ಬೆಂಗಳೂರು:ಉನ್ನತ ವ್ಯಾಸಂಗ, ಬಳಿಕ ಉತ್ತಮ ನೌಕರಿ ಪಡೆಯುವ ಆಸೆಯೊಂದಿಗೆ ಸಾಲಸೋಲ ಮಾಡಿಕೊಂಡು ಬ್ರಿಟನ್​ಗೆ ಹಾರಿದ್ದ ಭಾರತೀಯ ವಿದ್ಯಾರ್ಥಿಗಳು ಕರೊನಾದಿಂದಾಗಿ ಕಂಗಾಲಾಗಿದ್ದಾರೆ. ದಿನನಿತ್ಯದ ಖರ್ಚು ನಿಭಾಯಿಸಲು ಇದ್ದ ಅರೆಕಾಲಿಕ ಉದ್ಯೋಗವೂ ಕೈತಪ್ಪಿದ ಪರಿಣಾಮ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಕೆಲವರು ಆತ್ಮಹತ್ಯೆಯಂತಹ ಹೆಜ್ಜೆಗೆ ಮುಂದಾದರೂ ಅಚ್ಚರಿಯಿಲ್ಲ ಎಂಬ ಆತಂಕವನ್ನು ಸಂಸದರೊಬ್ಬರು ಹೊರಹಾಕಿದ್ದಾರೆ.
27 ಸಾವಿರ ವಿದ್ಯಾರ್ಥಿಗಳು:ಭಾರತದ ಸುಮಾರು 27 ಸಾವಿರ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್​ಗೆ ತೆರಳಿದ್ದಾರೆ. ಈ ಪೈಕಿ ಕೆಲವರು ಶ್ರೀಮಂತರಾಗಿದ್ದರೂ ಬಹುತೇಕರು ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು. ವಿವಿ ಬೋಧನಾ ಶುಲ್ಕಕ್ಕೆ ಭಾರತದಲ್ಲಿ ಬ್ಯಾಂಕ್​ಗಳಿಂದ ಶೈಕ್ಷಣಿಕ ಸಾಲ ಪಡೆದಿದ್ದಾರೆ. ಅದನ್ನು ವಿದ್ಯಾಭ್ಯಾಸದ ನಂತರ ತೀರಿಸಬೇಕಿದೆ. ಇದಕ್ಕಾಗಿ ವಾಸ್ತವ್ಯ, ಊಟೋಪಹಾರ ಸೇರಿದಂತೆ ದಿನನಿತ್ಯದ ಖರ್ಚು ವೆಚ್ಚಗಳಿಗೆ ಬಹುತೇಕರು ಅರೆಕಾಲಿಕ ಕೆಲಸ ಮಾಡುತ್ತಾರೆ. ಇದೀಗ ಕರೊನಾ ದಿಂದಾಗಿ ಎಲ್ಲ ಉದ್ಯಮ ಬಂದ್ ಆಗಿರುವುದರಿಂದ ಸರ್ಕಾರೇತರ ಸಂಸ್ಥೆಗಳು ಹಾಗೂ ಕೆಲವು ದಾನಿಗಳು ನೀಡುವ ಆಹಾರಕ್ಕಾಗಿ ಕಾಯುತ್ತ ಕೂರುವ ಪರಿಸ್ಥಿತಿ ಇದೆ ಎಂದು ಬ್ರಿಟನ್​ನಲ್ಲಿರುವ ಫಾರ್ಮಸಿ ಶಿಕ್ಷಕಿ ಭವಾನಿ ರಾಕೇಶ್ ತಿಳಿಸಿದ್ದಾರೆ.
12 ಸಾವಿರ ವಿದ್ಯಾರ್ಥಿಗಳು ವಾಪಸ್:ಭಾರತದಲ್ಲಿ ಬ್ರಿಟನ್​ನ 22 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕರೊನಾ ಕಾರಣಕ್ಕೆ ಇಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆದೊಯ್ಯಲು ಭಾರತದಲ್ಲಿರುವ ಬ್ರಿಟಿಷ್ ರಾಯಭಾರ ಕಚೇರಿ ಶ್ರಮಿಸುತ್ತಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಪಂಜಾಬ್ ಮುಂತಾದೆಡೆ ಇದ್ದ ಬ್ರಿಟನ್ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆದೊಯ್ಯಲು ವಿಶೇಷ ಚಾರ್ಟರ್ಡ್ ವಿಮಾನಗಳನ್ನು ಆಯೋಜಿಸುತ್ತಿದೆ. ವಿಮಾನದ ಟಿಕೆಟ್ ದರವನ್ನು ವಿದ್ಯಾರ್ಥಿಯೇ ಕೊಡ ಬೇಕು. ಪ್ರತಿ ವಿದ್ಯಾರ್ಥಿ ಹೊರಡುವ ಸ್ಥಳಕ್ಕೆ ಅನುಗುಣವಾಗಿ (ಬೆಂಗಳೂರು, ಚೆನ್ನೈ, ತಿರುವನಂತಪುರ) 480ರಿಂದ 600 ಪೌಂಡ್ ದರ ವಿಧಿಸಲಾಗಿದೆ. ಇಲ್ಲಿವರೆಗೆ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳಿದ್ದಾರೆ. ಕಳಿಸುವ ಮುನ್ನ ಇಲ್ಲಿ ಉಷ್ಣತೆಯ ಪರೀಕ್ಷೆ ನಡೆಸಲಾಗಿದ್ದು, ಅಲ್ಲಿಗೆ ಹೋದ ತಕ್ಷಣ ನೇರ ಮನೆಗೆ ತೆರಳಿ ಸ್ವಯಂ ಕ್ವಾರಂಟೈನ್ ಆಗುವಂತೆ ತಿಳಿಸಲಾಗಿದೆ ಎಂದು ಭಾರತದಲ್ಲಿರುವ ಬ್ರಿಟನ್ ರಾಯಭಾರ ಕಚೇರಿ ವಿಜಯವಾಣಿಗೆ ತಿಳಿಸಿದೆ.
ಭಾರತಕ್ಕೆ ಆಗುವುದಿಲ್ಲವೇಕೆ?:ಬ್ರಿಟನ್ ಸರ್ಕಾರ ತನ್ನ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಬಹುದಾದರೆ ಭಾರತ ಸರ್ಕಾರಕ್ಕೆ ಏಕೆ ಸಾಧ್ಯವಿಲ್ಲ ಎಂಬುದು ಸದ್ಯ ಸಾರ್ವಜನಿಕ ವಲಯದಲ್ಲೆದ್ದಿರುವ ಪ್ರಶ್ನೆ. ವಿಮಾನದಲ್ಲಿ ಬಂದವರನ್ನು ನೇರ ಮನೆಗೆ ಕಳುಹಿಸದೆ ನಿರ್ದಿಷ್ಟ ಸ್ಥಳದಲ್ಲಿಟ್ಟು ಕ್ವಾರಂಟೈನ್ ಮಾಡಬಹುದು. 14 ದಿನದ ಕ್ವಾರಂಟೈನ್ ನಂತರ ಕರೊನಾ ಪರೀಕ್ಷೆ ನಡೆಸಿ, ಸೋಂಕು ಇಲ್ಲವೆಂದು ದೃಢಪಟ್ಟರೆ ಮನೆಗೆ ಕಳಿಸಬಹುದು. ಈ ಕುರಿತು ಬ್ರಿಟನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಚಿಂತನೆ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಸದ್ಯಕ್ಕೆ ಬ್ರಿಟನ್​ನಲ್ಲಿರುವ ಭಾರತೀಯರನ್ನು ಕರೆದೊಯ್ಯುವ ಯಾವುದೇ ಯೋಚನೆ ಇಲ್ಲ. ವಾಣಿಜ್ಯ ವಿಮಾನಯಾನ ಸೇವೆಗಳು ಆರಂಭವಾಗುವವರೆಗೂ ಕಾಯಬೇಕೆಂದು ಬ್ರಿಟನ್​ನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಬ್ರಿಟನ್​ನ ಭಾರತೀಯ ವಿದ್ಯಾರ್ಥಿ ಸಂಘಟನೆ ಇಂಡಿಯನ್ ನ್ಯಾಷನಲ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಇಲ್ಲಿವರೆಗೆ 3 ಸಾವಿರ ಭಾರತೀಯ ವಿದ್ಯಾರ್ಥಿಗಳಿಗೆ ಆಹಾರ ವಿತರಿಸಿದೆ. ಸಹಾಯ ಕೋರಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಕರೆ ಮಾಡುತ್ತಿದ್ದಾರೆ ಎಂದು ಮತ್ತೊಂದು ವಿದ್ಯಾರ್ಥಿ ಸಂಘಟನೆ ನ್ಯಾಷನಲ್ ಇಂಡಿಯನ್ ಸ್ಟೂಡೆಂಟ್ಸ್ ಆಂಡ್ ಅಲುಮ್ನಿ ಯೂನಿಯನ್ ತಿಳಿಸಿದೆ. ಪ್ರಮುಖವಾಗಿ ಕ್ರಾನ್​ಫೀಲ್ಡ್, ಬೆಡ್​ಫೋರ್ಡ್​ಶೈರ್ ಹಾಗೂ ಹಾರ್ಟ್​ಫೋರ್ಡ್​ಶೈರ್ ವಿವಿಗಳಲ್ಲಿ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಕುರಿತು ಶಿಕ್ಷಣ ಕಾರ್ಯದರ್ಶಿಗೆ ಪತ್ರ ಬರೆದಿರುವ ಲೇಬರ್ ಪಕ್ಷದ ಸಂಸದ ವೀರೇಂದ್ರ ಶರ್ವ, ಆಹಾರವಿಲ್ಲದೆ ಅನೇಕ ವಿದೇಶಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನಿಸಿದ ಕುರಿತು ಕೇಳಿದ್ದೇನೆ. ಇಂತಹ ಸಂದರ್ಭದಲ್ಲಿನ ಬಳಕೆಗೆಂದೇ ವಿವಿಗಳಲ್ಲಿರುವ ಸಂಕಷ್ಟ ನಿಧಿಯಿಂದ ಹಣ ನೀಡಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ. ಗ್ರೀನ್​ವಿಚ್ ವಿವಿ ವಿದ್ಯಾರ್ಥಿ ಹಾಗೂ ವಿವಿಯ ಭಾರತೀಯ ವಿದ್ಯಾರ್ಥಿಗಳ ಸಮುದಾಯದ ಅಧ್ಯಕ್ಷ ಸಮೀರ್ ಧೋರೆ, ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಅನೇಕರು ದೂರವಾಣಿ ಮೂಲಕ ಕಣ್ಣೀರು ಸುರಿಸುತ್ತಿದ್ದಾರೆ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 1 =
Remember me
