ಬೆಂಗಳೂರು:ಕರೊನಾ ಕರಿಛಾಯೆ ಮಧ್ಯೆಯೂ 2020ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿ, ಸೋಂಕಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರ ಫಲಿತಾಂಶ ಬಿಡುಗಡೆ ಮಾಡಿದೆ. ಇಂಜಿನಿಯರಿಂಗ್- 1,53,470, ಕೃಷಿ- 1,27,627, ಪಶುಸಂಗೋಪನೆ- 1,29,666, ಯೋಗ- 1,29,611 ಹಾಗೂ ಬಿ.ಫಾರ್ಮ ಮತ್ತು ಫಾರ್ಮ-ಡಿ ಕೋರ್ಸ್​ಗೆ 1,55,552 ಅಭ್ಯರ್ಥಿಗಳು ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.
ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಕೆಇಎ ಕಚೇರಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದರು. ಸಿಇಟಿಗೆ ನೋಂದಾಯಿಸಿಕೊಂಡಿದ್ದ 1,94,419 ವಿದ್ಯಾರ್ಥಿಗಳ ಪೈಕಿ 1,75,349 ಮಂದಿ ಹಾಜರಾಗಿದ್ದರು.
ಇಂಜಿನಿಯರಿಂಗ್​ನಲ್ಲಿ ಬೆಂಗಳೂರಿನ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿ ಎಂ.ರಕ್ಷಿತ್ ಮೊದಲ ರ್ಯಾಂಕ್ ಗಳಿಸಿದ್ದಾರೆ. ಬೆಂಗಳೂರು ಶ್ರೀ ಚೈತನ್ಯ ಇ-ಟೆಕ್ನೋ ಶಾಲೆ ವಿದ್ಯಾರ್ಥಿ ಆರ್.ಶುಭನ್ ದ್ವಿತೀಯ ಹಾಗೂ ಹುಬ್ಬಳಿಯ ಬೇಸ್ ಪಿಯು ಕಾಲೇಜು ವಿದ್ಯಾರ್ಥಿ ಎಂ.ಶಶಾಂಕ್ ಬಾಲಾಜಿ ತೃತೀಯ ರ್ಯಾಂಕ್ ಗಳಿಸಿದ್ದಾರೆ.
ಬಿ.ಎಸ್ಸಿ ಕೃಷಿಯಲ್ಲಿ ಮಂಗಳೂರು ಎಕ್ಸ್​ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಎ.ಬಿ.ವರುಣ್ ಗೌಡ ಮೊದಲ ರ್ಯಾಂಕ್ ಗಳಿಸಿದ್ದು, ಪಶುಸಂಗೋಪನೆಯಲ್ಲಿ 7ನೇ ರ್ಯಾಂಕ್ ಪಡೆದಿದ್ದಾರೆ. ಮೈಸೂರು ಬೇಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ.ಸಂಜನಾ ದ್ವಿತೀಯ, ಪಶುಸಂಗೋಪನೆಯಲ್ಲಿ 3ನೇ ರ್ಯಾಂಕ್ ಪಡೆದಿದ್ದಾರೆ. ಲೋಕೇಶ್ ಬಿ.ಜೋಗಿ ತೃತೀಯ ರ್ಯಾಂಕ್​ಗಳಿಸಿದ್ದಾರೆ.

ಹುಡುಗರೇ ಬೆಸ್ಟ್:ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯು ಫಲಿತಾಂಶದಲ್ಲಿ ಹುಡುಗಿಯರೇ ಮೇಲುಗೈ ಸಾಧಿಸುತ್ತಾರೆ. ಆದರೆ, ಸಿಇಟಿಯಲ್ಲಿ ಈ ವರ್ಷ ಹುಡುಗರೇ ಟಾಪ್​ನಲ್ಲಿದ್ದಾರೆ. ಐದು ವಿಭಾಗದ ಕೋರ್ಸ್​ಗಳಲ್ಲಿ ಟಾಪ್ ಟೆನ್ ರ್ಯಾಂಕ್ ಪಡೆದಿರುವ ಪಟ್ಟಿಯಲ್ಲಿ ಏಕೈಕ ಹುಡುಗಿಯಾಗಿ ಕೆ.ಸಂಜನಾ ಇದ್ದಾರೆ. ಇಂಜಿನಿಯರಿಂಗ್ ಟಾಪ್ ಟೆನ್​ನಲ್ಲಿ ಹುಡುಗರೇ ಸ್ಥಾನ ಗಟ್ಟಿಸಿದ್ದಾರೆ.
ಬೆಂಗಳೂರು ವಿದ್ಯಾರ್ಥಿಗಳೇ ಮೇಲುಗೈ
ಸಿಇಟಿಯಲ್ಲಿ ರಾಜಧಾನಿ ವಿದ್ಯಾರ್ಥಿಗಳೇ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದ್ದಾರೆ. ಇಂಜಿನಿಯರಿಂಗ್ ಟಾಪ್ ಟೆನ್​ನಲ್ಲಿ ಐವರು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದವರಾಗಿದ್ದಾರೆ. ಬಿ.ಎಸ್ಸಿ ಕೃಷಿ, ಪಶು ಸಂಗೋಪನೆ, ಯೋಗ ನ್ಯಾಚುರೋಪಥಿಯಲ್ಲಿ ತಲಾ 3 ವಿದ್ಯಾರ್ಥಿಗಳು ಮತ್ತು ಬಿ.ಫಾರ್ಮ ಮತ್ತು ಫಾರ್ಮ-ಡಿನಲ್ಲಿ ಇಬ್ಬರು ಬೆಂಗಳೂರಿನಲ್ಲಿ ಓದಿದವರಾಗಿದ್ದಾರೆ.
ಪಿಯು ಟಾಪರ್, ಸಿಇಟಿಯಲ್ಲಿಲ್ಲ!
ಪಿಯು ವಿಜ್ಞಾನ ವಿಷಯದಲ್ಲಿ ಟಾಪ್ ಟೆನ್ ರ್ಯಾಂಕ್​ನಲ್ಲಿದ್ದ ವಿದ್ಯಾರ್ಥಿಗಳು ಸಿಇಟಿ ಟಾಪ್ ಟೆನ್ ರ್ಯಾಂಕ್​ಗಳಲಿಲ್ಲ್ಲ ದ್ವಿತೀಯ ಪಿಯುನಲ್ಲಿ ಶೇ.50 ಹಾಗೂ ಸಿಇಟಿಯಲ್ಲಿ ಶೇ.50 ಅಂಕ ಸೇರಿಸಿ ರ್ಯಾಂಕ್ ನೀಡುವುದರಿಂದ ಒಂದು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು ಮತ್ತೊಂದರಲ್ಲಿ ಚೆನ್ನಾಗಿ ಬರೆದಿಲ್ಲವಾದರೆ ಸಹಜವಾಗಿಯೇ ಫಲಿತಾಂಶ ಕಡಿಮೆಯಾಗಲಿದೆ.
ರ್ಯಾಂಕ್ ಗೊಂದಲವಿದ್ದರೆ ಹೀಗೆ ಮಾಡಿ
ಅಭ್ಯರ್ಥಿಗಳು ಫಲಿತಾಂಶವನ್ನು ವೆಬ್​ಸೈಟ್ -http://www.cet.kar.nic.in/ ಭೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದು. ರ್ಯಾಂಕ್ ಪಟ್ಟಿಯಲ್ಲಿ ದೋಷ ಇದ್ದಲ್ಲಿ ಇ-ಮೇಲ್[email protected]ಮೂಲಕ ಪ್ರಾಧಿಕಾರಕ್ಕೆ ಗಮನಕ್ಕೆ ತರಬಹುದು. ರ್ಯಾಂಕ್ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು ಕೆಇಎ ಇ- ಮೇಲ್​ಗೆ ಕಳುಹಿಸಬಹುದು.
ಉತ್ತಮ ಸಾಧನೆ ತೋರಿದ ಆಳ್ವಾಸ್ ವಿದ್ಯಾರ್ಥಿಗಳು
ಮೂಡುಬಿದಿರೆ: ಸಿಇಟಿಯ ಆರು ವಿಭಾಗಗಳ ಪೈಕಿ ಐದರ ಟಾಪ್ 10ನಲ್ಲಿ ಆಳ್ವಾಸ್ ಪಿಯು ಕಾಲೇಜು ಐದು ರ್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ಅರ್ನವ್ ಅಯ್ಯಪ್ಪ ಮೆಡಿಕಲ್ ವಿಭಾಗದ ಪ್ರಕೃತಿ ಮತ್ತು ಯೋಗ ವಿಜ್ಞಾನ ವಿಭಾಗ (ಬಿಎನ್​ವೈಎಸ್)ದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಾಧಕ ಅರ್ನವ್​ರನ್ನು ಡಾ.ಆಳ್ವ ಅಭಿನಂದಿಸಿದರು.

ಸಿಇಟಿ ಅಂಕಗಳ ಲೆಕ್ಕಾಚಾರದಲ್ಲಿ 160ರಿಂದ 170ರೊಳಗೆ 6 ಮಂದಿ, 150ರಿಂದ 160ರೊಳಗೆ 14 ಸಹಿತ ಒಟ್ಟು 21 ಮಂದಿ 150ಕ್ಕಿಂತ ಹೆಚ್ಚು ಅಂಕ ಗಳಿಸಿರುವುದು ಅಮೋಘ ಸಾಧನೆ. 654 ವಿದ್ಯಾರ್ಥಿಗಳು 100 ಅಂಕಗಳಿಗೂ ಮೇಲ್ಪಟ್ಟ ಅಂಕ ಪಡೆದಿದ್ದಾರೆ. ಅರ್ನವ್ ಅಯ್ಯಪ್ಪ-174, ವರುಣ್ ತೇಜ್-164, ಪಿ.ಎಸ್. ರವೀಂದ್ರ-164, ಅಭಿಷೇಕ್ ಸಂಗಪ್ಪ -164, ಅನಘಾ ತೆನಗಿ-163 ಉತ್ತಮ ಅಂಕ ಗಳಿಸಿದ್ದಾರೆ.
ಆನ್​ಲೈನ್​ನಲ್ಲಿ ದಾಖಲಾತಿ ಪರಿಶೀಲನ
ಹಲವು ವರ್ಷಗಳಿಂದ ಆಫ್​ಲೈನ್​ನಲ್ಲಿ ನಡೆಸುತ್ತಿದ್ದ ದಾಖಲಾತಿ ಪರಿಶೀಲನೆಯನ್ನು ಈ ವರ್ಷದಿಂದ ಆನ್​ಲೈನ್​ನಲ್ಲಿ ನಡೆಸಲು ಪ್ರಾಧಿಕಾರ ನಿರ್ಧರಿಸಿದೆ. ಕರೊನಾ ಪರಿಸ್ಥಿತಿಯಲ್ಲಿ ಅಭ್ಯರ್ಥಿಗಳು ಮನೆಯಲ್ಲೇ ಕುಳಿತು ದಾಖಲೆಗಳನ್ನು ಕೆಇಎ ನೀಡಲಿರುವ ಲಿಂಕ್​ಗೆ ಅಪ್​ಲೋಡ್ ಮಾಡಿದರೆ ಸಾಕು. ಅಭ್ಯರ್ಥಿಯು ಬೇರೆ ಬೇರೆ ಡಿಸಿಪ್ಲಿನ್​ಗಳಲ್ಲಿ ಅಂದರೆ ಇಂಜಿನಿಯರಿಂಗ್ ಅಥವಾ ಕೃಷಿ ವಿವಿಯ ಕೋರ್ಸ್​ಗಳಲ್ಲಿ ಬೇರೆ ಬೇರೆ ರ್ಯಾಂಕ್ ಪಡೆದಿದ್ದರೆ ಅಂತಹ ಅಭ್ಯರ್ಥಿಯು ಯಾವ ವಿಷಯದಲ್ಲಿ ಅತ್ಯುನ್ನತ ರ್ಯಾಂಕ್ ಗಳಿಸಿರುತ್ತಾರೋ ಅದಕ್ಕನುಸಾರವಾಗಿ ಗೊತ್ತುಪಡಿಸಿರುವ ದಿನಾಂಕದಂದು ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಅಪ್​ಲೋಡ್ ಮಾಡಬೇಕಿದೆ.
ಅಕ್ಟೋಬರ್​ನಲ್ಲಿ ಕೌನ್ಸೆಲಿಂಗ್: ಜೆಇಇ, ನೀಟ್ ಮೊದಲಾದ ಪರೀಕ್ಷೆಗಳ ವೇಳಾಪಟ್ಟಿ ನೋಡಿ ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲು ಇಲಾಖೆ ನಿರ್ಧರಿಸಿದೆ. ಬಹುತೇಕ ಅಕ್ಟೋಬರ್​ನಲ್ಲಿ ಕೌನ್ಸೆಲಿಂಗ್ ನಡೆಸುವುದು ಖಚಿತವಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
