ರುದ್ರಣ್ಣ ಹರ್ತಿಕೋಟೆ ಬೆಂಗಳೂರುಕರ್ನಾಟಕ- ಆಂಧ್ರಪ್ರದೇಶದ ಗಡಿ ರೇಖೆಯನ್ನು ನಿಖರವಾಗಿ ಗುರುತಿಸುವ ಮೂಲಕ ತನ್ನ ನೆಲದ ಹಿತ ಕಾಯಲು ಹಾಗೂ ಜನರಲ್ಲಿರುವ ಗೊಂದಲಗಳ ನಿವಾರಣೆಗಾಗಿ ತಜ್ಞರ ತಂಡದ ಮೊರೆ ಹೋಗಲು ಸರ್ಕಾರ ನಿರ್ಧರಿಸಿದೆ.
ಕೆಲ ವರ್ಷಗಳ ಹಿಂದೆ ಕಬ್ಬಿಣ ಅದಿರು ಗಣಿಗಾರಿಕೆ ಉತ್ತುಂಗದಲ್ಲಿದ್ದಾಗ ಗಣಿ ಕಂಪನಿಯೊಂದು ರಾಜ್ಯದ ಗಡಿಯನ್ನು 400 ಮೀಟರ್​ನಷ್ಟು ಒತ್ತುವರಿ ಮಾಡಿದ ಆರೋಪ ಇದೆ. ರಾಜ್ಯದೊಳಗೆ ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಪ್ರಮಾಣದ ಅದಿರು ಲಭ್ಯವಿಲ್ಲ ಎಂಬ ಕಾರಣ ಗಡಿ ಗುರುತಿನ ಕಲ್ಲನ್ನೇ ಕಿತ್ತು ನಾಶಪಡಿಸಿದೆ ಎಂಬ ಆರೋಪ ಇದೆ. ರಾಜ್ಯದ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರದ ಸರ್ವೆ ಆಫ್ ಇಂಡಿಯಾ ಎಲ್ಲ ಮಾಹಿತಿಯನ್ನು ಪಡೆದು ಎರಡೂ ರಾಜ್ಯದ ಗಡಿ ರೇಖೆಯನ್ನು ಗುರುತಿಸುವ ಕರಡು ಪ್ರಕಟಿಸಿದೆ. ಅದನ್ನು ಈಗ ಅಧ್ಯಯನ ಮಾಡುವ ಮೂಲಕ ರಾಜ್ಯದ ನೆಲ ಒಂದಿಂಚು ಕದಲದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸರ್ವೆ ಆಫ್ ಇಂಡಿಯಾ ಒಮ್ಮೆ ಗಡಿ ಗುರುತಿಸುವ ಕೆಲಸ ಮಾಡಿತ್ತು. ಆದರೆ, ಅದರ ಬಗ್ಗೆ ಕೆಲ ಅನುಮಾನಗಳು ವ್ಯಕ್ತವಾದ್ದರಿಂದ ಪ್ರಧಾನಮಂತ್ರಿ ಕಚೇರಿಗೆ ದೂರು ಸಲ್ಲಿಕೆಯಾಗಿತ್ತು. ಪ್ರಧಾನಿ ಸಚಿವಾಲಯದ ಸೂಚನೆ ಮೇರೆಗೆ 2ನೇ ಬಾರಿ ಗಡಿ ಗುರುತಿಸುವ ಕೆಲಸದ ಕರಡು ಸಿದ್ಧವಾಗಿದೆ.
ಖರಗ್​ಪುರದಲ್ಲಿನ ತಜ್ಞರು:ಗಡಿ ರೇಖೆಯ ಅಧ್ಯಯನ ಕೇವಲ ಸರ್ವೆಯರ್​ಗಳ ಮೂಲಕ ಸಾಧ್ಯವಿಲ್ಲ. ಅದಕ್ಕೆ ತಜ್ಞರೇ ಬೇಕು. ಲಭ್ಯವಿರುವ ಮಾಹಿತಿ ಪ್ರಕಾರ ಖರಗ್​ಪುರದ ಐಐಟಿಯಲ್ಲಿನ ಸರ್ವೆ ವಿಭಾಗದಲ್ಲಿರುವ ತಜ್ಞರು ಈ ವಿಷಯದಲ್ಲಿ ಪರಿಣತರಾಗಿದ್ದಾರೆ. ಅವರ ಸೇವೆಯನ್ನು ಬಳಕೆ ಮಾಡಿಕೊಳ್ಳಲು ಸರ್ಕಾರ ತೀರ್ವನಿಸಿದೆ. ಇಡೀ ದೇಶದಲ್ಲಿಯೇ ಖರಗ್​ಪುರದ ತಂಡ ಅತ್ಯಂತ ಸಮರ್ಥ ಎನ್ನಲಾಗಿದೆ. ರಾಜ್ಯದಲ್ಲಿರುವ ನಿವೃತ್ತ ಸರ್ವೆ ಅಧಿಕಾರಿಗಳನ್ನು ಸಹ ಸಲಹೆ ನೀಡಲು ಬಳಕೆ ಮಾಡಿಕೊಳ್ಳಲಾಗುತ್ತದೆ. ಗಡಿ ಗುರುತಿಸುವುದು ಅತ್ಯಂತ ತಾಂತ್ರಿಕ ನಿಪುಣತೆಯ ಕೆಲಸ. ಆದ್ದರಿಂದಲೇ ತಾಂತ್ರಿಕ ಪರಿಣತರನ್ನು ಹುಡುಕುವ ಪ್ರಯತ್ನದಲ್ಲಿದ್ದಾಗಲೇ ಖರಗ್​ಪುರ ಐಐಟಿಯಲ್ಲಿನ ತಜ್ಞರ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ. ಆದ್ದರಿಂದ ಅವರ ಸೇವೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಗಡಿ ಗುರುತಾಗಿದ್ದು ಯಾವಾಗ?:ಮದ್ರಾಸ್ ಪ್ರೆಸಿಡೆನ್ಸಿಯ ಕಾಲದಲ್ಲಿ ಅಂದರೆ 1896ರಲ್ಲಿ ಮೊದಲಿಗೆ ಎರಡು ರಾಜ್ಯಗಳ ಗಡಿ ಗುರುತು ಮಾಡಲಾಗಿತ್ತು. ಆ ನಂತರ 1954ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ನಂತರ ರಾಜ್ಯದ ಗಡಿ ಗುರುತಾಗಿದೆ. ಓಬಳಾಪುರಂ ಗಣಿ ಕಂಪನಿಯ ಮೇಲೆ ಒತ್ತುವರಿಯ ಆರೋಪ ಇದೆ. ಈಗ ಗಡಿಯ ಬಗ್ಗೆ ಗೊಂದಲಗಳು ಇವೆ. ಆ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕಾಗಿದೆ.
ಕರಡು ಅಧ್ಯಯನ:ಕೇಂದ್ರದ ಸರ್ವೆ ಆಫ್ ಇಂಡಿಯಾ ಸಿದ್ಧಪಡಿಸಿರುವ ಗಡಿ ನಕ್ಷೆಯನ್ನು ತಜ್ಞರ ತಂಡ ರಾಜ್ಯದಲ್ಲಿರುವ ಮಾಹಿತಿಯ ಪ್ರಕಾರ ಅಧ್ಯಯನ ಮಾಡಲಿದೆ. ಕರಡು ಪ್ರತಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುವ ಅಂಶಗಳಿದ್ದರೆ ರಾಜ್ಯ ಆಕ್ಷೇಪಣೆ ಸಲ್ಲಿಸಲಿದೆ. ತಾಂತ್ರಿಕ ಪರಿಣತರಲ್ಲದಿದ್ದರೆ ಈ ವಿಚಾರ ತಿಳಿದುಕೊಳ್ಳುವುದು ಕಷ್ಟದ ಕೆಲಸ.
ಸಮಿತಿ ರಚನೆ:ಖರಗ್​ಪುರದ ಐಐಟಿ ತಜ್ಞರನ್ನು ಸಂರ್ಪಸಿದ ನಂತರ ಸರ್ಕಾರ ರಾಜ್ಯದ ಒಂದಿಬ್ಬರು ನಿವೃತ್ತ ಹಾಗೂ ಹಾಲಿ ಅಧಿಕಾರಿಗಳನ್ನು ಸೇರಿಸಿ ಸಮಿತಿ ರಚಿಸಲಿದೆ. ಯಾವುದೇ ಅನುಮಾನಗಳಿಗೂ ಅವಕಾಶ ಇಲ್ಲದಂತೆ ಅಧ್ಯಯನ ನಡೆಸಬೇಕಾಗಿದೆ. ಮೊದಲಿನ ಗಡಿ ರೇಖೆಯನ್ನೇ ಗುರುತಿಸಿ ಕಲ್ಲನ್ನು ಭದ್ರ ಪಡಿಸಬೇಕಾಗಿದೆ.
ಅಧಿಕಾರಿಗಳ ಸಭೆ:ಕೇಂದ್ರದ ಸರ್ವೆಕ್ಷಣಾ ಇಲಾಖೆಯು ಕರಡು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಲಾಖೆಯ ಅಧಿಕಾರಿಗಳು, ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿಯ ಸಭೆ ನಡೆಸಿದ್ದಾರೆ. ಕರಡು ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಅಧ್ಯಯನದ ಅಗತ್ಯತೆಯನ್ನು ಸಭೆಯಲ್ಲಿ ಕಂಡುಕೊಳ್ಳಲಾಗಿದೆ.
ಕರಡು ಪ್ರತಿಯಲ್ಲೇನಿದೆ?:ಭಾರತೀಯ ಸರ್ವೆಕ್ಷಣಾ ಇಲಾಖೆ ಸಿದ್ಧಪಡಿಸಿರುವ ಕರಡು ಪ್ರತಿಯಲ್ಲಿ ರಾಜ್ಯದ ಗಡಿ, ಯಾವ ಹಳ್ಳಿ, ಯಾವ ಸರ್ವೆ ನಂಬರ್ ಯಾವ ರಾಜ್ಯಕ್ಕೆ ಸೇರಿದೆ, ಆ ಸರ್ವೆ ನಂಬರ್ ಎಲ್ಲಿ ಬರುತ್ತದೆ, ಗಡಿ ರೇಖೆ ಹೇಗೆ ಹಾದು ಹೋಗಿತ್ತು ಎಂಬುದನ್ನು ತಿಳಿಸುವ ಮಾಹಿತಿ ನಕ್ಷೆಯ ಸಮೇತ ಇದೆ ಎಂದು ಮೂಲಗಳು ಹೇಳಿವೆ. ಇದೀಗ ರಾಜ್ಯ ತನ್ನ ಬಳಿ ಇರುವ ನಕ್ಷೆ ಹಾಗೂ ಮಾಹಿತಿಯನ್ನು ಆಧರಿಸಿ ಅಧ್ಯಯನ ಮಾಡಿ, ಆಕ್ಷೇಪಣೆಗಳಿದ್ದರೆ ಸಲ್ಲಿಸಬೇಕಾಗಿದೆ.
ಭಾರತೀಯ ಸರ್ವೆಕ್ಷಣಾ ಇಲಾಖೆ ಗಡಿ ಗುರುತಿಸಿದೆ. ಗಡಿ ಗುರುತಿಸಿದ ವಿಧಾನ ಪರಿಶೀಲಿಸಲು ಮತ್ತು ಒಪ್ಪಿದ ನಿಯಮಗಳ ಪ್ರಕಾರ ಕರಡು ಗಡಿ ಗುರುತು ಮಾಡಲಾಗಿದೆಯೇ ಎಂಬುದನ್ನು ತಿಳಿಯಲು ತಜ್ಞರ ಸಮಿತಿ ರಚಿಸಲಾಗುತ್ತದೆ. ಖರಗ್​ಪುರ ಐಐಟಿ ತಜ್ಞರ ಸೇವೆ ಬಳಸಿಕೊಳ್ಳಲಾಗುತ್ತದೆ.
| ಕೃಷ್ಣ ಬೈರೇಗೌಡ ಕಂದಾಯ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 3 =
Remember me
