|ಎನ್.ಡಿ. ಶಾಂತಕುಮಾರಶಿವಮೊಗ್ಗ
ಕಾಂಗ್ರೆಸ್ ಭದ್ರಕೋಟೆಯನ್ನು ಶಿಥಿಲಗೊಳಿಸಿ ಬಿಜೆಪಿ ಬಾವುಟ ಹಾರಾಟಕ್ಕೆ ನಾಂದಿ ಹಾಡಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರ. 1983ರಲ್ಲಿ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ವಿಧಾನಸಭೆ ಮೆಟ್ಟಿಲು ಏರಿದರು. ನಂತರದ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆ ಒಂದು ರೀತಿ ಬಿಜೆಪಿ ಶಕ್ತಿ ಕೇಂದ್ರವಾಗಿ ರೂಪುಗೊಂಡಿತು. 9 ಬಾರಿ ಶಿಕಾರಿಪುರದಿಂದ ಸ್ಪರ್ಧೆ ಮಾಡಿರುವ ಬಿಎಸ್​ವೈ 2022ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ಈಗಾಗಲೆ ಘೊಷಣೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಬಿಎಸ್​ವೈ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ ಸಹಜ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಣಕ್ಕೆ ಇಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಅಂದುಕೊಂಡಂತೆ ಆಗಿದ್ದರೆ ವಿಜಯೇಂದ್ರ ಅವರಿಗೆ ಇದು ಎರಡನೆಯ ಚುನಾವಣೆ ಆಗಬೇಕಿತ್ತು. ಹಳೆಯ ಮೈಸೂರು ಭಾಗದಿಂದ ಕಳೆದ ಚುನಾವಣೆಯಲ್ಲೇ ಕಣಕ್ಕೆ ಇಳಿಯುವ ಸಿದ್ಧತೆ ನಡೆದಿತ್ತು. ಆದರೆ ಕಡೇ ಕ್ಷಣದಲ್ಲಿ ನಾಮಪತ್ರ ಸಲ್ಲಿಕೆಯಿಂದ ಹಿಂದೆ ಸರಿದರು. ಚುನಾವಣೆಯಲ್ಲಿ ಸ್ಪರ್ಧೆ ಮಾಡದಿದ್ದರೂ ಪಕ್ಷ ಸಂಘಟನೆಯಲ್ಲಿ ಸಾಮರ್ಥ್ಯ ಪ್ರದರ್ಶನ, ಉಪಚುನಾವಣೆಗಳಲ್ಲಿ ನೆಲೆ ಇಲ್ಲದ ಕ್ಷೇತ್ರಗಳಲ್ಲೂ ಪಕ್ಷದ ಬಾವುಟ ಹಾರುವಂತೆ ಮಾಡಿ ವರಿಷ್ಠರ ಗಮನ ಸೆಳೆಯಲು ಸಫಲರಾಗಿದ್ದಾರೆ.
ಶಿಕಾರಿಪುರ ಕ್ಷೇತ್ರದಲ್ಲಿ ಬಿಎಸ್​ವೈ ಕುಟುಂಬಕ್ಕೆ ಪ್ರಬಲ ಪೈಪೋಟಿ ನೀಡುವಂಥ ರಾಜಕೀಯ ಶಕ್ತಿ ಸಂಘಟನೆಯಾಗಿಲ್ಲ. 1999ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಮಹಾಲಿಂಗಪ್ಪ ಆಯ್ಕೆಯಾಗಿದ್ದು ಹೊರತುಪಡಿಸಿದರೆ ಯಡಿಯೂರಪ್ಪ ಸತತವಾಗಿ ಗೆಲುವು ಸಾಧಿಸುತ್ತ ಬಂದಿದ್ದಾರೆ. 2018ರಲ್ಲಿ ಸಮಾಜವಾದಿ ಪಕ್ಷದಿಂದ ಎಸ್. ಬಂಗಾರಪ್ಪ ಅವರೇ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸ್ಪರ್ಧೆ ಮಾಡಿದ್ದರೂ ಬಿಎಸ್​ವೈ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ಆಗಲಿಲ್ಲ. 2014ರ ಉಪಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾದರೂ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕ್ಷೇತ್ರದಲ್ಲಿ ಪ್ರಬಲ ಪ್ರತಿಸ್ಪರ್ಧಿ ಕಾಣಿಸುತ್ತಿಲ್ಲ. ಸದ್ಯದ ಲೆಕ್ಕಾಚಾರ ದಾಖಲೆ ಮತಗಳ ಅಂತರದಲ್ಲಿ ವಿಜಯೇಂದ್ರ ವಿಧಾನಸಭೆ ಪ್ರವೇಶ ಮಾಡಬೇಕು ಎನ್ನುವುದು.
ಚುನಾವಣೆಗೆ ಭರ್ಜರಿ ಸಿದ್ಧತೆ:ಬಿ.ವೈ. ವಿಜಯೇಂದ್ರ ಅವರೇ ಅಭ್ಯರ್ಥಿ ಎಂದು ಬಿಎಸ್​ವೈ ಘೊಷಣೆ ಮಾಡಿದ ನಂತರ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಒಂದು ಸುತ್ತು ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದಾರೆ. ತಂದೆ ಅಪೇಕ್ಷೆ ಮತ್ತು ಪಕ್ಷ ಅವಕಾಶ ಕಲ್ಪಿಸಿದರೆ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡುತ್ತೇನೆ. ನಿಮ್ಮ ಆಶೀರ್ವಾದ ಇರಲಿ ಎಂದು ಮತದಾರರ ಬಳಿ ಹೋಗಿದ್ದಾರೆ. ಅಭ್ಯರ್ಥಿ ಕೊರತೆ ಕಾರಣ ಜೆಡಿಎಸ್ ಈ ಬಾರಿ ಸ್ಪರ್ಧೆ ಮಾಡುವ ಸಾಧ್ಯತೆ ಕಡಿಮೆ. ಕಾಂಗ್ರೆಸ್​ನಿಂದ ಇನ್ನೂ ಪ್ರಚಾರ ಆರಂಭವಾಗಿಲ್ಲ. ಹತ್ತಕ್ಕೂ ಅಧಿಕ ಆಕಾಂಕ್ಷಿಗಳು ಇರುವ ಕಾರಣ ಅಭ್ಯರ್ಥಿ ಹೆಸರು ಘೊಷಣೆ ನಂತರವೇ ಪ್ರಚಾರ ಶುರುವಾಗಲಿದೆ.

ಒತ್ತಡ ಹಾಕಿದ್ದ ಕ್ಷೇತ್ರದ ಮುಖಂಡರು:ಬಿ.ಎಸ್. ಯಡಿಯೂರಪ್ಪ ಅವರೇ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು. ಒಂದು ವೇಳೆ ಅವರು ಸ್ಪರ್ಧೆ ಮಾಡದಿದ್ದರೆ ಬಿ.ವೈ. ವಿಜಯೇಂದ್ರ ಕಣಕ್ಕೆ ಇಳಿಯಬೇಕು. ಇದು ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಅಭಿಲಾಷೆ. ಶಿಕಾರಿಪುರದಿಂದ ಬೆಂಗಳೂರಿಗೆ ತೆರಳಿದ್ದ ನಿಯೋಗ, ಬಿಎಸ್​ವೈ ಅವರನ್ನು ಭೇಟಿ ಮಾಡಿ ಈ ವಿಚಾರವನ್ನು ಗಮನಕ್ಕೆ ತಂದಿತ್ತು.
ಪಕ್ಷಾತೀತ ಸ್ನೇಹ:ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಘಟನೆ ದುರ್ಬಲಗೊಳ್ಳಲು ಬಿಎಸ್​ವೈ ಮತ್ತು ಅವರ ಪುತ್ರರು ಹೊಂದಿರುವ ಪಕ್ಷಾತೀತ ಸ್ನೇಹವೂ ಕಾರಣ ಎಂದರೆ ತಪ್ಪಾಗದು. ಬಿಎಸ್​ವೈ ಅಧಿಕಾರದಲ್ಲಿದ್ದಾಗ ಪ್ರತಿಪಕ್ಷಗಳ ಮುಖಂಡರೇ ಇರಲಿ, ಕಾರ್ಯಕರ್ತರೇ ಇರಲಿ, ರಾಜಕೀಯ ವೈಷಮ್ಯ ಇಟ್ಟುಕೊಳ್ಳದೆ ಅವರ ಕೆಲಸ ಮಾಡಿಕೊಟ್ಟಿದ್ದಾರೆ. ಇದು ರಾಜಕೀಯ ಹೊರತಾದ ಸ್ನೇಹ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಬಿ.ಕೆ. ಸಂಗಮೇಶ್ವರ್ ಸೇರಿ ಹಲವರು ಪಕ್ಷದ ವೇದಿಕೆಗಳಲ್ಲೇ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ರಾಘವೇಂದ್ರ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಅನೇಕ ಬಾರಿ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಇರಿಸುಮುರಿಸಿಗೆ ಕಾರಣವಾಗಿದೆ.
ಪ್ರತಿಪಕ್ಷಗಳಲ್ಲಿ ಅಭ್ಯರ್ಥಿಗಳ ಕೊರತೆ:ಬಿಜೆಪಿಗೆ ಪೈಪೋಟಿ ನೀಡುವಂಥ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಂಗ್ರೆಸ್ ಮತ್ತು ಜೆಡಿಎಸ್​ನಲ್ಲಿ ಎದ್ದು ಕಾಣುತ್ತಿದೆ. ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಎಚ್.ಟಿ. ಬಳಿಗಾರ್ ಬಿಜೆಪಿ ಸೇರ್ಪಡೆಯಾಗಿದ್ದು, ಈಗ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಜೆಡಿಎಸ್​ಗೆ ಅಭ್ಯರ್ಥಿ ಇಲ್ಲ. ಕಾಂಗ್ರೆಸ್​ನಿಂದ ಟಿಕೆಟ್ ನಿರೀಕ್ಷೆ ಮಾಡಿ ಹತ್ತು ಜನ ಅಭ್ಯರ್ಥಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ನಗರದ ಮಹಾದೇವಪ್ಪ, ಎಚ್.ಎಸ್. ಶಾಂತವೀರಪ್ಪ ಗೌಡ ತಲಾ ಎರಡು ಬಾರಿ ಸ್ಪರ್ಧೆ ಮಾಡಿದ್ದಾರೆ. ಗೋಣಿ ಮಾಲತೇಶ್ 2018ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದು, ಈ ಬಾರಿ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಪುಷ್ಪಾ ಶಿವಕುಮಾರ್, ಬಿ.ಎನ್. ಮಹಾಲಿಂಗಪ್ಪ, ಉಳ್ಳಿ ದರ್ಶನ್, ರಾಘವೇಂದ್ರ ನಾಯಕ್, ಟಿ.ಸಿ. ನಿರ್ಮಲಾ ಪಾಟೀಲ್ ಸೇರಿ ಹತ್ತು ಜನ ಸ್ಪರ್ಧೆಗೆ ಒಲವು ತೋರಿದ್ದಾರೆ. ಎಲ್ಲ ಟಿಕೆಟ್ ಆಕಾಂಕ್ಷಿಗಳು ಒಂದು ಬಾರಿ ಸಭೆ ಸೇರಿ ಪಕ್ಷ ಯಾರಿಗೆ ಅವಕಾಶ ನೀಡಿದರೂ ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸಬೇಕು ಎಂಬ ತೀರ್ಮಾನ ಕೈಗೊಂಡಿದ್ದಾರೆ.
ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!

ಶಾಸಕ ರೇಣುಕಾಚಾರ್ಯ ಇದ್ದ ವೇದಿಕೆಯತ್ತ ಕುರಿಗಳನ್ನು ನುಗ್ಗಿಸಿ ತರಾಟೆಗೆ ತೆಗೆದುಕೊಂಡ ಜನರು; ಕಾರಣವಿದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
