ಬೆಳಗಾವಿ:ಬರದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವ ನಿರ್ಧಾರ ಘೊಷಿಸದಿದ್ದರೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ರೈತರ ಸಮಸ್ಯೆ ನಿವಾರಣೆಗೆ ಧ್ವನಿ ಎತ್ತುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಹೋರಾಟ ಸಮಾವೇಶದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ರೈತರು ಹಾಗೂ ಜನರಿಗೆ ಮೋಸ ಮಾಡಿದೆ. ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ರೈತರ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ಕೊಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಗುಡುಗಿದರು.
ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ಹೆಣ್ಣು ಮಕ್ಕಳ ರಕ್ಷಣೆಗಾಗಿ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದೆ. ಕಳಸಾ ಬಂಡೂರಿ ಯೋಜನೆಗೆ ಅನುದಾನ ಮೀಸಲಿಟ್ಟಿದ್ದೆ. ಆದರೆ, ಸರ್ಕಾರ ಯಾವ ಜನಪರ ಯೋಜನೆಗಳನ್ನೂ ಕೈಗೊಂಡಿಲ್ಲ ಎಂದು ದೂರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಭೀಕರ ಬರ ಇದ್ದರೂ ರೈತರಿಗೆ ಕಾಂಗ್ರೆಸ್ ಸರ್ಕಾರ ಪರಿಹಾರ ಕೊಡಲು ಯೋಚಿಸುತ್ತಿಲ್ಲ. ಆದರೆ, ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಕೊಡುವುದಾಗಿ ಘೊಷಣೆ ಮಾಡುತ್ತಿದ್ದಾರೆ. ಈ ಸರ್ಕಾರಕ್ಕೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಸಿಎಂ ಮೇಲಿದ್ದ ನಿರೀಕ್ಷೆಗಳು ಹುಸಿಯಾಗಿವೆ. ರೈತರ ಸಾಲಮನ್ನಾ ಮಾಡದಿದ್ದರೆ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಸರ್ಕಾರಕ್ಕೆ ಜನರ ಕಲ್ಯಾಣ ಬೇಕಿಲ್ಲ. ರೈತರಿಗೆ ಭಿಕ್ಷೆ ರೀತಿಯಲ್ಲಿ ಪರಿಹಾರ ಕೊಡುತ್ತಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ ರೈತರಿಗೆ 25 ಸಾವಿರ ರೂ. ಪರಿಹಾರ ಕೊಟ್ಟಿದ್ದರು. ಆದರೆ, ಕಾಂಗ್ರೆಸ್​ನವರು 2 ಸಾವಿರ ರೂ. ಕೊಡುತ್ತಿರುವುದು ದುರ್ದೈವ. ಗ್ಯಾರಂಟಿ ಯೋಜನೆಯಿಂದ ಸರ್ಕಾರ ಬರಿದಾಗಿದೆ. ನೀರಾವರಿ ಯೋಜನೆ, ಶಾಲೆ ನಿರ್ವಿುಸಲು, ಪರಿಹಾರ ನೀಡಲು, ರೈತರು ಮೃತಪಟ್ಟರೆ ಅವರ ಕುಟುಂಬಕ್ಕೆ ಪರಿಹಾರ ಕೊಡಲು ದುಡ್ಡಿಲ್ಲ ಎಂದರು.
ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆಯುತ್ತಿದ್ದರೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಸರ್ಕಾರಿ ನೌಕರರಿಗೆ ಹೆದರಿ, ಬೆದರಿಸಿ ಹಣ ಕೀಳುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ, ವಿಠ್ಠಲ ಹಲಗೇಕರ, ಸುನೀಲಕುಮಾರ್, ಅರವಿಂದ ಬೆಲ್ಲದ, ದುರ್ಯೋಧನ ಐಹೊಳೆ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ವೈ.ಎಂ.ನಾರಾಯಣಸ್ವಾಮಿ, ಮಾಜಿ ಸಚಿವರಾದ ಭೈರತಿ ಬಸವರಾಜ, ಸಿ.ಸಿ.ಪಾಟೀಲ, ಆರಗ ಜ್ಞಾನೇಂದ್ರ, ಮಾಜಿ ಎಂಎಲ್​ಸಿ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಅನಿಲ್ ಬೆನಕೆ, ಸಂಜಯ ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ ಹಾಗೂ ಬಿಜೆಪಿ ಮುಖಂಡರು, ರೈತರು, ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಕ್ಷಸ ಗಣ ರಾಜ್ಯವಾಳುತ್ತಿದೆ:ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಕ್ಷಸ ಗಣ ರಾಜ್ಯವನ್ನಾಳುತ್ತಿದೆ. ಜೈಲಿಗೆ ಹೋಗಿಬಂದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಷ್ಟ್ರದ್ರೋಹಿ ಜಮೀರ್ ಅಹ್ಮದ್, ಗಂಭೀರ ಪ್ರಕರಣ ಇದ್ದರೂ ಸಣ್ಣ ವಿಚಾರ ಎನ್ನುವ ಡಾ.ಪರಮೇಶ್ವರ, ಸೂಪರ್ ಸಿಎಂ ಪ್ರಿಯಾಂಕ್ ಖರ್ಗೆ, ಸುಳ್ಳಿನ ಸರದಾರ ಸಿದ್ದರಾಮಯ್ಯ ಈ ರಕ್ಕಸ ಗಣದಲ್ಲಿದ್ದಾರೆ. ಸುಳ್ಳಿನ ಸರದಾರ ಸಿದ್ದರಾಮಯ್ಯ ಜನರ ನಡುವೆ ಜಗಳ ತಂದಿಟ್ಟಿದ್ದಾರೆ ಎಂದು ಟೀಕಿಸಿದರು. ಟೋಪಿ ಸರ್ಕಾರ ಬಹಳ ದಿನ ಉಳಿಯದು. ಮುಸ್ಲಿಮರನ್ನು ತೃಪ್ತಿಪಡಿಸಲು ಸಿದ್ದರಾಮಯ್ಯ ಯಾವ ಮಟ್ಟಕ್ಕೂ ಹೋಗಲು ಸಿದ್ಧರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 4 =
Remember me
