ಬೆಂಗಳೂರು:ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ಜನ್ಮ ದಿನದ ನಿಮಿತ್ತ ರಾಜ್ಯದ 75 ಶಾಲೆ-ಕಾಲೇಜುಗಳಲ್ಲಿ ‘ನೇತಾಜಿ ಅಮೃತ ಎನ್​ಸಿಸಿ’ ಘಟಕಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ನವೀಕೃತ ವೈಮಾನಿಕ ತರಬೇತಿ ಶಾಲೆ ಲೋಕಾರ್ಪಣೆ, ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಜನರಲ್ಲಿ ಎನ್​ಸಿಸಿ ಬಗ್ಗೆ ಆಸಕ್ತಿ, ನೇತಾಜಿಯವರ ಶೂರತ್ವ-ಶಿಸ್ತು ತರಲೆಂದು ಹೊಸದಾಗಿ ಆರಂಭಿಸಲಿರುವ ಘಟಕಗಳಲ್ಲಿ ಒಟ್ಟು 7,500 ಕೆಡೆಟ್​ಗಳಿಗೆ ಅವಕಾಶ ಕಲ್ಪಿಸಲಿದೆ. ಪ್ರತಿಯೊಬ್ಬರಿಗೆ ತಲಾ 12,000 ರೂ. ವೆಚ್ಚವನ್ನು ಭರಿಸಲು ಸರ್ಕಾರ ತೀರ್ವನಿಸಿದೆ ಎಂದರು.
ರಾಜ್ಯದ ಶಾಲೆಗಳಲ್ಲಿ ಒಟ್ಟು 44,000 ಕೆಡೆಟ್​ಗಳಿದ್ದಾರೆ. ಎನ್​ಸಿಸಿ ಕಷ್ಟಕರವಾಗಿರುವ ಕಾರ್ಯಕ್ರಮಗಳನ್ನು ಪುನರ್ ರಚಿಸಲು ಕೇಂದ್ರ ರಕ್ಷಣಾ ಸಚಿವಾಲಯ ಒಪ್ಪಿಗೆ ಪಡೆದು, 44,000 ಕೆಡೆಟ್​ಗಳನ್ನು ಕಾಲೇಜುಗಳಿಗೆ ಸ್ಥಳಾಂತರಿಸಲಾಗುವುದು. ಎನ್​ಸಿಸಿ ಚಟುವಟಿಕೆಗಳಿಗೆ ತಗುಲುವ ವೆಚ್ಚ ಪೂರ್ತಿ ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಬೊಮ್ಮಾಯಿ ಪ್ರಕಟಿಸಿದರು. ಮುಂದಿನ ವರ್ಷದೊಳಗೆ ಕಾಲೇಜುಗಳಲ್ಲಿ 50 ಸಾವಿರಕ್ಕೂ ಹೆಚ್ಚು ಕೆಡೆಟ್​ಗಳನ್ನು ರೂಪಿಸುವ ಸಂಕಲ್ಪ ಮಾಡಲಾಗಿದ್ದು, ರಕ್ಷಣಾ ಸಚಿವಾಲಯದಿಂದ ಅನುಮತಿ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದಿ ಸಮುದಾಯ 75 ಕ್ರೀಡಾಪಟುಗಳಿಗೆ ತರಬೇತಿ:ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ಎನ್.ನಾರಾಯಣಗೌಡ ಮಾತನಾಡಿ ಜಕ್ಕೂರು ವೈಮಾನಿಕ ತರಬೇತಿ ಶಾಲೆ ನವೀಕರಣದ ಕನಸು ನನಸಾಗಿದೆ. ಅಲ್ಲದೆ, 75 ಪೈಲಟ್​ಗಳಿಗೆ ತರಬೇತಿ ನೀಡಲಿದ್ದು, ಸಿದ್ದಿ ಸಮುದಾಯದ 75 ಕ್ರೀಡಾಪಟುಗಳಿಗೆ ತರಬೇತಿಗೆ ಸಿಎಂ ಚಾಲನೆ ನೀಡಿದ್ದು, ಇಲಾಖೆಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳನ್ನು ಯೋಜಿಸಲು ಪ್ರೋತ್ಸಾಹ ಸಿಕ್ಕಿದೆ ಎಂದರು.
ಯುವಜನರ ಹಕ್ಕು:ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ ಯುವಜನರಿಗೆ ದೇಶದ ಸಂಪನ್ಮೂಲಗಳ ಹಕ್ಕಿದೆ. ಇದನ್ನು ಮನಗಂಡು ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಹಣಕ್ಕೆ ಪ್ರಾಧಾನ್ಯತೆ ನೀಡುತ್ತಿರುವ ಕಾರಣ ಸಮಾಜದಲ್ಲಿ ನೈತಿಕತೆ, ಮೌಲ್ಯಗಳು ಗೌಣವಾಗುತ್ತಿದ್ದು, ಇಂತಹ ಪ್ರವೃತಿಗಳಿಗೆ ಕಡಿವಾಣ ಹಾಕಿ, ವಿದ್ಯಾರ್ಥಿಗಳ ಪರಿಪೂರ್ಣ ಹಾಗೂ ಸಮಾಜೋಪಯೋಗಿ ವ್ಯಕ್ತಿತ್ವ ನಿರ್ವಣಕ್ಕೆ ನೂತನ ಶಿಕ್ಷಣ ನೀತಿಯಲ್ಲಿ ಆದ್ಯತೆ ನೀಡಲಾಗಿದೆ ಎಂದರು.
ನಿವೃತ್ತ ಲೆಫ್ಟಿನಂಟ್ ಜನರಲ್ ಪಿ.ಜಿ.ಕಾಮತ್ ಅವರು ನೇತಾಜಿ ಜೀವನಗಾಥೆ ಕುರಿತು ಭಾಷಣ ಮಾಡಿದರು. ಕೇಂದ್ರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಅಧ್ಯಕ್ಷತೆವಹಿಸಿದ್ದ ಶಾಸಕ ಕೃಷ್ಣಬೈರೇಗೌಡ ಮಾತನಾಡಿದರು.
ಪ್ರತಿಮೆ ಸ್ಥಳಾಂತರ:ವಿಧಾನಸೌಧ ಆವರಣದ ಹಿಂಬದಿಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುತ್ಥಳಿಯನ್ನು ಮುಂಭಾಗದಲ್ಲಿ ಸೂಕ್ತ ಜಾಗಕ್ಕೆ ಸ್ಥಳಾಂತರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಪ್ರಕಟಿಸಿದರು. ನೇತಾಜಿಯವರ 125ನೇ ಜನ್ಮ ದಿನದ ನಿಮಿತ್ತ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪ್ರತಿಮೆ ಸ್ಥಳಾಂತರದ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಂಡು ಮುಂದಿನ ಜನ್ಮ ದಿನಾಚರಣೆಯನ್ನು ವಿಧಾನಸೌಧ ಮುಂಭಾಗದಲ್ಲಿ ಆಚರಿಸಲಾಗುವುದು ಎಂದರು.
ವರ್ಷವಿಡೀ ಕಾರ್ಯಕ್ರಮ:ದೇಶದ ಹೆಮ್ಮೆಯ ಪುತ್ರ ನೇತಾಜಿಯವರ ಆದರ್ಶ, ಜೀವನ ಮೌಲ್ಯ, ಅಪ್ರತಿಮ ದೇಶಭಕ್ತಿ ಮಾತಿನಲ್ಲಿ ಉಳಿಯದೇ ಕೃತಿಗೂ ಇಳಿಯಬೇಕು. ಈ ಹಿನ್ನೆಲೆಯಲ್ಲಿ 125ನೇ ಜನ್ಮ ದಿನವನ್ನು ರಾಜ್ಯದ ಎಲ್ಲ ಶಾಲೆ-ಕಾಲೇಜುಗಳಲ್ಲಿ ವರ್ಷವಿಡೀ ಹಮ್ಮಿಕೊಂಡು, ನೇತಾಜಿಯವರ ಜೀವನ- ಸಾಧನೆಯನ್ನು ಯುವ ಪೀಳಿಗೆಗೆ ತಿಳಿಸುವ ಜತೆಗೆ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ನವದೆಹಲಿ:ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ನಾಯಕ ಸುಭಾಷ್ ಚಂದ್ರ ಬೋಸ್ ಅವರಿಗೆ 125ನೇ ಜನ್ಮ ದಿನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾನುವಾರ ನಮನ ಸಲ್ಲಿಸಿದರು.
ಇಂಡಿಯಾ ಗೇಟ್​ನಲ್ಲಿ 28 ಅಡಿ ಎತ್ತರದ ಗ್ರಾನೈಟ್ ಪ್ರತಿಮೆ ಸ್ಥಾಪಿಸುವುದಾಗಿ ಘೋಷಿಸಿದ್ದ ಪ್ರಧಾನಿ ಮೋದಿ, ಈ ಪ್ರತಿಮೆ ಪ್ರತಿಷ್ಠಾಪನೆ ಆಗುವವರೆಗೆ ಪ್ರದರ್ಶಿಸಲಾಗುವ 3ಡಿ ಹಾಲೋಗ್ರಾಮ್ ಪ್ರತಿಮೆಯನ್ನು ಅನಾವರಣ ಗೊಳಿಸಿದರು. ನಂತರ ಮಾತಾನಾಡಿದ ಅವರು, ಅನೇಕ ಮಹಾನ್ ನಾಯಕರ ಕೊಡುಗೆ ಹಾಗೂ ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಅಳಿಸಿ ಹಾಕಲು ಸ್ವಾತಂತ್ರಾ್ಯನಂತರ ಪ್ರಯತ್ನಗಳು ನಡೆದಿವೆ. ಹಿಂದಿನ ತಪು್ಪಗಳನ್ನು ದೇಶ ಈಗ ಸರಿಪಡಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಸ್ವತಂತ್ರ ಭಾರತದ ತಮ್ಮ ಭೀಷಣ ಸಂಕಲ್ಪವನ್ನು ಈಡೇರಿಸಿಕೊಳ್ಳಲು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದ ಬೋಸ್ ರಾಷ್ಟ್ರೀಯ ಸಂಕೇತ. ಅವರ ಆದರ್ಶ ಮತ್ತು ತ್ಯಾಗ ಸದಾ ಸ್ಪೂರ್ತಿ ನೀಡುತ್ತದೆ ಎಂದು ಟ್ವೀಟ್​ನಲ್ಲಿ ರಾಷ್ಟ್ರಪತಿ ಕೋವಿಂದ ಹೇಳಿದ್ದಾರೆ.
ನೇತಾಜಿ ಹೆಸರಿನ ಎರಡು ಪ್ರಶಸ್ತಿ:ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರಿನಲ್ಲಿ ನೀಡಲಾಗುವ ಆಪ್ತ ಪ್ರಬಂಧನ ಪುರಸ್ಕಾರಕ್ಕೆ 2022ನೇ ಸಾಲಿನಲ್ಲಿ ಗುಜರಾತ್ ವಿಪತ್ತು ನಿರ್ವಹಣಾ ಸಂಸ್ಥೆ (ಸಂಘ-ಸಂಸ್ಥೆ ವಿಭಾಗ) ಮತ್ತು ಪ್ರೊಫೆಸರ್ ವಿನೋದ್ ಶರ್ಮಾ (ವೈಯಕ್ತಿಕ ವಿಭಾಗ) ಆಯ್ಕೆಯಾಗಿದ್ದಾರೆ. 2019 ಮತ್ತು 2020ನೇ ಸಾಲಿನ ಪ್ರಶಸ್ತಿಗೆ ಭಾಜನಾರದವರ ಜತೆ ಈ ಸಾಲಿನ ಸಾಧಕರಿಗೂ ಭಾನುವಾರ ನಡೆದ ನೇತಾಜಿ ಜಯಂತಿ ಸಮಾರಂಭದಲ್ಲಿ ಪ್ರಧಾನಿ ಮೋದಿ ಪ್ರಶಸ್ತಿ ಪ್ರದಾನ ಮಾಡಿದರು. ಸಂಘ-ಸಂಸ್ಥೆಗೆ ನೀಡಲಾಗುವ ಪ್ರಶಸ್ತಿ 51 ಲಕ್ಷ ರೂಪಾಯಿ ನಗದು ಹಾಗೂ ಸರ್ಟಿಫಿಕೆಟ್, ವ್ಯಕ್ತಿಗತ ಸಾಧಕರಿಗೆ 5 ಲಕ್ಷ ರೂಪಾಯಿ ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡಿರುತ್ತದೆ. ವಿನೋದ್ ಶರ್ವ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಸ್ಥಾಪಕ ಸಮನ್ವಯಕಾರರಾಗಿದ್ದಾರೆ.
ಶಿನ್ಜೊ ಅಬೆಗೆ ಪ್ರಶಸ್ತಿ:ನೇತಾಜಿ ಸಂಶೋಧನಾ ಸಂಸ್ಥೆ ಕೊಡಮಾಡುವ ಪ್ರಶಸ್ತಿಯು ಈ ಸಾರಿ ಜಪಾನ್​ನ ಮಾಜಿ ಪ್ರಧಾನಿ ಶಿನ್ಜೊ ಅಬೆಗೆ ನೀಡಲಾಗಿದೆ. ಕೋಲ್ಕತದಲ್ಲಿರುವ ಜಪಾನ್ ಕಾನ್ಸುಲ್ ಜನರಲ್ ನಕಾಮುರಾ ಯುತಾಕಾ ಅವರು ಅಬೆ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಬಿಜೆಪಿ-ಟಿಎಂಸಿ ಘರ್ಷಣೆ:ಬರಾಕ್​ಪುರ ಸಂಸದ ಅರ್ಜುನ್ ಸಿಂಗ್ ನೇತಾಜಿ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಅವರ ಕಾರಿನ ಮೇಲೆ ದುಷ್ಕರ್ವಿುಗಳು ಕಲ್ಲು ತೂರಿದ ಘಟನೆಯಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಈ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆಯಿತು.
ನೇತಾಜಿ ಸುಭಾಷ್ ಚಂದ್ರ ಬೋಸ್ ನಿಗೂಢ ಕಣ್ಮರೆಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಸರ್ಕಾರ ವರ್ಷದ ಹಿಂದೆಯೇ ಹೇಳಿದೆ. ಆದರೆ, ಈ ವರ್ಗೀಕೃತ ದಾಖಲೆಗಳನ್ನು ಪೂರ್ಣವಾಗಿ ಏಕೆ ಬಹಿರಂಗ ಪಡಿಸುತ್ತಿಲ್ಲ?
|ಮಮತಾ ಬ್ಯಾನರ್ಜಿಪಶ್ಚಿಮ ಬಂಗಾಳ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 9 =
Remember me
