| ಕಿರಣ್ ಮಾದರಹಳ್ಳಿ ಚಾಮರಾಜನಗರ
ಭದ್ರಕೋಟೆಯ ಕೀಲಿ ‘ಕೈ’ ಜಾರಿ ಕಳೆದ ಸಲ ಕೇಸರಿ ತೆಕ್ಕೆ ಸೇರಿರುವ ಚಾಮರಾಜನಗರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳದಂತೆ ಮಾಡಲು ಕಾಂಗ್ರೆಸ್ ಕನದಕ್ಕಿಳಿದಿದೆ. ಗೆಲುವಿನ ಕಡೆಗೆ ‘ಹಸ್ತ’ರೇಖೆ ಎಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪಣಕ್ಕಿಟ್ಟಿರುವ ಪ್ರತಿಷ್ಠೆಗೆ ಭಂಗ ತಂದು ಮರು ಅಧಿಪತ್ಯ ಸ್ಥಾಪಿಸಲು ಬಿಜೆಪಿ ಕಾಳಗ ನಡೆಸಿದೆ. ಚಾಮರಾಜನಗರ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್ ಕಾಂಗ್ರೆಸ್​ನಿಂದ ಅಖಾಡಕ್ಕಿಳಿದಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕೊಳ್ಳೇಗಾಲದ ಮಾಜಿ ಶಾಸಕ ಎಸ್.ಬಾಲರಾಜ್ ಕಣದಲ್ಲಿದ್ದಾರೆ. ಬಿಎಸ್ಪಿಯಿಂದ ಕೃಷ್ಣಮೂರ್ತಿ ಸ್ಪರ್ಧಿಸಿದ್ದಾರೆ.
ಸದ್ಯ ಕಾಂಗ್ರೆಸ್-ಬಿಜೆಪಿ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿದೆ. ಚಾಮರಾಜನಗರ ಕಾಂಗ್ರೆಸ್​ನ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ ವಿರುದ್ಧ ಬಿಜೆಪಿಯ ವಿ.ಶ್ರೀನಿವಾಸಪ್ರಸಾದ್ ಗೆದ್ದಿದ್ದರು. ಸಿಎಂ ಸಿದ್ದರಾಮಯ್ಯ ಗೆದ್ದಿರುವ ವರುಣ ಒಳಗೊಂಡಂತೆ 8 ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಈ ಪೈಕಿ 7ರಲ್ಲಿ ಕಾಂಗ್ರೆಸ್​ಗೆ ಶಾಸಕರ ಬಲವಿದೆ. 1 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದು, ಅವರ ಬೆಂಬಲ ಬಿಜೆಪಿಗೆ ಸಿಕ್ಕಿದೆ.
ಖುದ್ದು ಸಿಎಂ ಗೇಮ್ ಪ್ಲ್ಯಾನ್: ತಮ್ಮ ಸ್ವಕ್ಷೇತ್ರವಿರುವ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಲು ಸಿದ್ದರಾಮಯ್ಯ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ. ಖುದ್ದು ತಾವೇ ಗೇಮ್ ಪ್ಲ್ಯಾನ್ ಮಾಡುತ್ತಿದ್ದಾರೆ. ಇದಕ್ಕೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಾಥ್ ಕೊಟ್ಟಿದ್ದು, ಸಂಸದ ವಿ. ಶ್ರೀನಿವಾಸಪ್ರಸಾದ್ ಬೆಂಬಲಿಗರು ಮತ್ತು ಇತರ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು ಇದರ ಒಂದು ಭಾಗ. ಶಾಸಕರ ಮುಂದಾಳತ್ವದಲ್ಲಿ ಬಿರುಸಿನ ಪ್ರಚಾರ ನಡೆಸುವುದು, ತಂತಮ್ಮ ಕ್ಷೇತ್ರದಲ್ಲಿ ಲೀಡ್ ಕೊಡಿಸುವ ಟಾಸ್ಕ್ ಕೊಡಲಾಗಿದೆ. ಗ್ಯಾರಂಟಿ ಯೋಜನೆಗಳು ಜನರ ಮೇಲೆ ಬೀರಿರುವ ಸಕಾರಾತ್ಮಕ ಪ್ರಭಾವವನ್ನು ಲೋಕಸಭೆಗೆ ಮತಗಳನ್ನಾಗಿ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ.
ಬಿಜೆಪಿ ಗೆಲ್ಲಿಸಿದ್ದ ಶ್ರೀನಿವಾಸ ಪ್ರಸಾದ್:1962ರಿಂದ 2014ರವರೆಗಿನ 14 ಲೋಕಸಭೆ ಚುನಾವಣೆಗಳಲ್ಲಿ ಒಂದು ಬಾರಿಯೂ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿರ ಲಿಲ್ಲ. 2019ರ ಚುನಾವಣೆಯಲ್ಲಿ ಆರ್.ಧ್ರುವನಾರಾಯಣ ವಿರುದ್ಧ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಗೆದ್ದು ಮೊದಲ ಬಾರಿಗೆ ಕಮಲ ಅಧಿಕಾರಕ್ಕೆ ಬಂತು. ಇದೀಗ ಕ್ಷೇತ್ರ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಪಕ್ಷಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ನಾಮ ಬಲದೊಂದಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಮತ ಕೇಳುತ್ತಿದೆ.
ಬಿಜೆಪಿ ಪ್ರತಿತಂತ್ರ :ಸಿಎಂ ತಂತ್ರಗಳಿಗೆ ಬಿಜೆಪಿ ಪ್ರತಿತಂತ್ರ ರೂಪಿಸಿ ಅವರ ಪ್ರತಿಷ್ಠೆಗೆ ಭಂಗ ತರಲು ನಿರ್ಣಾಯಕ ಹೋರಾಟ ನಡೆಸಿದೆ. ವಿ. ಶ್ರೀನಿವಾಸಪ್ರಸಾದ್ ಕುಟುಂಬಸ್ಥರು, ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿರುವುದಕ್ಕೆ ಪ್ರತಿತಂತ್ರವಾಗಿ ಪ್ರಸಾದ್ ಅಳಿಯ, ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್ ಪಕ್ಷದಲ್ಲೇ ಇದ್ದಾರೆ. ಅಭ್ಯರ್ಥಿ ಎಸ್.ಬಾಲರಾಜ್ ಪರ ಪ್ರಚಾರ ಮಾಡುತ್ತಿದ್ದಾರೆ. ಮತದಾರರು ಉತ್ತಮ ಆಯ್ಕೆಯನ್ನೇ ಮಾಡುತ್ತಾರೆ ಎಂಬ ದಾಳ ಉರುಳಿಸಿದ್ದಾರೆ.
ಅಪಪ್ರಚಾರವೂ ಅಸ್ತ್ರ:ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್​ಗೆ ಗ್ಯಾರಂಟಿ ಯೋಜನೆ, ಬಿಜೆಪಿಗೆ ಮೋದಿ ಅಲೆ ಬಲ ತುಂಬುತ್ತಿದೆ. ಮತ್ತೊಂದೆಡೆ ಅಪಪ್ರಚಾರವೇ ದೊಡ್ಡ ಸದ್ದು ಮಾಡಿದೆ. ಸುನೀಲ್​ಬೋಸ್ ನಾಮಪತ್ರ ಸಲ್ಲಿಕೆ ದಿನದಂದು ಇವರ ವಿರುದ್ಧ ನಗರದಲ್ಲಿ ಪೋಸ್ಟರ್ ಅಂಟಿಸಿ, ಗೋ ಬ್ಯಾಕ್ ಎಂದು ಬರೆಯಲಾಗಿತ್ತು. ಸಂಸದ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಎಸ್.ಬಾಲರಾಜ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಜಾಲತಾಣಗಳಲ್ಲಿ ಏ.6ರಂದು ಸುದ್ದಿ ಹಾಕಿ ಅಪಪ್ರಚಾರ ಮಾಡಲಾಗಿತ್ತು.
ಸುನೀಲ್​ಬೋಸ್ ಪ್ಲಸ್-ಮೈನಸ್
1. ಸಿಎಂ ಸಿದ್ದರಾಮಯ್ಯ ಛಲ-ಬಲ, ಮಹದೇವಪ್ಪ ಪುತ್ರನೆಂಬ ಶ್ರೀರಕ್ಷೆ
2. ಪಕ್ಷ ಅಧಿಕಾರದಲ್ಲಿ ಇರುವುದು, ಗ್ಯಾರಂಟಿ ಯೋಜನೆ
3. ಲೋಕಸಭೆ ವ್ಯಾಪ್ತಿಯ 8ರಲ್ಲಿ 7 ಕ್ಷೇತ್ರಗಳಲ್ಲಿ ‘ಕೈ’ ಶಾಸಕರಿರುವುದು ಕ್ಷೇತ್ರಕ್ಕೆ ಹೊಸ ಪರಿಚಯ, ನಾಮಪತ್ರ ಸಲ್ಲಿಕೆ ದಿನವೇ ಗೋಬ್ಯಾಕ್ ಘೋಷಣೆ ಕಂಡುಬಂದಿತ್ತು
4. ನಡೆ-ನುಡಿ ಕುರಿತು ಅಪಪ್ರಚಾರ
ಎಸ್. ಬಾಲರಾಜ್ ಪ್ಲಸ್-ಮೈನಸ್
1. ಪ್ರಧಾನಿ ಮೋದಿ ಅಲೆ, ಬಿಎಸ್​ವೈ, ಬಿವಿವೈ ಬಲ
2. ಸರಳ, ಸಜ್ಜನಿಕೆ ವ್ಯಕ್ತಿತ್ವದಿಂದಲ್ಲೇ ಹೆಸರುವಾಸಿ
3. 20 ವರ್ಷಗಳಿಂದ ಅಧಿಕಾರ ಸಿಗದಿದ್ದರೂ ಜನಸೇವೆ ಮಾಡುತ್ತಿರುವ ಅನುಕಂಪ
4. ವಿ. ಶ್ರೀನಿವಾಸಪ್ರಸಾದ್ ಕುಟುಂಬಸ್ಥರು, ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ
5. ಶಾಸಕರ ಬಲ ಇಲ್ಲದಿರುವುದು
ದೇಶಾದ್ಯಂತ ಪ್ರಧಾನಿ ಮೋದಿ ಅಲೆ, ರಾಜ್ಯದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಪಕ್ಷದ ಗಣ್ಯರು, ಕಾರ್ಯಕರ್ತರ ಶಕ್ತಿ, ಜೆಡಿಎಸ್ ಸಹಕಾರ, ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕೆಂದು ಜನರು ಇಟ್ಟಿರುವ ಪ್ರೀತಿಯೇ ನನಗೆ ಶ್ರೀರಕ್ಷೆ. ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ.
| ಎಸ್. ಬಾಲರಾಜ್ ಬಿಜೆಪಿ ಅಭ್ಯರ್ಥಿ
ನಮ್ಮದು ನುಡಿದಂತೆ ನಡೆಯುವ, ಬಡವರು, ಶೋಷಿತರ, ಅನ್ಯಾಯಕ್ಕೊಳಗಾದವರ ಪರ ಇರುವ ಸರ್ಕಾರ. ಗ್ಯಾರಂಟಿ ಯೋಜನೆಗಳು ನಾಡಿನ ಜನರ ಸುಸ್ಥಿರ ಬದುಕಿಗೆ ಬುನಾದಿ ಹಾಕಿವೆ. ಲೋಕಸಭಾ ಚುನಾವಣೆ ಪ್ರಣಾಳಿಕೆಯ ನ್ಯಾಯದ ಭರವಸೆಗಳು ಹೊಸ ಬದಲಾವಣೆ ತರಲಿದ್ದು, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ಆಗಾಧ ನಂಬಿಕೆ ಇದೆ.
| ಸುನೀಲ್ ಬೋಸ್ ಕಾಂಗ್ರೆಸ್ ಅಭ್ಯರ್ಥಿ
ಮುಸ್ಲಿಮರಿಗೆ ತೊಂದರೆ ಕೊಟ್ರೆ ಇಡೀ ದೇಶನೇ ಸುಟ್ಟು ಹಾಕ್ತೀವಿ: ಕೇಂದ್ರ ಸಚಿವರಿಗೆ ಬೆದರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 14 =
Remember me
