ಬೆಂಗಳೂರು:ನಗರದ ಬನಶಂಕರಿ ದೇವಾಲಯದ 107ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಶುಕ್ರವಾರ ವೈಭವಯುತವಾಗಿ ಜರುಗಿತು.
ಮುಂಜಾನೆಯಿಂದ ತಡರಾತ್ರಿವರೆಗೂ ಭಕ್ತರು ಕಿಕ್ಕಿರಿದು ಸೇರಿದ್ದರು. ಬೆಳಗ್ಗೆ ಬನಶಂಕರಿದೇವಿಗೆ ಅಭಿಷೇಕ ಮಾಡಿ ಬಗೆ ಬಗೆಯ ಹೂ ಹಾಗೂ ಆಭರಣಗಳಿಂದ ಅಲಂಕರಿಸಲಾಗಿತ್ತು. ವಿಶೇಷವಾಗಿ ಅಶ್ವಾರೂಢ ಅಲಂಕಾರ ಮಾಡಲಾಗಿತ್ತು. ಮೃತ್ಯುಂಜಯ ಪುರಸ್ವರ ನವಗ್ರಹ ಶಾಂತಿ, ದೇವಿ ಮೂಲಮಂತ್ರ ಹೋಮ, ರಥಾಂಗ ಹೋಮ, ರಥಬಲಿ ನಡೆಯಿತು.
ಮಧ್ಯಾಹ್ನ 12.50 ರಿಂದ 1.30ರ ಮೇಷ ಲಗ್ನದಲ್ಲಿ ದೇವಾಲಯದ ಹೊರಭಾಗದಲ್ಲಿ ಜರುಗಿದ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಈ ವೇಳೆ ಭಕ್ತರು ಜಯೋಷ ಹಾಕುತ್ತ ರಥಕ್ಕೆ ಬಾಳೆಹಣ್ಣು, ಹೂವು, ದವನಗಳನ್ನು ಅರ್ಪಿಸಿ ಇಷ್ಟಾರ್ಥಗಳನ್ನು ಕೋರಿಕೊಂಡರು. ಸಂಜೆ ಮತ್ತೊಮ್ಮೆ ರಥಾವರೋಹಣ, ನಂತರ ಶಾಕಾಂಬರಿದೇವಿಗೆ ಧೂಳೋತ್ಸವ ಬಳಿಕ ಮುತ್ತಿನ ಪಲ್ಲಕ್ಕಿ ಉತ್ಸವಗಳು ನಡೆಯಿತು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸರಳವಾಗಿ ಆಚರಣೆಗೊಂಡಿದ್ದ ಉತ್ಸವ ಈ ಬಾರಿ ಅದ್ದೂರಿಯಾಗಿ ನೆರವೇರಿತು. ಜ.9 ರಂದು ಬೆಳಗ್ಗೆ 9.30ಕ್ಕೆ ಗಿರಿಜಾಶಂಕರ ಕಲ್ಯಾಣೋತ್ಸವ ಜರುಗಲಿದೆ, ರಾತ್ರಿ 7ಕ್ಕೆ ದೇವಿಯ ಶಯನೋತ್ಸವ ನಡೆಯಲಿದೆ. ಜ.10ರಂದು ಏಕಾದಶವಾರ ರುದ್ರಾಭಿಷೇಕದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.
ಭರ್ಜರಿ ವ್ಯಾಪಾರ:ಬನಶಂಕರಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬರುವವರು ದೇವಿಗೆ ಅರ್ಪಿಸಲು ಹೂ, ಹಣ್ಣು, ಕಾಯಿ, ಸೀರೆ, ಬಳೆ, ಆರತಿ ಬೆಳಗಲು ನಿಂಬೆಹಣ್ಣು ಸೇರಿ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿತ್ತು. ಮತ್ತೊಂದೆಡೆ ಬತ್ತಾಸು, ಕಡಲೆಪುರಿ, ಅಲಂಕಾರಿಕ ಹಾಗೂ ಗೃಹೋಪಯೋಗ ವಸ್ತುಗಳು ಹಾಗೂ ಆಟಿಕೆಗಳ ಮಾರಾಟವೂ ಬಿರುಸಾಗಿತ್ತು. ದೇವಾಲಯದ ಸುತ್ತಮುತ್ತಲ ರಸ್ತೆಗಳಲ್ಲಿ ಜಾತ್ರೆ ಕಳೆಗಟ್ಟಿತ್ತು.
4 ಲಕ್ಷಕ್ಕೂ ಅಧಿಕ ಭಕ್ತರು:ಶುಕ್ರವಾರ ದೇವಾಲಯಕ್ಕೆ 4 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಎಲ್ಲರಿಗೂ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯವಾಗಿ ದೇವಾಲಯಗಳನ್ನು ಮಧ್ಯಾಹ್ನದ ವೇಳೆ ಮುಚ್ಚಲಾಗುತ್ತದೆ. ಆದರೆ, ಹುಣ್ಣಿಮೆ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ದೇವಾಲಯದ ಬಾಗಿಲು ತೆರೆದಿತ್ತು. ಹೀಗಾಗಿ, ಭಕ್ತರು ಬಿಡುವಿಲ್ಲದಂತೆ ಆಗಮಿಸಿದರು ಎಂದು ಬನಶಂಕರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೆ. ಪದ್ಮಾ ತಿಳಿಸಿದರು.
ಮುಜರಾಯಿ ಇಲಾಖೆ ದೇಗುಲ ಹೆಸರಿಗಷ್ಟೇಬನಶಂಕರಿದೇವಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ ಎನ್ನುವುದು ಹೆಸರಿಗಷ್ಟೇ. ಎಲ್ಲದರಲ್ಲೂ ದೇವಾಲಯ ಅಭಿವೃದ್ಧಿ ಸಮಿತಿಯರವರದ್ದೇ ದರ್ಬಾರು. ಜಾತ್ರೆ, ಉತ್ಸವ ಮಾತ್ರವಲ್ಲದೆ ಯಾವುದೇ ವಿಶೇಷ ದಿನವಾದರೂ ಅಲ್ಲಿ ಸಮಿತಿಯವರದ್ದೇ ಆಡಳಿತ. ಜನರನ್ನು ನಿಯಂತ್ರಿಸುವುದಾಗಿ ಹೇಳಿಕೊಂಡು ತಮ್ಮ ಕುಟುಂಬದ ಸದಸ್ಯರು, ಬಂಧು-ಮಿತ್ರರು, ಸ್ನೇಹಿತರಿಗೆ ವಿಶೇಷ ದರ್ಶನ ಮಾಡಿಸುತ್ತ, ಅವರಿಗೆ ಹಾರ ಹಾಕಿಸಿ ವಿಶೇಷ ಆಶೀರ್ವಾದ ಮಾಡಿಸಿ ಕಳುಹಿಸುತ್ತಾರೆ. ಬನಶಂಕರಿದೇವಿ ಕೇವಲ ಅಭಿವೃದ್ಧಿ ಸಮಿತಿ ಸದಸ್ಯರಿಗೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಭಕ್ತರಿಂದ ಕೇಳಿಬಂತು.
ಭಕ್ತರ ನಿಯಂತ್ರಣಕ್ಕೆ ಸಾಹಸಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನಿಯಂತ್ರಿಸಲು ಪೊಲೀಸರು ಹೆಣಗಾಡಬೇಕಾಯಿತು. ದೇವಾಲಯದ ಒಳಭಾಗದಲ್ಲೂ ಅಷ್ಟೇ ಪ್ರಮಾಣದಲ್ಲಿ ಭಕ್ತರು ನೆರೆದಿದ್ದರು. ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯದ ಎದುರು ರಸ್ತೆಯಲ್ಲಿ ಬರುವ ವಾಹನಗಳ ಸಂಚಾರ ಮಾರ್ಗ ಬದಲಿಸಲಾಗಿತ್ತು. ಜನದಟ್ಟಣೆಯಲ್ಲಿ ಮಕ್ಕಳು ಹಾಗೂ ಕುಟುಂಬದ ಸದಸ್ಯರನ್ನು ಹಾಗೂ ಪರ್ಸ್ ಕಳೆದುಕೊಂಡವರು ದೇವಾಲಯದ ಮೈಕ್‌ನಲ್ಲಿ ಹೇಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 1 =
Remember me
