರಲು ದಶಕ ಹಿಡಿಯಲಿದೆ. ಜತೆಗೆ ವೆಚ್ಚ ಕೂಡ ಅಗಾಧವಾಗುವುದರಿಂದ ಯೋಜನೆ ಕಾರ್ಯಸಾಧುವಲ್ಲ ಎಂದು ಸರ್ಕಾರ ನಿರ್ಧಾರ ಕೈಗೊಂಡಿದೆ.
ಮಳೆನೀರು ಕೊಯ್ಲುಗೆ ಉದಾಸೀನ:
ನಗರದಲ್ಲಿ ವಾರ್ಷಿಕ 1,077 ಮಿ.ಮೀ. ಮಳೆ (ಕಳೆದ ದಶಕದಲ್ಲಿ 970 .ಮೀ. ಇತ್ತು) ಬೀಳುತ್ತದೆ. ವರ್ಷದಲ್ಲಿ ಆರೇಳು ತಿಂಗಳಲ್ಲಿ ವರ್ಷಧಾರೆ ಆಗುವುದರಿಂದ ಮಳೆನೀರನ್ನು ಹಿಡಿದಿಟ್ಟುಕೊಂಡು ವಿವಿಧ ಬಾಬ್ತಿಗೆ ಬಳಸಬಹುದಾಗಿದೆ. ಇದನ್ನಾಧರಿಸಿಯೇ ಸರ್ಕಾರ ಮಳೆನೀರು ಕೊಯ್ಲು ಪದ್ಧತಿಯನ್ನು ಉತ್ತೇಜಿಸಲು ವಿಶೇಷ ಕಾಯ್ದೆ ರೂಪಿಸಿ ಜಾರಿ ಮಾಡಿದೆ. 40/60 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಮನೆ ಹಾಗೂ ಕೈಗಾರಿಕೆ ಒಳಗೊಂಡ ವಾಣಿಜ್ಯ ಕಟ್ಟಡಗಳಿಗೆ ಈ ನಿಯಮ ಕಡ್ಡಾಯಗೊಳಿಸಲಾಗಿದೆ. ಆದರೆ, 20 ಲಕ್ಷಕ್ಕೂ ಹೆಚ್ಚಿರುವ ಸ್ವತ್ತುಗಳಲ್ಲಿ 1 ಲಕ್ಷ ಕಟ್ಟಡಗಳಲ್ಲೂ ಮಳೆಕೊಯ್ಲು ಅಳವಡಿಕೆಯಾಗಿಲ್ಲ. ಜನರಲ್ಲಿ ಮನೆಮಾಡಿರುವ ಈ ಉದಾಸೀನ ತೊಡೆದುಹಾಕಲು ಜಲಮಂಡಲಿ ಅಭಿಯಾನ ಕೈಗೊಂಡಿದ್ದರೂ, ಸಮರ್ಥ ನಿರ್ವಹಣೆ ಇಲ್ಲದೆ ಹಳಿ ತಪ್ಪಿದೆ.
ಬೋರ್‌ವೆಲ್ ಕೊರೆಯಲು ಪೈಪೋಟಿ:
ಇಡೀ ವಿಶ್ವದಲ್ಲೇ ಅತಿ ವೇಗವಾಗಿ ಬೆಳವಣಿಗೆ ಕಾನುತ್ತಿರುವ ನಗರವೆಂಬ ಖ್ಯಾತಿ ಬೆಂಗಳೂರು ಹೊಂದಿದೆ. ಅದರಲ್ಲೂ ವಸತಿ ಯೋಜನೆಗಳ ಅನುಷ್ಠಾನದಲ್ಲಿ ನಾಗಲೋಟ ಕಂಡಿದೆ. ಕಟ್ಟಡಗಳ ನಿರ್ಮಾಣಕ್ಕೆ ಕುಡಿಯುವ ನೀರು ಬಳಸುವಂತಿಲ್ಲ. ಆದರೆ, ಹಲವೆಡೆ ಇದೇ ನೀರನ್ನೇ ಬಳಸಲಾಗುತ್ತಿದೆ. ಜತೆಗೆ ವಿವಿಧ ಕಾಮಗಾರಿಗಳಿಗೂ ಕುಡಿಯುವ ನೀರು ಬಳಸುತ್ತಿರುವುದು ನೀರಿನ ಬೆಲೆ ಅರಿವಿಗೆ ಬರುತ್ತಿಲ್ಲ. ಅಲ್ಲದೆ ಹೊಸ ಮನೆ, ವಾಣಿಜ್ಯ ಕಟ್ಟಡ ಕಟ್ಟುವ ಮುನ್ನ ಬೋರ್‌ವೆಲ್ ಕೊರೆಯಿಸಿಯೇ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅದರಲ್ಲೂ ವಾರಾಂತ್ಯದಲ್ಲೇ ಕೊಳವೆಬಾವಿ ತೆಗೆಸುವ ಪೈಪೋಟಿ ರೀತಿ ನಡೆದಿದೆ. ಇದರಿಂದ ಅಂತರ್ಜಲ ಮತ್ತಷ್ಟು ಕುಸಿಯಲು ಕಾರಣವಾಗುತ್ತಿದೆ ಎಂಬ ಆಕ್ಷೇಪ ಜಲತಜ್ಞರಿಂದ ವ್ಯಕ್ತವಾಗಿದೆ.
ದಶಕವಾರು ನೀರಿನ ಬೇಡಿಕೆ, ಪೂರೈಕೆ ವಿವರ (* ಎಂಎಲ್​ಡಿಗಳಲ್ಲಿ):ವರ್ಷ ಜನಸಂಖ್ಯೆ ಬೇಡಿಕೆ * ಪೂರೈಕೆ *2011 0.85 ಕೋಟಿ 1,400 9502021 1.05 ಕೋಟಿ 2,100 1,4502031 1.42 ಕೋಟಿ 2,900 2,0702041 1.70 ಕೋಟಿ 3,400 2,0702051 2.05 ಕೋಟಿ 4,100 2,070(ಅಂಕಿ-ಅಂಶ: ಬೆಂಗಳೂರು ಜಲಮಂಡಳಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − one =
Remember me
