ಬೆಂಗಳೂರು:ಎಚ್.ಎಸ್.ವೆಂಕಟೇಶಮೂರ್ತಿಯವರು ಕಲ್ಪನೆಯ ಅಕ್ಷಯಪಾತ್ರೆ ಹೊಂದಿದ್ದು,ಅವರ ಕಲ್ಪನಾ ಲೋಕ ಎಂದು ಬರಿದಾಗುವುದಿಲ್ಲ ಎಂದು ಪ್ರೇಮಕವಿ ಬಿ.ಆರ್.ಲಕ್ಷ್ಮಣರಾವ್ ಅಭಿಪ್ರಾಯಿಸಿದ್ದಾರೆ.
ಎನ್.ಆರ್.ಕಾಲೋನಿ ರಾಮಮಂದಿರದ ಪತ್ತಿ ಸಭಾಂಗಣದಲ್ಲಿ ಉಪಾಸನ ಟ್ರಸ್ಟ್ ಮತ್ತು ಎಚ್ಚೆಸ್ವಿ ವಿದ್ಯಾರ್ಥಿ ಬಳಗದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಚ್ಚೆಸ್ವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಮಾನ್ಯವಾಗಿ ಎಲ್ಲ ಕವಿಗಳು ಕೂಡಾ ಕಲ್ಪನೆಯ ಮೇಲೆ ಸಾಹಿತ್ಯವನ್ನು ರಚಿಸುತ್ತಾರೆ.ಒಮ್ಮೊಮ್ಮೆ ತಮ್ಮ ಕಲ್ಪನೆಯ ಭಂಡಾರ ಬರಿದಾಗುತ್ತದೆ.ಆದರೆ ಎಚ್.ಎಸ್.ವೆಂಕಟೇಶಮೂರ್ತಿಯವರ ಬಳಿ ಕಲ್ಪನೆಯ ಅಕ್ಷಯಪಾತ್ರೆಯೇ ಇದ್ದು,ಅದು ಎಂದಿಗೂ ಬರಿದಾಗುವುದಿಲ್ಲ.ಕಳೆದ40-50ವರ್ಷಗಳ ಹಿಂದೆ ಇದ್ದಷ್ಟೇ ಕಲ್ಪನೆಯ ಭಂಡಾರ ಅವರಲ್ಲಿ ಇಂದಿಗೂ ಇದೆ.
ಗೋಕುಲ,ಬೃಂದಾವನ,ಕೃಷ್ಣ,ರಾಧೆ.ಗೋಪಿಕಾಸಿಯರು ಹೀಗೆ ಎಚ್ಚೆಸ್ವಿ ತಾವು ವಾಸ್ತವದಿಂದ ಹೊರ ಹೋಗಲು ಇಟ್ಟುಕೊಂಡಿರುವ ಪಾತ್ರಗಳು.ಸಂದರ್ಭ ಬಂದಾಗ ಅವರೇ ಮಕ್ಕಳಾಗುತ್ತಾರೆ.ಕೆಲವೊಂದು ಸಾರಿ ಹರೆಯದ ಯುವಕ–ಯುವತಿಯರಾಗುತ್ತಾರೆ.ಅಲ್ಲಿ ತುಂಟತನವೂ ಇದೆ,ಜಾಣ್ಮೆಯು ಇದೆ.ಪ್ರೀತಿ–ಪ್ರೇಮ,ವಿರಹ,ವೇದನೆ ಎಲ್ಲವೂ ಇದೆ.ಈ ಪಾತ್ರಗಳನ್ನಿಟ್ಟುಕೊಂಡು ಅದ್ಭುತವಾದ ಭಾವಗೀತೆಗಳನ್ನು ನೀಡಿದ ಕೀರ್ತಿ ಎಚ್ಚೆಸ್ವಿ ಅವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನೆನಪಿನ ಗಾಳಿಪಟ,ವಿಸ್ತಾರಕ್ಕೊಂದು ಪ್ರಸ್ತಾರ,ಪ್ರೀತಿಯು ನೀಡಿದ ಕಣ್ಣು ಹಾಗೂ ಎಚ್ಚೆಸ್ವಿ ಅವರ ಭಾವಗೀತೆಗಳ ಗುಚ್ಛ ‘ಚಂದನಬನ’ ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮಕ್ಕೂ ಮುನ್ನ ‘80ಮಳೆಗಾಲ’ ಎಂಬ ಎಚ್ಚೆಸ್ವಿ ಅವರ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.ಎಚ್ಚೆಸ್ವಿ ಅವರ ಗೀತೆಗಳ ಗಾಯನ,ನೃತ್ಯವನ್ನು ಕಲಾವಿದರು ಪ್ರದರ್ಶಿಸಿದರು.
ಸಮಾರಂಭದಲ್ಲಿ ದೆಹಲಿ ಜೆಎನ್‌ಯು ಪ್ರಾಧ್ಯಾಪಕ ವೆಂಕಟಾಚಲ ಹೆಗಡೆ,ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ,ಕವಿ ಕಾ.ವೆಂ.ಶ್ರೀನಿವಾಸಮೂರ್ತಿ,ನಟ ಶ್ರೀನಿವಾಸ ಪ್ರಭು,ಪ್ರಕಾಶಕರಾದ ಇಂದಿರಾ ಸುಂದರ್,ಹರಿಪ್ರಸಾದ್,ಪ್ರಾಣೇಶ್ ಸಿರಿವರ ಮತ್ತಿತರು ಉಪಸ್ಥಿತರಿದ್ದರು.ತಮ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಲು ಎಚ್ಚೆಸ್ವಿ ಅವರ ಅಪಾರ ಶಿಷ್ಯರು ಆಗಮಿಸಿದ್ದರು.
ನವೋದಯದ ನಂತರ ಒಂದು ಹಂತದಲ್ಲಿ ಸೊರಗಿದ್ದ ಭಾವಗೀತೆ ಪ್ರಕಾರಕ್ಕೆ ಮರುಜೀವ ನೀಡಿ ಭಾವಗೀತೆಗೆ ಹೊಸ ಭಾವ ತುಂಬಿದ ಕವಿ ಎಚ್ಚೆಸ್ವಿ ಎಂದು ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಹೇಳಿದರು.ಎಚ್ಚೆಸ್ವಿ ಅವರು ಕಳೆದ ಜನ್ಮದಲ್ಲಿ ಗೋಪಿಕಾಸೀ ಆಗಿದ್ದಿರಬೇಕು.ಅವರ ಕವಿತೆಯಲ್ಲಿ ಕೃಷ್ಣನ ವರ್ಣನೆ ಅಷ್ಟರ ಮಟ್ಟಿಗೆ ಸ್ಥಾನ ಪಡೆದಿದೆ.ಕವಿಯಾಗಿ ಅವರು ಮಾಡಿದ ಸಾಹಿತ್ಯ ಸಾಧನೆಯ ಜೊತೆಗೆ ತಮ್ಮ ಶಿಷ್ಯರನೇಕರನ್ನು ಸಾಹಿತ್ಯಾಭಿರುಚಿಯಲ್ಲಿ ತೊಡಗಿಸಿ ಅವರಿಂದ ಸಾಹಿತ್ಯ ಕೃಷಿಯನ್ನು ಮಾಡಿಸಿದ ಕೀರ್ತಿ ಸಹ ಅವರಿಗೆ ಸಲ್ಲುತ್ತದೆ.
ಹುಚ್ಚುಕೋಡಿ ಮನಸು,ಇರಬೇಕು ಇರುವಂತೆ,ಲೋಕದ ಕಣ್ಣಿಗೆ ಇತ್ಯಾದಿ ಗೀತೆಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ.ಅವರ ಕವಿತೆಗಳಲ್ಲಿ ಸಂಗೀತಕ್ಕೆ ಬೇಕಾದ ಲಯ,ಅನುಭವಕ್ಕೆ ಬೇದಾದ ದರ್ಶನ,ಅನುಭಾವಕ್ಕೆ ಬೇಕಾದ ಚಿಂತನೆ,ವಿಮರ್ಶಕರಿಗೆ ಬೇಕಾದ ಸಾಹಿತ್ಯ ಎಲ್ಲವೂ ಇದೆ ಎಂದು ವಿವರಿಸಿದರು.
ಮನುಷ್ಯನನ್ನು ಮನುಷ್ಯನನ್ನಾಗಿಸಲು ಸಾಹಿತ್ಯ ಅತ್ಯಗತ್ಯವಾಗಿದ್ದು,ಆತನ ಅಂತರಂಗದ ಕಣ್ಣು ತೆರೆಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಎಚ್.ಎಸ್.ವೆಂಕಟೇಶಮೂರ್ತಿ ಹೇಳಿದ್ದಾರೆ.ಸಾಹಿತ್ಯ ರಚನೆಯಲ್ಲಿ ಅನುಭವ,ಧೋರಣೆ,ದರ್ಶನಗಳು ಪಾತ್ರ ವಹಿಸುತ್ತವೆ.
ಹೊಂದಾಣಿಕೆ,ಸಹಿಸುವಿಕೆ ಮತ್ತು ಗಾಢವಾದ ಪ್ರೀತಿ ಇದ್ದರೆ ಅದೇ ನಿಜವಾದ ದಾಂಪತ್ಯ ಎಂದು ತಮ್ಮ ದಾಂಪತ್ಯವನ್ನು ಮೆಲುಕು ಹಾಕಿದ ಎಚ್ಚೆಸ್ವಿ,ತಾವು ಕನ್ನಡ ಎಂ.ಎ.ಓದಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಬೇಕೆಂಬ ಕನಸು ಕಂಡು ಅದರಂತೆ ಇಲ್ಲಿಯವರೆಗೆ ಸಾಗಿ ಬಂದಿದ್ದೇನೆ ಎಂದು ನಡೆದು ಬಂದ ಹಾದಿಯನ್ನು ಬಿಚ್ಚಿಟ್ಟರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + 14 =
Remember me
