ಲಂಡನ್/ನವದೆಹಲಿ:ಫೈಜರ್ ಲಸಿಕೆಯ ಸಾರ್ವತ್ರಿಕ ಬಳಕೆಗೆ ಅನುಮತಿ ನೀಡಿದ ವಿಶ್ವದ ಮೊದಲ ರಾಷ್ಟ್ರವಾದ ಬ್ರಿಟನ್​ಗೆ ಮತ್ತೆ ಕರೊನಾಘಾತ ತಟ್ಟಿದೆ. ರೂಪಾಂತರದೊಂದಿಗೆ ವೇಗವಾಗಿ ವ್ಯಾಪಿಸುತ್ತಿರುವ ಕರೊನಾ ದೇಶವನ್ನು ಕಂಗೆಡಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಭಾರತ ಸೇರಿ ವಿಶ್ವರಾಷ್ಟ್ರಗಳು ಬ್ರಿಟನ್​ನೊಂದಿಗೆ ಪ್ರಯಾಣ ನಿರ್ಬಂಧ ವಿಧಿಸಿವೆ.
ಈ ಹಿಂದಿನ ವೈರಾಣುವಿಗಿಂತ ಶೇ.70 ಅಧಿಕ ವೇಗದೊಂದಿಗೆ ರೂಪಾಂತರಗೊಂಡಿರುವ ಕರೊನಾ ಮಹಾಮಾರಿ ಬ್ರಿಟನ್​ಗೆ ಅಪ್ಪಳಿಸಿದೆ. ಭಾನುವಾರ ಒಂದೇ ದಿನ ದೇಶದಲ್ಲಿ 35 ಸಾವಿರ ಹೊಸ ಪ್ರಕರಣಗಳು ವರದಿಯಾಗಿವೆ. ಪರಿಣಾಮ ದೇಶಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಾವು-ನೋವಿನ ಆತಂಕ ಇಮ್ಮಡಿಸಿದೆ.
ಮತ್ತೆ ಲಾಕ್:ವೈರಾಣು ಹರಡುವಿಕೆ ನಿಯಂತ್ರಣ ಸಂಬಂಧ ಈಗಾಗಲೇ ಬ್ರಿಟನ್​ನ ಹಲವೆಡೆ ಮತ್ತೆ ಲಾಕ್​ಡೌನ್ ಘೋಷಿಸಲಾಗಿದೆ. ಕೆಲವೇ ದಿನಗಳಲ್ಲಿ ಇಡೀ ದೇಶಕ್ಕೆ ಲಾಕ್ ವಿಸ್ತರಿಸುವ ಸಾಧ್ಯತೆ ನಿಚ್ಚಳವಾಗಿದೆ. ಮತ್ತೊಂದೆಡೆ ಕರೊನಾ ನಿಯಂತ್ರಣ ಸಂಬಂಧ ಪ್ರಧಾನಿ ಬೋರಿಸ್ ಜಾನ್ಸನ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸರ್ಕಾರಕ್ಕೆ ಸಹಕಾರ ನೀಡುವಂತೆ ಜನತೆಗೆ ಮನವಿ ಮಾಡಿದ್ದಾರೆ.
ಕರೊನಾ ಹೊಸ ರೂಪದ ಪರಿಣಾಮ ಸ್ಪಷ್ಟವಾಗಿಲ್ಲ. ಆದರೆ ವೈರಸ್ ರೂಪಾಂತರ ಗೊಂಡಾಗ ಅದು ತನ್ನ ಮೇಲ್ಮೈನ ಪ್ರೋಟಿನ್​ಗಳನ್ನು ಬದಲಾಯಿಸುವ ಮೂಲಕ ಲಸಿಕೆ ಅಥವಾ ಪ್ರತಿಕಾಯಗಳಿಂದ ರಕ್ಷಣೆ ಪಡೆಯಬಹುದೆನ್ನುವುದೇ ಆತಂಕಕ್ಕೆ ಕಾರಣ.
ಕರೊನಾ ಕರೊನಾ ವೈರಸ್ ಮೊದಲಿಗಿಂತ ಪ್ರಬಲವಾಗಿ, ವೇಗವಾಗಿ ಹರಡುವ ಗುಣ, ಶಕ್ತಿ ಪಡೆದುಕೊಂಡು ಹೊಸ ರೂಪ ಪಡೆದುಕೊಂಡಿದೆ. ಇದರ ಲಕ್ಷಣ, ತೀವ್ರತೆ, ಪರಿಣಾಮ ಮೊದಲಿನ ಸೋಂಕಿನ ರೀತಿಯಲ್ಲೇ ಇದ್ದು, ಅದೇ ಚಿಕಿತ್ಸೆ ಮುಂದುವರಿಯಲಿದೆ ಎಂದು ವೈರಾಣು ತಜ್ಞ ಡಾ. ರವಿ. ತಿಳಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಕರೊನಾ ವೈರಸ್​ನ ಹೊಸ ಪ್ರಭೇದ ಪತ್ತೆಯಾಗಿಲ್ಲ. ಹೊರ ದೇಶಗಳಿಂದ ಬಂದ ಪ್ರಯಾಣಿಕರನ್ನು ಆರ್​ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ ಸೋಂಕು ದೃಢಪಟ್ಟರೆ ನಂತರ ಅವರ ಮಾದರಿ ಪಡೆದು ಜನೆಟಿಕ್ ಸೀಕ್ವೆಂಸೀಸ್ ಪರೀಕ್ಷೆ ನಡೆಸುವ ಮೂಲಕ ವೈರಸ್​ನ ಹೊಸ ರೂಪ ತಿಳಿಯಬೇಕಿದೆ ಎಂದರು. ರಾಜ್ಯದಲ್ಲಿ ಸೋಂಕು ನಿಯಂತ್ರಣದಲ್ಲಿದೆ. ಆದರೆ ಬಹಳಷ್ಟು ದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದ 3ರಿಂದ 5 ತಿಂಗಳ ನಂತರ ಮತ್ತೆ ಸೋಂಕು ಹೆಚ್ಚಾಗಿದೆ. ರಾಜ್ಯದಲ್ಲಿಯೂ ಎರಡನೇ ಅಲೆ ಬರಬಹುದೆಂದು ಅಂದಾಜಿಸಲಾಗಿದೆ. ಹಾಗಾಗಿ ರಾಜ್ಯದ ಜನರು ನಿರ್ಲಕ್ಷ್ಯ ಮಾಡದೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಒಟ್ಟಾರೆ ಕರೊನಾ ನಿಯಂತ್ರಣಕ್ಕೆ ಸದ್ಯ ಪಾಲಿಸುತ್ತಿರುವ ಎಲ್ಲ ನಿಯಮಗಳನ್ನು ಮುಂದೆಯೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ಅವರ ಸಲಹೆ.
ಇದನ್ನೂ ಓದಿ:ಕರೊನಾ ಲಸಿಕೆ ವಿಜ್ಞಾನಿಯ ದುರಂತ ಅಂತ್ಯ! 14ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟರಾ ವಿಜ್ಞಾನಿ?
ಬೆಂಗಳೂರು:ಇಂಗ್ಲೆಂಡ್, ಡೆನ್ಮಾರ್ಕ್, ನೆದರ್ಲೆಂಡ್ ಸೇರಿದಂತೆ ಐರೋಪ್ಯ ದೇಶಗಳಲ್ಲಿ ಕರೊನಾ ಹೊಸ ರೂಪದಲ್ಲಿ ಅವತರಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುಂಜಾಗ್ರತಾ ಕ್ರಮಕೈಗೊಳ್ಳಲು ಸರ್ಕಾರ ತೀರ್ವನಿಸಿದೆ. ಈಗಾಗಲೇ ಆ ದೇಶಗಳಿಂದ ಬಂದಿರುವವರನ್ನು ಪತ್ತೆ ಹಚ್ಚಿ ಹೋಂ ಕ್ವಾರಂಟೈನ್​ಗೊಳಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾನುವಾರ ಬ್ರಿಟಿಷ್ ಏರ್​ವೇಸ್​ನಿಂದ 291, ಏರ್ ಇಂಡಿಯಾದಿಂದ 246 ಪ್ರಯಾಣಿಕರು ಬಂದಿದ್ದಾರೆ. ಅವರಲ್ಲಿ 138 ಜನ ಕರೊನಾ ಪರೀಕ್ಷೆ ನೆಗೆಟಿವ್ ವರದಿ ತಂದಿಲ್ಲ. ಇಂತಹವರ ವಿವರ ಪಡೆದು 7 ದಿನ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುವುದು. ಮಂಗಳವಾರದಿಂದ ವಿಮಾನ ನಿಲ್ದಾಣಗಳಲ್ಲಿ ಕಿಯೋಸ್ಕ್ ಇಟ್ಟು, ತಪಾಸಣೆ ಮಾಡಲಾಗುವುದು ಎಂದರು.
ವೇಗವಾಗಿ ಹರಡುವ ಶಕ್ತಿ:ಯುನೈಟೆಡ್ ಕಿಂಗ್​ಡಮ್ಲ್ಲಿ ಕಾಣಿಸಿಕೊಂಡಿರುವ ಹೊಸ ಬಗೆಯ ಕರೊನಾ ವೈರಾಣುವಿನಲ್ಲಿ ಯಾವುದೇ ಹೊಸ ರೂಪ ಇಲ್ಲ. ಆದರೆ, ಇದು ವೇಗವಾಗಿ ಹರಡುವ ಲಕ್ಷಣ ಹೊಂದಿದೆ. ರೋಗದ ತೀವ್ರತೆ ಹೆಚ್ಚಿಸಿರುವ ಪ್ರಕರಣ ವರದಿ ಯಾಗಿಲ್ಲ. ಆದರೂ ಎಚ್ಚರಿಕೆ ವಹಿಸಬೇಕಿದೆ ಎಂದರು.
ಭಯಪಡುವ ಅಗತ್ಯವಿಲ್ಲ:ಹೊಸ ಪ್ರಭೇದದಲ್ಲಿ ಕಾಣಿಸಿಕೊಂಡಿರುವ ಈ ವೈರಾಣು ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ನಿರ್ಲಕ್ಷ್ಯ ಮಾಡುವಂತಿಲ್ಲ. ಜನರು ಸಾಮಾಜಿಕ ಅಂತರವನ್ನು ಮರೆತಿದ್ದಾರೆ. ಕನಿಷ್ಠಪಕ್ಷ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ ಎಂದರು.
ಹೊಸ ವರ್ಷ ಆಚರಣೆ ಬೇಡ:ಕರೊನಾ ಹಿನ್ನೆಲೆಯಲ್ಲಿ ಹೊಸ ವರ್ಷದ ಅದ್ದೂರಿ ಆಚರಣೆ ಕೈ ಬಿಡಬೇಕಿದೆ. ಕೆಲ ಹೋಟೆಲ್ ಗಳಲ್ಲಿ ಬುಕಿಂಗ್ ಮಾಡಿ ಆಚರಣೆ ಮಾಡಲು ಸಿದ್ಧತೆ ನಡೆಸಿರುವುದು ಕಂಡುಬಂದಿದೆ. ಅವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.
ಪರೀಕ್ಷೆ ಮಾಡಿಸಿಕೊಳ್ಳಿ:ಸರ್ಕಾರಕ್ಕೆ ಜನರ ಜೀವ ರಕ್ಷಣೆ ಮುಖ್ಯ. ಆದ್ದರಿಂದ ಕಳೆದ 14 ದಿನಗಳಲ್ಲಿ ಬೇರೆ ದೇಶಗಳಿಂದ ರಾಜ್ಯಕ್ಕೆ ಬಂದವರು ಆರ್​ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು. ಬೇರೆ ದೇಶಗಳಿಂದ ಬಂದವನ್ನು 7 ದಿನಗಳ ಕ್ವಾರಂಟೈನ್​ಗೆ ಒಳಪಡಿಸಬೇಕು ಎಂದು ನಿರ್ಧರಿಸಲಾಗಿದೆ. ಯುಕೆಯಿಂದ ಬಂದವರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ ಎಂದರು.
ಶಾಲೆಗಳಿಗೆ ಸದ್ಯಕ್ಕಿಲ್ಲ ಅಡ್ಡಿ:ಹೊಸ ರೂಪದ ಕರೊನಾ ವೈರಾಣು ಮಾಹಿತಿ ಸಿಕ್ಕಿರುವ ಕಾರಣ, ಈ ಬಗ್ಗೆ ನಿಗಾ ಇಟ್ಟು ಅಧ್ಯಯನ ಮಾಡಲಾಗುವುದು. ಶೈಕ್ಷಣಿಕ ಚಟುವಟಿಕೆಗೆ ಸಂಬಂಧಿಸಿದಂತೆ ವಹಿಸಬೇಕಾದ ಎಚ್ಚರಿಕೆ ಕುರಿತು ಮತ್ತೊಮ್ಮೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಈಗಲೇ ನಿರ್ಣಯ ತೆಗೆದುಕೊಳ್ಳುವುದು ಕಷ್ಟ ಎಂದರು.
ತಜ್ಞರ ಸಮಿತಿ ಸಭೆ:ಕರೊನಾ ಹೊಸ ರೂಪದಲ್ಲಿ ಹರಡುವುದನ್ನು ತಡೆಯಲು ತಜ್ಞರ ಸಮಿತಿ ಸಭೆ ನಡೆಸಿದ ಡಾ.ಸುಧಾಕರ್, ಅವರ ಅಭಿಪ್ರಾಯಗಳನ್ನು ಪಡೆದರು. ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಕಾರ್ಯದರ್ಶಿ ಪಂಕಜ ಕುಮಾರ್ ಪಾಂಡೆ ಮತ್ತಿತರರು ಹಾಜರಿದ್ದರು.
ಸಾಯುವಾಗಲೂ ಮಗನಿಗೆ ಬಿಯರ್​ ಕುಡಿಯೋಕೆ ದುಡ್ಡು ಕೊಟ್ಟ ಅಪ್ಪ!

ಮಲತಾಯಿಯನ್ನೇ ರೇಪ್​ ಮಾಡಿದ ಕಾಮುಕ ಮಗ! ವಿಚಾರ ಹೊರಬರದಿರುವಂತೆ ನೋಡಿಕೋ ಎಂದ ಕುಟುಂಬಸ್ಥರು!

ಈ ಮಗುವಿಗೆ 60 ವರ್ಷ ಎಷ್ಟು ಬೇಕೋ ಅಷ್ಟು ಪಿಜ್ಜಾ ಫ್ರೀ! ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಾ…

20 ಮಂದಿ ಬರಬೇಕಾದ ಮದುವೆಗೆ ಬಂದದ್ದು 10 ಸಾವಿರ! ಈಗ ಈ ಕುತೂಹಲದ ಮದುವೆಯದ್ದೇ ಚರ್ಚೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × 5 =
Remember me
