ಬೆಂಗಳೂರು:ಆರ್ಥಿಕವಾಗಿ ಸ್ಥಿತಿವಂತರಾಗಿದ್ದರೂ ಖೊಟ್ಟಿ ದಾಖಲೆ ಕೊಟ್ಟು ಬಿಪಿಎಲ್ ಕಾರ್ಡ್ ಪಡೆದಿರುವವರೇ ಎಚ್ಚರ. ‘ಗಿವ್ ಇಟ್ ಅಪ್’ಗೆ ಅವಕಾಶ ಕೊಟ್ಟರೂ ಕಾರ್ಡ್ ಮರಳಿಸದವರ ಪತ್ತೆಗಾಗಿ ಖುದ್ದು ಕಾರ್ಯಾಚರಣೆಗಿಳಿದಿರುವ ಆಹಾರ ಇಲಾಖೆ ಅಧಿಕಾರಿಗಳು ಈಗ ಮನೆಮನೆ ಶೋಧ ಕಾರ್ಯ ಆರಂಭಿಸಿದ್ದಾರೆ. ಅಕ್ರಮವಾಗಿ ಕಾರ್ಡ್ ಪಡೆದಿರುವುದು ದೃಢಪಟ್ಟಲ್ಲಿ ದುಪ್ಪಟ್ಟು ದಂಡ ವಸೂಲಿ ಮಾಡಲಿದ್ದಾರೆ.
ಅಕ್ರಮವಾಗಿ ಕಾರ್ಡ್ ಪಡೆದು ರೇಷನ್ ಪಡೆಯುತ್ತಿದ್ದ ಆರ್ಥಿಕ ಸ್ಥಿತಿವಂತರು ಕ್ರಿಮಿನಲ್ ಪ್ರಕರಣಕ್ಕೆ ಹೆದರಿ ಕಳೆದ ಆರು ತಿಂಗಳಲ್ಲಿ 61,919 ಬಿಪಿಎಲ್ ಮತ್ತು 1,658 ಅಂತ್ಯೋದಯ ಸೇರಿ ಒಟ್ಟು 63,577 ಪಡಿತರ ಕಾರ್ಡ್​ಗಳನ್ನು ವಾಪಸ್ ಮಾಡಿದ್ದಾರೆ. ಈ ಕಾರ್ಡ್ಗಳನ್ನು ರದ್ದುಪಡಿಸಿದ್ದರಿಂದ 1,06,186 ಕುಟುಂಬದ ಸದಸ್ಯರ ಹೆಸರುಗಳು ಡಿಲೀಟ್ ಆಗಿವೆ.
2020ರ ಜ.31ರೊಳಗೆ ಆಯಾ ತಾಲೂಕು ಕಚೇರಿಗೆ ಕಾರ್ಡ್​ಗಳನ್ನು ವಾಪಸ್ ಕೊಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇನ್ನೂ ಬಹುತೇಕರು ಕಾರ್ಡ್​ಗಳನ್ನು ವಾಪಸ್ ಕೊಟ್ಟಿಲ್ಲ. ಹೀಗಾಗಿ ಫೆ.1ರಿಂದ ಅಧಿಕಾರಿಗಳೇ ಅಕ್ರಮ ಕಾರ್ಡ್​ಗಳನ್ನು ಪತ್ತೆಹಚ್ಚಿ ದಂಡ ವಿಧಿಸುವ ಕಾರ್ಯಾಚರಣೆಗಿಳಿದಿದ್ದಾರೆ.
ಸದ್ಯ ಹುಬ್ಬಳ್ಳಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿ ಕೆಲ ಜಿಲ್ಲೆಗಳಲ್ಲಷ್ಟೇ ಅಕ್ರಮ ಕಾರ್ಡ್ ಪತ್ತೆಕಾರ್ಯ ಆರಂಭಿಸಲಾಗಿದೆ. ರಾಜ್ಯಾದ್ಯಂತ ಅಂದಾಜು 1.5 ಲಕ್ಷ ಅಕ್ರಮ ಕಾರ್ಡ್​ಗಳಿರುವ ಮಾಹಿತಿ ಇದೆ. ಸದ್ಯ 63 ಸಾವಿರ ಕಾರ್ಡ್ ಪತ್ತೆಯಾಗಿದ್ದು, ಇನ್ನೂ 87 ಸಾವಿರ ಕಾರ್ಡ್​ಗಳು ಪತ್ತೆಯಾಗಬೇಕಿದೆ. ಮಂಗಳೂರು ಒಂದರಲ್ಲೇ 30 ಲಕ್ಷ ರೂ. ದಂಡ ವಸೂಲಿಯಾಗಿರುವುದನ್ನು ಗಮನಿಸಿದರೆ ದಂಡದ ಪ್ರಮಾಣ ಕೋಟ್ಯಂತರ ರೂಪಾಯಿ ದಾಟುವ ನಿರೀಕ್ಷೆ ಇದೆ.
ದಂಡ ವಸೂಲಿ ಹೇಗೆ?:ಅಕ್ರಮವಾಗಿ ಕಾರ್ಡ್ ಪಡೆದಿರುವುದು ದೃಢಪಟ್ಟರೆ ಯಾವ ದಿನಾಂಕದಿಂದ ಪಡಿತರ ಪಡೆಯಲಾಗುತ್ತಿದೆಯೋ ಅಲ್ಲಿಂದ ಈಗಿನವರೆಗೆ ಪ್ರತಿ ತಿಂಗಳು ಕುಟುಂಬದ ಸದಸ್ಯರು ಪಡೆಯುತ್ತಿರುವ ಪ್ರತಿ ಕೆಜಿ ಅಕ್ಕಿಗೆ 28 ರೂ.ನಂತೆ ಲೆಕ್ಕ ಹಾಕಿ ದಂಡ ವಿಧಿಸಲಾಗುತ್ತದೆ. ಒಂದು ಕಾರ್ಡ್​ನಲ್ಲಿ 3 ಅಥವಾ 4 ಸದಸ್ಯರು ಇದ್ದರೂ ಅವರು ಪಡೆದಿರುವ ಪಡಿತರ ಲೆಕ್ಕ ಹಾಕಿ ವಸೂಲಿ ಮಾಡಲಾಗುತ್ತದೆ. ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಸಿಕ್ಕಿಬೀಳುವ ಕಾರ್ಡ್​ಗಳಿಗೆ ಮಾತ್ರ ದಂಡ ಹಾಕಲಾಗುತ್ತದೆ.
ವಾಪಸ್ ಕೊಟ್ರೆ ಬಚಾವ್
ಅಧಿಕಾರಿಗಳು ಪತ್ತೆ ಹಚ್ಚುವ ಮುನ್ನವೇ ಸ್ವಯಂಪ್ರೇರಿತವಾಗಿ ಗ್ರಾಹಕರು ಕಾರ್ಡ್ ವಾಪಸ್ ಕೊಟ್ಟರೆ ಅವರಿಗೆ ದಂಡ ಹಾಕುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಪಸಾದ ಕಾರ್ಡ್​ಗಳೆಷ್ಟು?
ಬೆಂಗಳೂರು-10,236 ವಿಜಯಪುರ-6,292, ಹಾಸನ-4,716, ಚಿಕ್ಕಬಳ್ಳಾಪುರ-3,671, ಬೆಳಗಾವಿ-3,084, ಮೈಸೂರು-2,883, ಹಾವೇರಿ-2,770, ಶಿವಮೊಗ್ಗ-2,660, ಬಳ್ಳಾರಿ-2,653, ಕೋಲಾರ-2,572, ಕಲಬುರಗಿ-2,338, ಧಾರವಾಡ-2,329, ಬಾಗಲಕೋಟೆ-1,970, ರಾಯಚೂರು-1,742, ತುಮಕೂರು-1,663,ಚಿಕ್ಕಮಗಳೂರು-1,451, ದಾವಣಗೆರೆ-1,108, ಮಂಡ್ಯ-1.061, ಯಾದಗಿರಿ-979, ಗದಗ-891, ಉತ್ತರ ಕನ್ನಡ-887, ರಾಮನಗರ-811, ಕೊಪ್ಪಳ-795, ದಕ್ಷಿಣ ಕನ್ನಡ-786, ಬೀದರ್-691, ಚಿತ್ರದರ್ಗ-672, ಬೆಂಗಳೂರು ಗ್ರಾಮಾಂತರ-580, ಚಾಮರಾಜನಗರ-546, ಉಡುಪಿ-455, ಕೊಡಗು-213.
600 ಕೋಟಿ ರೂ.ನಷ್ಟ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಹಳ್ಳಿಗಳಲ್ಲಿ ಶೇ.76.04 ನಗರಗಳಲ್ಲಿ ಶೇ.49.36 ಸೇರಿ ಒಟ್ಟು 3,71,78,287 ಕುಟುಂಬಗಳ ಸದಸ್ಯರಿಗೆ ಬಿಪಿಎಲ್ ಕಾರ್ಡ್ ನೀಡಬೇಕಿತ್ತು. ಆದರೆ, ರಾಜ್ಯದಲ್ಲೀಗ 3,93,92,150 ಬಿಪಿಎಲ್ ಸದಸ್ಯರಿದ್ದಾರೆ. ಇದರಿಂದ ಪ್ರತಿ ವರ್ಷ 600 ಕೋಟಿ ರೂ. ನಷ್ಟವಾಗುತ್ತದೆ.
ಯಾವುದು ಅಕ್ರಮ ಕಾರ್ಡ್?
ವಾರ್ಷಿಕ 1.2 ಲಕ್ಷ ರೂ.ಗಿಂತ ಹೆಚ್ಚು ವರಮಾನ, ಹಳ್ಳಿಗಳಲ್ಲಿ 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿದ್ದರೆ, ನಗರದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆ ಇದ್ದರೆ, ನಿವೃತ್ತ ಸರ್ಕಾರಿ ನೌಕರರು, ಬೈಕು, ಕಾರು ಇನ್ನಿತರ ಸೌಲಭ್ಯ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅವು ಅಕ್ರಮ ಎಂದು ಪರಿಗಣಿಸಲಾಗುತ್ತದೆ.
96000 ರೂ. ದಂಡ
ಅಕ್ರಮ ಕಾರ್ಡ್ ಹೊಂದಿದ್ದ ನಾಲ್ಕು ಚಕ್ರದ ವಾಹನದ ಮಾಲೀಕರಾದ ಹುಬ್ಬಳ್ಳಿಯ ಹನುಮಂತಪ್ಪ ಕಾಳೆಗೆ 96 ಸಾವಿರ ರೂ. ದಂಡ ವಿಧಿಸಿದೆ. ಹನುಮಂತಪ್ಪ ಅವರಿಗೆ ‘ಸುಳ್ಳು ಮಾಹಿತಿ ಕೊಟ್ಟು ಕಾರ್ಡ್ ಪಡೆದಿರುವ ನೀವು 2012ರಿಂದ ಈವರೆಗೆ ಪಡಿತರ ಪಡೆದು ಕಾರ್ಡ್ ದುರ್ಬಳಕೆ ಮಾಡಿಕೊಂಡಿದ್ದೀರಿ. ಜೀವನಾವಶ್ಯಕ ವಸ್ತುಗಳ ಕಾಯ್ದೆ 1955ರಡಿ ನಿಮ್ಮ ವಿರುದ್ಧ ಯಾಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಾರದು ಹಾಗೂ ಸರ್ಕಾರದ ಸೌಲಭ್ಯ ದುರುಪಯೋಗ ಪಡಿಸಿಕೊಂಡಿದ್ದರ ಬಾಬತ್ತಾಗಿ 96 ಸಾವಿರ ರೂ.ಗಳನ್ನು ನೋಟಿಸ್ ತಲುಪಿದ 7 ದಿನದೊಳಗೆ ಕಟ್ಟಿ ಪಡಿತರ ಚೀಟಿಯೊಂದಿಗೆ ಹಾಜರಾಗಿ ಲಿಖಿತ ಹೇಳಿಕೆ ಸಲ್ಲಿಸಿ’ಎಂದು ನೋಟಿಸ್ ನೀಡಲಾಗಿದೆ.
| ಬೇಲೂರು ಹರೀಶ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 − four =
Remember me
