ಬೆಂಗಳೂರು:ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳ ಚಿಂತಕರ ಚಾವಡಿಯಲ್ಲಿ ತರಹೇವಾರಿ ವಿಚಾರ-ವಿಮರ್ಶೆಗಳು ಶುರುವಾಗಿವೆ. ಉತ್ತರ ಭಾರತ, ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ರಾಜಕೀಯ, ಸಾಮಾಜಿಕ ಸಮೀಕರಣದಲ್ಲಿ ಅಜಗಜಾಂತರವಿದೆ ಎಂದು ವ್ಯಾಖ್ಯಾನಿಸುತ್ತಿವೆ. ಅದೇ ಕಾಲಕ್ಕೆ ಬಹು ದೊಡ್ಡ ಗೆಲುವು ಅಥವಾ ಸೋಲು ತಳಮಟ್ಟದ ಕಾರ್ಯಕರ್ತರ ಮೇಲೆ ಪರಿಣಾಮ ಬೀರಲಿವೆ ಎಂಬುದನ್ನು ಒಪ್ಪಿಕೊಂಡಿವೆ. ವಿಧಾನಸಭೆ ಎರಡು ಕ್ಷೇತ್ರಗಳ ಉಪ ಚುನಾವಣೆ, ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ಗೆ ನಡೆದ ಚುನಾವಣೆಗಳಲ್ಲಿ ಅನುಭವಿಸಿದ ಹಿನ್ನಡೆಯಿಂದ ಚಿಂತೆಗೀಡಾಗಿದ್ದ ರಾಜ್ಯ ಬಿಜೆಪಿಗೆ ಚೈತನ್ಯದ ಟಾನಿಕ್ ದೊರೆತಿದೆ. ಉತ್ತರದ ರಾಜ್ಯಗಳಲ್ಲಿ ಸಾಧಿಸಿದ ಭರ್ಜರಿ ಜಯಭೇರಿಯ ಉಮೇದಿ, ಅಧಿಕಾರದ ಬಲ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವರ್ಚಸ್ಸು ಬಳಸಿಕೊಳ್ಳಲು ಮುಂದಾಗಿದೆ.
ಸಿಎಂ ಬದಲಾಯಿಸಬಹುದೇ ಹೊರತು ನಾಯಕತ್ವವನ್ನಲ್ಲ. ಇದು ಉತ್ತರಾಖಂಡ ಚುನಾವಣೆ ಫಲಿತಾಂಶದಿಂದ ನಿಚ್ಚಳವಾಗಿದ್ದು, ಪಕ್ಷದ ಹಿರಿತಲೆಗಳಿಗೆ ಮನವರಿಕೆ ಮಾಡಿಕೊಟ್ಟಿದೆ. ಅಧಿಕಾರ ಬಲ, ಬಿಎಸ್​ವೈ ಮುಖ ಟ್ರಂಪ್ ಕಾರ್ಡ್ ರೀತಿಯಲ್ಲಿ ಬಳಕೆಗೆ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಫಲ ಅರ್ಹರಿಗೆ ತಲುಪಿಸುವುದಕ್ಕೂ ಒತ್ತು ನೀಡಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದು ವರ್ಷಕ್ಕೆ ಮೇಲ್ಪಟ್ಟು ಅವಧಿ ಉಳಿದಿದ್ದರೂ ಕಮಲ ಪಡೆ ಆಂತರಿಕವಾಗಿ ಸನ್ನದ್ಧವಾಗುತ್ತಿದೆ. ಗ್ರಾಮೀಣ, ನಗರ ಮತದಾರರ ನಾಡಿಮಿಡಿತ ಅರಿಯಲು ನೆರವಾಗುವ ಜಿಲ್ಲಾ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳ ಬಗ್ಗೆ ಏನೂ ಹೇಳದ ಸ್ಥಿತಿಯಿದೆ. ಆದರೆ ತಲಾ ಎರಡು ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಪರಿಷತ್ ಚುನಾವಣೆಗೆ ಸಜ್ಜಾಗಿದೆ. ಮೇಲ್ಮನೆಯಲ್ಲಿ ಮೇಲುಗೈ ಸಾಧಿಸುವುದಕ್ಕೆ ಪ್ರತಿಯೊಂದು ಕ್ಷೇತ್ರ ಮಹತ್ವದ್ದಾಗಿರುವ ಕಾರಣ ಪಕ್ಷದ ವಶದಲ್ಲಿರುವ 3 ಕ್ಷೇತ್ರಗಳ ಜತೆಗೆ ಮತ್ತೊಂದರ ಮೇಲೆ ಕಣ್ಣಿಟ್ಟಿದೆ.
ವರಿಷ್ಠರಿಗೆ ವೇದ್ಯ:ಉತ್ತರಪ್ರದೇಶ ಮತ್ತು ಉತ್ತರಾಖಂಡ್ ಚುನಾವಣಾ ಫಲಿತಾಂಶವು ಬಿಜೆಪಿ ನಾಯಕರಿಗೆ ಎರಡು ಮುಖ್ಯ ಸಂದೇಶಗಳನ್ನು ರವಾನಿಸಿದೆ. ಆಡಳಿತ ವಿರೋಧಿ ಅಲೆ ಮೆಟ್ಟಿ ನಿಲ್ಲಲು ಅಭಿವೃದ್ಧಿ ಕೆಲಸಕ್ಕೆ ವೇಗ ಹಾಗೂ ಸ್ಥಳೀಯ ನಾಯಕತ್ವಕ್ಕೆ ಹೆಚ್ಚಿನ ಪ್ರಾಶಸ್ಱ ನೀಡಬೇಕು ಎನ್ನುವುದು ಈ ಸಂದೇಶದ ಸಾರ. ಬಜೆಟ್​ನಲ್ಲಿ ಪ್ರಸ್ತಾಪಿಸಿದ ಯೋಜನೆಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಿ ಜನರ ಮನ ಗೆಲ್ಲಲು ಹೊರಟಿದೆ. ಯಡಿಯೂರಪ್ಪ ಜನ ಸಮೂಹವನ್ನು ಸೆಳೆಯುವ ನಾಯಕರು ಎಂಬುದು ಪಕ್ಷದ ವರಿಷ್ಠರಿಗೆ ವೇದ್ಯವಾಗಿದ್ದು, ಅವರನ್ನು ಮುಂದಿಟ್ಟುಕೊಂಡೇ ಹೋಗಬೇಕೆಂಬ ಸೂಚನೆಯಿತ್ತಿದೆ. ಮುಖ್ಯಮಂತ್ರಿ ಗದ್ದುಗೆ ಏರಿದ ಬಸವರಾಜ ಬೊಮ್ಮಾಯಿ ಅವರು ಬಿಎಸ್​ವೈ ಆಯ್ಕೆಯೇ. ಹೀಗಾಗಿ ಯಾವುದೇ ನಿರ್ಣಯ ತೆಗೆದುಕೊಂಡರೂ ಪರಸ್ಪರ ಮುಜುಗರದ ಪ್ರಶ್ನೆ ಉದ್ಭವಿಸದು. ಅಧಿಕಾರದಲ್ಲಿ ಇಲ್ಲದಿದ್ದರೂ ಪ್ರಬಲ ವೀರಶೈವ-ಲಿಂಗಾಯತರು ಸೇರಿ ಹಲವು ಸಮುದಾಯಗಳು ಬಿಎಸ್​ವೈ ಬೆನ್ನಿಗಿವೆ. ಜನ-ಸಾಮಾನ್ಯರ ಮೇಲೆ ಪ್ರಭಾವಬೀರುವ ಶಕ್ತಿ-ಸಾಮರ್ಥ್ಯ ಹೊಂದಿದ್ದು, ಬಿಜೆಪಿಗೆ ಬಿಎಸ್​ವೈ ಅನಿವಾರ್ಯವೇಕೆ ಎಂಬ ಪ್ರಶ್ನೆಗೆ ಸರಳ ಉತ್ತರವಿದು. ಬಿಎಸ್​ವೈ ಪುತ್ರ, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮದೇ ಆದ ಛಾಪು ಮೂಡಿಸುವ ಛಾತಿ ಪಡೆದುಕೊಂಡಿದ್ದು, ಬಿಎಸ್​ವೈ ಅಪೇಕ್ಷೆಯನ್ನು ಈಡೇರಿಸುವುದಕ್ಕೆ ವರಿಷ್ಠರಿಗೆ ಕಷ್ಟವಾಗದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ವಿಶ್ಲೇಷಿಸುತ್ತಾರೆ.
ಅಭ್ಯಾಸ ವರ್ಗ:ಸಂಘಟನಾತ್ಮಕ ಚಟುವಟಿಕೆಗಳಲ್ಲಿ ನಿರಂತರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಜಿಲ್ಲಾಮಟ್ಟದ ಪ್ರಮುಖರಿಗೆ ಅಭ್ಯಾಸ ವರ್ಗ ನಡೆಸಿ, ತರಬೇತಿ ನೀಡುತ್ತಿದೆ. ಪಕ್ಷದ ತತ್ವ-ಸಿದ್ಧಾಂತ, ವಿಚಾರಧಾರೆ, ನಿಲುವು, ಕೇಂದ್ರ ಮತ್ತು ರಾಜ್ಯದ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳ ಮಾಹಿತಿ ನೀಡಿ ಜನರ ಬಳಿ ತೆರಳುವುದಕ್ಕೆ ಅಣಿಗೊಳಿಸಲಾಗುತ್ತಿದೆ.
ಹೊಸಪೇಟೆಯಲ್ಲಿ ಕಾರ್ಯಕಾರಿಣಿ:ಯಡಿಯೂರಪ್ಪ ಒಳಗೊಂಡ ರಾಜ್ಯ ನಾಯಕರ ತಂಡದ ಸಂಘಟನಾತ್ಮಕ ಪ್ರವಾಸಕ್ಕೆ ರೂಪರೇಷೆ ಸಿದ್ಧವಾಗುತ್ತಿದ್ದು, ಅಧಿವೇಶನ ಮುಗಿದ ಬೆನ್ನಲ್ಲೇ ಕಾರ್ಯರೂಪಕ್ಕೆ ತರಬೇಕೆಂಬ ಯೋಚನೆಯಿದೆ. ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ಯಲ್ಲಿ ಮಾ.30, 31ರಂದು ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ತಯಾರಿಗಳಾಗುತ್ತಿವೆ. ಎರಡು ದಿನಗಳ ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸ, ಬಿಎಸ್​ವೈ ನೇತೃತ್ವದ ಸಮಾವೇಶ ಇನ್ನಿತರ ವಿಷಯ ಗಳು ಚರ್ಚೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಒಬಿಸಿ ಕಾರ್ಯಕಾರಿಣಿ ಇಂದು:ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಮಂತ್ರಾಲಯದಲ್ಲಿ ಮಾ.13ರಂದು ಆಯೋಜಿಸಲಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಜಿಪಂ ಮತ್ತು ತಾಪಂ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕಾರ್ಯಕಾರಿಣಿಯಲ್ಲಿ ವಿಸõತ ಚರ್ಚೆ ನಡೆಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಚುನಾವಣೆ ನಡೆಸುವ ಕುರಿತಂತೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಸಿಎಂ ಬಳಿ ತೆರಳಿ ಸಮಸ್ಯೆ ನಿವಾರಣೆಗೆ ಮನವಿ ಸಲ್ಲಿಸಲಾಗುವುದು ಎಂದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 3 =
Remember me
