|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮೊದಲ ಬಜೆಟ್ ಮಂಡನೆಗೆ ಭರದಿಂದ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳಿಗೆ ಮಾಡುತ್ತಿರುವ ಖರ್ಚಿನ ಪ್ರಮಾಣ ಕಳೆದ ಎರಡು ವರ್ಷಗಳಿಗಿಂತ ಕಡಿಮೆಯಾಗಿರುವುದು ಪ್ರಗತಿಯ ವೇಗವನ್ನೇ ತಗ್ಗಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಪ್ರವಾಹ, ಕರೊನಾ ಇನ್ನಿತರ ಸಮಸ್ಯೆಗಳಿಂದ ಅಭಿವೃದ್ಧಿ ವೇಗಕ್ಕೆ ಗ್ರಹಣ ಹಿಡಿದಿತ್ತು. ಆದರೆ ಈ ವರ್ಷ ತೆರಿಗೆ ಸಂಗ್ರಹ ಉತ್ತಮವಾಗಿದ್ದರೂ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಕಾಲಕಾಲಕ್ಕೆ ಹಣ ಬಿಡುಗಡೆ ಮಾಡಲು ವಿಫಲವಾಗಿರುವುದು ಅಂಕಿ-ಅಂಶಗಳಿಂದ ಕಂಡುಬರುತ್ತಿದೆ.
ಅಭಿವೃದ್ಧಿ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳು ಯಶಸ್ವಿಯಾಗಿ ಜಾರಿಯಾಗಬೇಕೆಂದರೆ ಕಾಲಕಾಲಕ್ಕೆ ಹಣ ಬಿಡುಗಡೆ ಯಾಗಬೇಕು. ಆಗ ಅವುಗಳ ಫಲ ಜನರಿಗೆ ತಲುಪುತ್ತದೆ. ಇಲ್ಲದಿದ್ದರೆ ಪ್ರಗತಿ ಸಾಧ್ಯವಾಗುವುದಿಲ್ಲ ಎಂಬುದು ಅರ್ಥಶಾಸ್ತ್ರಜ್ಞರ ಅಭಿಪ್ರಾಯ. ಸಕಾಲಕ್ಕೆ ಹಣ ಬಿಡುಗಡೆ ಮಾಡದೆ ಆರ್ಥಿಕ ವರ್ಷದ ಕೊನೆಯ ತಿಂಗಳಿನಲ್ಲಿ ಹಣ ಬಿಡುಗಡೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ತಜ್ಞರ ಅನಿಸಿಕೆ. ಪ್ರತಿ 3 ತಿಂಗಳಿಗೊಮ್ಮೆ ಹಣ ಬಿಡುಗಡೆ ಮಾಡುವ ಪದ್ಧತಿ ಅನುಸರಿಸಲು ಸರ್ಕಾರ ನಿರ್ಧರಿಸಿತ್ತಾದರೂ, ಆ ಪ್ರಯತ್ನ ಜಾರಿಗೆ ಬರಲೇ ಇಲ್ಲ.
ಹಿಂದಿನ ಪದ್ಧತಿಯೇ ಮುಂದುವರಿದಿದೆ. ವೆಚ್ಚವನ್ನು 2019-20ರ ಬಜೆಟ್​ಗೆ ಹೋಲಿಸಿದರೆ 2021-22ರಲ್ಲಿ ಶೇ.5 ಹೆಚ್ಚು ಮಾಡಿಕೊಳ್ಳಲಾಗಿತ್ತು. ವಿಪರ್ಯಾಸವೆಂದರೆ ತೆರಿಗೆ ಸಂಗ್ರಹ ಪ್ರಮಾಣ 20,218 ಕೋಟಿ ರೂ. ಕಡಿಮೆ ಮಾಡಲಾಗಿದೆ. ಆದ್ದರಿಂದ ವೆಚ್ಚ ಹೆಚ್ಚಾಗಲು ಹೇಗೆ ಸಾಧ್ಯವಾಗುತ್ತದೆ ಎಂಬ ಪ್ರಶ್ನೆ ಇಲ್ಲಿದೆ. 2020-21ರಲ್ಲಿ ಮೊದಲಿಗೆ ವೆಚ್ಚ 2.37 ಕೋಟಿ ರೂ.ಗಳನ್ನು ನಿಗದಿ ಮಾಡಿ ನಂತರ 2.29 ಕೋಟಿ ರೂ.ಗೆ ಇಳಿಸಲಾಗಿತ್ತು. 2021-22ರಲ್ಲಿ 2.46 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಆದರೆ ವೆಚ್ಚದ ಪ್ರಮಾಣ ನಿರೀಕ್ಷಿತ ಗುರಿ ಮುಟ್ಟುವುದು ಕಷ್ಟವೆಂದೇ ಹೇಳಲಾಗುತ್ತಿದೆ.
2019-20ರಲ್ಲಿ ರಾಜಸ್ವ ಕೊರತೆ ಇರಲಿಲ್ಲ: ರಾಜ್ಯದಲ್ಲಿ 2019-20ರಲ್ಲಿ ರಾಜಸ್ವ ಕೊರತೆ ಇರಲಿಲ್ಲ. 1185 ಕೋಟಿ ರೂ.ಗಳ ರಾಜಸ್ವ ಉಳಿತಾಯ ಇತ್ತು. ಆದರೆ ಈಗ 15,134 ಕೋಟಿ ರೂ.ಗೆ ತಲುಪಿದ್ದು ಆತಂಕದ ಸ್ಥಿತಿ ಇದೆ. ಅಂದರೆ ರಾಜಸ್ವ ವೆಚ್ಚ ಹೆಚ್ಚಾಗುತ್ತಿವೆ. ಸಾಲ, ಸಾಲದ ಮೇಲಿನ ಬಡ್ಡಿ, ವೇತನ, ಪಿಂಚಣಿ, ಸಬ್ಸಿಡಿ ಪ್ರಮಾಣ ಹೆಚ್ಚಾಗಿರುವುದು ಇದಕ್ಕೆ ಕಾರಣ.

ಎಲ್ಲೆಲ್ಲಿ ಸಂಕಷ್ಟ?:ಗ್ರಾಮೀಣಾಭಿವೃದ್ಧಿ, ಕೃಷಿ, ಜಲ ಸಂಪ ನ್ಮೂಲ, ಲೋಕೋಪಯೋಗಿ, ತೋಟಗಾರಿಕೆ ಇಲಾಖೆಗಳಲ್ಲಿ ಪ್ರಗತಿ ಕುಂಠಿತವಾಗಿದೆ. ಅದರಲ್ಲೂ 2019-20ಕ್ಕೆ ಹೋಲಿಸಿದರೆ ಆಹಾರ ಹೊರತುಪಡಿಸಿದರೆ ಉಳಿದ ಎಲ್ಲ ಇಲಾಖೆಗಳಲ್ಲಿ ವೆಚ್ಚ ಕಡಿಮೆಯಾಗಿದೆ. ಆಹಾರ ಇಲಾಖೆಯಲ್ಲಿ ಶೇ.81.25 ವೆಚ್ಚವಾಗಿದೆ. ಏಕೆಂದರೆ ಆ ಇಲಾಖೆಯಲ್ಲಿ ಆಹಾರದ ಸಬ್ಸಿಡಿ ಪ್ರಮಾಣವೇ ಹೆಚ್ಚಾಗಿದೆ.
ರಾಜ್ಯದಲ್ಲಿ ವೆಚ್ಚದ ಪ್ರಮಾಣ ರಾಜಸ್ವ ಹಾಗೂ ಬಂಡವಾಳ ವೆಚ್ಚ ಸೇರಿ ಶೇ.61.57 ಆಗಿದೆ. ಮಾರ್ಚ್ ಅಂತ್ಯದೊಳಗೆ ವೆಚ್ಚ ಆಗದಿದ್ದಲ್ಲಿ ಅನೇಕ ಯೋಜನೆಗಳು ಸ್ಥಗಿತವಾಗುವ ಸಾಧ್ಯತೆಗಳಿವೆ ಎಂದು ಹಿರಿಯ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದ ಬಜೆಟ್ ಗಾತ್ರ 2,46,207 ಕೋಟಿ ರೂ.ಗಳಿದೆ. ಅದರಲ್ಲಿ ರಾಜಸ್ವ ಹಾಗೂ ಬಂಡವಾಳ ವೆಚ್ಚ ಸೇರಿ ಖರ್ಚಾಗಿರುವುದು ಡಿಸೆಂಬರ್ ಅಂತ್ಯದ ತನಕ 1,51,581 ಕೋಟಿ ರೂ. ಬಂಡವಾಳ ವೆಚ್ಚ ಶೇ.51 ಆಗಿದ್ದರೆ, ರಾಜಸ್ವ ವೆಚ್ಚ ಶೇ.65 ರಷ್ಟು ಆಗಿದೆ. ಅದರಲ್ಲಿ ಬದ್ಧತಾ ವೆಚ್ಚಗಳಾದ ಸಂಬಳ, ನಿವೃತ್ತಿ ವೇತನ, ಸಬ್ಸಿಡಿಗಳೇ ಹೆಚ್ಚು ಭಾಗವನ್ನು ತೆಗೆದುಕೊಳ್ಳುತ್ತವೆ. ಆದ್ದರಿಂದಲೇ ಆಸ್ತಿ ಸೃಷ್ಟಿಸಬೇಕಾದ ಬಂಡವಾಳ ವೆಚ್ಚ ದಿನೇ ದಿನೆ ಕಡಿಮೆಯಾಗುತ್ತ ಬರುತ್ತಿದೆ. ಜನಪರ ಕಾರ್ಯಕ್ರಮಗಳ ಅನುಷ್ಠಾನದಲ್ಲೂ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
