|ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಇಂದು ಶ್ರೀ ಬಸವೇಶ್ವರ ಜಯಂತಿ. ಬಸವಣ್ಣನೆಂದರೆ ಕನ್ನಡ ಕುಲಕೋಟಿಯನ್ನು ಕಳೆದ 800 ವರ್ಷಗಳಿಂದಲೂ ಮುನ್ನಡೆಸುತ್ತಿರುವ ಒಂದು ಮಹಾಚೈತನ್ಯ. ಮುಖ್ಯವಾಗಿ ಇಂದಿನ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗಗಳು ಅವರ ಕರ್ಮಭೂಮಿಯಾಗಿದ್ದವು. ಇದರ ಜೊತೆಗೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕೂಡ ಬಸವಣ್ಣನವರ ಪ್ರಭಾವ ದಟ್ಟವಾಗಿದ್ದು, ಈ ರಾಜ್ಯಗಳಲ್ಲಿ ಕೂಡ ಅವರ ಅನುಯಾಯಿಗಳು ಇಂದಿಗೂ ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಬಸವಣ್ಣನವರು ಬದುಕಿದ್ದು 60 ವರ್ಷಗಳ ಕಾಲವಷ್ಟೆ. ಆದರೆ ಅವರು ಮಾಡಿರುವ ಸಾಧನೆಗಳು ಮತ್ತು ಈ ಸಮಾಜವನ್ನು ಮೇಲೆತ್ತಲು ಅವರು ನೀಡಿದ ಪರಿಕಲ್ಪನೆಗಳು ಎಂಟು ಶತಮಾನಗಳ ನಂತರವೂ ಪ್ರೇರಣಾದಾಯಿಯಾಗಿವೆ. ಇದಕ್ಕಾಗಿ ನಾವು ಆ ಪೂಜ್ಯರಿಗೆ ಕೃತಜ್ಞರಾಗಿರಬೇಕು. ಜೊತೆಗೆ, ನಾವು ಎಂತಹ ಒಂದು ಭವ್ಯ ಪರಂಪರೆಯ ವಾರಸುದಾರರು ಎನ್ನುವುದನ್ನು ನೆನೆದು ರೋಮಾಂಚಿತರಾಗಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ ಬಡವ-ಬಲ್ಲಿದ, ಬ್ರಾಹ್ಮಣ-ಶೂದ್ರ, ಪುರುಷ-ಮಹಿಳೆ ಹೀಗೆ ಎಲ್ಲರಿಗೂ ಅವರ ಬೋಧನೆಗಳು ಆದರ್ಶಪ್ರಾಯವಾಗಿವೆ. ಅವರು ತೋರಿದ ಆ ದಿವ್ಯವಾದ ಬೆಳಕಿನಲ್ಲಿ ಕರ್ನಾಟಕವು ಮುನ್ನಡೆದುಕೊಂಡು ಹೋಗುತ್ತಿದೆ.
ಬಸವಣ್ಣನವರು ಮುಖ್ಯವಾಗಿ ಬೋಧಿಸಿದ ತತ್ತ್ವಗಳು- ಪ್ರಜಾಪ್ರಭುತ್ವ, ಸಮಾನತೆ, ಕಾಯಕ ಸಂಸ್ಕೃತಿ, ಜಾತೀಯತೆಯ ನಿವಾರಣೆ ಮತ್ತು ಅಸ್ಪೃ್ಯತೆಯ ಕಳಂಕವಿಲ್ಲದ ಸಮಾಜ. ಬಸವಣ್ಣನವರು ಕನ್ನಡ ನಾಡಿನಲ್ಲಿ ಆವಿರ್ಭವಿಸಿದ್ದು ಭಾರತದ ಉದ್ದಗಲಕ್ಕೂ ಭಕ್ತಿ ಚಳವಳಿಯು ಉತ್ತುಂಗದಲ್ಲಿದ್ದ ಕಾಲದಲ್ಲಿ. ಹೀಗಾಗಿ ಸಹಜವಾಗಿಯೇ ಅವರೂ ಸಹ ಅಂತರಂಗ-ಬಹಿರಂಗಗಳ ಶುದ್ಧಿ ಮತ್ತು ಸಾಮಾಜಿಕ ಸುಧಾರಣೆಗೆ ಮಿಡಿದರು. ‘ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ..’ ಎನ್ನುವ ಅವರ ವಚನವಾಗಲಿ, ‘ಎನ್ನ ಚಿತ್ತವ ಅತ್ತಿಯ ಹಣ್ಣು ನೋಡಯ್ಯ, ವಿಚಾರಿಸಿದರೆ ಏನೂ ಹುರುಳಿಲ್ಲವಯ್ಯ’ ಎನ್ನುವ ವಚನವಾಗಲಿ, ‘ನುಡಿದರೆ ಮುತ್ತಿನ ಹಾರದಂತಿರಬೇಕು.. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’ ಎನ್ನುವ ವಚನವಾಗಲಿ, ಇವೆಲ್ಲವೂ ಅವರಲ್ಲಿ ತೀವ್ರವಾಗಿದ್ದ ಆತ್ಮಾವಲೋಕನ ಮತ್ತು ಅದರಿಂದ ಬರುವ ವಿನಯದ ಸಂಕೇತಗಳಾಗಿವೆ.
ಮುಖ್ಯವಾಗಿ, ಕಳೆದ ಎಂಟು ಶತಮಾನಗಳಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ಮತ್ತು ಸಾವಿರ ವರ್ಷಗಳ ಪರಾಕ್ರಮಣಗಳಿಗೆ ಈಡಾಗಿದ್ದ ಭಾರತದ ಸಂಸ್ಕೃತಿ, ಪರಂಪರೆ, ಧರ್ಮ ಮತ್ತು ನಾಗರಿಕತೆಗಳು ಅವಿಚ್ಛಿನ್ನವಾಗಿ ಉಳಿದುಕೊಂಡಿವೆ. ಇದರ ಹಿಂದೆ ಬಸವಣ್ಣನವರಂತಹ ಮಹಾಪುರುಷರು ಈ ನಾಡಿಗೆ ನೀಡಿರುವ ಅಂತಃಸ್ಸತ್ತ್ವದ ಮಹಿಮೆ ಇದೆ. ಏಕೆಂದರೆ, ಹೀಗೆ ಅನ್ಯಾಕ್ರಮಣಗಳಿಗೆ ಸಿಕ್ಕಿ ನಲುಗಿದ ಯಾವೊಂದು ದೇಶವೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ಇನ್ನೊಂದು ಉದಾಹರಣೆ ಜಗತ್ತಿನ ಇತಿಹಾಸದಲ್ಲಿಲ್ಲ.
ಹಲವು ಹೊರಳು ಹಾದಿಗಳಿಗೆ ಸಾಕ್ಷಿಯಾಗುತ್ತ ಬಂದಿರುವ ಭಾರತವು ಕಳೆದ 75 ವರ್ಷಗಳಿಂದ ಆಧುನಿಕ ಮಾದರಿಯ ಪ್ರಜಾಪ್ರಭುತ್ವದಡಿ ಇದೆ. ಸಾಮಾನ್ಯವಾಗಿ ಇದರ ಮೂಲದ ಶ್ರೇಯಸ್ಸನ್ನು ಚರಿತ್ರಕಾರರು ರೋಮನ್ ಸಾಮ್ರಾಜ್ಯಕ್ಕೆ ಕೊಡುತ್ತ ಬಂದಿದ್ದಾರೆ. ಆದರೆ, ನಮ್ಮ ಭಾರತೀಯ ಸಮಾಜದ ವೈಭವದ ಇತಿಹಾಸವನ್ನು ನೋಡಿದರೆ ನಮ್ಮಲ್ಲಿ ವೇದೋಪನಿಷತ್ತುಗಳ ಕಾಲದಿಂದಲೂ ಪ್ರಜಾಪ್ರಭುತ್ವದ ಮಾದರಿಗಳಿದ್ದುದು ಗೊತ್ತಾಗುತ್ತದೆ. ಉದಾಹರಣೆಗೆ ಹೇಳುವುದಾದರೆ, ನಮ್ಮಲ್ಲಿನ ರಾಮರಾಜ್ಯದ ಪರಿಕಲ್ಪನೆಯು ಪ್ರಜಾಸತ್ತೆಯ ಉತ್ಕೃಷ್ಟ ಮಾದರಿಯೇ ಆಗಿದ್ದು, ರಾಮಾಯಣದುದ್ದಕ್ಕೂ ಪ್ರಜಾಪರಿಪಾಲನೆಯ ಆಶಯ ಕಂಡುಬರುತ್ತದೆ. ಆಧುನಿಕ ಭಾರತಕ್ಕೆ ಅತ್ಯುತ್ತಮ ಸಂವಿಧಾನವನ್ನು ಕೊಟ್ಟ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮ್ಮ ಪ್ರಜಾಸತ್ತೆಯ ಮೂಲದ ಶ್ರೇಯಸ್ಸು ಬುದ್ಧನಿಗೆ ಸಲ್ಲಬೇಕು ಎಂದಿದ್ದಾರೆ. ಈ ಪಂಕ್ತಿಗೆ ನಾವು ಸೇರಿಸಲೇಬೇಕಾದ ಇನ್ನೊಂದು ಹೆಸರೆಂದರೆ, ಅದು ಪೂಜ್ಯ ಬಸವೇಶ್ವರರದು! ಏಕೆಂದರೆ, ಅನುಭವ ಮಂಟಪವೆನ್ನುವ ಅವರ ಕಲ್ಪನೆಯು ಪ್ರಜಾಸತ್ತೆಯ ಆಧಾರಸ್ತಂಭಗಳಲ್ಲಿ ಒಂದಾಗಿದೆ.
ಬಸವಣ್ಣನವರು ಸಮಸಮಾಜದ ಕನಸು ಕಂಡು, ಅದನ್ನು ನನಸು ಮಾಡಲು ಶ್ರಮಿಸಿದ ಚೈತನ್ಯಪುರುಷರಾಗಿದ್ದರು. ಈಗ ಬಿಜೆಪಿಯು ದೇಶಕ್ಕೆ ನೀಡಿರುವ ಹೊಸ ಮಂತ್ರವಾದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಕೂಡ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧಿಸುವ ಹೆಗ್ಗುರಿ ಹೊಂದಿದೆ. ಹಾಗೆಯೇ, ಬಸವಣ್ಣನವರು ಅಸ್ಪೃ್ಯತೆಯ ನಿವಾರಣೆಗೆ ಮತ್ತು ಅವರ ಸಬಲೀಕರಣಕ್ಕೆ ಶ್ರಮಿಸಿದರು. ಇದಕ್ಕೆ ತಕ್ಕಂತೆ ಬಿಜೆಪಿಯು ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಸಾಮಾಜಿಕ ನ್ಯಾಯವು ನೈಜ ರೀತಿಯಲ್ಲಿ ತಲುಪಬೇಕು ಎನ್ನುವ ಕಳಕಳಿಯಿಂದ ಇದುವರೆಗೆ ಇದ್ದ ಮೀಸಲಾತಿಯನ್ನು ಶೇಕಡ 17ಕ್ಕೆ ಹೆಚ್ಚಿಸಿದೆ. ಇಷ್ಟೇ ಅಲ್ಲ, ಪರಿಶಿಷ್ಟ ಸಮುದಾಯಗಳಲ್ಲೂ ನಿಜವಾದ ದಲಿತ ಬಂಧುಗಳಿಗೆ ಮೀಸಲಾತಿಯ ಫಲಗಳು ಸಿಗಬೇಕೆಂಬ ಮಹದಾಸೆಯಿಂದ ಒಳಮೀಸಲಾತಿಯನ್ನು ಜಾರಿಗೆ ತಂದಿದೆ. ಇದರ ಫಲವಾಗಿ ಪರಿಶಿಷ್ಟ ಸಮುದಾಯಗಳಲ್ಲೇ ಅತ್ಯಂತ ದೈನ್ಯಾವಸ್ಥೆಯಲ್ಲಿರುವ ಎಡಗೈ ಸಮುದಾಯವೂ ಸೇರಿದಂತೆ ಸಮಸ್ತ ದಲಿತ ಸೋದರ-ಸೋದರಿಯರಿಗೆ ಪ್ರಯೋಜನವಾಗಲಿದ್ದು, ಸಮಾಜದಲ್ಲಿರುವ ತಾರತಮ್ಯ ನಿವಾರಣೆಯಾಗಲಿದೆ. ಅಂತಿಮವಾಗಿ, ಪರಿಶಿಷ್ಟ ಸಮುದಾಯಗಳ ಬಂಧುಗಳು ಸಮಾಜದ ಮುಖ್ಯವಾಹಿನಿಗೆ ಬಂದು, ಎಲ್ಲರಂತೆಯೇ ಘನತೆಯುಕ್ತ ಬದುಕನ್ನು ನಡೆಸಲು ಇದು ಅನುವು ಮಾಡಿಕೊಡಲಿದೆ.
ಇನ್ನು ಕಾಯಕ ಸಂಸ್ಕೃತಿಯ ವಿಚಾರಕ್ಕೆ ಬಂದರೆ, ಬಿಜೆಪಿಯು ಕೌಶಲಾಭಿವೃದ್ಧಿಗೆ ಒತ್ತು ಕೊಡುವ ಮೂಲಕ ಬಸವಣ್ಣನವರ ತತ್ತ್ವ ಪ್ರತಿಪಾದನೆಯನ್ನು ಗೌರವಿಸಿ, ಅನುಷ್ಠಾನಕ್ಕೆ ತಂದಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇದಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದೆ. ಹಾಗೆಯೇ ರಾಜ್ಯ ಕೂಡ ಕೌಶಲಾಭಿವೃದ್ಧಿಯನ್ನು ಆಧುನಿಕ ಉದ್ಯೋಗ ಜಗತ್ತಿನ ಅಗತ್ಯವೆಂದು ಪರಿಗಣಿಸಿದ್ದು, ಈ ವರ್ಷವೊಂದರಲ್ಲೇ 20 ಲಕ್ಷ ಯುವಜನರಿಗೆ ಉಚಿತವಾಗಿ ಕೌಶಲ ತರಬೇತಿ ನೀಡಿ, ಅವರನ್ನೆಲ್ಲ ಅವರ ಕನಸಿನ ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಸರ್ವರಿಗೂ ಉದ್ಯೋಗ ಮತ್ತು ಪ್ರತ್ಯೇಕ ಯುವನೀತಿಯನ್ನು ಕೂಡ ಬಸವರಾಜ ಬೊಮ್ಮಾಯಿ ಸರ್ಕಾರ ರೂಪಿಸಿದೆ. ಹಾಗೆಯೇ, ಕರ್ನಾಟಕದಾದ್ಯಂತ ವಿವೇಕಾನಂದರ ಹೆಸರಿನಲ್ಲಿ ಯುವಜನ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲು ತೀರ್ವನಿಸಿದ್ದು, ಇವುಗಳಿಗೆ ಮೂಲನಿಧಿಯನ್ನೂ ಸರ್ಕಾರವೇ ಒದಗಿಸುತ್ತಿದೆ. ಇನ್ನೊಂದೆಡೆ, ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಮಹಿಳಾ ಸ್ವಸಹಾಯ ಸಂಘಗಳಿಗೆ ಅಮೇಜಾನ್, ಫ್ಲಿಪ್​ಕಾರ್ಟ್ ತರಹದ ಜಾಗತಿಕ ಮಟ್ಟದ ಕಂಪನಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಅನುಕೂಲಗಳನ್ನು ಒದಗಿಸಲಾಗಿದೆ. ಇದರ ಮೂಲಕ 75,000 ಕೋಟಿ ರೂ. ಮೌಲ್ಯದ ಮಾರುಕಟ್ಟೆಯನ್ನು ಸೃಷ್ಟಿಸಲಾಗುತ್ತಿದೆ. ಇವೆಲ್ಲವೂ ಮೊದಲು ಭಂಡಾರಿ (ಹಣಕಾಸು ಮಂತ್ರಿ) ಆಗಿದ್ದು, ನಂತರ ಭಕ್ತಿಭಂಡಾರಿ ಆದ ಬಸವಣ್ಣನವರ ಹಾದಿಯ ಪಯಣಗಳೇ ಆಗಿವೆ.
ಅಸ್ಪೃ್ಯತೆಯು ನಮ್ಮ ಸಮಾಜವನ್ನು ಕಾಡುತ್ತಿರುವ ಒಂದು ಕಳಂಕ. ಬಸವಣ್ಣನವರು ಕೂಡ ಇದರ ನಿವಾರಣೆಗೆ ಸಂಕಲ್ಪ ಮಾಡಿದ್ದರು. ಹಾಗೆಯೇ ಡಬಲ್ ಎಂಜಿನ್ ಬಿಜೆಪಿ ಸರ್ಕಾರವು ಪರಿಶಿಷ್ಟ ಸಮುದಾಯಗಳ ನೆರವಿಗೆ ಮುದ್ರಾ ಸಾಲ ಯೋಜನೆ, ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳನ್ನು ರೂಪಿಸಿ, ಅವರ ಸಬಲೀಕರಣ ಮತ್ತು ಉದ್ಯಮಶೀಲತೆಯ ಬೆಳವಣಿಗೆಗಳಿಗೆ ನೀರೆರೆಯುತ್ತಿದೆ. ಇವೆಲ್ಲಕ್ಕೆ ಕಳಶವಿಟ್ಟಂತೆ, ಡಾ.ಅಂಬೇಡ್ಕರ್ ಅವರ ಬದುಕಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಪುಣ್ಯಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಕರ್ನಾಟಕದಲ್ಲಿ ಕೂಡ ಅಂಬೇಡ್ಕರರು ಭೇಟಿ ನೀಡಿದ್ದ 10 ಸ್ಥಳಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ.
ಬಸವಣ್ಣನವರು ಹೇಗೆ ಪರಿಪೂರ್ಣ ಪ್ರಗತಿಗೆ ಹಂಬಲಿಸಿದರೋ ಹಾಗೆಯೇ ಬಿಜೆಪಿ ಕೂಡ ರೈತರು, ರೈತರ ಮಕ್ಕಳು, ನೇಕಾರರು, ಮೀನುಗಾರರು, ಟ್ಯಾಕ್ಸಿ ಚಾಲಕರು, ರ್ದಜಿಗಳು, ಅಸಂಘಟಿತ ವಲಯದ ಕಾರ್ವಿುಕರು, ದುರ್ಬಲ ಸಮುದಾಯಗಳು, ಮಹಿಳೆಯರು, ಅತಿಥಿ ಉಪನ್ಯಾಸಕರು, ವಯೋವೃದ್ಧರು, ಉದ್ಯಮಿಗಳು ಹೀಗೆ ಎಲ್ಲ ವರ್ಗಗಳ ಹಿತಾಸಕ್ತಿಗಳನ್ನೂ ಆದ್ಯತೆಗಳಾಗಿ ಪರಿಗಣಿಸಿದೆ. ಇದರಿಂದಾಗಿ ಪ್ರತಿಯೊಂದು ವಲಯದಲ್ಲೂ ಹೊಸತನದ ಸ್ಪರ್ಶ ಕಾಣುತ್ತಿದೆ. ರಾಜ್ಯವು ವಿದೇಶಿ ನೇರ ಹೂಡಿಕೆಯಿಂದ ಹಿಡಿದು ಅನ್ವೇಷಣೆಯವರೆಗೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇವೆಲ್ಲವುಗಳ ಹಿಂದೆ ನಮಗೆ ಬಸವಣ್ಣನವರ ವಿಚಾರಗಳು ನೀಡುತ್ತಿರುವ ನಿರಂತರ ಸ್ಪೂರ್ತಿಯೂ ಇದೆ. ಬಸವಣ್ಣನವರು ನಂದಗೋಕುಲದಂತಹ ಒಂದು ಸಮಾಜಕ್ಕಾಗಿ ತುಡಿಯುತ್ತಿದ್ದರು. ಅಂತಹ ನವಕರ್ನಾಟಕವು ಈಗ ಸಾಕಾರಗೊಳ್ಳುತ್ತಿದೆ. ಅಂತಹ ಜಗಜ್ಯೋತಿಯ ಕೃಪೆ ನಮ್ಮನ್ನು ಪುನೀತರನ್ನಾಗಿಸಿದೆ. ಅವರ ವಿಚಾರಗಳ ಸೊಡರು ನಮಗೆ ಮುಂದಿನ ದಾರಿಯನ್ನೂ ತೋರಿಸಲಿದೆ ಎನ್ನುವ ವಿನೀತ ಭಾವ ನಮ್ಮದಾಗಿದೆ.
1630 ಕೆ.ಜಿ.ಗೂ ಅಧಿಕ ತೂಕದ ಚಿನ್ನ ವಿಮಾನನಿಲ್ದಾಣದಿಂದ ಕಳವು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
