ಬೆಂಗಳೂರು:ಪಕ್ಷ ಮೂಲದ ಮೂವರು ಮತ್ತು ಇಬ್ಬರು ವಲಸಿಗರನ್ನು ಸೇರಿಸಿಕೊಂಡು ಸಂಪುಟ ವಿಸ್ತರಿಸುವ ಪ್ರಸ್ತಾಪ ಮಂಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ವರಿಷ್ಠರ ಒಪ್ಪಿಗೆ ಕೇಳಿದ್ದಾರೆ. ಶನಿವಾರ ಸಂಜೆಯೊಳಗೆ ವರಿಷ್ಠರ ತೀರ್ಮಾನ ಹೊರಬೀಳಲಿದ್ದು, ಭಾನು ವಾರ ಅಥವಾ ಸೋಮವಾರ ಬೆಳಗ್ಗೆ ಸಂಪುಟ ವಿಸ್ತರಣೆ ಸಾಧ್ಯತೆ ಹೆಚ್ಚಿದೆ.
ಸಚಿವರಾಗಿಯೇ ಈ ಅಧಿವೇಶನಕ್ಕೆ ಕಾಲಿಡಬೇಕೆಂಬ ಸರ್ಕಾರ ರಚನೆಯ ಪಾತ್ರಧಾರಿಗಳ ಒತ್ತಡ, ಸಚಿವ ಸ್ಥಾನ ನೀಡದಿದ್ದರೆ ಏನೂ ಬೇಕಾದರೂ ಆಗಬಹುದೆಂಬ ಪಕ್ಷ ಮೂಲದ ಆಕಾಂಕ್ಷಿಗಳ ಬೆದರಿಕೆಯ ನಡುವೆಯೇ ಯಡಿಯೂರಪ್ಪ ‘ಪಂಚ ಸೂತ್ರ’ದ ಪ್ರಸ್ತಾಪವನ್ನು ಮಂಡಿಸುವ ಮೂಲಕ ತಮ್ಮ ಮೇಲಿದ್ದ ಭಾರವನ್ನು ವರಿಷ್ಠರ ಅಂಗಳಕ್ಕೆ ವರ್ಗಾಯಿಸಿದ್ದಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಸಚಿವರನ್ನು ಭೇಟಿಯಾಗುವುದಕ್ಕಾಗಿ ದೆಹಲಿಗೆ ತೆರಳಿದ್ದರೂ, ಸಂಪುಟ ವಿಚಾರವನ್ನೇ ಮುಂದೆ ಮಾಡಿದ ಸಿಎಂ, ‘ಭಾರ ಇಳಿಸಿಕೊಂಡ’ ಸಮಾಧಾನದೊಂದಿಗೆ ಶನಿವಾರ ಬೆಂಗಳೂರಿಗೆ ಮರಳುತ್ತಿದ್ದಾರೆ. ಬಿಎಸ್​ವೈ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಬಳಿ ಸಂಪುಟದ ಬಗ್ಗೆ ತುರ್ತು ತೀರ್ಮಾನ ಕೈಗೊಳ್ಳುವ ಅನಿವಾರ್ಯತೆ ಪ್ರತಿಪಾದಿಸಿದ್ದಾರೆ.
ಬಿಎಸ್​ವೈ ಅವರು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಬಳಿ ಸಂಪುಟದ ಬಗ್ಗೆ ತುರ್ತು ತೀರ್ಮಾನ ಕೈಗೊಳ್ಳುವ ಅನಿವಾರ್ಯತೆ ಪ್ರತಿಪಾದಿಸಿದ್ದಾರೆ. ಆದರೆ, ಮೂವರೂ ಸಹ ಯಾವುದೇ ಸ್ಪಷ್ಟ ನಿಲುವು ಹೊರಹಾಕಿಲ್ಲ. ಪ್ರತ್ಯೇಕವಾಗಿ ರ್ಚಚಿಸಿ ತೀರ್ವನಿಸುವುದಾಗಿಯಷ್ಟೇ ಹೇಳಿದ್ದಾರೆ. ಹೀಗಾಗಿ ಇನ್ನೆರಡು ದಿನಗಳೊಳಗೆ ವರಿಷ್ಠರಿಂದ ಸಂದೇಶ ಸಿಗುವ ನಿರೀಕ್ಷೆಯಲ್ಲಿ ಸಿಎಂ ಇದ್ದಾರೆ.
ಸಣ್ಣ ಸರ್ಜರಿಗೆ ಒಲವು
ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬುವ ಜತೆಗೆ ಕೆಲವೊಂದಿಷ್ಟು ಬದಲಾವಣೆ ಮಾಡಿಕೊಂಡು ಸಣ್ಣ ಮಟ್ಟಿನ ಪುನಾರಚನೆ ಮಾಡಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ. ಆದರೆ, ಈ ಬಗ್ಗೆ ವರಿಷ್ಠರದಲ್ಲಿ ಇನ್ನೂ ಸ್ಪಷ್ಟತೆ ಮೂಡದ ಕಾರಣ, ರಾಜ್ಯ ನಾಯಕತ್ವಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಿಲ್ಲ ಎನ್ನಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿ ಅಭಿಪ್ರಾಯ ತಿಳಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಯಡಿಯೂರಪ್ಪನವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ ಯಡಿಯೂರಪ್ಪ, ಪುನಾರಚನೆ ಬದಲಿಗೆ ವಿಸ್ತರಣೆಯಷ್ಟೇ ಸಾಕು. ಮುಂದೆ ಬೇಕಿದ್ದರೆ ಪುನಾರಚನೆ ಮಾಡೋಣ ಎಂಬ ನಿಲುವು ಹೊರಹಾಕಿದ್ದಾರೆ. ಆದರೆ, ರಾಜ್ಯದ ವಿವಿಧ ನಾಯಕರಿಂದ ಈಗಾಗಲೇ ಮಾಹಿತಿ ತರಿಸಿಕೊಂಡಿರುವ ನಡ್ಡಾ, ಪುನಾರಚನೆಗೆ ಒಲವು ತೋರಿದ್ದಾರೆಂದೂ ಹೇಳಲಾಗುತ್ತಿದೆ.
ಆರ್. ಶಂಕರ್, ಎಂಟಿಬಿ ನಾಗರಾಜ್, ಸಿಪಿ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಉಳಿದವರಲ್ಲಿ ಯಾರನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಡ್ಡಾ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಜತೆಗೆ ರ್ಚಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಧಿವೇಶನ ಬಳಿಕ?
ವಿಧಾನಸಭೆ ಅಧಿವೇಶನಕ್ಕೆ ಮುನ್ನ ಸಂಪುಟ ಪುನರಚನೆಯಾದಲ್ಲಿ ಅಧಿವೇಶನದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ, ಅಕ್ಟೋಬರ್ ಮೊದಲ ವಾರದಲ್ಲಿ ಪುನಾರಚನೆ ಆಗಬಹುದೆನ್ನಲಾಗಿದೆ.
ಪಿಎಂ ಜತೆ ರ್ಚಚಿಸಿ ತೀರ್ವನ:
ನಡ್ಡಾ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇನೆ. ಅವರ ಮನಸ್ಸಲ್ಲೂ ಒಂದಿಷ್ಟು ಅಭಿಪ್ರಾಯಗಳಿವೆ. ಪ್ರಧಾನಿ ಮೋದಿ ಜತೆ ಮಾತನಾಡಿ ಅಂತಿಮ ತೀರ್ಮಾನ ತಿಳಿಸಸುವಾಗಿ ನಡ್ಡಾ ಹೇಳಿದ್ದಾರೆ ಎಂದರು.
ತೀರ್ಮಾನಕ್ಕೆ ಕತ್ತಿ, ಸಿಪಿವೈ ಅಡ್ಡಿ
ಸಿ.ಪಿ. ಯೋಗೇಶ್ವರ್ ಮತ್ತು ಉಮೇಶ್ ಕತ್ತಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒಮ್ಮತ ಮೂಡುತ್ತಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಕತ್ತಿಯನ್ನು ಸಂಪುಟಕ್ಕೆ ಸೇರಿಸಲು ಹೈಕಮಾಂಡ್​ಗೆ ಒಲವಿಲ್ಲ, ಅದೇ ರೀತಿ ಸಿಪಿವೈಗೆ ಮಣೆ ಹಾಕಲು ಬಿಎಸ್​ವೈಗೆ ಮನಸ್ಸಿಲ್ಲ ಎನ್ನಲಾಗಿದೆ. ಇವರಿಬ್ಬರ ವಿಚಾರದಿಂದಲೇ ತೀರ್ಮಾನ ಅಂತಿಮಗೊಳ್ಳುವುದು ತಡವಾಗುತ್ತಿದೆ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಸಿಎಂ ತರಾತುರಿ
ಪಕ್ಷದ ವರಿಷ್ಠರು ಒಂದೊಮ್ಮೆ ತಮ್ಮ ಸೂತ್ರ ಒಪ್ಪಿದರೆ ಸೋಮವಾರದೊಳಗೆ ಸಂಪುಟ ವಿಸ್ತರಣೆ ಮುಗಿಸಬೇಕೆಂಬ ತರಾತುರಿಯಲ್ಲಿ ಸಿಎಂ ಇದ್ದಾರೆ. ಕೊಟ್ಟ ಮಾತು ತಪ್ಪಬಾರದು ಎಂಬುದು ಬಿಎಸ್​ವೈ ನಿಲುವು. ಉಳಿದ ಆಕಾಂಕ್ಷಿಗಳಿಗೆ ಮುಂದೆ ಅವಕಾಶ ಕೊಡಬಹುದು, ನಮ್ಮ ಸರ್ಕಾರ ರಚನೆಗಾಗಿ ತ್ಯಾಗ ಮಾಡಿದವರಿಗೆ ಮೊದಲು ಅವಕಾಶ ನೀಡಿ ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂಬುದು ಅವರ ಆಶಯ ಎನ್ನಲಾಗಿದೆ.
5 ಸ್ಥಾನ ತುಂಬಲು ಸಲಹೆ
ಸಂಪುಟದಲ್ಲಿ ಖಾಲಿ ಇರುವ 6 ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ತುಂಬುವ ಬಗ್ಗೆ ಯಡಿಯೂರಪ್ಪ ಹೈಕಮಾಂಡ್​ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಒಂದು ಸ್ಥಾನ ಖಾಲಿ ಇಟ್ಟುಕೊಳ್ಳುವುದು ಅವರ ಉದ್ದೇಶವಾಗಿದೆ. ಆದರೆ ಹೈಕಮಾಂಡ್ ಯಾವ ನಿಲುವು ವ್ಯಕ್ತಪಡಿಸಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.
ನಾಯಕತ್ವ ಬದಲಾವಣೆ ದೂರದ ಮಾತು
ನವದೆಹಲಿ:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಪಕ್ಷದ ವಲಯದಲ್ಲೇ ವದಂತಿಗಳೆದ್ದಿರುವ ಸಂದರ್ಭದಲ್ಲಿ ‘ನಾಯಕತ್ವ ಬದಲಾವಣೆ ದೂರದ ಮಾತು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಯಿಂದ ಖಡಕ್ ಸಂದೇಶ ರವಾನಿಸಿದ್ದಾರೆ.
‘ಯಾರೋ ಕೆಲವರು ನಾಯಕತ್ವ ಬದಲಾವಣೆ ಅನ್ನಬೇಕು ಎನ್ನುತ್ತಾರೆ. ವಾಸ್ತವದಲ್ಲಿ ಅದೆಲ್ಲ ಏನಿಲ್ಲ. ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಅನ್ನುವ ಭರವಸೆಯನ್ನು ವರಿಷ್ಠರಿಗೆ ನೀಡಿದ್ದೇನೆ’ ಎಂದು ಯಡಿಯೂರಪ್ಪ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಬಿಎಸ್​ವೈ ಮುಖ್ಯಮಂತ್ರಿಯಾದ ಬಳಿಕ ಕೆಲವು ಕಾರಣಗಳಿಂದಾಗಿ ದೆಹಲಿ ನಾಯಕರ ನಡುವೆ ಸಂಬಂಧ ಹದಗೆಟ್ಟಿದೆ ಎಂದು ಭಾವನೆ ಇತ್ತು.
ಆದರೆ, ಗುರುವಾರ ಮತ್ತು ಶುಕ್ರವಾರದ ಭೇಟಿ ಬಿಎಸ್​ವೈ ಪಾಲಿಗಂತೂ ಫಲಕೊಟ್ಟಿದೆ. ವರಿಷ್ಠರ ಒಲವು ಮತ್ತು ಸಿಎಂ ನಿಲುವು ಈ ಭೇಟಿಯಿಂದ ಸ್ಪಷ್ಟವಾಗಿದೆ. ಬಿಎಸ್​ವೈ ನಾಗಾಲೋಟಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ ಎಂದು ವರಿಷ್ಠರು ಸ್ಪಷ್ಟಮಾಡಿದ್ದಾರೆ.
ಪ್ರಧಾನಿ ಮತ್ತು ಸಚಿವರ ಭೇಟಿ ನಿರೀಕ್ಷೆಗೆ ಮೀರಿ ಫಲಕೊಟ್ಟಿದೆ ಎಂದು ಯಡಿಯೂರಪ್ಪ ಮಂದಹಾಸದಲ್ಲಿ ಪ್ರತಿಕ್ರಿಯೆ ನೀಡಿದ್ದು, ಶನಿವಾರವೇ ಸಂಪುಟ ಕುರಿತ ವರಿಷ್ಠರ ತೀರ್ಮಾನ ಹೊರಬೀಳುವ ನಿರೀಕ್ಷೆಯಲ್ಲೇ ಇದ್ದಾರೆ. ಒಂದೊಮ್ಮೆ ಬಿಎಸ್​ವೈ ಸೂತ್ರ ಒಪ್ಪಿತವಾದರೆ ತಕ್ಷಣವೇ ಸಂಪುಟ ವಿಸ್ತರಣೆಯಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eight =
Remember me
