|ಬಿ.ಎಸ್.ಯಡಿಯೂರಪ್ಪಮಾಜಿ ಸಿಎಂ
ಸಂಘ ಸಂಸ್ಕಾರದ ನೆರಳಿನಲ್ಲಿ ಬೆಳೆದು ಬಂದ ನನಗೆ ಸಂಘಟನೆ ಹಾಗೂ ಹೋರಾಟಗಳು ಜೀವನದ ಅವಿಭಾಜ್ಯ ಅಂಗವೇ ಆಯಿತು. ರಾಜ್ಯದಲ್ಲಿ ಭದ್ರನೆಲೆಗಾಗಿ ತವಕಿಸುತ್ತಿದ್ದ ರಾಜಕೀಯ ಸಂಘಟನೆಯನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಬಲಗೊಳಿಸುವ ಮಾರ್ಗಕ್ಕೆ ಪ್ರೇರಣೆಯ ಚೈತನ್ಯಶಕ್ತಿಯಾಗಿ ನಿಂತವರು ಅಟಲ್ ಬಿಹಾರಿ ವಾಜಪೇಯಿ ಎಂದು ಹೇಳಿಕೊಳ್ಳುವಾಗ ನನಗೆ ಹೆಮ್ಮೆ ಎನಿಸುತ್ತದೆ.
ಕವಿ ಹೃದಯ ಹೊತ್ತ ಮುಗ್ಧ ಮಗುವಿನ ಮುಖಭಾವದ ಅಟಲ್​ಜೀ ಭಾರತದ ರಾಜಕಾರಣದ ಸಂತ ಎನಿಸಿಕೊಂಡವರು. ಈ ಕಾರಣಕ್ಕಾಗಿಯೇ ಸೈದ್ಧಾಂತಿಕ ಅಭಿಪ್ರಾಯಭೇದವಿದ್ದರೂ ವಿರೋಧಿ ಪಕ್ಷಗಳಲ್ಲೂ ಮಿತ್ರತ್ವ ಸಂಪಾದಿಸಿ ಭಾರತದ ರಾಜಕಾರಣದ ‘ಅಜಾತಶತ್ರು’ ಎಂದು ಕರೆಸಿಕೊಂಡ ಏಕೈಕ ರಾಜಕೀಯ ನೇತಾರರಾದರು.
ಶತ್ರುತ್ವ ಕಟ್ಟಿಕೊಳ್ಳದೇ ನಂಬಿದ ಸಿದ್ಧಾಂತ, ಪಕ್ಷ ವಹಿಸಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಭಾರತೀಯ ಜನಸಂಘದ ಅಸ್ತಿತ್ವದ ಉದ್ದೇಶವನ್ನು ಸಾರ್ಥಕಗೊಳಿಸಿ, ಭಾರತೀಯ ಜನತಾ ಪಾರ್ಟಿಯ ಮೊಟ್ಟ ಮೊದಲ ಪ್ರಧಾನಿಯಾಗಿ ಇತಿಹಾಸ ಬರೆದರು. ದಶಕಗಳ ಹೋರಾಟದ ಕನಸು ನನಸಾಗಿಸುವ ನಿಟ್ಟಿನಲ್ಲಿ ಮೊದಲ ಮೆಟ್ಟಿಲಾಗಿ ನಿಂತು ಲಕ್ಷಾಂತರ ಕಾರ್ಯಕರ್ತರ ಭರವಸೆಯ ಬೆಳಕಾದರು. ಭಾರತದ ಅಭಿವೃದ್ಧಿಯ ದಿಕ್ಕು ಬದಲಿಸಿದ ನಾವಿಕನಾದರು.
ದೇಶಸೇವೆಯಲ್ಲಿ ಮಾತೃತ್ವವನ್ನು ಕಂಡ ಅಟಲ್​ಜೀ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಕೋಟ್ಯಂತರ ಭಾರತೀಯ ಹೃದಯಗಳು ಅಪ್ಪಿಕೊಳ್ಳುವಂತೆ ಮಾಡಿದ ತಪಸ್ವೀ ಸಂಘಟಕ. ಹತ್ತು ಹಲವು ಜಾತಿ, ವರ್ಗ, ಭಾಷೆಗಳ ಹಾಗೂ ರಾಜ್ಯವಾರು ನೆಲೆಗೊಂಡಿದ್ದ ಸಂಸ್ಕೃತಿಗಳೆಲ್ಲವೂ ಭಾರತ ಮಾತೆ ಎಂಬ ಮಹಾವೃಕ್ಷದ ಮೂಲ ಬೇರುಗಳೇ ಆಗಿವೆ ಎಂಬುದನ್ನು ಕೋಟಿ, ಕೋಟಿ ಭಾರತೀಯ ಹೃದಯಗಳಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಸ್ವತಃ ಕವಿಯೂ ಆಗಿದ್ದ ಅವರ ಜನ-ಮನವನ್ನು ಹಿಡಿದಿಟ್ಟುಕೊಳ್ಳುವ ಮಾತಿನ ಮೋಡಿಯ ಶೈಲಿಯಲ್ಲಿ ದೇಶದ ಜನತೆ ಎಳಷ್ಟೂ ಉತ್ಪ್ರೇಕ್ಷೆ ಕಾಣಲಿಲ್ಲ. ಇದರ ಪರಿಣಾಮವೇ ಬಿಜೆಪಿ ಬೆಳವಣಿಗೆಯು ಇಂದು ಸಾಟಿ ಇಲ್ಲದ ಬೃಹತ್ ರಾಜಕೀಯ ಸಂಘಟನೆಯಾಗಿ ರೂಪುಗೊಳ್ಳಲು ಕಾರಣವಾಗಿದೆ.
ಕರ್ನಾಟಕವೆಂದರೆ ಪ್ರೀತಿ:ದಕ್ಷಿಣ ಭಾರತದಲ್ಲಿ ಅವರಿಗೆ ಕರ್ನಾಟಕವೆಂದರೆ ವಿಶೇಷ ಆಸಕ್ತಿ ಹಾಗೂ ಪ್ರೀತಿ. ಬಿಜೆಪಿಗೆ ಬಾಗಿಲು ತೆರೆದು ಕೊಡುವ ಮೊದಲ ರಾಜ್ಯವೇನಾದರೂ ಇದ್ದರೆ ಅದು ಕರ್ನಾಟಕ ಮಾತ್ರ ಎಂದು ಅವರು ಅಚಲವಾಗಿ ನಂಬಿದ್ದರು. ಈ ಹಿನ್ನೆಲೆಯಲ್ಲಿ ಅವರ ದಕ್ಷಿಣದ ಭೇಟಿಯಲ್ಲಿ ಕರ್ನಾಟಕಕ್ಕೆ ಸಿಂಹಪಾಲು ಸಮಯವನ್ನು ಮೀಸಲಿರಿಸಿದ್ದರು. ಹಗಲು-ರಾತ್ರಿ ಎನ್ನದೇ ನಮ್ಮನ್ನು ಕಟ್ಟಿಕೊಂಡು ರಾಜ್ಯ ಸುತ್ತುತ್ತಿದ್ದರು. ಅಂದು ಶೈಶವಾವಸ್ಥೆಯಲ್ಲಿದ್ದ ಸಂಘಟನೆಯನ್ನು ಬೆಳೆಸಿ ನಮ್ಮಂಥವರಲ್ಲಿ ನಾಯಕತ್ವ ದೊಡ್ಡ ಮಟ್ಟದಲ್ಲಿ ಪಡಿಮೂಡಬೇಕೆಂಬ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಅಟಲ್​ಜೀ ಸಂಘಟನೆಯ ಬೆಳವಣಿಗೆಗೆ ‘ಚಿಮ್ಮುವ ಹಲಗೆ’ಯಾಗಿ ನಿಂತವರು. ಅವರ ಮಾರ್ಗದರ್ಶನ, ಪ್ರೇರಣೆಯ ಫಲ ಎಂಥಾ ಕಠಿಣ ಸಂದರ್ಭದಲ್ಲೂ ಸಂಘಟನೆ ಹಾಗೂ ಹೋರಾಟದಲ್ಲಿ ನಾವು ಎಂದೂ ಆಸಕ್ತಿ ಕಳೆದುಕೊಳ್ಳದೇ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಸಿತು.
ಅಟಲ್ ಜೀ ನನ್ನ ಮೇಲೆ ಇರಿಸಿಕೊಂಡಿದ್ದ ಪ್ರೀತಿ, ವಿಶ್ವಾಸಗಳಲ್ಲಿ ನಾನು ಮಾತೃವಾತ್ಸಲ್ಯ ಅನುಭವಿಸಿದ್ದೇನೆ. ನನಗೆ ಹಿನ್ನಡೆ ಎದುರಾದಾಗಲೆಲ್ಲಾ ಮತ್ತೆ ಪುಟಿದೇಳುವ ಸ್ಪೂರ್ತಿ, ಹೋರಾಟದ ಕಿಚ್ಚು ಹಾಗೂ ತಾಳ್ಮೆಯ ನಡೆ ಮೂಡಲು ಅವರೇ ಸದಾ ಮಾದರಿ.
ಹೋರಾಟಕ್ಕೆ ಪ್ರೇರಣೆ:2007 ಹಾಗೂ 2018ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆರಳೆಣಿಕೆ ದಿನಗಳಲ್ಲಿ ರಾಜೀನಾಮೆ ನೀಡಬೇಕಾದ ಪ್ರಸಂಗ ಬಂದಾಗ, 1996ರ ಮೇ 28ರಂದು ಕೇವಲ 13 ದಿನಗಳ ಪ್ರಧಾನಿಯಾಗಿ ರಾಜೀನಾಮೆ ನೀಡುವ ಸಂದರ್ಭದಲ್ಲಿನ ಅಟಲ್​ಜೀ ಅವರ ‘ಐತಿಹಾಸಿಕ ಭಾಷಣ’ ನನ್ನಲ್ಲಿ ಉತ್ಸಾಹ ಕುಂದಿಸುವ ಬದಲು ಆತ್ಮವಿಶ್ವಾಸದ ಹೋರಾಟಕ್ಕೆ ಛಲ ಮೂಡಿಸಿತು. 2007 ನವೆಂಬರ್ 19 ಮತ್ತು 2018 ಮೇ 19ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಂದರ್ಭಗಳಲ್ಲಿ ನನ್ನಲ್ಲಿ ಪಕ್ಷವನ್ನು ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಹಾಗೂ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನ ತಂದುಕೊಡುವ ಶಪಥ ಕೈಗೊಳ್ಳಲು ಅಟಲ್​ಜೀ ಮಾತುಗಳು ಆತ್ಮಬಲದ ಚೈತನ್ಯವಾಗಿತ್ತು.
ಸಂಘಟನೆಯ ಪ್ರಾರಂಭದಿಂದಲೂ ಅಟಲ್​ಜೀ ನನಗೆ ನಡೆದಾಡುವ ರಾಜಕೀಯ ಸಂತನಂತೆ ಕಂಡರು. ಬೆರಳೆಣಿಕೆ ಸ್ಥಾನ ಗೆಲ್ಲಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದ ಪಕ್ಷವನ್ನು ಅಧಿಕಾರಕ್ಕೇರಿಸುವ ಮಟ್ಟಿಗಿನ ಸಹನೆಯ ಹೋರಾಟ ಹಾಗೂ ಸಂಘಟನೆಗೆ ಅವರು ಸ್ಪೂರ್ತಿಯ ಮೂರ್ತಿಯಾದರು. ಕಾರ್ಯಕರ್ತರ ಬಗ್ಗೆ ಅವರಿಗಿದ್ದ ಕಾಳಜಿಗೆ ಸಾಕ್ಷಿಯಾಗಿ ಘಟನೆಯೊಂದು ನನ್ನ ನೆನಪಿನಲ್ಲಿ ಮಾಸದೇ ಉಳಿದಿದೆ.
ಪಕ್ಷ ಸಂಘಟನೆಯ ಆರಂಭದ ದಿನಗಳಲ್ಲಿ ನೂರು-ಇನ್ನೂರು ಸಂಖ್ಯೆಯಲ್ಲಿ ಜನ ಸೇರಿಸುವುದೂ ಕಷ್ಟಸಾಧ್ಯದ ಕೆಲಸವಾ ಗುತ್ತಿತ್ತು. ಸ್ವತಃ ವಾಜಪೇಯಿ ಬಂದರೂ ಎರಡು ಮೂರು ಸಾವಿರ ಜನ ಭಾಷಣ ಕೇಳಲು ಬರುತ್ತಿದ್ದರು. ಈ ಅಂಕಿ-ಸಂಖ್ಯೆಗಳ ಬಗ್ಗೆ ಅಟಲ್​ಜೀ ಎಂದೂ ಬೇಸರಗೊಂಡಂತೆ ವರ್ತಿಸಲಿಲ್ಲ; ಬದಲಾಗಿ ನಮ್ಮಲ್ಲಿ ಇನ್ನಷ್ಟು ಉತ್ಸಾಹ ತುಂಬುತ್ತಿದ್ದರು. ಇದರ ಫಲವಾಗಿ ಹುಬ್ಬಳ್ಳಿಯಲ್ಲಿ ಅಂದಿನ ಜೆ.ಎಚ್.ಪಟೇಲರ ನೇತೃತ್ವದ ಜನತಾದಳ ಸರ್ಕಾರದ ವಿರುದ್ಧದ ಜನಾಂದೋಲನದಲ್ಲಿ ಸಮಾವೇಶಗೊಂಡ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯ ಕಿಕ್ಕಿರಿದ ಜನಸಮೂಹವನ್ನು ಕಂಡು ನಿಬ್ಬೆರಗಾಗಿ, ‘ಕರ್ನಾಟಕದ ಭವಿಷ್ಯ ಬೆಳಗಲು ಬಿಜೆಪಿಗೆ ಈ ಜನಪರ ಹೋರಾಟದ ಸಮಾವೇಶ ಮುನ್ನುಡಿ ಬರೆದಿದೆ’ ಎಂದು ಹೇಳಿದ ಮಾತು ಇಂದಿಗೂ ನನ್ನ ಮನದಲ್ಲಿ ಮಾರ್ದನಿಸುತ್ತಿದೆ. ಸಮಾವೇಶದ ನಂತರ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ನನ್ನನ್ನು ತಬ್ಬಿಕೊಂಡು ಅಟಲ್​ಜೀ ಸುರಿಸಿದ ಆನಂದಬಾಷ್ಪದ ಹನಿಗಳು ನನ್ನ ಹೃದಯದಲ್ಲಿ ಇಂದಿಗೂ ಅರಳಿದ ಕಮಲದಂತೆ ನೆಲೆಯೂರಿದೆ.
1984ರ ಇಂದಿರಾ ಗಾಂಧಿಯವರ ಸಾವಿನ ಅನುಕಂಪದ ಅಲೆಯ ಕಾರಣಕ್ಕಾಗಿ ಚುನಾವಣೆಯಲ್ಲಿ ಸೋಲು ಕಂಡ ಅಟಲ್​ಜೀಯವರ ಪರಾಜಯದ ಸಂಕಟ ಅನುಭವಿಸಲಾರದೇ ಭದ್ರಾವತಿಯ ಅಭಿಮಾನಿ ಕಾರ್ಯಕರ್ತ ಲಕ್ಷ್ಮೀನಾರಾಯಣ, ‘ವಾಜಪೇಯಿಯವರಂತಹ ಮೇರುವ್ಯಕ್ತಿಯನ್ನು ಸೋಲಿಸಿದ ಜನರಿರುವ ದೇಶದಲ್ಲಿ ನಾನು ಬದುಕಲಾರೆ’ ಎಂದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಭದ್ರಾವತಿಗೆ ಸ್ವತಃ ಆಗಮಿಸಿ ಲಕ್ಷ್ಮೀನಾರಾಯಣನ ಕುಟುಂಬಕ್ಕೆ ಸಾಂತ್ವನ ಹೇಳಿ ಅವನ ತಂಗಿ-ತಮ್ಮನ ಓದಿನ ಜವಾಬ್ದಾರಿ ವಹಿಸಿಕೊಂಡಿದ್ದರು.
ಪಕ್ಷ, ಸಂಘಟನೆ, ಕಾರ್ಯಕರ್ತರ ವಿಷಯದಲ್ಲಿ ಅಟಲ್​ಜೀ ಎಂದೂ ಆಡಂಬರ ತೋರಲಿಲ್ಲ. ಅದ್ದೂರಿತನ ಹತ್ತಿರ ಸುಳಿಯಗೊಡಲಿಲ್ಲ. ಐಷಾರಾಮಿ ವಾಸ್ತವ್ಯ, ಪ್ರಯಾಣಗಳನ್ನು ನಿರೀಕ್ಷಿಸಿದವರಲ್ಲ. ಅಂದು ನನ್ನ ಬಳಿ ಇದ್ದ ‘ಸಿಕೆಆರ್-45 ಅಂಬಾಸಿಡರ್ ಕಾರ್’ ನಮ್ಮ ಪಕ್ಷದ ಏಕೈಕ ವಾಹನವಾಗಿತ್ತು. ಇದರಲ್ಲೇ ಅಟಲ್​ಜೀಯವರು ರಾಜ್ಯಾದ್ಯಂತ ಪ್ರಯಾಣಿಸುತ್ತಿದ್ದರು. ಸರಳ ವಾಸ್ತವ್ಯ ಆಯ್ದುಕೊಳ್ಳುತ್ತಿದ್ದರು. ದೂರದ ಪ್ರಯಾಣಕ್ಕೆ ರೈಲನ್ನು ಆಶ್ರಯಿಸುತ್ತಿದ್ದ ಅವರು ರಾತ್ರಿ 11, 12 ಗಂಟೆಗಳವರೆಗೂ ರೈಲ್ವೆ ನಿಲ್ದಾಣಗಳಲ್ಲಿ ಕಾಯ್ದು ರೈಲು ಹತ್ತುತ್ತಿದ್ದರು. ಅಷ್ಟೊತ್ತಿನಲ್ಲೂ ಬಳಲಿಕೆಯ ಕುರುಹು ಬಿಟ್ಟುಕೊಡದೇ ಕಾಣಲು ಬರುತ್ತಿದ್ದ ಕಾರ್ಯಕರ್ತರೊಡನೆ ಬೆರೆತು ‘ಆನಂದದ ಆಯಾಸ’ ಅನುಭವಿಸುತ್ತಿದ್ದರು. ಇಂದಿಗೂ ಆಯಾಸ ನನ್ನನ್ನು ರ್ಸ³ಸ ಬಂದರೆ ಅಟಲ್​ಜೀ ಎಂಬ ಚೈತನ್ಯದ ನೆನಪು ಅದನ್ನು ಬಡಿದೋಡಿಸಿಬಿಡುತ್ತದೆ.
ಅಟಲ್​ಜೀ ನನ್ನಲ್ಲಿ ಅದೆಷ್ಟು ಮಾತೃ ಮಮಕಾರವಿರಿಸಿಕೊಂಡಿದ್ದರೆಂದರೆ ದೆಹಲಿಗೆ ಹೋದಾಗ ಶಿಷ್ಟಾಚಾರದ ಮಾರ್ಗವಿಲ್ಲದೆ, ನೇರ ಭೇಟಿಗೆ ಅವಕಾಶ ಕಲ್ಪಿಸಿದ್ದರು. ಯಡಿಯೂರಪ್ಪ ಬಂದರೆ ‘ಪಕ್ಷ ಹಾಗೂ ಜನರ ವಿಷಯಗಳನ್ನಷ್ಟೇ ಹೊತ್ತು ತರುತ್ತಾನೆ’ ಎಂಬ ಅದಮ್ಯ ವಿಶ್ವಾಸ ಅವರದ್ದಾಗಿತ್ತು. ಶಿಕಾರಿಪುರದ ನಮ್ಮ ಮನೆಗೆ ಅವರ ಭೇಟಿ ನಮ್ಮ ಕುಟುಂಬಕ್ಕೆ ಎಂದಿಗೂ ಮರೆಯದ ಸವಿಕ್ಷಣಗಳ ಬುತ್ತಿಯಾಗಿದೆ.
1999ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋತಾಗ ‘ನೀನು ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ; ಕೇಂದ್ರ ಸಂಪುಟಕ್ಕೆ ಸೇರಲು ಬಾ’ ಎಂದು ಅಟಲ್ ಜೀ ನೀಡಿದ ಆಹ್ವಾನವನ್ನು ನಾನೆಂದೂ ಮರೆಯಲಾಗದು. ಅಂದು ಅವರ ಆಹ್ವಾನವನ್ನು ವಿನಯದಿಂದ ನಿರಾಕರಿಸಿ, ‘ನನಗೆ ಮಂತ್ರಿ ಪದವಿ ಬೇಡ. ರಾಜ್ಯದಲ್ಲಿ ಪಕ್ಷ ಕಟ್ಟಿ ಅಧಿಕಾರಕ್ಕೆ ತರಲು ಅವಕಾಶ ಮಾಡಿಕೊಡಿ’ ಎಂದು ವಿನಂತಿಸಿದೆ. ಮಂತ್ರಿ ಪದವಿಗೆ ಬದಲಾಗಿ ರಾಜಶೇಖರ ಮೂರ್ತಿಯವರಿಗೆ ಕೊಟ್ಟ ವಚನದಂತೆ ಅವರನ್ನು ರಾಜ್ಯಸಭೆಗೆ ಕಳುಹಿಸುವಲ್ಲಿ ಸಫಲನಾದೆ.
ಆತ್ಮವಿಶ್ವಾಸದ ಮಾತು:2004ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಅಟಲ್​ಜೀ ಸ್ವಲ್ಪವೂ ಅಸಹನೆ, ಹತಾಶೆ ತೋರ್ಪಡಿಸಿಕೊಳ್ಳದೇ ‘ನಾವು ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯಕ್ರಮವನ್ನು ಜನರ ಬಳಿ ಕೊಂಡೊಯ್ಯುವಲ್ಲಿ ವಿಫಲರಾಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ನಾವು ಎದೆಗುಂದದೇ ಪಕ್ಷ ಕಟ್ಟೋಣ’ ಎಂಬ ಆತ್ಮವಿಶ್ವಾಸದ ಮಾತನಾಡಿದ್ದು ಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲೇಬೇಕೆಂದು ನಾನು ಸಂಕಲ್ಪ ತೊಡಲು ಕಾರಣವಾಯಿತು.
ಅಟಲ್​ಜೀ ಭಾರತಮಾತೆಯ ಮಡಿಲಲ್ಲಿ ಜನ್ಮವೆತ್ತಿದ ಮಹಾನ್ ಸುಪುತ್ರರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನೆಲೆ ನಿಂತಿದ್ದಾರೆ. ಬಿಜೆಪಿ-ಅಟಲ್​ಜೀ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೇಶದ ಜನತೆ ಅವರನ್ನು ಭಾರತದ ಹೆಮ್ಮೆಯ ಸುಪುತ್ರನೆಂಬ ಅಭಿಮಾನದಿಂದ ನೆನೆಯುತ್ತಾರೆ. ಪ್ರತಿ ರಾಜಕೀಯ ಪಕ್ಷಗಳೂ ಅವರೊಬ್ಬ ಅಪೇಕ್ಷಿತ ರಾಜಕೀಯ ಯೋಗಿ ಎಂದು ಪರಿಗಣಿಸಿ ಅಜಾತಶತ್ರುವಿನ ಸ್ಥಾನ ನೀಡಿವೆ. ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳು ಅವರನ್ನು ‘ಅಚಲ ವಿಶ್ವಾಸದ ಸಂಕೇತ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಯಭಾರಿ’ಎಂದು ಬಣ್ಣಿಸಿವೆ.
‘ಅಟಲ್ ಜೀ ಮತ್ತೊಮ್ಮೆ ಹುಟ್ಟಿ ಬನ್ನಿ
ಭಾರತಾಂಬೆಯ ಬೆಳಗ ಬನ್ನಿ.’
ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!

ಶೂಟಿಂಗ್​ ಸೆಟ್​​ನಲ್ಲೇ ನೇಣು ಹಾಕಿಕೊಂಡು ಪ್ರಾಣ ಕಳ್ಕೊಂಡ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − three =
Remember me
