ಬೆಂಗಳೂರು:ಕರ್ನಾಟಕ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧ್ಯಾದೇಶಕ್ಕೆ ರಾಜ್ಯಪಾಲರು ಸಹಿ ಹಾಕಿದ್ದು, ತಕ್ಷಣದಿಂದಲೇ ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ತಡೆಹಾಕುವ ಕಾನೂನು ಜಾರಿಗೆ ಬಂದಿದೆ.
ವಿಧಾನಸಭೆಯಿಂದ ಅನುಮೋದನೆಗೊಂಡ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ ವಿಧಾನ ಪರಿಷತ್​ನಲ್ಲಿ ಪರ್ಯಾಲೋಚನೆ ಆಗದ ಹಿನ್ನೆಲೆಯಲ್ಲಿ ತ್ರಿಶಂಕು ಸ್ಥಿತಿಯಲ್ಲಿಯೇ ಉಳಿದಿದೆ. ಹೀಗಾಗಿ ಕಳೆದ ವಾರ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಜಾರಿಗೆ ತರಲು ನಿರ್ಣಯಿಸಲಾಗಿತ್ತು. ಈ ಸುಗ್ರೀವಾಜ್ಞೆ ಪ್ರಸ್ತಾಪ ಒಪ್ಪದಂತೆ ಕ್ರೖೆಸ್ತಸಮುದಾಯದ ಪ್ರಮುಖರು ರಾಜ್ಯಪಾಲರನ್ನು ಭೇಟಿ ಮಾಡಿ ಆಗ್ರಹಿಸಿದ್ದರು. ಜತೆಗೆ ಕಾನೂನು ಹೋರಾಟಕ್ಕೂ ತಯಾರಿ ನಡೆಸಿದ್ದು, ಶೀಘ್ರವೇ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರ ತಕ್ಷಣವೇ ನಿಯಮಗಳನ್ನು ರೂಪಿಸಿ, ವಿವಿಧ ಅಧಿಕಾರಿಗಳ ಜವಾಬ್ದಾರಿಯನ್ನು ತಿಳಿಸಲು ಆದೇಶಗಳನ್ನು ಹೊರಡಿಸಲಿದೆ. ಜತೆಗೆ ಕಾನೂನು ಬದ್ಧ ಪ್ರಕ್ರಿಯೆ ನಡೆಸಲು ಜಿಲ್ಲಾ ದಂಡಾಧಿಕಾರಿ ಕಚೇರಿಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಲಿದೆ.
ದೂರಿಗೆ ಅವಕಾಶ:ಮತಾಂತರ ಗೊಂಡ ವ್ಯಕ್ತಿ ಆತನ ಪಾಲಕರು, ಸೋದರ, ಸೋದರಿ, ಅಥವಾ ಆತನಿಗೆ ರಕ್ತ ಸಂಬಂಧಿ, ಮದುವೆ ಅಥವಾ ದತ್ತು ಮೂಲಕ ಸಂಬಂಧಿಯಾದ ಸಹವರ್ತಿ, ಸಹೋದ್ಯೋಗಿ ಅಥವಾ ಯಾರೇ ವ್ಯಕ್ತಿ ಮತಾಂತರದ ಬಗ್ಗೆ ದೂರು ದಾಖಲು ಮಾಡಬಹುದು.
ಘರ್ ವಾಪ್ಸಿಗೆ ಅವಕಾಶ:ಯಾರೇ ವ್ಯಕ್ತಿಯು ಆತನ ನಿಕಟಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡಲ್ಲಿ ಅದನ್ನು ಮತಾಂತರವೆಂದು ಪರಿಗಣಿಸಲ್ಲ. ಈ ಮೂಲಕ ಘರ್ ವಾಪ್ಸಿಗೆ ಮುಕ್ತ ಅವಕಾಶ ತೆರೆದಿಡಲಾಗಿದೆ.
ಸಾಬೀತಾದರೆ ಶಿಕ್ಷೆ?:ಇನ್ನು ಮುಂದೆ ನಿಯಮ ಉಲ್ಲಂಘಿಸಿ ಮತಾಂತರ ಮಾಡಿದ್ದು ಸಾಬೀತಾದರೆ ಮೂರು ವರ್ಷದಿಂದ ಐದು ವರ್ಷದವರೆಗೆ ವಿಸ್ತರಿಸಬಹುದಾದ ಅವಧಿಯ ಕಾರವಾಸ, 25 ಸಾವಿರ ರೂ. ಜುಲ್ಮಾನೆ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಅಪ್ರಾಪ್ತ ಅಥವಾ ಅಸ್ವಸ್ಥಚಿತ್ತ ವ್ಯಕ್ತ, ಮಹಿಳೆ, ಅನುಸೂಚಿ ಜಾತಿ, ಪಂಗಡಕ್ಕೆ ಸೇರಿದ ವ್ಯಕ್ತಿ ಬಲವಂತದ ಮತಾಂತರಕ್ಕೆ ಒಳಪಟ್ಟಿದ್ದಲ್ಲಿ 3 ವರ್ಷದಿಂದ 10 ವರ್ಷದ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, ಐವತ್ತು ಸಾವಿರ ರೂ.ವರೆಗೆ ಜುಲ್ಮಾನೆ ಶಿಕ್ಷೆ ನೀಡುವ ಅವಕಾಶ ಕಲ್ಪಿಸಲಾಗಿದೆ. ಸಾಮೂಹಿಕ ಮತಾಂತರ ಸಂದರ್ಭದಲ್ಲಿ ಇಷ್ಟೇ ಪ್ರಮಾಣದ ಜೈಲು ಶಿಕ್ಷೆ ಜತೆ 1 ಲಕ್ಷ ರೂ.ವರೆಗೂ ಜುಲ್ಮಾನೆ ವಿಧಿಸಲಾಗುತ್ತದೆ. ಈ ಅಪರಾಧ ಮರುಕಳಿಸಿದರೆ ಶಿಕ್ಷೆ ಇನ್ನಷ್ಟು ವಿಸ್ತಾರಗೊಳ್ಳಲಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತದಿಂದ ಸಂದಾಯವಾಗುವಂತೆ ಗರಿಷ್ಠ 5 ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ಯುಕ್ತ ಪರಿಹಾರವನ್ನು ನ್ಯಾಯಾಲಯ ಕೊಡಿಸಬಹುದು.
ಮದುವೆ ಅಸಿಂಧು!:ಮತಾಂತರ ಉದ್ದೇಶದಲ್ಲಿ ನಡೆದ ಮದುವೆಯನ್ನು ಅಸಿಂಧು ಎಂದು ಘೋಷಿಸಲು ನ್ಯಾಯಾಲಯಕ್ಕೆ ಅವಕಾಶ ಕೊಡಲಾಗಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ 1973ರಲ್ಲಿ (1974ರ ಕೇಂದ್ರ ಅಧಿನಿಯಮ 2) ಏನೇ ಒಳಗೊಂಡಿದ್ದರೂ ಈ ಅಧ್ಯಾದೇಶದ ಅಡಿಯಲ್ಲಿ ಎಸಗುವ ಪ್ರತಿಯೊಂದು ಅಪರಾಧವು ಸಂಜ್ಞೇಯವಾಗಿರತಕ್ಕದ್ದು ಮತ್ತು ಜಾಮೀನು ರಹಿತ ಎಂದು ಸ್ಪಷ್ಟಪಡಿಸಲಾಗಿದೆ.
ಸೌಲಭ್ಯ ಕಡಿತ:ಮತಾಂತರಗೊಂಡ ವ್ಯಕ್ತಿ ಮತಾಂತರಕ್ಕೆ ಮೊದಲು ಪಡೆಯುತ್ತಿದ್ದ ಸಾಮಾಜಿಕ ಸ್ಥಾನಮಾನ ಅನುಭವಿಸುವ, ಸರ್ಕಾರದಿಂದ ಪಡೆಯುತ್ತಿದ್ದ ಹಣಕಾಸಿನ ಪ್ರಯೋಜನ ಸ್ವೀಕರಿಸುವ ಹಕ್ಕಿಗಾಗಿ ಮತಾಂತರಗೊಂಡ ವ್ಯಕ್ತಿಯನ್ನು ಪುನರ್ ವರ್ಗೀಕರಿಸಲಾಗುತ್ತದೆ. ಉದಾಹರಣೆಗೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಮತಾಂತರಗೊಂಡ ಬಳಿಕ ಆ ಸಮುದಾಯಕ್ಕೆ ನಿಗದಿಯಾದ ಸೌಲಭ್ಯದಿಂದ ವಂಚಿತನಾಗುತ್ತಾನೆ.
ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಮತಾಂತರ ಕಾಯ್ದೆ ಬಗ್ಗೆ ಕ್ರಿಶ್ಚಿಯನ್ ಸಮುದಾಯ ಏಕೆ ಭಯ ಬೀಳಬೇಕು? ಕಾಯ್ದೆ ಯಾವುದೇ ಧರ್ಮದ ವಿರುದ್ಧ ರೂಪಿತವಾಗಿಲ್ಲ. ಆಮಿಷ ಅಥವಾ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ.
ಆರಗ ಜ್ಞಾನೇಂದ್ರ ಗೃಹ ಸಚಿವ
ಮತಾಂತರಗೊಳ್ಳಲಿ ಇಚ್ಛಿಸುವ ಯಾರೇ ವ್ಯಕ್ತಿಯು ಕನಿಷ್ಠ 30 ದಿನಗಳಿಗೆ ಮುಂಚೆ ರಾಜ್ಯದೊಳಗಿನ ತನ್ನ ನಿವಾಸದ ಜಿಲ್ಲೆಯ ಅಥವಾ ಜನ್ಮ ಸ್ಥಳದ ಜಿಲ್ಲಾ ದಂಡಾಧಿಕಾರಿಗೆ ಅಥವಾ ಜಿಲ್ಲಾ ದಂಡಾಧಿಕಾರಿ ವಿಶೇಷವಾಗಿ ಅಧಿಕಾರ ನೀಡಿದ ಜಿಲ್ಲಾ ಅಪರ ದಂಡಾಧಿಕಾರಿಯವರಿಗೆ ನಿರ್ದಿಷ್ಟ ನಮೂನೆಯಲ್ಲಿ ಘೋಷಣೆ ಮಾಡಿಕೊಳ್ಳಬೇಕಾಗುತ್ತದೆ. ಮತಾಂತರ ವಿಧಿವಿಧಾನ ನಡೆಸುವವರೂ ಸಹ ಮೂವತ್ತು ದಿನಗಳ ಮುಂಗಡ ನೋಟಿಸ್ ನೀಡಬೇಕಾಗುತ್ತದೆ. ಮುಂದಿನ ಹಂತವಾಗಿ ಎರಡು ನೋಟಿಸ್​ಗಳನ್ನು ಬಳಿಕ ಜಿಲ್ಲಾ ದಂಡಾಧಿಕಾರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ. ಮೂವತ್ತು ದಿನದೊಳಗೆ ಆಕ್ಷೇಪಣೆ ಬಂದಲ್ಲಿ, ಪ್ರಸ್ತಾಪಿತ ಮತಾಂತರದ ನೈಜ ಆಶಯ, ಉದ್ದೇಶ, ಕಾರಣದ ಬಗ್ಗೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಬೇಕಾಗುತ್ತದೆ. ಈ ವೇಳೆ ಅಪರಾಧ ಎಸಗಿರುವುದು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ ಹೂಡಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 17 =
Remember me
