ರಾಜ್ಯದಲ್ಲಿ ಬಿಎಸ್​ವೈ ನಾಯಕತ್ವ ಸುಭದ್ರಆಯ್ತು ಅಂತಾ ಅನ್ಕೊಳ್ಳೋ ಹೊತ್ತಿನಲ್ಲೇ ವಿರೋಧಿಗಳ ಮಸಲತ್ತು ಆರಂಭವಾಗಿದೆ. ಇದರ ಭಾಗ ಎಂಬಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ರದ್ದು ಎಂದು ಹೇಳಲಾದ ಆಡಿಯೋ ಸ್ಫೋಟಗೊಂಡಿದೆ. ಈ ಸ್ಫೋಟದ ತೀವ್ರತೆಗೆ ಖುದ್ದು ನಳಿನ್ ಕುಮಾರ್ ಕಟೀಲ್ ಬೆಂಕಿಯುಂಡೆ ಎದುರುಸಿದ್ದಾರೆ. ನಾನವನಲ್ಲ..ನಾನವನಲ್ಲ..ಅಂತಾ ಕಟೀಲ್ ಅಲವತ್ತು ಕೊಂಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ವಿರುದ್ಧ ಸ್ವಪಕ್ಷದಲ್ಲೇ ನಡೆದಿರೋ ಪಿತೂರಿಯ ಬೆಂಕಿ ಬಗ್ಗೆ ದಟ್ಟ ಹೊಗೆ ಕಂಡುಬಂದಿದೆ.
ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಹೋಯ್ತು ಅಂತಾ ಅನ್ಕೊಳ್ಳೋದರಲ್ಲಿ ಮತ್ತೆ ಎದುರಾಗಿದೆ ಹೊಸ ರಗಳೆ.! ಯಾವಾಗ ಸಿಎಂ ಬಿಎಸ್​ ಯಡಿಯೂರಪ್ಪ ದೆಹಲಿ ಯಾತ್ರೆ ಯಶಸ್ವಿಯಾಯ್ತು ಅನ್ನೋ ಮಾಹಿತಿ ಹೊರಬಂತೋ, ಇದೀಗ ಢಮಾರ್ ಅಂತಾ ಸ್ಫೋಟಗೊಂಡಿದೆ ಹೊಸ ಆಡಿಯೋ.!
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ರದ್ದು ಎನ್ನಲಾದ ಆಡಿಯೋ ಭಾನುವಾರ ರಜೆ ಮೂಡ್​​ನಲ್ಲಿದ್ದ ಕಮಲಿಗರ ಎದೆಯಲ್ಲಿ ಢವಢವ ತಂದಿದ್ದು ನಿಜ. ಇಲ್ಲಿ ನಳಿನ್ ಕುಮಾರ್ ಕಟೀಲ್ ಆಪ್ತರೊಬ್ಬರ ಜತೆ ಬಿಜೆಪಿ ವಿದ್ಯಮಾನಗಳ ಸೀಕ್ರೆಟ್​ ಒಂದನ್ನು ಹೇಳೋ ದನಿ ಇದೆ. ತುಳು ಭಾಷೆಯಲ್ಲಿರೋ ಈ ಸಂಭಾಷಣೆಯಲ್ಲಿ ಸಂಸದರೂ ಆಗಿರೋ ನಳಿನ್ ಕುಮಾರ್ ಕಟೀಲ್, ತಮ್ಮ ಆಪ್ತರಿಗೆ ಯಾರಿಗೂ ಹೇಳ್ಬೇಡಿ ಅನ್ನೋ ಕಂಡೀಷನ್​ನೊಂದಿಗೇ ರಹಸ್ಯ ಹೊರಹಾಕೋ ದನಿ ಕೇಳಿಬರುತ್ತಿದೆ.
ಈ ಧ್ವನಿಸುರುಳಿಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗೋ ಬಗ್ಗೆ ಮಾತು ಕೇಳಿಬರುತ್ತದೆ. ಅಲ್ಲದೆ, ನಾಯಕತ್ವ ಬಗ್ಗೆ ಮೂವರ ಹೆಸರು ಕೇಳಿಬರುತ್ತಿದೆ. ಇದರ ಪೈಕಿ ದೆಹಲಿ ಮಟ್ಟದ ಸಂಪರ್ಕ ಹೊಂದಿರೋ ಒಬ್ಬರಿಗೆ ನಾಯಕತ್ವ ಲಭಿಸಲಿದೆ ಎಂಬರ್ಥದಲ್ಲಿ ಕಟೀಲ್ ಆಪ್ತರಿಗೆ ಹೇಳೋ ದನಿ ಆಡಿಯೋದಲ್ಲಿದೆ. ಇದರ ಜತೆಗೆ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ಕೆಎಸ್​ ಈಶ್ವರಪ್ಪ ಟೀಂ ಅನ್ನು ಕೂಡ ಕೆಳಗಿಳಿಸಲಾಗುತ್ತದೆ ಎಂದು ಕೂಡ ಆಡಿಯೋದಲ್ಲಿ ಹೇಳೋದು ಕೇಳಿಬರುತ್ತಿದೆ.
ಇನ್ನ, ಯಾವಾಗ ನಳಿನ್ ಕುಮಾರ್ ಕಟೀಲ್​​ರದ್ದು ಎನ್ನಲಾದ ಆಡಿಯೋ ಸ್ಫೋಟಗೊಂಡಿತೋ ಕೇಸರಿ ಪಾಳೆಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಇದರ ಬೆನ್ನಲ್ಲೇ ಈ ಬಗ್ಗೆ ಸ್ಷಷ್ಟನೆ ಕೊಟ್ಟ ನಳಿನ್ ಕುಮಾರ್ ಕಟೀಲ್, ಇದು ತಮ್ಮ ದನಿ ಅಲ್ಲ ಅಂದಿದ್ದಾರೆ. ಅಲ್ಲದೆ, ಈ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಕಟೀಲ್ ಪತ್ರವನ್ನ ಕೂಡ ಬರೆದಿದ್ದಾರೆ. ನಕಲಿ ಆಡಿಯೋ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಅಲ್ಲದೆ, ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಬಿಜೆಪಿ ಪಕ್ಷಕ್ಕೆ ಆತ್ಮವಿದ್ದಂತೆ ಎಂದಿರೋ ಕಟೀಲ್, ಅನುಭವೀ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಕೆಎಸ್ ಈಶ್ವರಪ್ಪ ಪಕ್ಷದ ಎರಡು ಕಣ್ಣುಗಳಿದ್ದಂತೆ ಎಂದಿದ್ದಾರೆ. ಇಂಥಾ ಅನುಭವಿಗಳ ಮಾರ್ಗದರ್ಶನದಡಿ ಬಿ.ಎಸ್​. ಯಡಿಯೂರಪ್ಪ ಪಕ್ಷವನ್ನು ಮುನ್ನೆಡಸಿಕೊಂಡು ಹೋಗಲಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇದಲ್ಲದೆ, ರಾಜ್ಯದಲ್ಲಿ ನಾಯ ಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಅಂತಾ ಕೂಡ ನಳಿನ್ ಕುಮಾರ್ ಸ್ಪಷ್ಟಪಡಿಸೋ ಮೂಲಕ ಆಡಿಯೋ ಮುಜುಗರದಿಂದ ಪಾರಾಗೋ ಯತ್ನ ನಡೆಸಿದ್ದಾರೆ.
ಇನ್ನ, ಯಾವಾಗ ಬಿಜೆಪಿ ರಾಜ್ಯಾಧ್ಯಕ್ಷರದ್ದು ಎನ್ನಲಾದ ಆಡಿಯೋ ರಿಲೀಸ್ ಆಯ್ತೋ, ಕಮಲ ಪಾಳೆಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಮೇಲ್ನೋಟಕ್ಕೆ ಕಟೀಲ್​ರದ್ದು ಎಂದೇ ಹೇಳಲಾದ ಆಡಿಯೋ ಬಗ್ಗೆ ಈಗಾಗಲೇ ನಳಿನ್ ಕುಮಾರ್ ಕಟೀಲ್ ಧ್ವನಿಸುರುಳಿ ತಮ್ಮದಲ್ಲ ಅಂತಾ ಸ್ಷಷ್ಟಪಡಿಸಿರೋ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕೂಡ ಇದೇ ರಾಗ ಹಾಡಿದ್ದಾರೆ. ಖುದ್ದು ಕಟೀಲ್​ರೇ ಆಡಿಯೋ ತಮ್ಮದಲ್ಲ ಎಂದು ಕ್ಲಿಯರ್ ಮಾಡಿರೋದ್ರಿಂದ ಇಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲವೇ ಉಂಟಾಗಲ್ಲ ಅಂತಾ ಕಮಲ ಪಡೆ ಒಗ್ಗಟ್ಟಿನ ಜಪ ಪಠಿಸಿದೆ.
ಇನ್ನೊಂದೆಡೆ, ಆಡಿಯೋದಲ್ಲಿ ತಮ್ಮ ಪದಚ್ಯುತಿ ಬಗ್ಗೆಯೂ ಮಾತೂ ಕೇಳಿಬಂದ ಬೆನ್ನಲ್ಲೇ ಈ ಬಗ್ಗೆ ರಿಯಾಕ್ಷನ್ ಕೊಟ್ಟಿರೋ ಸಚಿವ ಕೆಎಸ್ ಈಶ್ವರಪ್ಪ, ತಾವು ಮಂತ್ರಿ ಸ್ಥಾನದಲ್ಲಿ ಗೂಟ ಹೊಡೆದುಕೊಂಡಿರೋಕೆ ಬಂದಿಲ್ಲ ಅಂದಿದ್ದಾರೆ. ಸಚಿವ ಸ್ಥಾನ ಹೋದ್ರೂ ತಲೆಕೆಡಿಸಿಕೊಳ್ಳಲ್ಲ ಎಂದಿರೋ ಕೆಎಸ್ ಈಶ್ವರಪ್ಪ, ಅಧಿಕಾರ ಹೋದರೂ, ಪಕ್ಷ ಸಂಘಟನೆ ಹಾಗೂ ಹಿಂದುತ್ವಕ್ಕಾಗಿ ಕೆಲಸ ಮಾಡೋದಾಗಿ ಸ್ಪಷ್ಟಪಡಿಸಿದರು. ಇದರ ಜತೆಜತೆಗೇ ಈಗಾಗ್ಲೇ ವಾಯ್ಸ್ ತಮ್ಮದಲ್ಲ ಅಂತಾ ಹೇಳಿದ್ರೂ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ರನ್ನ ಬಲಿಪಶು ಮಾಡೋ ಯತ್ನ ನಡೆದಿದೆ ಎಂಬುದನ್ನ ಹೇಳೋಕೆ ಈಶ್ವರಪ್ಪ ಮರೆಯಲಿಲ್ಲ.
ಇನ್ನ, ಯಾವಾಗ ಆಡಿಯೋ ಸ್ಫೋಟಗೊಂಡಿತೋ, ಆ ಬಳಿಕ ಇದು ತಮ್ಮ ಆಡಿಯೋ ಅಲ್ಲ ಅಂತಾ ನಳಿನ್ ಕುಮಾರ್ ಸ್ಪಷ್ಟಪಡಿಸಿದರೂ ಕಮಲ ಅಂಗಳದಲ್ಲಿನ ಸುಳಿ ಕಮ್ಮಿಯಾದಂತೆ ಕಾಣಲಿಲ್ಲ. ಇದು ಅಸಲಿ ಆಡಿಯೋವೋ? ಪರಿಸ್ಥಿತಿ ಇನ್ನಷ್ಟು ಹದಗೆಡಿಸೋಕೆ ಬಿಜೆಪಿಯಲ್ಲೇ ಯಾರಾದರೂ ಹೀಗೆ ನಕಲಿ ಆಡಿಯೋ ಹರಿಬಿಟ್ಟಿದ್ದಾರೋ? ಈ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ. ಇನ್ನು ನಾಯಕತ್ವ ಬದಲಾವಣೆ ಬಗ್ಗೆ ಆಡಿಯೋದಲ್ಲಿ ರಾಜ್ಯಾಧ್ಯಕ್ಷ ಕಟೀಲ್​ ಸ್ಪಷ್ಟವಾಗಿ ಹೇಳೋದು ಕೇಳಿಬಂದರೂ, ಸಿಎಂ ಬಿಎಸ್​ವೈ ಮಾತ್ರ ಎದೆಗುಂದದೇ ಮಾಮೂಲಿಯಂತೆಯೇ ಹುಮ್ಮಸ್ಸಿನಲ್ಲಿ ಇರೋದು ಕಂಡುಬಂದಿತು. ಇದೇ ತಿಂಗಳು 26ಕ್ಕೆ ಸಿಎಂ ಆಗಿ ಎರಡನೇ ವರ್ಷ ಪೂರೈಸುತ್ತಿರೋ ಹಿನ್ನೆಲೆಯಲ್ಲಿ ಈಗಾಗ್ಲೇ ಪಕ್ಷದ ಶಾಸಕರಿಗೆ ಔತಣಕೂಟ ಆಯೋಜಿಸಿರೋ ಬಿಎಸ್​ವೈ, ಇದೇ ಗುಂಗಿನಲ್ಲಿ ಸೋಮವಾರ ಕೂಡ ಆಪ್ತರ ಜತೆ ಭೋಜನ ಸವಿದರು.
ಒಟ್ಟಾರೆ, ಬಿಎಸ್​ವೈ ದೆಹಲಿಯಲ್ಲಿ ವರಿಷ್ಠರಿಂದ ಶಹಬ್ಬಾಸ್​ಗಿರಿ ಪಡೆದು ವಾಪಸ್ ಆದ ಬೆನ್ನಲ್ಲೇ ಆಡಿಯೋ ರಾಜ್ಯದ ಕಮಲ ಸರೋವರ ದಲ್ಲಿ ಹೊಸ ತರಂಗಗಳನ್ನ ಸೃಷ್ಟಿಸಿದೆ. ದೆಹಲಿಯಲ್ಲಿ ಇನ್ನೂ ಎರಡು ವರ್ಷ ನೀವೇ ಸಿಎಂ..ಡೋಂಟ್ ವರಿ ಅಂತಾನೇ ಹೈಕಮಾಂಡ್​ ಬಿಎಸ್​ವೈ ಬೆನ್ನುತಟ್ಟಿ ಕಳುಹಿಸಿದೆ. ಜತೆಗೆ ಈ ಅವಧಿ ಪೂರ್ಣ ಸಿಎಂ ಆಗುಳಿಯಲು ಅಭ್ಯಂತರವಿಲ್ಲ ಅಂತಾ ಹೇಳಿಕಳುಹಿಸಿರೋ ಬಿಜೆಪಿ ಹೈಕಮಾಂಡ್, ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪಗೆ ಎರಡು ಮಹತ್ತರ ಟಾಸ್ಕ್​​ಗಳನ್ನ ಕೊಟ್ಟಿದೆ ಎಂದೇ ಹೇಳಲಾಗಿತ್ತು.
ಮೊದಲನೇಯದ್ದು ಪಕ್ಷವನ್ನ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರೋ ನಿಟ್ಟಿನಲ್ಲಿ ಅಭಿವೃದ್ಧೀ ಕಾರ್ಯ…ಎರಡನೇಯದ್ದು ಲೋಕಸಭಾ ಎಲೆಕ್ಷನ್​​ನಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಗೇ ಅತಿ ಹೆಚ್ಚು ಸೀಟ್ ದೊರಕಿಸಿಕೊಡೋದು.. ಹೀಗೆ ಈ ಎರಡೂ ಗುರಿಗಳ ಈಡೇರಿಕೆ ಬಗ್ಗೆ ಓಕೆ ಎಂದು ಬೆಂಗಳೂರಿಗೆ ಮರಳಿದ ಬಿಎಸ್​ವೈಗೆ ಈಗ ಆಡಿಯೋ ಶಾಕ್ ಎದುರಾಗಿದೆ. ಬಿಎಸ್​ವೈ ಸಿಎಂ ಗಾದಿ ಇನ್ನೂ ಎರಡು ವರ್ಷ ಸುಭದ್ರ ಅಂತಾ ಅನ್ಕೊಳ್ಳೋ ಹೊತ್ತಿಗೇ ಧುತ್ ಅಂತಾ ಪ್ರತ್ಯಕ್ಷವಾಗಿದೆ ನಾಯಕತ್ವ ಬದಲಾವಣೆ ಬಗೆಗಿನ ಆಡಿಯೋ. ಇದನ್ನ ಗಮನಿಸಿದ್ರೆ ಎಲ್ಲರಿಗೂ ಅನಿಸೋದು.. ಇಲ್ಲಿ ಆಟ ಆಡುತ್ತಿರೋ ಕಾಣದ ಕೈ ಯಾವುದು?
ಎಲ್ಲವನ್ನೂ ಅಳೆದೂ ತೂಗಿಯೂ ಈ ಆಡಿಯೋ ಕೇಸ್ ನೋಡಿದ್ರೆ, ಇಲ್ಲಿ ಕಾಣಸಿಗೋದು ಸ್ವಪಕ್ಷೀಯರ ವಿಘ್ನ ಸಂತೋಷ. ಮೊದಲಿನಿಂದಲೂ ಬಿಎಸ್​ವೈ ಕೆಳೆಗಿಳಿಸೋಕೆ ಕಾಲೆಳೆದುಕೊಂಡೇ ಬಂದಿರೋ ಒಂದು ಟೀಂ, ಇದೀಗ ಪಿತೂರಿ ಮೂಲಕ ಬಿಎಸ್​ವೈ ಸರ್ಕಾರಕ್ಕೆ ಮುಳುಗುನೀರು ತರೋ ಸ್ಕೀಂ ಹಾಕಿಕೊಂಡಿದೆ. ಆದ್ರೆ, ಈ ಮೀರ್ ಸಾಧಿಕ್ ಆಟ ಅಷ್ಟು ಸುಲಭವಾಗಿ ನಡೆಯುತ್ತಾ?
ದೆಹಲಿಯಿಂದ ಬಾಹುಬಲಿಯಾಗಿ ವಾಪಸ್ ಬಂದ ರಾಜಾಹುಲಿಗೆ ಇದೀಗ ರಾಜ್ಯದಲ್ಲಿ ನಿದ್ದೆಗೆಡುವಂತೆ ಮಾಡಿದೆ ನಾಯಕತ್ವ ಬದಲಾವಣೆ ಬಗೆಗಿನ ಅತೃಪ್ತರ ಪಿಟೀಲು. ಅತ್ತ ದೆಹಲಿಯಲ್ಲಿ ಡೋಂಟ್ ವರಿ ಅಂತಾ ಖದ್ದು ಮೋದಿ, ಅಮಿತ್ ಶಾ, ಜೆಪಿ ನಡ್ಡಾರಂತಹ ಘಟಾನುಘಟಿ ನಾಯಕರೇ ಬಿಎಸ್​ವೈಗೆ ಅಭಯ ಕೊಟ್ಟ ಬೆನ್ನಲ್ಲೇ ಗಪ್​ಚುಪ್ ಆಗಿದ್ದ ಅತೃಪ್ತರು, ಇದೀಗ ಮತ್ತೆ ಬಾಲ ಬಿಚ್ಚಿದಂತಿದೆ. ಯಾವಾಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ರದ್ದು ಎನ್ನಲಾದ ಆಡಿಯೋದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತ ಎಂಬಂತೆ ಬಾಂಬ್ ಸಿಡೀತೋ, ಕಮಲಾಂಗಳದ ಕೆಸರೆರಚಾಟ ಬಿರುಸು ಪಡೆದಿದೆ. ಬಿಎಸ್​ವೈ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದ್ಯಾ ಎಂಬ ಅನುಮಾನ ಮೂಡಿಸಿದೆ.
ಇನ್ನೂ 2 ವರ್ಷಗಳ ಕಾಲ ಅಂದ್ರೆ, ಈ ಸರ್ಕಾರದ ಅವಧಿ ಮುಗಿಯುವವರೆಗೂ ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವ ಬದಲಿಲ್ಲ ಅಂತಾ ಬಿಜೆಪಿ ಹೈಕಮಾಂಡ್​ ಕಳೆದೊಂದು ತಿಂಗಳಲ್ಲಿ 2 ಬಾರಿ ಖಡಕ್ ಆಗಿ ಹೇಳಿಬಿಟ್ಟಿದೆ. ಕಳೆದ ತಿಂಗಳು 3 ದಿನಗಳ ಕಾಲ ರಾಜ್ಯ ಬಿಜೆಪಿ ಉಸ್ತು ವಾರಿ ಅರುಣ್ ಸಿಂಗ್, ಸ್ವತಃ ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಹೈಕಮಾಂಡ್​ಗೆ ವರದಿ ಕೊಟ್ಟಿದ್ದಾರೆ. 3-4 ಶಾಸಕರನ್ನ ಹೊರತುಪಡಿಸಿದ್ರೆ ಉಳಿದೆಲ್ಲಾ ಶಾಸಕರ ಬೆಂಬಲ ಬಿಎಸ್​ ಯಡಿಯೂರಪ್ಪಗಿದೆ. ನಾಯಕತ್ವ ಬದಲಾವಣೆ ಬಗ್ಗೆ ಎದ್ದಿರೋ ಗೊಂದಲದಿಂದ ಪಕ್ಷಕ್ಕೆ ನಷ್ಟ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕೈಹಾಕಿದ್ರೆ, ಪಕ್ಷಕ್ಕೆ ಕರ್ನಾಟಕದಲ್ಲಿ ಭಾರಿ ಹೊಡೆತ ಬೀಳಲಿದೆ ಎಂದು ಸಿಂಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ರಿಪೋರ್ಟ್​ ನೀಡಿದ್ದಾರೆ.
ಬಿಎಸ್​ವೈರನ್ನ ಅಲುಗಾಡಿಸಿದ್ರೆ ರಾಜ್ಯದ ಅತಿ ದೊಡ್ಡ ಸಮುದಾಯ ಹಾಗೂ ಪಕ್ಷದ ಪರಂಪರಾಗತ ಓಟ್​ಬ್ಯಾಂಕ್ ವೀರಶೈವ-ಲಿಂಗಾಯತರು, ಪಕ್ಷದ ವಿರುದ್ಧ ಸಿಡಿದೇಳೋ ಭೀತಿ ಇದೆ ಎಂದು ವರಿಷ್ಟರೆದುರು ಅರುಣ್ ಸಿಂಗ್ ತಮ್ಮ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ಬಿಎಸ್​ವೈ ಪದಚ್ಯುತಿ ಮಾಡೋ ರಿಸ್ಕ್ ತೆಗದುಕೊಳ್ಳೋದು ಬೇಡ ಎಂಬ ತೀರ್ಮಾನಕ್ಕೆ ಹೈಕಮಾಂಡ್​ ಬಂದಿದೆ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಮೂರು ದಿನಗಳ ಹಿಂದೆ ಬಿಎಸ್ವೈ ದೆಹಲಿಗೆ ತೆರಳಿದಾಗ, ಪಕ್ಷದ ವರಿಷ್ಠರು, ಸಿಎಂ ಬೆನ್ನುತಟ್ಟಿದ್ದಾರೆ. ಈ ಅವಧಿಪೂರ್ಣ ನೀವೇ ಸಿಎಂ..ಡೋಂಟ್ ವರಿ..ನಿಮ್ಮ ಕೆಲಸ ಮಾಡಿಕೊಂಡು ಹೋಗಿ..ಒಳ್ಳೆಯ ಕೆಲಸ ಮಾಡುವ ಮೂಲಕ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತನ್ನಿ.. ಲೋಕಸಭಾ ಚುನಾವಣೆಯಲ್ಲೂ ಪಕ್ಷಕಕೆ ಎಹಚ್ಚಿನ ಸೀಟ್ ಗೆಲ್ಲಿಸಿಕೊಡಿ ಎಂದು ಬಿಎಸ್​ವೈಗೆ ಪಕ್ಷದ ನಾಯಕರು ಹುಕುಂ ಮಾಡಿದ್ದಾರೆ.
ಇನ್ನೇನು ನಾಯಕತ್ವ ಗೊಂದಲ ಬಗೆಹರಿದೇಬಿಟ್ಟಿತು ಎಂದುಕೊಳ್ಳೋವಷ್ಟರಲ್ಲಿ ಹೊಸ ರಾಡಿ ಎಬ್ಬಿಸಿದೆ ಈ ಹೊಸ ಆಡಿಯೋ. ಇಲ್ಲಿ ಆಡಿಯೋ ಅಸಲಿಯೋ..ನಕಲಿಯೋ ಅನ್ನೋದಕ್ಕಿಂತ ರಿಲೀಸ್ ಆದ ಈ ಟೈಮಿಂಗ್​ ಪ್ರಾಮುಖ್ಯತೆ ಪಡೆದಿದೆ. ಜುಲೈ 26ಕ್ಕೆ ಸರ್ಕಾರಕ್ಕೆ 2 ವರ್ಷ ಹಿನ್ನೆಲೆ ಸಿಎಂ ಬಿಎಸ್ವೈ ಶಾಸಕರ ಔತಣಕೂಟ ಕರೆದಿದ್ದಾರೆ. ಇದಕ್ಕೂ ಮುನ್ನವೇ ಆ ಸಮಯದಲ್ಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂಬ ಗುಲ್ಲೆಬ್ಬಿಸೋ ತಂತ್ರಗಾರಿಕೆ ಹೆಣೆಯಲಾಗಿದೆ. ಬಿಎಸ್​ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡ ಕೆಲವರು, ಈ ಆಡಿಯೋ ಹಿಂದೆ ಇರಬಹುದು ಎಂಬ ಗುಮಾನಿ ಎದ್ದಿದೆ.
ಇಲ್ಲಿ ನಾಯಕತ್ವ ಬದಲಾವಣೆ ಬಗೆಗಿನ ಆಡಿಯೋ ರಿಲೀಸ್ ಮೂಲಕ ಬಿಎಸ್​ವೈ ವೇಗಕ್ಕೆ ಕಡಿವಾಣ ಹಾಕೋ ವ್ಯೂಹ ರೂಪಿಸಲಾಗಿದೆ. ದೆಹಲಿಯಿಂದ ಬಂದ ನಂತರ ತಮ್ಮನ್ನ ಟಚ್ ಮಾಡೋಕೆ ಸಾಧ್ಯವಿಲ್ಲ ಅನ್ನೋ ಓವರ್ ಕಾನ್ಫಿಡೆನ್ಸ್​ ಕುಗ್ಗಿಸೋ ಐಡಿಯಾ ಕೂಡ ಆಡಿಯೋ ಬಿಡುಗಡೆ ಹಿಂದಿನ ಸಂಚಿರಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ. ಅಲ್ಲದೆ, ಆಡಿಯೋ ಟೇಪ್ ಹರಿಬಿಟ್ಟು ಜನ ಹಾಗೂ ಶಾಸಕರ ನಾಡಿ ಮಿಡಿತ ಅರಿಯೋ ಗೇಮ್​​ಪ್ಲಾನ್ ರೂಪಿಸಿದಂತಿದೆ. ಈ ಮುಖಾಂತರ ಸಿಎಂಗೆ ಬಿಎಸ್​ವೈಗೆ ಖೆಡ್ಡಾ ತೋಡೋ ವ್ಯೂಹ ಹೆಣೆಯಲಾಗಿದ್ಯಾ ಎಂಬ ಪ್ರಶ್ನೆ ಕೂಡ ಎದ್ದಿದೆ.
ಇದಲ್ಲದೆ, ಹೇಳಿಕೇಳಿ ನಳಿನ್ ಕುಮಾರ್ ಕಟೀಲ್​, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್​ಗೆ ಆಪ್ತ. ಹೀಗಾಗಿ ದೆಹಲಿ ಮಟ್ಟದ ನಾಯಕರ ಡಿಸಿಷನ್​ಗಳ ಬಗ್ಗೆ ಪೂರ್ಣ ಮಾಹಿತಿ ಇರಲಿದೆ. ಹೀಗಾಗಿ ನಳೀನ್ ಕುಮಾರ್ ಕಟೀಲ್​ರೇ ನಾಯಕತ್ವ ಬದ ಲಾವಣೆ ಬಗ್ಗೆ ಬಾಯ್ಬಿಟ್ರೆ, ಬಿಎಸ್​ವೈ ಸರ್ಕಾರದ ಮೇಲೆ ಇದರ ಎಫೆಕ್ಟ್ ಖಂಡಿತಾ ಆಗಲಿದೆ ಎಂಬ ದೂರಾಲೋಚನೆಯಲ್ಲಿ ಈ ಆಡಿಯೋ ಸಂಚು ರೂಪಿಸಿರಬಹುದು ಎಂಬ ಡೌಟ್ ಕೂಡ ಮೂಡಿದೆ. ಇದರ ಬೆನ್ನಲ್ಲೇ ನಾಯಕತ್ವ ಬದಲಾವಣೆ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ದನಿ ಎತ್ತಿದ್ದಾರೆ. ಇದರ ಜತೆಗೆ ಇದೇ 30ರವರೆಗೆ ಕಾದು ನೋಡಿ ಅನ್ನೋ ಮೂಲಕ ಯತ್ನಾಳ್ ಕುತೂಹಲ ತೆರೆದಿಟ್ಟಿದ್ದಾರೆ.
ಇನ್ನು ಯಾವಾಗ ಆಡಿಯೋ ರಿಲೀಸ್ ಆಯ್ತೋ, ಬಿಎಸ್​ವೈ ನಿಷ್ಠರ ಬಣ ಇನ್ನಷ್ಟು ಒಗ್ಗಟ್ಟು ಪ್ರದರ್ಶಿಸಿದೆ. ಕಳೆದ ತಿಂಗಳು ಅರುಣ್ ಸಿಂಗ್ ಬಂದಾಗ ಅಚಲವಾಗಿ ನಿಂತಂತೆ ಈ ಸಲವೂ ಮುಖ್ಯಮಂತ್ರಿಗಳ ಆಪ್ತ ಶಾಸಕರು ಬಿಎಸ್​ವೈಗೆ ಜೈ ಎಂದಿದ್ದಾರೆ. ಇನ್ನ ಸರ್ಕಾರದ ಉಳಿದ ಅವಧಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಅಂತಾ ಸಿಎಂ ನಿಷ್ಟ ಸಚಿವರು ಹಾಗೂ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಎಸ್​ವೈ ಪರ ಅಚಲವಾಗಿ ನಿಂತ ಸಮಾಜ!ಮತ್ತೊಂದೆಡೆ, ಸಿಎಂ ಬಿಎಸ್​ವೈ ಕುರ್ಚಿ ಮೇಲೆ ತೂಗುಗತ್ತಿ ಶುರುವಾಯ್ತು ಅಂತಾ ಅನ್ಕೊಳ್ಳೋ ಸಮಯಕ್ಕೆ ಸಮಾಜ ಕೂಡ ಸಿಎಂ ಪರ ನಿಂತಿದೆ. ಸಿಎಂ ನಿವಾಸಕ್ಕೆ ಆಗಮಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಜತೆ ಚರ್ಚೆ ನಡೆಸಿ ದ್ದಾರೆ. ಇದಲ್ಲದೆ, ಸಿಎಂ ಪರ ವೀರಶೈವ ಮಠಾಧೀಶರು ಕೂಡ ಧಾವಿಸಿಬಂದಿದ್ದಾರೆ. ಇದಲ್ಲದೆ, ಕಾಂಗ್ರೆಸ್​​ ನಾಯಕ ಎಂಬಿ ಪಾಟೀಲ್ ಕೂಡ ಬಿಎಸ್​ವೈ ಪರ ನಿಂತಿದ್ದಾರೆ. ಸಮುದಾಯದ ಮತ ಪಡೆದು, ಈಗ ಸಿಎಂ ಬಿಎಸ್​ವೈ ಪದಚ್ಯುತಿಗೆ ಯತ್ನಿಸಿದ್ರೆ ಸಮುದಾಯದ ಅವಕೃಪೆಗೆ ತುತ್ತಾಗೋದು ನಿಶ್ಚಿತ ಅಂತಾ ಎಂಬಿ ಪಾಟೀಲ್ ಹೇಳಿದ್ದಾರೆ.
ಇನ್ನೊಂದೆಡೆ, ನಳಿನ್ ಕುಮಾರ್ ಕಟೀಲ್​ರದ್ದು ಎಂದು ಹೇಳಲಾದ ಆಡಿಯೋ ಬಗ್ಗೆ ತನಿಖೆ ನಡೆಸುವಂತೆ ದಕ್ಷಿಣ ಐವರು ಬಿಜೆಪಿ ಶಾಸಕರು ಪೊಲೀಸ್ ಕಮೀಷನರ್​ಗೆ ದೂರು ಕೊಟ್ಟಿದ್ದಾರೆ. ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್​, ಉಮಾನಾಥ್ ಕೋಟ್ಯಾನ್, ಸಂಜೀವ ಮಠಂದೂರು, ಹರೀಶ್ ಪೂಂಜಾ ಆಡಿಯೋ ಬಗ್ಗೆ ತನಿಖೆಗೆ ಕೋರಿ ಕಂಪ್ಲೇಂಟ್ ನೀಡಿದ್ದಾರೆ.
ಆಡಿಯೋ ಬಗ್ಗೆ ಕೈ-ಕಮಲ ಟ್ವೀಟ್​ ಫೈಟ್ರಾಜ್ಯದಲ್ಲಿ ಒಂದೆಡೆ ಕಮಲ ಪಾಳೆಯದಲ್ಲಿ ಕೆಸೆರೆರಚಾಟ ಬಿರುಸು ಪಡೆದ್ರೆ, ಇದೀಗ ಇದೇ ಆಡಿಯೋ ಬಿಜೆಪಿ ಹಾಘೂ ಪ್ರತಿಪಕ್ಷಗಳ ನಡು ವಿನ ಜಗಳ್ಬಂದಿಗೆ ಕಾರಣವಾಗಿದೆ. ಯಾವಾಗ ಆಡಿಯೋ ಹೊರಬಿತ್ತೋ.. ಬಹಳ ಹಿಂದೆಯೇ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಯತ್ನ ನಡೆದಿದೆ ಅಂತಾ ಮೊದಲೇ ಹೇಳಿದ್ದೆ. ನೀವಾರೂ ನಂಬಿರಲಿಲ್ಲ. ಈಗ ನೋಡಿ ನಾನ್ ಹೇಳಿದ್ದೇ ನಿಜವಾಗುತ್ತಿದೆ ಎಂಬರ್ಥದಲ್ಲಿ ಸಿದ್ದು ಕುಟುಕಿದ್ದಾರೆ. ಅಲ್ಲದೆ, ಒಂದು ವೇಳೆ ಚುನಾವಣೆ ಬಂದ್ರೆ, ಎದುರಿಸೋಕೆ ಕಾಂಗ್ರೆಸ್ ರೆಡಿ ಅಂತಾ ಸಿದ್ದರಾಮಯ್ಯ ತೊಡೆತಟ್ಟಿದ್ದಾರೆ. ಕೈ ಪಡೆ ಕೂಡ ಕಮಲದ ವಿರುದ್ಧ ವಾಗ್ದಾಳಿ ನಡೆಸಿದೆ.
ಇನ್ನ, ಬಿಜೆಪಿಯಲ್ಲಿ ಸದ್ಯದ ಸಮಸ್ಯೆಯನ್ನ 4 ಗೋಟೆಗಳ ನಡುವೆ ಕೂತು ಬಗೆಹರಿಸಿಕೊಳ್ಳದಿದ್ರೆ ಅಭಿವೃದ್ಧಿಯತ್ತ ಗಮನ ಹರಿಸೋಕೆ ಅಸಾಧ್ಯ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ, ಆಡಿಯೋ ರಿಲೀಸ್ ಅನ್ನೋದು..ಕೋರ್ಟ್​ನಲ್ಲಿ ಸ್ಟೇ ತರೋ ಸಂಗತಿಗಳು ಈಗ ಸಾಮಾನ್ಯವಾಗಿಬಿಟ್ಟಿದೆ ಎಂಬುದು ಎಚ್​ಡಿಕೆ ಅಭಿಮತ.
ಮತ್ತೊಂದೆಡೆ, ಆಡಿಯೋ ಬಗ್ಗೆ ಬಿಜೆಪಿ- ಕಾಂಗ್ರೆಸ್ ಮಧ್ಯೆ ಟ್ವೀಟ್ ವಾರ್ ಶುರುವಾಗಿದೆ. ಸಿಎಂ ಯಡಿಯೂರಪ್ಪಗೆ ದ್ರೋಹ ಎಸಗೋ ಯತ್ನ ನಡೆದಿದೆ. ನಾಯಕತ್ವ ಬದಲಾವಣೆಗೆ ಸಂಚು ರೂಪಿಸಿರೋದು ಆಡಿಯೋದಿಂದ ಬಯಲಾಗಿದ ಎಂದು ಕಾಂಗ್ರೆಸ್ ಟವೀಟ್ ಮೂಲಕ ಚುಚ್ಚಿದೆ. ಇದಲ್ಲದೆ, ಮೀರ್ ಸಾಧಿಕ್ ಕಟೀಲ್ ಹಿಂದೆ ಇರೋರು ಅಸಂತೋಷಗೊಂಡ ವ್ಯಕ್ತಿ ಎಂದು ಟ್ವೀಟ್​ನಲ್ಲೇ ಕಾಂಗ್ರೆಸ್ ತಿವಿದಿದೆ.
ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಕಾಂಗ್ರೆಸ್​ಗೆ ಟ್ವೀಟ್​​ ಮೂಲಕವೇ ತಿರುಗೇಟು ಕೊಟ್ಟಿದೆ. ಕಟೀಲ್ ಹೆಸರಿನಲ್ಲಿ ಸೃಷ್ಟಿಸಲಾದ ಆಡಿಯೋ ಹಿಂದಿರೋ ಹಸ್ತ ಮಹಾನಾಯಕನದ್ದೋ ಅಥವಾ ಮೀರ್ ಸಾಧಿಕ್ ನದ್ದೋ ಅಂತಾ ಕಮಲ ಪಡೆ ಟ್ವೀಟ್ ಮೂಲಕವೇ ಪ್ರತ್ಯುತ್ತರ ಕೊಟ್ಟಿದೆ. ಇದಲ್ಲದೆ, ಮಹಾನಾಯಕನ ಪ್ರಭಾವ ಕಮ್ಮಿ ಮಾಡೋಕೆ ದಿಲ್ಲಿ ಮಹಾನಾಯಕಿ ಮೆಚ್ಚಿಸೋಕೆ ಈ ಮೀರ್ ಸಾದಿಕ್ ಆಡಿಯೋ ತಂತ್ರ ರೂಪಿಸಿದ್ದಾರಾ ಎಂದು ಬಿಜೆಪಿ ಪ್ರಶ್ನಿಸಿದೆ.
ಒಟ್ಟಾರೆ, ಆಡಿಯೋ ಅಸಲಿಯೋ..ನಕಲಿಯೋ..ಇಲ್ಲಿ ಮೇಲ್ನೋಟಕ್ಕೆ ತಿಳಿದುಬರೋ ಅಂಶ ಎಂದ್ರೆ, ಸಿಎಂ ವಿರೋಧಿಗಳು ಒಂದೇ ಕಲ್ಲಿಗೆ ಬಿಎಸ್​ವೈ ಜತೆಜತೆಗೇ ಇವರ ನಂತರದ ಸೀನಿಯಾರಿಟಿ ಹೊಂದಿದ ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪರನ್ನ ಹೊಡೆದು ರುಳಿಸೋ ಸಂಚು ರೂಪಿಸಿರೋದು ಫಿಕ್ಸ್.! ಇದಾದ್ರೆ, ಪಕ್ಷದಲ್ಲಿ ಮುಂಧಿನ ಹಾದಿ ಸುಲಲಿತ ಎಂಬುದು ಈ ಒರಿಜಿನಲ್ ಮೀರ್ ಸಾದಿಕ್​ರ ಲೆಕ್ಕ. ಆದ್ರೆ, ನಿಜಕ್ಕೂ ಎಲ್ಲವನ್ನೂ ಅಳೆದೂ ತೂಗೋ ಮತದಾರರ ಲೆಕ್ಕ ಅರಿಯೋಕೆ ಹೋದ್ರೆ ಕಾಣಸಿಗೋದು ಬೇರೆಯದ್ದೇ ಲೆಕ್ಕಾಚಾರ. ಬಿಎಸ್​ವೈ ದೈತ್ಯಶಕ್ತಿ ಏನೆಂಬುದನ್ನ ಎಣಿಕೆ ಮಾಡೋಕೆ ಇಂತಹ ಸಂಚುಕೋರರಿಗಂತೂ ಸಾಧ್ಯವಿಲ್ಲ…ಬಿಡಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
